2025ರ ಏಷ್ಯಾಕಪ್‌ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದಾರೆ. ಶುಭ್‌ಮನ್ ಗಿಲ್ ಗರಿಷ್ಠ ರನ್ ಗಳಿಸುವ ಬ್ಯಾಟರ್ ಹಾಗೂ ವರುಣ್ ಚಕ್ರವರ್ತಿ ಗರಿಷ್ಠ ವಿಕೆಟ್ ಪಡೆಯುವ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುಬೈ: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯು ಸೆಪ್ಟೆಂಬರ್ 09ರಿಂದ ಭರ್ಜರಿಯಾಗಿಯೇ ಆರಂಭವಾಗಿದೆ. ಏಷ್ಯಾದ 8 ತಂಡಗಳು ಪ್ರತಿಷ್ಠಿತ ಏಷ್ಯಾಕಪ್ ಟ್ರೋಫಿ ಜಯಿಸಲು ಕಾದಾಡುತ್ತಿವೆ. ಫೈನಲ್‌ನಲ್ಲಿ ಯಾರು ಚಾಂಪಿಯನ್ ಆಗ್ತಾರೆ ಎನ್ನುವುದನ್ನು ತಿಳಿಯಲು ಸೆಪ್ಟೆಂಬರ್ 28ರವರೆಗೂ ಕಾಯಬೇಕಾಗುತ್ತದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ತಂಡಗಳು ಏಷ್ಯಾಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿವೆ. ಇದರ ನಡುವೆ ಖ್ಯಾತ ಕ್ರಿಕೆಟ್ ವಿಶ್ಲೇಷಕರಾದ ಹರ್ಷಾ ಬೋಗ್ಲೆ, ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಹಾಗೂ ದಿನೇಶ್ ಕಾರ್ತಿಕ್, 2025ರ ಏಷ್ಯಾಕಪ್ ಚಾಂಪಿಯನ್ ಯಾರಾಗ್ತಾರೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಹೌದು, ಹರ್ಷಾ ಬೋಗ್ಲೆ, ಸುನಿಲ್ ಗವಾಸ್ಕರ್ ಹಾಗೂ ದಿನೇಶ್ ಕಾರ್ತಿಕ್ ಈ ಮೂವರು ಈ ಬಾರಿಯ ಏಷ್ಯಾಕಪ್ ಟ್ರೋಫಿಯನ್ನು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಜಯಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಟೀಂ ಇಂಡಿಯಾ ಸಾಕಷ್ಟು ಸಮತೋಲನದಿಂದ ಕೂಡಿದ್ದು, ಎದುರಾಳಿ ಪಡೆಯ ಮೇಲೆ ಸವಾರಿ ಮಾಡಲಿದೆ. ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ಭಾರತ ತಂಡವು ಉಳಿದೆಲ್ಲಾ ತಂಡಗಳಿಗೆ ಹೋಲಿಸಿದರೆ ಟ್ರೋಫಿ ಗೆಲ್ಲುವ ರೇಸ್‌ನಲ್ಲಿ ಸಾಕಷ್ಟು ಮುಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಏಷ್ಯಾಕಪ್ ಟೂರ್ನಿಯಲ್ಲಿ ಯಾರು ಗರಿಷ್ಠ ರನ್ ಗಳಿಸ್ತಾರೆ?
ಇನ್ನು ಈ ಬಾರಿ ಯಾರು ಏಷ್ಯಾಕಪ್ ಗೆಲ್ಲುತ್ತಾರೆ ಎನ್ನುವುದರ ಜತೆಜತೆಗೆ, ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಬ್ಯಾಟರ್ ಯಾರು ಎನ್ನುವುದನ್ನು ಪ್ರೆಡಿಕ್ಟ್ ಮಾಡಿದ್ದಾರೆ. ಈ ವಿಚಾರದಲ್ಲೂ ಮೂವರು ಶುಭ್‌ಮನ್ ಗಿಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್ ಈ ಬಾರಿ ರನ್ ಮಷೀನ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸನ್ನಿ, ಗಿಲ್ ಈ ಬಾರಿ ತಮ್ಮ ಕ್ಲಾಸ್ ಹಾಗೂ ಸ್ಥಿರ ಬ್ಯಾಟಿಂಗ್ ಮೂಲಕ ಮಿಂಚಲಿದ್ದಾರೆ ಎಂದು ಹೇಳಿದ್ದಾರೆ. ಶುಭ್‌ಮನ್ ಗಿಲ್ ಇದುವರೆಗೂ ಭಾರತ ಪರ 21 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, ಒಂದು ಶತಕ ಹಾಗೂ ಮೂರು ಅರ್ಧಶತಕ ಸಹಿತ 578 ರನ್ ಸಿಡಿಸಿದ್ದಾರೆ.
ಇನ್ನು ಗರಿಷ್ಠ ವಿಕೆಟ್ ಕಬಳಿಸುವ ಬೌಲರ್ ಯಾರು ಎನ್ನುವ ಪ್ರಶ್ನೆಗೂ ಮೂವರು ಒಮ್ಮತದಿಂದ ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ ಅವರ ಹೆಸರನ್ನು ಆಯ್ಕೆ ಮಾಡಿದ್ದಾರೆ. ಭಾರತ ಪರ ವರುಣ್ ಚಕ್ರವರ್ತಿ 18 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿ 33 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್‌ನಲ್ಲೂ ಕೆಕೆಆರ್ ಪರ ವರುಣ್ ಚಕ್ರವರ್ತಿ ಮಿಂಚಿನ ಪ್ರದರ್ಶನ ತೋರುವ ಮೂಲಕ ಹಲವಾರು ಪಂದ್ಯಗಳಲ್ಲಿ ತಂಡವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ.
ಏಷ್ಯಾಕಪ್ ಟೂರ್ನಿಯ ವಿನ್ನರ್ಸ್ ಲಿಸ್ಟ್:
1984ರಿಂದ ಆರಂಭವಾಗಿರುವ ಏಷ್ಯಾಕಪ್ ಟೂರ್ನಿಯು ಇದುವರೆಗೂ 16 ಯಶಸ್ವಿ ಸೀಸನ್‌ಗಳನ್ನು ಕಂಡಿದೆ. 16 ಸೀಸನ್‌ಗಳ ಪೈಕಿ ಟೀಂ ಇಂಡಿಯಾ ಎಂಟು ಬಾರಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಈ ಬಾರಿಯ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಇದಕ್ಕೂ ಮೊದಲು 2016 ಹಾಗೂ 2022ರಲ್ಲೂ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆದಿತ್ತು.
ಭಾರತ ಕ್ರಿಕೆಟ್ ತಂಡವು 1984, 1988, 1990-91, 1995, 2010, 2016, 2018, ಹಾಗೂ 2023ರಲ್ಲಿ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ಶ್ರೀಲಂಕಾ 6 ಬಾರಿ ಹಾಗೂ ಪಾಕಿಸ್ತಾನ ಎರಡು ಬಾರಿ ಏಷ್ಯಾಕಪ್ ಪಟ್ಟ ಅಲಂಕರಿಸಿದೆ.
ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ:
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
