ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಕ್ಷಣಗಣನೆ. ಪಂದ್ಯ ಬಹಿಷ್ಕಾರದ ಬೇಡಿಕೆಗಳ ನಡುವೆ ಗಂಭೀರ್‌ ಆಟಗಾರರಿಗೆ 'ವೃತ್ತಿಪರರಾಗಿರಿ' ಎಂದು ಸಂದೇಶ ರವಾನೆ. ಭಾವನೆಗಳನ್ನು ಬದಿಗಿಟ್ಟು ದೇಶಕ್ಕಾಗಿ ಆಡುವಂತೆ ಕರೆ.

ದುಬೈ: ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಟೂರ್ನಿಯ ಮಹತ್ವದ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ ಭಾರತೀಯ ಕಾಲಮಾನ 8 ಗಂಟೆಗೆ ಪಂದ್ಯಾಟ ಆರಂಭವಾಗಲಿದೆ. ಪಹಲ್ಗಾಂ ಉಗ್ರರ ದಾಳಿ ನಡೆದ ಘಟನೆಯ ಬಳಿಕ ಇದೇ ಮೊದಲ ಸಲ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಹೀಗಾಗಿ ಈ ಮ್ಯಾಚ್ ಬಾಯ್ಕಾಟ್ ಮಾಡಬೇಕು ಎನ್ನುವ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿ ಬರುತ್ತಿವೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ರದ್ದಾಗುತ್ತಾ ಎನ್ನುವ ಅನುಮಾನ ಮೂಡಲಾರಂಭಿಸಿದೆ.

ಭಾರತ ಸರ್ಕಾರವು, ದ್ವಿಪಕ್ಷೀಯ ಹೊರತುಪಡಿಸಿ ಐಸಿಸಿ ಟೂರ್ನಿಗಳಲ್ಲಿ ಹಾಗೂ ಬಹುಪಕ್ಷೀಯ ಸರಣಿಯಲ್ಲಿ ಟೀಂ ಇಂಡಿಯಾ ಭಾಗವಹಿಸಬಹುದು ಎನ್ನುವ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿಯೇ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಗೆ ಕ್ಷಣಗಣನೆ ಶುರುವಾಗಿದೆ. ಇದೀಗ ಟೀಂ ಇಂಡಿಯಾ ಸಹಾಯಕ ಕೋಚ್ ರೆಯಾನ್ ಟೆನ್ ಡೆಸ್ಕ್ಯಾಟ್, ಹೆಡ್‌ ಕೋಚ್ ಗೌತಮ್ ಗಂಭೀರ್ ಆಟಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಮ್ಯಾಚ್ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನು?

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದ ರೆಯಾನ್ ಟೆನ್ ಡೆಸ್ಕ್ಯಾಟ್ ಅವರನ್ನು ಉದ್ದೇಶಿಸಿ ಮಾಧ್ಯಮದವರು ತಂಡದ ವಾತಾವರಣ, ಆಟಗಾರರ ಮನಸ್ಥಿತಿ ಹೇಗಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು, ಹೆಡ್ ಕೋಚ್ ಗೌತಮ್ ಗಂಭೀರ್, ಆಟಗಾರರಿಗೆ ಮ್ಯಾಚ್ ಬಗ್ಗೆ ಗಮನ ಹರಿಸುವುದಕ್ಕೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ತವರಿನಲ್ಲಿ ಯಾವ ರೀತಿ ಫೀಲಿಂಗ್ಸ್ ಇದೆ ಎಂದು ನಮಗೆ ಗೊತ್ತಿದೆ. ಗಂಭೀರ್ ಆಟಗಾರರಿಗೆ ನಾವೆಲ್ಲರೂ ವೃತ್ತಿಪರರಾಗಿರಬೇಕು, ಎಮೋಷನ್ಸ್ ಬದಿಗಿಟ್ಟು ಆಡಲು ರೆಡಿಯಿರಿ. ನಮ್ಮ ಎದುರು ಯಾವ ಮ್ಯಾಚ್ ಇದೆ, ಅದರ ಬಗ್ಗೆ ಗಮನ ಕೊಡಲು ಆಟಗಾರರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಡೆಸ್ಕ್ಯಾಟ್ ಹೇಳಿದ್ದಾರೆ.

Scroll to load tweet…

ಕ್ರಿಕೆಟ್‌ ಕಡೆಗೆ ನಿಮ್ಮೆಲ್ಲರ ಗಮನ ಇರಲಿ. ಪಾಕಿಸ್ತಾನ ಎದುರಿನ ಪಂದ್ಯದ ಬಾಯ್ಕಾಟ್ ರೂಮರ್ಸ್ ಬದಿಗಿಟ್ಟು, ಪ್ರೊಪೆಷನಲ್ ಆಗಿರಿ. ನಮ್ಮ ನಿಯಂತ್ರಣದಲ್ಲಿರ ವಿಚಾರಗಳ ಬಗ್ಗೆ ಜಾಸ್ತಿ ಆಲೋಚಿಸಬೇಡಿ. ದೇಶಕ್ಕಾಗಿ ಆಡಿ ಎಂದು ಗೌತಮ್ ಗಂಭೀರ್ ಭಾರತೀಯ ಆಟಗಾರರಿಗೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಟೀವಿ ಆಫ್ ಮಾಡಿ: ಬಹಿಷ್ಕಾರಕ್ಕೆ ಪಹಲ್ಗಾಂ ಸಂತ್ರಸ್ತರ ಕರೆ

ಪಹಲ್ಗಾಂನಲ್ಲಿ ನಡೆದ ಉಗ್ರ ದಾಳಿ ಖಂಡಿಸಿ ಭಾರತದ ಹಲವು ಕ್ರಿಕೆಟ್ ಅಭಿಮಾನಿಗಳು ಪಾಕ್ ಜೊತೆಗಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಅಲ್ಲದೆ, ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟವರ ಕುಟುಂಬಸ್ಥರೂ ಪಂದ್ಯ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮೃತ ವ್ಯಕ್ತಿಯೊಬ್ಬರ ಪತ್ನಿ ಐಶನ್ಯಾ ದ್ವಿವೇದಿ, 'ಪಾಕ್ ಜೊತೆ ಆಡಲು ಬಿಸಿಸಿಐ ಒಪ್ಪಬಾರದಿತ್ತು. ಮೃತಪಟ್ಟ 26 ಕುಟುಂಬಗಳ ವಿಚಾರದಲ್ಲಿ ಬಿಸಿಸಿಐಗೆ ಭಾವನೆಗಳಿಲ್ಲವೇ? ನಮ್ಮ ಕ್ರಿಕೆಟಿಗರು ಏನು ಮಾಡುತ್ತಿದ್ದಾರೆ?. ಕ್ರಿಕೆಟಿಗರನ್ನು ರಾಷ್ಟ್ರೀಯವಾದಿಗಳು ಎಂದು ಹೇಳಲಾಗುತ್ತದೆ. ಆದರೆ ಒಂದಿಬ್ಬರು ಕ್ರಿಕೆಟಿಗರನ್ನು ಹೊರತುಪಡಿಸಿ, ಬೇರೆ ಯಾರೂ ಪಾಕ್ ವಿರುದ್ಧ ಪಂದ್ಯ ಬಹಿಷ್ಕರಿಸಬೇಕೆಂದು ಹೇಳಲಿಲ್ಲ. ಬಿಸಿಸಿಐ ಅವರನ್ನು ಗನ್‌ಪಾಯಿಂಟ್‌ನಲ್ಲಿ ಆಡುವಂತೆ ಮಾಡಲು ಸಾಧ್ಯವಿಲ್ಲ. ಅವರು ತಮ್ಮ ದೇಶದ ಪರವಾಗಿ ನಿಲುವು ತೆಗೆದುಕೊಳ್ಳಬೇಕು. ಆದರೆ ಅವರು ಹಾಗೆ ಮಾಡುತ್ತಿಲ್ಲ. ಯಾರೂ ಟೀವಿಯಲ್ಲಿ ಪಂದ್ಯ ನೋಡಬಾರದು. ಬಹಿಷ್ಕರಿಸಿ' ಎಂದಿದ್ದಾರೆ.

ಕೆಲ ರಾಜಕೀಯ ಪಕ್ಷಗಳು, ಗಣ್ಯರು ಕೂಡಾ ಭಾರತ-ಪಾಕ್ ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ, ಐಪಿಎಲ್‌ನ ಪಂಜಾಬ್ ಕಿಂಗ್ ತಂಡ ಶನಿವಾರ ಪಂದ್ಯದ ಬಗ್ಗೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರತದ ಧ್ವಜದ ಚಿಹ್ನೆ ಬಳಸಿ ಪಾಕಿಸ್ತಾನದ ಧ್ವಜವನ್ನು ಕಡೆಗಣಿಸಿದೆ. ಅತ್ತ ಪಿಎಸ್‌ಎಲ್‌ನ ಕರಾಚಿ ತಂಡ ಪಾಕ್ ನಾಯಕನ ಫೋಟೋ ಹಾಕಿ, ಭಾರತದ ನಾಯಕನ ಫೋಟೋ ಹಾಕುವ ಜಾಗವನ್ನು ಖಾಲಿ ಬಿಟ್ಟಿದೆ.