ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಫ್ಘಾನಿಸ್ತಾನ ಭರ್ಜರಿ ಆರಂಭ ಮಾಡಿದೆ. ಹಾಂಕಾಂಗ್ ವಿರುದ್ಧ 94 ರನ್‌ಗಳ ಜಯ ಸಾಧಿಸಿ ಉತ್ತಮ ನೆಟ್ ರನ್‌ರೇಟ್‌ನೊಂದಿಗೆ 'ಬಿ' ಗುಂಪಿನಲ್ಲಿ ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆಫ್ಘನ್ 188 ರನ್ ಗಳಿಸಿ, ಹಾಂಕಾಂಗ್‌ನ್ನು 94 ರನ್‌ಗಳಿಗೆ ನಿಯಂತ್ರಿಸಿತು.

ಅಬುಧಾಬಿ: ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಅಫ್ಘಾನಿಸ್ತಾನ ಶುಭಾರಂಭ ಮಾಡಿದೆ. ಮಂಗಳವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ 94 ರನ್‌ಗಳ ಗೆಲುವು ಸಾಧಿಸಿದ ಆಫ್ಘನ್ ಉತ್ತಮ ನೆಟ್ ರನ್‌ರೇಟ್ ಸಂಪಾದಿಸಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್ 20 ಓವರಲ್ಲಿ 6 ವಿಕೆಟ್‌ಗೆ 188 ರನ್ ಕಲೆಹಾಕಿತು. ಹಾಂಕಾಂಗ್ 20 ಓವರ್ ಬ್ಯಾಟ್ ಮಾಡಿ 9 ವಿಕೆಟ್‌ಗೆ 94 ರನ್ ಗಳಿಸಲಷ್ಟೇ ಶಕ್ತವಾಯಿತು.

ಟಾಸ್ ಗೆದ್ದ ಆಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ಮಾಡಿದರು. ಆದರೆ ಆಫ್ಘಾನ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭಿಕ ಬ್ಯಾಟರ್ ರೆಹಮನುಲ್ಲಾ ಗುರ್ಬಾಜ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಇಬ್ರಾಹಿಂ ಜದ್ರಾನ್ ಕೇವಲ ಒಂದು ರನ್ ಗಳಿಸಿ ಅತೀಕ್ ಇಕ್ಬಾಲ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆಫ್ಘಾನ್ ತಂಡವು 27 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಇಬ್ಬರು ಬ್ಯಾಟರ್‌ಗಳು ವಿಕೆಟ್ ಒಪ್ಪಿಸಿದರು.

ಅಫ್ಘಾನಿಸ್ತಾನ ನಿಧಾನ ಆರಂಭ ಪಡೆದರೂ, ಸ್ಲಾಗ್ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಮೊದಲ 15 ಓವರಲ್ಲಿ 110 ರನ್ ಗಳಿಸಿದ್ದ ಅಫ್ಘಾನಿಸ್ತಾನ ಕೊನೆ 5 ಓವರಲ್ಲಿ 78 ರನ್ ಚಚ್ಚಿತು. ಆರಂಭಿಕ ಬ್ಯಾಟ‌ರ್ ಸೆದಿಕುಲ್ಹಾ ಅಟಲ್ ಔಟಾಗದೆ 73, ಅಜ್ಮತುಲ್ಹಾ ಓಮರ್‌ಝಾಯ್ ಕೊನೆಯಲ್ಲಿ ಕೇವಲ 21 ಎಸೆತದಲ್ಲಿ 53 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಲ್ರೌಂಡರ್ ಮೊಹಮ್ಮದ್ ನಬಿ 33 ರನ್ ಸಿಡಿಸಿದರು. ಅಂತಿಮವಾಗಿ ಆಫ್ಘಾನಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 188 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು.

ಹಾಂಕಾಂಗ್ ಪರ ಆಯುಷ್ ಶುಕ್ಲಾ ಹಾಗೂ ಕಿಂಚಿತ್ ಶಾ ತಲಾ ಎರಡು ವಿಕೆಟ್ ಪಡೆದರೆ, ಅತೀಕ್ ಇಕ್ಬಾಲ್ ಹಾಗೂ ಇಶಾನ್ ಖಾನ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಬೃಹತ್ ಗುರಿ ಬೆನ್ನತ್ತಿದ ಹಾಂಕಾಂಗ್, 22 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಹಿರಿಯ ಆಟಗಾರ ಬಾಬರ್ ಹಯಾತ್ ಗಳಿಸಿದ 39 ರನ್, ತಂಡ ಹೀನಾಯ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿತು. ನಾಯಕ ಯಾಸಿಮ್ ಮುರ್ತಜಾ 16 ರನ್ ಕಲೆಹಾಕಿದರು. ಆಫ್ಘನ್ ಪರ ವೇಗಿಗಳಾದ ಗುಲ್ಬದಿನ್ ನೈಬ್ ಹಾಗೂ ಫಜಲ್‌ಹಕ್ ಫಾರೂಕಿ ತಲಾ 2 ವಿಕೆಟ್ ಕಿತ್ತರು. ತಾರಾ ಸ್ಪಿನ್ನರ್‌ಗಳಾದ ನೂರ್ ಅಹ್ಮದ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಕಬಳಿಸಿ ಗೆಲುವಿಗೆ ನೆರವಾದರು.

ಇದೀಗ ಆಫ್ಘಾನಿಸ್ತಾನ ತಂಡವು ಸೆಪ್ಟೆಂಬರ್ 16ರಂದು ನಡೆಯಲಿರುವ ಏಷ್ಯಾಕಪ್ ಟೂರ್ನಿಯ 9ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಅಬುದಾಬಿಯ ಶೇಖ್ ಝಾಯೆದ್ ಮೈದಾನ ಆತಿಥ್ಯ ವಹಿಸಲಿದೆ. ಆಫ್ಘಾನಿಸ್ತಾನದ ಇನ್ನೊಂದು ಗೆಲುವು ಬಹುತೇಕ ತಂಡವನ್ನು ಸೂಪರ್ 4 ಹಂತಕ್ಕೇರಿಸಲಿದೆ.