ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಕುಲ್ದೀಪ್ ಮತ್ತು ದುಬೆ ಅವರ ಬೌಲಿಂಗ್ ಹಾಗೂ ಅಭಿಷೇಕ್ ಮತ್ತು ಗಿಲ್ ಅವರ ಬ್ಯಾಟಿಂಗ್ ಮಿಂಚಿನಿಂದ ಗೆಲುವು ಸುಲಭವಾಯಿತು. ಸೂರ್ಯ ತಮ್ಮ ನಾಯಕತ್ವದಲ್ಲಿ ಹೊಸ ದಾಖಲೆಯನ್ನೂ ಬರೆದಿದ್ದಾರೆ.
ದುಬೈ: ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ 2025ರ ಏಷ್ಯ್ಯಾಕಪ್ ಟೂರ್ನಿಯಲ್ಲಿ ಭರ್ಜರಿ ಶುಭಾರಂಭ ಮಾಡಿದೆ. ದುಬೈನಲ್ಲಿ ಯುಎಇ ವಿರುದ್ದ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 9 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಬೌಲಿಂಗ್‌ನಲ್ಲಿ ಕುಲ್ದೀಪ್ ಯಾದವ್ ಹಾಗೂ ಶಿವಂ ದುಬೆ ಮ್ಯಾಜಿಕ್ ಮಾಡಿದರೆ, ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಇನ್ನು ಇದೆಲ್ಲದರ ನಡುವೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಹೊಸದೊಂದು ಬೆಂಚ್ ಮಾರ್ಕ್ ಸೆಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಯುಎಇ ಎದುರಿನ ಪಂದ್ಯದಲ್ಲಿ ಬೌಲಿಂಗ್ ಚೇಂಜ್ ಮಾಡುವುದರಿಂದ ಹಿಡಿದು, ಸ್ವತಃ ಬ್ಯಾಟಿಂಗ್ ಆರ್ಡರ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಪ್ರಮೋಟ್ ಮಾಡಿಕೊಳ್ಳುವ ಮೂಲಕ ಸೂರ್ಯ ಗಮನ ಸೆಳೆದಿದ್ದಾರೆ. ಇದೀಗ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಎಂ ಎಸ್ ಧೋನಿ ಅವರಂತಹ ದಿಗ್ಗಜ ನಾಯಕರಿಗಿಂತ ಗ್ರೇಟ್ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಇದನ್ನು ನಾವು ಹೇಳ್ತಿಲ್ಲ, ಈ ಅಂಕಿ-ಅಂಶಗಳೇ ಹೇಳುತ್ತಿವೆ.
ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಬೆಸ್ಟ್ ಕ್ಯಾಪ್ಟನ್
2024ರ ಐಸಿಸಿ ಟಿ20 ವಿಶ್ವಕಪ್ ಬಳಿಕ ಸೂರ್ಯಕುಮಾರ್ ಯಾದವ್ ಭಾರತ ಟಿ20 ಕ್ರಿಕೆಟ್ ತಂಡದ ಪೂರ್ಣಪ್ರಮಾಣದ ಕ್ಯಾಪ್ಟನ್ ಆಗಿ ನೇಮಕವಾಗಿದ್ದಾರೆ. ಇದಾದ ಬಳಿಕ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವು ಚುಟುಕು ಕ್ರಿಕೆಟ್ ಮಾದರಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಕನಿಷ್ಠ ಟಿ20 ತಂಡಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ ನಾಯಕರ ಪಟ್ಟಿಯಲ್ಲಿ ಇದೀಗ ಸೂರ್ಯಕುಮಾರ್ ಯಾದವ್ ನಂ.1 ಸ್ಥಾನಕ್ಕೇರಿದ್ದಾರೆ. ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಟೀಂ ಇಂಡಿಯಾ 82.6ರ ಪ್ರತಿಶತ ಗೆಲುವು ಕಂಡಿದೆ. ಇದರೊಂದಿಗೆ ಸೂರ್ಯಕುಮಾರ್ ಯಾದವ್ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ಅವರ ಟ್ರ್ಯಾಕ್ ರೆಕಾರ್ಡ್ 80.6% ಇದೆ. ಇನ್ನು ವಿರಾಟ್ ಕೊಹ್ಲಿ ಮೂರನೇ ಹಾಗೂ ಹಾರ್ದಿಕ್ ಪಾಂಡ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಅದ್ಭುತವಾಗಿದೆ ಸೂರ್ಯನ ಕ್ಯಾಪ್ಟನ್ಸಿ ರೆಕಾರ್ಡ್
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದೆ. ಸೂರ್ಯ ನಾಯಕತ್ವದಲ್ಲಿ ಭಾರತ ಇದುವರೆಗೂ 23 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಈ ಪೈಕಿ 19 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕೇವಲ 4 ಪಂದ್ಯಗಳಲ್ಲಿ ಮಾತ್ರ ಸೋಲಿನ ಕಹಿಯುಂಡಿದೆ. 2024ರ ಟಿ20 ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ಭಾರತ ಚುಟುಕು ಕ್ರಿಕೆಟ್ ತಂಡದ ನಾಯಕನಾಗಿ ಸೂರ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಯುಎಇ ಎದುರು ಸುಲಭ ಗೆಲುವು ದಾಖಲಿಸಿರುವ ಭಾರತ ತಂಡಕ್ಕೆ ಇದೀಗ ಸೆಪ್ಟೆಂಬರ್ 14ರಂದು ಪಾಕಿಸ್ತಾನ ಎದುರು ಸತ್ವಪರೀಕ್ಷೆ ನಡೆಯಲಿದೆ. ಪೆಹಲ್ಗಾಂ ಭಯೋತ್ಪಾದಕ ದಾಳಿ, ಆಪರೇಷನ್ ಸಿಂದೂರ್ ಬಳಿಕ ಇದೇ ಮೊದಲ ಸಲ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಒಂದು ರೀತಿ ಬದ್ದವೈರಿಗಳ ನಡುವಿನ ಕಾದಾಟವನ್ನು ನೋಡಲು ಕ್ರಿಕೆಟ್ ಜಗತ್ತು ತುದಿಗಾಲಿನಲ್ಲಿ ನಿಂತಿರುತ್ತದೆ. ಹೀಗಾಗಿ ಸಾಕಷ್ಟು ನಿರೀಕ್ಷೆಯ ಭಾರವನ್ನು ಹೊತ್ತು ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನು ಮುನ್ನಡೆಸಬೇಕಿದೆ.
