ಬಾಲಿವುಡ್ ನಟ ಸುನೀಲ್ ಶೆಟ್ಟಿ ಮತ್ತು ಮುಸ್ಲಿಂ ಮೂಲದ ಮನಾ ಶೆಟ್ಟಿ ಅವರದ್ದು ಧರ್ಮಾತೀತ ಪ್ರೇಮ ಕಥೆ. ಮನೆಯವರ ವಿರೋಧದ ನಡುವೆಯೂ, ಈ ಜೋಡಿ ತಮ್ಮ ಪ್ರೀತಿಗಾಗಿ ಬರೋಬ್ಬರಿ 9 ವರ್ಷಗಳ ಕಾಲ ಕಾದ ನಂತರ ಕುಟುಂಬದವರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ಚಿತ್ರರಂಗದ ಮೊದಲ ಮಾಡರ್ನ್ ಬಾಲಿವುಡ್​ ಆಕ್ಷನ್ ಹೀರೋ (Bollywood Action Hero) ಎನ್ನಿಸಿಕೊಂಡವರು ಸುನೀಲ್​ ಶೆಟ್ಟಿ. ನಟಿ ಆಥಿಯಾ ಶೆಟ್ಟಿ ತಂದೆಯಾಗಿರುವ ಸುನೀಲ್​ ಶೆಟ್ಟಿ ಅವರದ್ದು ರೋಚಕ ಪ್ರೇಮ್​ ಕಹಾನಿ. ಮಂಗಳೂರು ಮೂಲದ ಬಾಲಿವುಡ್​ ಹೀರೋ ಇವರು. ಹಿಂದಿ ಮಾತ್ರವಲ್ಲದೇ ಮಲಯಾಳಿ, ತೆಲುಗು, ತಮಿಳು, ಮರಾಠಿ, ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಜೈ ಎನ್ನುವ ಕನ್ನಡ ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಸುನೀಲ್ ಶೆಟ್ಟಿ ಅವರಿಗೆ ಈಗ 64 ವರ್ಷ ವಯಸ್ಸು. 1991ರಲ್ಲಿ ಸುನೀಲ್​ ಶೆಟ್ಟಿ ಅವರು, ಮನಾ ಶೆಟ್ಟಿ ಅವರ ಕೈಹಿಡಿದಿದ್ದಾರೆ. ಇವರ ಪುತ್ರಿಯೇ ಆಥಿಯಾ ಶೆಟ್ಟಿ. ಮೊದಲೇ ಹೇಳಿದಂತೆ ಸುನೀಲ್​ ಮತ್ತು ಮನಾ ಅವರದ್ದು ರೋಚಕ ಪ್ರೇಮ್​ ಕಹಾನಿ. ಏಕೆಂದರೆ ಮಹಾ ಅವರು ಮುಸ್ಲಿಂ ಲೇಡಿ ಹಾಗೂ ಸುನೀಲ್​ ಹಿಂದೂ

ಪತ್ನಿ ಅಸಲಿ ಹೆಸರೇ ಬೇರೆ...

ಅಸಲಿಗೆ ಸುನೀಲ್​ ಶೆಟ್ಟಿ (Suniel Shetty) ಮನಾ ಅವರ ಹೆಸರು ಮನಾ ಅಲ್ಲ. ಬದಲು ಮೋನಿಷಾ ಕದ್ರಿ (Monisha Kadri). ಇವರ ತಂದೆ ಗುಜರಾತಿ ಮುಸ್ಲಿಂ ಹಾಗೂ ತಾಯಿ ಪಂಜಾಬಿ ಹಿಂದೂ. ಸುನೀಲ್​ ಮತ್ತು ಮನಾ ಅವರ ಮೊದಲ ಬಾರಿಗೆ ಭೇಟಿಯಾಗಿದ್ದು ಮುಂಬೈನ ನೇಪಿಯನ್ ಸೀ ಬಳಿಯ ಪೇಸ್ಟ್ರಿ ಪ್ಯಾಲೇಸ್‌ನಲ್ಲಿ. ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೋಗಿದ್ದಾಗ ಅಲ್ಲಿಗೆ ಬಂದಿದ್ದ ಮೋನಿಷಾ ಅವರನ್ನು ಕಂಡ ಸುನೀಲ್​ ಅವರಿಗೆ ಮೊದಲ ನೋಟದಲ್ಲಿಯೇ ಮನಸ್ಸಾಯಿತು. ಅಕ್ಕನನ್ನು ಒಲಿಸಿಕೊಳ್ಳಲು ಮೊದಲು ಮೋನಿಷಾ ಅವರ ತಂಗಿಯ ಪರಿಚಯ ಮಾಡಿಕೊಂಡರು. ಹೀಗೆ ಇಬ್ಬರ ನಡುವೆ ಪ್ರೇಮದ ಕೊಂಡಿಯಾದರು ಮೋನಿಷಾ ಅವರ ತಂಗಿ. ನಂತರ ಸ್ನೇಹಿತರೊಬ್ಬರ ಪಾರ್ಟಿಗೆ ಮೋನಿಷಾ ಅವರನ್ನೂ ಸುನೀಲ್ ಆಹ್ವಾನಿಸಿದ್ದರು. ಪಾರ್ಟಿ ಮುಗಿದ ಬಳಿಕ ಸುನೀಲ್ ಅವರು ಮೋನಿಷಾರನ್ನು ಬೈಕ್​ನಲ್ಲಿ ಲಾಂಗ್ ಡ್ರೈವ್​ (Long drive) ಕರೆದುಕೊಂಡು ಹೋಗಿದ್ದರು. ಇದಾಗಲೇ ಮೋನಿಷಾ ಅವರಿಗೂ ಸುನೀಲ್​ ಅವರ ಮೇಲೆ ಪ್ರೀತಿ ಹುಟ್ಟಲು ಶುರುವಾಗಿತ್ತು. ಇಬ್ಬರೂ ತಂತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರೂ, ಮದುವೆಗೆ ಧರ್ಮ ಅಡ್ಡಿ ಬಂದಿತ್ತು!

ಮನೆಯಲ್ಲಿ ವಿರೋಧ

ಮುಸ್ಲಿಂ ಕುಟುಂಬದ ಮೋನಿಷಾ ಹಾಗೂ ಕರಾವಳಿಯ ತುಳು ಸಂಪ್ರದಾಯದ ಸುನೀಲ್​ ಅವರ ಮದುವೆಗೆ ಮನೆಯಲ್ಲಿ ಬಹಳ ವಿರೋಧವಿತ್ತು. ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರೂ ಕುಟುಂಬಸ್ಥರು ಒಪ್ಪಿಕೊಳ್ಳಲಿಲ್ಲ. ಆದರೆ ಕುಟುಂಬದವರ ಒಪ್ಪಿಗೆ ಇಲ್ಲದೇ ಮದುವೆಯಾಗಲು ಈ ಜೋಡಿ ಒಪ್ಪಲಿಲ್ಲ. ಆದರೆ ಡೇಟಿಂಗ್​ ಮುಂದುವರೆಸಿದ್ದ ಈ ಜೋಡಿ ಒಂದಲ್ಲ, ಎರಡಲ್ಲ ಬರೋಬ್ಬರಿ 9 ವರ್ಷ ಮನೆಯವರ ಒಪ್ಪಿಗೆಗಾಗಿ ಕಾದಿತು. ಒಂಬತ್ತು ವರ್ಷಗಳ ಬಳಿಕ ಕೊನೆಗೂ ಮದುವೆಗೆ ಇಬ್ಬರ ಮನೆಯವರು ಒಪ್ಪಿಗೆ ನೀಡಿದರು. ಡಿಸೆಂಬರ್ 25, 1991 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. 1992ರಲ್ಲಿ ಅಥಿಯಾ ಹುಟ್ಟಿದರೆ 1996ರಲ್ಲಿ ಅಹಾನ್ ಶೆಟ್ಟಿ (Ahan Shetty) ಹುಟ್ಟಿದರು. ಸದ್ಯ ಇಬ್ಬರೂ ಅಪ್ಪನಂತೆ ಚಿತ್ರರಂಗಕ್ಕೆ ಧುಮುಕಿದ್ದಾರೆ. ಸುನೀಲ್​ ಮತ್ತು ಮಾನಾ ಕಳೆದ ಡಿಸೆಂಬರ್​ 25ರಂದು 31ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಪ್ರೀತಿ ನಿಜವಾಗಿದ್ದರೆ, ಯಾವ ಧರ್ಮವೂ ಅಡ್ಡ ಬರುವುದಿಲ್ಲ ಎನ್ನುವುದಕ್ಕೆ ಈ ಜೋಡಿಯೇ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು.

ಕೆಎಲ್ ರಾಹುಲ್ ಕೈಹಿಡಿದ ಅಥಿಯಾ ಶೆಟ್ಟಿ

ಅಂದಹಾಗೆ ಇವರ ಮಗಳು ನಟಿ, ಅಥಿಯಾ ಶೆಟ್ಟಿ (Athiya Shetty) ಅವರು 2023ರ ಜನವರಿಯಲ್ಲಿ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಮದುವೆಯಾಗಿದ್ದಾರೆ. ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್‌ನಲ್ಲಿ ಕೆ.ಎಲ್.ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿವಾಹ ಮಹೋತ್ಸವ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ನೆರವೇರಿತ್ತು. ಈ ಮೂಲಕ ಕ್ರಿಕೆಟಿಗ ರಾಹುಲ್​ ಸುನೀಲ್​ ಶೆಟ್ಟಿ ಅವರ ಅಳಿಯರಾಗಿದ್ದಾರೆ.