ಏಷ್ಯಾಕಪ್ 2025ರ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಶುಭ್‌ಮನ್ ಗಿಲ್ ಅಜೇಯ 20 ರನ್ ಸಿಡಿಸಿ ಮಿಂಚಿದರು. ಮುಂದಿನ ಪಂದ್ಯ ಪಾಕಿಸ್ತಾನದ ವಿರುದ್ಧ.

ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್‌ ತಂಡದ ಉಪನಾಯಕನಾಗಿರುವ ಶುಭ್‌ಮನ್ ಗಿಲ್, ಮೊದಲ ಪಂದ್ಯದಲ್ಲೇ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುಎಇ ಎದುರಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ಅಜೇಯ 20 ರನ್ ಸಿಡಿಸಿ ಮಿಂಚಿದರು. ಭಾರತ ತಂಡವು ಯುಎಇ ನೀಡಿದ್ದ 58 ರನ್‌ಗಳ ಗುರಿಯನ್ನು ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇದೀಗ ಭಾರತ ತಂಡವು ಸೆಪ್ಟೆಂಬರ್ 14ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನ ಶುಭ್‌ಮನ್ ಗಿಲ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Add Asianetnews Kannada as a Preferred SourcegooglePreferred

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಗಿಲ್ ಪೋಸ್ಟ್‌

ಏಷ್ಯಾಕಪ್ 2025ರ ಟೂರ್ನಿಗೆ ಇನ್ನೂ ಭಾರತ ತಂಡ ಘೋಷಿಸಿರಲಿಲ್ಲ. ಹೀಗಿರುವಾಗಲೇ ಗಿಲ್ ಭಾರತ ಟಿ20 ತಂಡಕ್ಕೆ ಕೂಡಿಕೊಳ್ಳುತ್ತಾರೆಯೇ ಇಲ್ಲವೇ ಎನ್ನುವ ಚರ್ಚೆ ಜೋರಾಗಿತ್ತು. ಯಾಕೆಂದರೆ 2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಇನ್ನು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಗಿಲ್ ಅಮೋಘ ಪ್ರದರ್ಶನ ತೋರುವ ಮೂಲಕ ಆಯ್ಕೆಗಾರರ ಮನ ಗೆದ್ದಿದ್ದರು. ಹೀಗಾಗಿ ಏಷ್ಯಾಕಪ್ ಟೂರ್ನಿಗೆ ಗಿಲ್ ಅವರನ್ನು ಆಯ್ಕೆ ಮಾಡುವುದರ ಜತೆಗೆ ಉಪನಾಯಕ ಪಟ್ಟವನ್ನು ಕಟ್ಟಲಾಯಿತು. ಇದೀಗ ಯುಎಇ ಎದುರು ಗಿಲ್ ಕೇವಲ 9 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಹಾಗೂ ಒಂದು ಆಕರ್ಷಕ ಸಿಕ್ಸರ್ ನೆರವಿನಿಂದ 222.22 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 20 ರನ್ ಸಿಡಿಸಿ ಮಿಂಚಿದ್ದಾರೆ.

ಯುಎಇ ಎದುರು ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಶುಭ್‌ಮನ್ ಗಿಲ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಗೆಲುವಿನ ಸಂಭ್ರಮಾಚರಣೆಯ ಫೋಟೋಗಳ ಜತೆಗೆ ಎರಡು ಪದಗಳ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೌದು, ಗಿಲ್ ಸ್ಟೆಪ್ ಒನ್(ಒಂದು ಹೆಜ್ಜೆಯಿಟ್ಟಾಗಿದೆ) ಎಂದು ಪೋಸ್ಟ್ ಮಾಡುವ ಮೂಲಕ ಎರಡನೇ ಹೆಜ್ಜೆ ಪಾಕ್ ಎದುರು ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಂದರೆ ಪಾಕಿಸ್ತಾನ ಎದುರು ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರೆಯಲಿದೆ ಎನ್ನುವ ವಾರ್ನಿಂಗ್ ಗಿಲ್ ರವಾನಿಸಿದ್ದಾರೆ.

Scroll to load tweet…

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಯುಎಇ ತಂಡವು ಕೇವಲ 57 ರನ್‌ಗಳಿಗೆ ಸರ್ವಪತನ ಕಂಡಿತು. ಕುಲ್ದೀಪ್ ಯಾದವ್ 4 ವಿಕೆಟ್ ಪಡೆದರೆ, ಶಿವಂ ದುಬೆ 3, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 4.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ.