ಏಷ್ಯಾಕಪ್ ಫೈನಲ್‌ಗೆ ತಲುಪಲು ಪಾಕಿಸ್ತಾನವು ಭಾರತದ ಗೆಲುವಿಗಾಗಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತವು ಬಾಂಗ್ಲಾದೇಶವನ್ನು ಸೋಲಿಸಿದರೆ, ಪಾಕಿಸ್ತಾನಕ್ಕೆ ಫೈನಲ್ ತಲುಪುವ ಅವಕಾಶ ಸಿಗಲಿದೆ, ಆದರೆ ಭಾರತ ಸೋತರೆ ಲೆಕ್ಕಾಚಾರ ಸಂಪೂರ್ಣ ಬದಲಾಗಲಿದೆ. 

ದುಬೈ: ಯಾವ ಭಾರತ ತಂಡ ಸೋಲಲಿ ಎಂದು ಪಾಕಿಸ್ತಾನ ಹಗಲಿರುಳು ಕಾಯುತ್ತಿತ್ತೋ, ಈಗ ಅದೇ ತಂಡದ ಗೆಲುವಿಗಾಗಿ ಪ್ರಾರ್ಥಿಸುವ ಕಾಲ ಬಂದಿದೆ. ಇದು ಅಚ್ಚರಿ ಎನಿಸಿದ್ರೂ ಸತ್ಯ. ಹೌದು, ಏಷ್ಯಾಕಪ್ ಫೈನಲ್‌ಗೆ ತಲುಪಲು ಪಾಕಿಸ್ತಾನವು ಭಾರತದ ಗೆಲುವಿಗಾಗಿ ಪ್ರಾರ್ಥಿಸಬೇಕಾಗಿದೆ. ಆಗ ಮಾತ್ರ ಅದಕ್ಕೆ ಫೈನಲ್ ಟಿಕೆಟ್ ಸಿಗತ್ತೆ. ಶ್ರೀಲಂಕಾದ ಟಾಪ್ 2 ತಲುಪುವ ಹಾದಿ ಬಹುತೇಕ ಮುಗಿದಿದೆ. ಹೀಗಿರುವಾಗ ಭಾರತದ ಜೊತೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ತಂಡ ಫೈನಲ್ ಆಡಲಿದೆ. ಇದಕ್ಕಾಗಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿದರೆ, ಪಾಕಿಸ್ತಾನಕ್ಕೆ ಫೈನಲ್ ಟಿಕೆಟ್ ಕನಸು ಜೀವಂತವಾಗಿರಲಿದೆ. ಏಷ್ಯಾಕಪ್ ಸೂಪರ್-4 ಹಂತದಿಂದ ಫೈನಲ್ ಲೆಕ್ಕಾಚಾರ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ

ಬಾಂಗ್ಲಾದೇಶವನ್ನು ಸೋಲಿಸಿದ್ರೆ ಭಾರತಕ್ಕೆ ಸಿಗುತ್ತೆ ಫೈನಲ್ ಟಿಕೆಟ್

ಸೆಪ್ಟೆಂಬರ್ 24, ಬುಧವಾರದಂದು ನಡೆಯಲಿರುವ ಸೂಪರ್-4ರ ಮೂರನೇ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಸೋಲಿಸಿದರೆ, ಫೈನಲ್ ತಲುಪಿದ ಮೊದಲ ತಂಡವಾಗಲಿದೆ. ಇದರ ನಂತರ ಶ್ರೀಲಂಕಾ ವಿರುದ್ಧ ಒಂದು ಪಂದ್ಯವಿದ್ದು, ಅದು ಕೇವಲ ಔಪಚಾರಿಕ ಪಂದ್ಯವಾಗಿರುತ್ತದೆ. ಬಾಂಗ್ಲಾದೇಶದ ವಿರುದ್ಧ ಭಾರತದ ದಾಖಲೆ ಅದ್ಭುತವಾಗಿದೆ. 17 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 16ರಲ್ಲಿ ಗೆಲುವು ಸಾಧಿಸಿದೆ. ಹೀಗಿರುವಾಗ ಈ ಪಂದ್ಯವನ್ನು ಗೆಲ್ಲುವುದು ಬಹುತೇಕ ಖಚಿತ. ಪಾಕಿಸ್ತಾನ ಕೂಡ ಭಾರತ ಈ ಪಂದ್ಯವನ್ನು ಗೆಲ್ಲಲಿ ಎಂದು ಪ್ರಾರ್ಥನೆ ಮಾಡುತ್ತಿದೆ. ಆಗ ಮಾತ್ರ ಪಾಕಿಸ್ತಾನದ ಫೈನಲ್ ತಲುಪುವ ಕನಸು ನನಸಾಗಲಿದೆ. ಇದಕ್ಕಾಗಿ ಸೆಪ್ಟೆಂಬರ್ 25 ರಂದು ಪಾಕಿಸ್ತಾನವು ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಾಗುತ್ತದೆ, ಆಗ ಮಾತ್ರ ಪಾಕ್‌ಗೆ ಏಷ್ಯಾಕಪ್ ಫೈನಲ್ ಟಿಕೆಟ್ ಸಿಗಲಿದೆ.

ಒಂದು ವೇಳೆ ಭಾರತ ಬಾಂಗ್ಲಾದೇಶದ ವಿರುದ್ಧ ಸೋತರೆ?

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಒಂದು ವೇಳೆ ಬಾಂಗ್ಲಾದೇಶ ತಂಡವೇ ಗೆಲುವು ಸಾಧಿಸಿದರೆ, ಬಹುತೇಕ ಬಾಂಗ್ಲಾದೇಶ ತಂಡದ ಏಷ್ಯಾಕಪ್ ಫೈನಲ್ ಕನಸಿಗೆ ಜೀವ ಬರಲಿದೆ. ಯಾಕೆಂದರೆ ಈಗಾಗಲೇ ಬಾಂಗ್ಲಾದೇಶ ತಂಡವು ಸೂಪರ್-4 ಹಂತದ ಪಂದ್ಯದಲ್ಲಿ ಶ್ರೀಲಂಕಾ ಎದುರು ಗೆಲುವು ಸಾಧಿಸಿದೆ, ಇಂದು ಭಾರತ ಸೋತರೇ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಇದರ ಜತೆಗೆ ಏಷ್ಯಾಕಪ್ ಫೈನಲ್ ಟಿಕೆಟ್ ರೇಸ್ ಇನ್ನಷ್ಟು ತೀವ್ರವಾಗಲಿದೆ.

ಇದಾದ ಬಳಿಕ ನಾಳೆ ಬಾಂಗ್ಲಾದೇಶ ತಂಡವು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಗೆದ್ದರೇ ಅಧಿಕೃತವಾಗಿ ಫೈನಲ್ ಪ್ರವೇಶಿಸಲಿದೆ. ಸೋತರೂ ಫೈನಲ್‌ ರೇಸ್‌ನಿಂದ ಹೊರಬೀಳುವುದಿಲ್ಲ. ಯಾಕೆಂದರೆ ಈ ಎರಡು ತಂಡಗಳ ಪೈಕಿ ಯಾವ ತಂಡದ ನೆಟ್‌ ರನ್‌ರೇಟ್ ಉತ್ತಮವಾಗಿರಲಿದೆಯೋ ಆ ತಂಡವು ಫೈನಲ್ ಪ್ರವೇಶಿಸಲಿದೆ. ಇನ್ನೊಂದೆಡೆ ಭಾರತ ತಂಡ ಒಂದು ವೇಳೆ ಇಂದು ಬಾಂಗ್ಲಾದೇಶ ಎದುರು ಸೋತು, ಶ್ರೀಲಂಕಾ ಎದುರು ಗೆದ್ದರೇ ಭಾರತ ಕೂಡಾ ಫೈನಲ್ ಪ್ರವೇಶಿಸಲಿದೆ. ಇನ್ನು ಇಂದು ಭಾರತ ಗೆದ್ದು, ನಾಳೆ ಪಾಕ್ ಎದುರು ಬಾಂಗ್ಲಾದೇಶ ಸೋಲು ಕಂಡರೇ, ಮತ್ತೊಮ್ಮೆ ಸೆಪ್ಟೆಂಬರ್ 28ರಂದು ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಹೀಗಾಗದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೂರನೇ ಬಾರಿಗೆ ಏಷ್ಯಾಕಪ್ ಟೂರ್ನಿಯಲ್ಲಿ ಮುಖಾಮುಖಿಯಾದಂತೆ ಆಗಲಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯವು ಭಾರತೀಯ ಕಾಲಮಾನ ಇಂದು ಸಂಜೆ 8 ಗಂಟೆಗೆ ಆರಂಭವಾಗಲಿದೆ. ಈ ಪಂದ್ಯವು ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌, ಸೋನಿ ಲಿವ್ ಹಾಗೂ ಫ್ಯಾನ್‌ ಕೋಡ್ ಮತ್ತು ಡಿಡಿ ಸ್ಪೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ