ಏಷ್ಯಾಕಪ್ 2025ರ ಪಂದ್ಯದ ವೇಳೆ ಶ್ರೀಲಂಕಾ ಕ್ರಿಕೆಟಿಗ ದುನಿತ್ ವೆಲ್ಲಾಲಗೆ ಅವರ ತಂದೆ ಸುರಂಗ ವೆಲ್ಲಾಲಗೆ ಹೃದಯಾಘಾತದಿಂದ ನಿಧನರಾದರು. ಪಂದ್ಯ ಮುಗಿದ ನಂತರ ಕೋಚ್ ಸನತ್ ಜಯಸೂರ್ಯ ಈ ದುಃಖದ ಸುದ್ದಿಯನ್ನು ತಿಳಿಸಿದರು.
ಅಬುಧಾಬಿ: 2025ರ ಏಷ್ಯಾಕಪ್ ಟೂರ್ನಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಲಂಕಾ ಕ್ರಿಕೆಟಿಗನ ಪಾಲಿಗೆ ಬರಸಿಡಿಲು ಬಡಿದಂತ ಅನುಭವವಾಗಿದೆ. ಏಷ್ಯಾಕಪ್ ಟೂರ್ನಿಯ 'ಬಿ' ಗುಂಪಿನ ಕೊನೆಯ ಪಂದ್ಯದಲ್ಲಿ ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೆ ಇಲ್ಲಿನ ಶೇಖ್ ಝಾಯೆದ್ ಮೈದಾನ ಆತಿಥ್ಯ ವಹಿಸಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾದ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಒಂದೇ ಓವರ್‌ನಲ್ಲಿ ಆಫ್ಘಾನ್ ಅನುಭವಿ ಆಲ್ರೌಂಡರ್ ಮೊಹಮ್ಮದ್ ನಬಿ 5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ್ದರು. ಇದೇ ಸಂದರ್ಭದಲ್ಲಿ ದುನಿತ್ ವೆಲ್ಲಾಲಗೆ ಅವರ ತಂದೆ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ನಡೆದಿದೆ. ಶ್ರೀಲಂಕಾ ಹೆಡ್ ಕೋಚ್ ಸನತ್ ಜಯಸೂರ್ಯ, ಈ ವಿಷಯವನ್ನು ದುನಿತ್ ವೆಲ್ಲಾಲಗೆ ಅವರಿಗೆ ಹೇಳಿ ಸಮಾಧಾನ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಶಾಕಿಂಗ್ ಸುದ್ದಿ ತಿಳಿಸಿದ ಜಯಸೂರ್ಯ
ಆಫ್ಘಾನಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ನಡೆಯುತ್ತಿರುವಾಗಲೇ ಶ್ರೀಲಂಕಾ ಸ್ಟಾರ್ ಕ್ರಿಕೆಟಿಗನ ತಂದೆ ಸುರಂಗ ವೆಲ್ಲಾಲಗೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇದಾದ ನಂತರ ಮ್ಯಾಚ್ ಮುಕ್ತಾಯದ ಬಳಿಕ ಲಂಕಾ ಕ್ರಿಕೆಟಿಗನಿಗೆ ಈ ದುರಂತದ ಸುದ್ದಿ ತಿಳಿಸಲಾಗಿದೆ. ಸನತ್ ಜಯಸೂರ್ಯ, ಯುವ ಕ್ರಿಕೆಟಿಗನಿಗೆ ಸಮಾಧಾನ ಹೇಳುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಂಬನಿ ಮಿಡಿದ ರೆಸೆಲ್ ಅರ್ನಾಲ್ಡ್
'ಕೆಲವೇ ಸಮಯದ ಹಿಂದಷ್ಟೇ ದುನಿತ್ ವೆಲ್ಲಾಲಗೆ ಅವರ ತಂದೆ ಸುರಂಗ ಕೊನೆಯುಸಿರೆಳೆದಿದ್ದಾರೆ. ಅವರೂ ಕೂಡಾ ಕೆಲ ಸಮಯ ಕ್ರಿಕೆಟ್ ಆಡಿದ್ದರು. ಅವರು ಸ್ಕೂಲ್ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಪ್ರಿನ್ಸ್ ಆಫ್ ವೇಲ್ಸ್ ಕಾಲೇಜು ತಂಡದ ಕ್ಯಾಪ್ಟನ್ ಆಗಿದ್ದರು. ಆಗ ನಾನು ಸೇಂಟ್ ಪೀಟರ್ಸ್ ಸ್ಕೂಲ್ ಕ್ಯಾಪ್ಟನ್ ಆಗಿದ್ದೆ' ಎಂದು ಶ್ರೀಲಂಕಾ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಹೇಳಿದ್ದಾರೆ.
'ಅವರು ಕೊನೆಯುಸಿರೆಳೆದ ಸುದ್ದಿ ಕೇಳಿ ನಿಜಕ್ಕೂ ನೋವಾಯಿತು. ಈ ವಿಷಯವನನ್ನು ದುನಿತ್ ವೆಲ್ಲಾಲಗೆ ಅವರಿಗೆ ತಿಳಿಸಲಾಗಿದೆ. ಅವರ ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಸಿಗಲಿ. ಅವರ ನೋವಿನ ಜತೆ ನಾವಿದ್ದೇವೆ ಎಂದು ಅರ್ನಾಲ್ಡ್ ಹೇಳಿದ್ದಾರೆ.
ದುನಿತ್ ಸುರಂಗ ಓರ್ವ ಕ್ರಿಕೆಟಿಗರಾಗಿದ್ದು, ಪ್ರಿನ್ಸ್ ಆಫ್ ವೇಲ್ಸ್ ಕಾಲೇಜಿನಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಗ ದುನಿಲ್ ವೆಲ್ಲಾಲಗೆ ಲಂಕಾ ತಂಡಕ್ಕೆ ಸೇರುವಲ್ಲಿ ತಂದೆ ಸುರಂಗ ಅವರ ಪಾತ್ರ ಹಾಗೂ ಶ್ರಮ ಸಾಕಷ್ಟಿದೆ.
ಇನ್ನು ದುನಿತ್ ವೆಲ್ಲಾಲಗೆ ಪಾಲಿಗೆ ಆಫ್ಘಾನಿಸ್ತಾನ ಎದುರಿನ ಪಂದ್ಯವು ಅಷ್ಟೇನೂ ತೃಪ್ತಿಕರವಾಗಿರಲಿಲ್ಲ. 20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ಹೊತ್ತ ದುನಿತ್, ಕೊನೆಯ ಓವರ್‌ನಲ್ಲಿ 32 ರನ್ ಚಚ್ಚಿಸಿಕೊಂಡರು. ಮೊದಲ 3 ಓವರ್‌ನಲ್ಲಿ 17 ರನ್ ನೋಡಿ ಒಂದು ವಿಕೆಟ್ ಪಡೆದಿದ್ದ, ದುನಿತ್, ಕೊನೆಯ ಓವರ್‌ನಲ್ಲಿ ಮೊಹಮ್ಮದ್ ನಬಬಿ ಅವರಿಂದ ಸತತ 5 ಸಿಕ್ಸರ್ ಚಚ್ಚಿಸಿಕೊಂಡು ದುಬಾರಿಯಾಗಿದ್ದರು.
'ಬಿ' ಗುಂಪಿನಿಂದ ಲಂಕಾ, ಬಾಂಗ್ಲಾ ಸೂಪರ್ 4 ಪ್ರವೇಶ, ಆಫ್ಘಾನ್ ಔಟ್!
ಗುರುವಾರ ಆಫ್ಘಾನಿಸ್ತಾನ ವಿರುದ್ದ ಪಂದ್ಯದಲ್ಲಿ 6 ವಿಕೆಟ್ ಗೆಲುವು ಸಾಧಿಸಿದ ಶ್ರೀಲಂಕಾ, 'ಬಿ' ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ 4 ಪ್ರವೇಶಿಸಿದೆ. ಇನ್ನು ಎರಡನೇ ತಂಡವಾಗಿ ಬಾಂಗ್ಲಾದೇಶ ತಂಡವು ಸೂಪರ್ 4 ಹಂತ ಪ್ರವೇಶಿಸಿದ್ದು, ಆಫ್ಘಾನಿಸ್ತಾನ ತಂಡವು ಗ್ರೂಪ್ ಹಂತದಲ್ಲೇ ತನ್ನ ಏಷ್ಯಾಕಪ್ ಅಭಿಯಾನವನ್ನು ಮುಗಿಸಿದೆ.
ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ, ಆರಂಭಿಕ ಆಘಾತದ ಹೊರತಾಗಿಯೂ 8 ವಿಕೆಟ್ ಕಳೆದುಕೊಂಡು 169 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಮೊಹಮ್ಮದ್ ನಬಿ ಕೊನೆಯ ಓವರ್‌ನಲ್ಲಿ 5 ಎಸೆತಕ್ಕೆ 5 ಸಿಕ್ಸರ್ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ನಬಿ ಕೇವಲ 22 ಎಸೆತಗಳನ್ನು ಎದುರಿಸಿ 60 ರನ್ ಸಿಡಿಸಿ ಮಿಂಚಿದರು.
ಇನ್ನು ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕುಸಾಲ್ ಮೆಂಡಿಸ್ ಔಟಾಗದೇ 74 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
