BCCI Earns ₹100 Crore Profit from Asia Cup ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದರೂ, ಮೊಹ್ಸಿನ್ ನಖ್ವಿ ಜೊತೆಗಿನ ವಿವಾದದಿಂದಾಗಿ ಭಾರತ ತಂಡಕ್ಕೆ ಇನ್ನೂ ಟ್ರೋಫಿ ಸಿಕ್ಕಿಲ್ಲ. ಆದರೆ, ಈ ಪಂದ್ಯಾವಳಿಯಿಂದ ಬಿಸಿಸಿಐ 100 ಕೋಟಿ ರೂಪಾಯಿಗಳ ಭಾರಿ ಆದಾಯ ಗಳಿಸಿದೆ.

ನವದೆಹಲಿ (ಅ.17): ಭಾರತ ಕ್ರಿಕೆಟ್ ತಂಡ ಏಷ್ಯಾಕಪ್‌ನಲ್ಲಿ ಪಾಕಿಸ್ತಾನವನ್ನು ಒಮ್ಮೆ ಅಲ್ಲ, ಮೂರು ಬಾರಿ ಸೋಲಿಸಿತು. ಗುಂಪು ಹಂತದಲ್ಲಿ, ಸೂಪರ್ 4 ಹಂತದಲ್ಲಿ ಮತ್ತು ಫೈನಲ್‌ ಪಂದ್ಯದಲ್ಲಿಯೂ ಕಟ್ಟಾ ಎದುರಾಳಿಯನ್ನು ಹೇಳ ಹೆಸರಿಲ್ಲದಂತೆ ಸೋಲಿಸಿದರು. ಈ ಪಂದ್ಯಾವಳಿಯಲ್ಲಿ, ಭಾರತವು ಪಾಕಿಸ್ತಾನದೊಂದಿಗೆ ಹಸ್ತಲಾಘವ ಮಾಡುವುದಿಲ್ಲ ಮತ್ತು ಪಾಕಿಸ್ತಾನದ ಮೊಹ್ಸಿನ್‌ ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಯೋಜಿಸಿದಂತೆ, ಭಾರತೀಯ ತಂಡವು ಹಸ್ತಲಾಘವ ಮಾಡಲಿಲ್ಲ ಮತ್ತು ನಖ್ವಿಯಿಂದ ಟ್ರೋಫಿಯನ್ನು ಸ್ವೀಕರಿಸಲಿಲ್ಲ.

ಆದರೆ, ಮೊಹ್ಸಿನ್ ನಖ್ವಿ ಎಲ್ಲಾ ಮಿತಿಗಳನ್ನು ಮೀರಿ ಟ್ರೋಫಿಯೊಂದಿಗೆ ಓಡಿಹೋದರು. ವಾಸ್ತವವಾಗಿ, ಅವರು ಈ ಟ್ರೋಫಿಯನ್ನು ಬೇರೆಯವರ ಮೂಲಕ ನೀಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಅವರು ಟ್ರೋಫಿಯೊಂದಿಗೆ ಓಡಿ ಹೋಗುವ ತೀರ್ಮಾನ ಮಾಡಿದರು. ಭಾರತ ತಂಡ ಈವರೆಗೂ ಏಷ್ಯಾಕಪ್‌ ಟ್ರೋಫಿಯನ್ನು ಸ್ವೀಕರಿಸಿಲ್ಲ. ಈ ಪರಿಸ್ಥಿತಿಯಲ್ಲಿ, ಬಿಸಿಸಿಐ ಆಕ್ರಮಣಕಾರಿ ನಿಲುವನ್ನು ತೆಗೆದುಕೊಂಡಿದೆ ಮತ್ತು ಮೊಹ್ಸಿನ್ ನಖ್ವಿ ವಿರುದ್ಧಎಲ್ಲಾ ಹಂತದವರೆಗೆ ಹೋರಾಟ ಮಾಡಲು ತೀರ್ಮಾನಿಸಿದೆ. ಮತ್ತೊಂದೆಡೆ, ಭಾರತ ತಂಡವು ಟ್ರೋಫಿಯನ್ನು ಪಡೆಯದಿದ್ದರೂ ಸಹ ಭಾರೀ ಲಾಭವನ್ನು ಟೂರ್ನಿಯಿಂದ ಮಾಡಿಕೊಂಡಿದೆ. ಈ ಪಂದ್ಯಾವಳಿಯಿಂದ ಬಿಸಿಸಿಐ 100 ಕೋಟಿ ಆದಾಯ ಸಂಪಾದನೆ ಮಾಡಿದನ್ನು ಕೇಳಿಯೇ ಪಾಕಿಸ್ತಾನಕ್ಕೆ ಶಾಕ್‌ ಆಗಿದೆ.

ಬಿಸಿಸಿಐಗೆ ಇಷ್ಟು ಹಣ ಬಂದಿದ್ದು ಹೇಗೆ?

ಏಷ್ಯಾ ಕಪ್ ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಸಲಾಯಿತು. ಈ ಪಂದ್ಯಾವಳಿಯಲ್ಲಿ ಬಿಸಿಸಿಐ ಸಾಕಷ್ಟು ಹಣವನ್ನು ಗಳಿಸಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅಂತರರಾಷ್ಟ್ರೀಯ ಪ್ರವಾಸಗಳಿಂದಾಗಿ ಬಿಸಿಸಿಐ 109.04 ಕೋಟಿ ರೂ.ಗಳ ಲಾಭವನ್ನು ಗಳಿಸಿದೆ. ಏಷ್ಯಾ ಕಪ್ ಪಂದ್ಯಾವಳಿ ಶುಲ್ಕ, ಟಿವಿ ಹಕ್ಕುಗಳು ಮತ್ತು ಐಸಿಸಿ ಟಿ 20 ಅಂತರರಾಷ್ಟ್ರೀಯ ವಿಶ್ವಕಪ್‌ನಲ್ಲಿ ಭಾಗವಹಿಸುವ ಮೂಲಕ ಈ ಲಾಭವನ್ನು ಗಳಿಸಲಾಗಿದೆ.

ಮಾಧ್ಯಮ ಹಕ್ಕುಗಳ ಮೂಲಕ 138.64 ಕೋಟಿ ರೂ.ಗಳನ್ನು ಗಳಿಸಲಾಗಿದೆ. ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳು ನಡೆದವು. ಆದಾಯದಲ್ಲಿ ಈ ಹೆಚ್ಚಳಕ್ಕೆ ಇದು ಪ್ರಮುಖ ಕಾರಣವಾಗಿದೆ. ವರದಿಯ ಪ್ರಕಾರ, 2025-2026ರ ವಾರ್ಷಿಕ ಬಜೆಟ್ ಪ್ರಕಾರ ಬಿಸಿಸಿಐ ಮಂಡಳಿಯು ವರ್ಷಕ್ಕೆ ಸುಮಾರು 6700 ಕೋಟಿ ರೂ.ಗಳನ್ನು ಗಳಿಸುತ್ತದೆ ಎಂದು ನಿರೀಕ್ಷೆ ಮಾಡಿದೆ.

ಹಿನ್ನಡೆ ಕಂಡ ಐಪಿಎಲ್‌

ಬಿಸಿಸಿಐನ ಆರ್ಥಿಕ ಸ್ಥಿತಿ ಬಹಳ ಬಲಿಷ್ಠವಾಗಿದೆ. ಆದರೆ ಟೀಮ್ ಇಂಡಿಯಾ ಇನ್ನೂ ಯಾವುದೇ ಟ್ರೋಫಿಯನ್ನು ಪಡೆದಿಲ್ಲ. ಮೊಹ್ಸಿನ್ ನಖ್ವಿ ಅವರ ದುರಹಂಕಾರದ ವರ್ತನೆಯಿಂದಾಗಿ, ಟ್ರೋಫಿಯನ್ನು ಎಸಿಸಿ ಕಚೇರಿಯ ಲಾಕರ್‌ನಲ್ಲಿಯೇ ಇಡಲಾಗಿದೆ. ಆದರೆ, ಮೊಹ್ಸಿನ್ ನಖ್ವಿ ಅವರಿಗೆ ಬಿಸಿಸಿಐ ಗಳಿಕೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಐಪಿಎಲ್‌ನ ಬ್ರಾಂಡ್ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ ಐಪಿಎಲ್ ನಷ್ಟವನ್ನು ಅನುಭವಿಸಿದೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿವೆ. ಐಪಿಎಲ್ 2025 ರ ಬ್ರಾಂಡ್ ಮೌಲ್ಯವನ್ನು 76100 ಕೋಟಿ ಎಂದು ಲೆಕ್ಕಹಾಕಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ಕಳೆದ ವರ್ಷ, ಬ್ರಾಂಡ್ ಮೌಲ್ಯ 82700 ಕೋಟಿಗಳಷ್ಟಿತ್ತು. ಆದಾಗ್ಯೂ, ನಾವು ಈ ಎರಡು ಸ್ಪರ್ಧೆಗಳನ್ನು ಹೋಲಿಸಿದರೆ, 6600 ಕೋಟಿಗಳ ನಷ್ಟ ಸಂಭವಿಸಿದೆ.