ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಕಳೆದೊಂದು ವರ್ಷದಿಂದಲೂ ಮಂಕಾಗಿದೆ. ಪಾಕಿಸ್ತಾನದ ವಿರುದ್ಧವೂ ಸೂರ್ಯನ ಪ್ರದರ್ಶನ ನಿರಾಶಾದಾಯಕವಾಗಿದೆ. ಏಷ್ಯಾಕಪ್‌ನಲ್ಲಿ ಸೂರ್ಯ ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ದುಬೈ: 2025ರ ಏಷ್ಯಾಕಪ್‌ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದೆನಿಸಿರುವ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪ್ರದರ್ಶನ ಭಾರತೀಯ ಅಭಿಮಾನಿಗಳ ತಲೆನೋವು ಹೆಚ್ಚುವಂತೆ ಮಾಡಿದೆ. ಪಾಕಿಸ್ತಾನ ಎದುರು ಸೂರ್ಯ ಪ್ರದರ್ಶನ ಅಷ್ಟೇನು ಹೇಳಿಕೊಳ್ಳುವಂತಿಲ್ಲ.

ಕಳೆದೊಂದು ವರ್ಷದಲ್ಲಿ ಸೂರ್ಯ ಬಾರಿಸಿದ್ದು ಒಂದೇ ಅರ್ಧಶತಕ

ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಕಳೆದೊಂದು ವರ್ಷದಿಂದಲೂ ಮಂಕಾಗಿದೆ. ಸೂರ್ಯ ಅಕ್ಟೋಬರ್ 12, 2024ರಲ್ಲಿ ಬಾಂಗ್ಲಾದೇಶ ಎದುರು ಕೊನೆಯ ಬಾರಿಗೆ ಅರ್ಧಶತಕ ಸಿಡಿಸಿದ್ದರು. ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, 75 ರನ್‌ಗಳ ಸ್ಪೋಟಕ ಇನ್ನಿಂಗ್ಸ್ ಆಡಿದ್ದರು. ಇದಾದ ಬಳಿಕ ಸೂರ್ಯ ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಇದಾದ ಬಳಿಕ ಇಲ್ಲಿಯವರೆಗೆ ಸೂರ್ಯಕುಮಾರ್ ಯಾದವ್ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಈ ಪೈಕಿ 21 ರನ್ ಅವರು ಗಳಿಸಿದ ಸರ್ವಾಧಿಕ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ. ಸೂರ್ಯ ನಾಯಕನಾಗಿ ಯಶಸ್ಸು ಗಳಿಸಿದ್ದಾರೆ, ಆದರೆ ಬ್ಯಾಟರ್‌ ಆಗಿ ಪದೇ ಪದೇ ವೈಫಲ್ಯ ಎದುರಿಸಿದ್ದಾರೆ. ಹೀಗಾಗಿ ಇದೀಗ ಬದ್ದ ಎದುರಾಳಿ ಪಾಕ್ ಎದುರು ಅಬ್ಬರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಲು ಸೂರ್ಯ ಸಜ್ಜಾಗುತ್ತಿದ್ದಾರೆ.

ಪಾಕ್ ಎದುರು ಮಂಕಾದ ಸೂರ್ಯ

ಸೂರ್ಯಕುಮಾರ್ ಯಾದವ್ ಬದ್ದ ಎದುರಾಳಿ ಪಾಕಿಸ್ತಾನ ಎದುರು ಕೂಡಾ ನೀರಸ ಪ್ರದರ್ಶನ ತೋರಿದ್ದಾರೆ. ಇದುವರೆಗೂ ಪಾಕಿಸ್ತಾನ ಎದುರು ಸೂರ್ಯಕುಮಾರ್ ಯಾದವ್ ಟಿ20 ಹಾಗೂ ಏಕದಿನ ಸೇರಿ ಒಟ್ಟಾರೆ 5 ಪಂದ್ಯಗಳನ್ನು ಆಡಿದ್ದಾರೆ. ಐದು ಪಂದ್ಯಗಳಿಂದ ಸೂರ್ಯ ಕೇವಲ 64 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ನೆರೆಯ ಪಾಕ್ ಎದುರು ಸೂರ್ಯ ಬ್ಯಾಟಿಂಗ್ ಸರಾಸರಿ ಕೇವಲ 12.80. ಪಾಕ್ ಎದುರು ಸೂರ್ಯ ಗರಿಷ್ಠ ವೈಯುಕ್ತಿಕ ಸ್ಕೋರ್ ಕೇವಲ 18 ರನ್. ಇದೀಗ ಏಷ್ಯಾಕಪ್ ಟೂರ್ನಿಯ ವೇದಿಕೆಯಲ್ಲಿ ಪಾಕಿಸ್ತಾನ ಎದುರು ತಮ್ಮನ್ನು ತಾವು ಸಾಬೀತು ಮಾಡಿಕೊಳ್ಳಲು ಸುವರ್ಣಾವಕಾಶ ಬಂದೊದಗಿದೆ.

ನಾಯಕನಾಗಿ ಪಾಸ್, ಬ್ಯಾಟರ್ ಆಗಿ ಫೇಲ್!

2024ರ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಸೂರ್ಯಕುಮಾರ್‌ ಯಾದವ್‌ಗೆ ಭಾರತ ಟಿ20 ತಂಡದ ನಾಯಕ ಪಟ್ ಕಟ್ಟಲಾಗಿದೆ. ಇದಾದ ಬಳಿಕ ಸೂರ್ಯಕುಮಾರ್ ಯಾದವ್ 23 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿ ಕೇವಲ 565 ರನ್ ಸಿಡಿಸಿದ್ದಾರೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಸರಾಸರಿಉ 26.57 ಕ್ಕೆ ಕುಸಿದಿದೆ. ಸೂರ್ಯ ಈ ಅವಧಿಯಲ್ಲಿ ಕೇವಲ 4 ಅರ್ಧಶತಕ ಹಾಗೂ ಒಂದು ಶತಕ ಮಾತ್ರ ಸಿಡಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನಾಯಕತ್ವ ಒತ್ತಡದಿಂದಾಗಿ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿದೆಯಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

ಒಂದು ಕಡೆ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಯುಎಇ ಎದುರು 9 ವಿಕೆಟ್ ಅಂತರದ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಇನ್ನೊಂದೆಡೆ ಪಾಕಿಸ್ತಾನ ತಂಡವು ಓಮಾನ್ ಎದುರು ಗೆದ್ದು ಬೀಗಿದೆ. ಇದೀಗ ಸೂಪರ್ ಸಂಡೆಯ ಹೈವೋಲ್ಟೇಜ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಹಾಲಿ ಚಾಂಪಿಯನ್ ಭಾರತ, ಪಾಕ್ ಬಗ್ಗುಬಡಿದು ಅಧಿಕೃತವಾಗಿ ಸೂಪರ್ 4 ಹಂತಕ್ಕೆ ಲಗ್ಗೆಯಿಡಲು ಎದುರು ನೋಡುತ್ತಿದೆ.