- Home
- Entertainment
- Sandalwood
- ರಮ್ಯಾ ಕೈಯಲ್ಲಿ ಮಿಂಚಿದ ವಿನಯ್ ರಾಜ್‌ಕುಮಾರ್ ಕೊಟ್ಟ ವಜ್ರದ ಉಂಗುರ: ಕಾರಣವೂ ರಿವೀಲ್ ಆಯ್ತು!
ರಮ್ಯಾ ಕೈಯಲ್ಲಿ ಮಿಂಚಿದ ವಿನಯ್ ರಾಜ್‌ಕುಮಾರ್ ಕೊಟ್ಟ ವಜ್ರದ ಉಂಗುರ: ಕಾರಣವೂ ರಿವೀಲ್ ಆಯ್ತು!
ನಟಿ ರಮ್ಯಾ ಅವರ ಮದುವೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ಜೊತೆ ಜ್ಯುವೆಲ್ಲರಿ ಶಾಪ್‌ನಲ್ಲಿ ಉಂಗುರ ಖರೀದಿ ವಿಡಿಯೋ ಹಂಚಿಕೊಂಡಿದ್ದು, ಇಬ್ಬರ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ, ಅವರು ಹೇಳಿದ್ದೇ ಬೇರೆ. ಏನೀ ವಿಷ್ಯ?

ರಮ್ಯಾ ಮದ್ವೆ ವಿಷಯ ಮತ್ತೆ ಮುನ್ನೆಲೆಗೆ...
ಮೋಹಕತಾರೆ ಎಂದೇ ಫೇಮಸ್ ಆಗಿರೋ ನಟಿ ರಮ್ಯಾ (Ramya- Divya Spandana)ಅವರಿಗೆ ಈಗ 42 ವಯಸ್ಸು. ಒಂದಷ್ಟು ವಯಸ್ಸು ಮೀರಿದ ಮೇಲೆ ಚಿತ್ರನಟಿಯರಿಗೆ ಆಫರ್ ಕಡಿಮೆ ಎನ್ನುವ ಮಾತಿದ್ದರೂ, ಫಿಟ್ನೆಸ್ ಕಾಪಾಡಿಕೊಂಡು ಇಂದಿಗೂ ಮಿಂಚುತ್ತಿರುವ ರಮ್ಯಾ ಅವರಿಗೆ ಈಗಲೂ ಡಿಮಾಂಡ್ ಇದ್ದೇ ಇದೆ. ಆದರೆ ಸದ್ಯ ಅವರು ಸಿನಿಮಾದಿಂದ ದೂರ ಇದ್ದಾರೆ. ಆದರೆ ಕೆಲವು ವರ್ಷಗಳಿಂದ ಅವರ ಅಭಿಮಾನಿಗಳಿಗೆ ಒಂದೇ ಚಿಂತೆ, ನಮ್ಮ ಬ್ಯೂಟಿಯ ಮದ್ವೆ ಯಾವಾಗ ಎನ್ನುವುದು!
ಫ್ಯಾನ್ಸ್ಗೆ ರಮ್ಯಾ ಮದ್ವೆ ಚಿಂತೆ
ಅಭಿಮಾನಿಗಳು ಅಂದ್ರೆ ಹಾಗೇ ಅಲ್ವಾ? ತಮ್ಮ ನೆಚ್ಚಿನ ನಟ-ನಟಿಯರ ಮದುವೆ, ಮದುವೆಯಾದರೆ ಅವರ ಮಕ್ಕಳ ಚಿಂತೆ ಇವರಿಗೆ. ಅದೇ ರೀತಿ ರಮ್ಯಾ ಚಿಂತೆಯಲ್ಲಿ ಹಲವರು ಇದ್ದಾರೆ. ಅದರ ಜೊತೆಜೊತೆಗೇನೇ ಗಾಸಿಪ್ಗೇನೂ ಕಮ್ಮಿ ಇಲ್ಲ. ಆ ನಟನನ್ನ ಮದುವೆ ಆಗುತ್ತಾರಂತೆ, ಈ ರಾಜಕಾರಣಿಯನ್ನು ಮದುವೆ ಆಗುತ್ತಾರಂತೆ, ಮದ್ವೆ ಫಿಕ್ಸ್ ಆಯ್ತಂತೆ ಎನ್ನೋ ಸುದ್ದಿ ಹರಿದಾಡುತ್ತಲೇ ಇರುತ್ತದೆ.
ರಮ್ಯಾ ಮತ್ತು ವಿನಯ್ ರಾಜ್ ಕುಮಾರ್ ಡೇಟಿಂಗ್
ಮೊನ್ನೆಮೊನ್ನೆಯಷ್ಟೇ ರಮ್ಯಾ ಮತ್ತು ವಿನಯ್ ರಾಜ್ ಕುಮಾರ್ (Vinay Rajkumar) ಡೇಟಿಂಗ್ ಬಗ್ಗೆ ಸಕತ್ ಸುದ್ದಿಯಾಗಿತ್ತು. ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಅವರನ್ನು ಒಟ್ಟಿಗೆ ನೋಡಿದ ಅನೇಕರು, ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ ಎಂಬ ಮಾತನಾಡುತ್ತಿದ್ದಾರೆ. ಇವರಿಬ್ಬರನ್ನೂ ಒಂದೇ ಕಡೆಯಲ್ಲಿ, ತುಂಬಾ ಆಪ್ತವಾಗಿ ಇರುವುದನ್ನು ನೋಡಿ ಈ ಗುಲ್ಲು ಹಬ್ಬಿತ್ತು.
ಟ್ರೋಲರ್ಸ್ ಬಾಯಿ ಮುಚ್ಚಿಸಿದ ಮೋಹಕ ತಾರೆ
ಇದಕ್ಕೆ ಕಿಡಿ ಕಾರಿದ್ದ ರಮ್ಯಾ ಅವರು, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ ಬಾಯಿ ಮುಚ್ಚಿಸಿದ್ದರು. ನೀವೆಷ್ಟು ಫನ್ನಿ. ಬೇಗ ಒಂದು ನಿರ್ಧಾರಕ್ಕೆ ಬರ್ತೀರಾ. ವಿನಯ್ ರಾಜ್ ಕುಮಾರ್ ನನ್ನ ತಮ್ಮನ ಸಮಾನ. ನಿಮ್ಮ ಕಲ್ಪನೆಗೆ ಮಿತಿ ಇರಲಿ ಎಂದಿದ್ದರು. ವಿನಯ್ ಜೊತೆ ನೀವು ಡೇಟ್ ಮಾಡ್ತಿದ್ದೀರಾ ಅಂತ ಇನ್ಸ್ಟಾಗ್ರಾಮ್ ನಲ್ಲಿ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ರಮ್ಯಾ ನೋ ಎನ್ನುವ ಉತ್ತರ ನೀಡಿದ್ದರು.
ರಿಂಗ್ ವಿಡಿಯೋ ಶೇರ್ ಮಾಡಿದ ನಟಿ
ಆದರೆ, ಇದೀಗ ಇನ್ನೊಂದು ವಿಡಿಯೋ ಅನ್ನು ತಾವೇ ಶೇರ್ ಮಾಡಿಕೊಂಡಿದ್ದಾರೆ ರಮ್ಯಾ. ನಿನ್ನನ್ನು ಮೀಟ್ ಆಗಬೇಕು, ನಿನಗೆ ರಿಂಗ್ ಹಾಕಬೇಕು ಎನ್ನುವ ಇಬ್ಬರ ಸಂದೇಶದ ಜೊತೆ ಈ ವಿಡಿಯೋ ಶುರುವಾಗುತ್ತದೆ. ಕೊನೆಗೂ ಇಬ್ಬರೂ ಜ್ಯುವೆಲ್ಲರಿ ಶಾಪ್ಗೆ ಹೋಗಿದ್ದಾರೆ. ಅಲ್ಲಿ ರಮ್ಯಾ, ನನಗೆ ರಿಂಗ್ ಕೊಡಿಸಬೇಕು ಎಂದು ನಿನಗೆ ಯಾಕೆ ಎನ್ನಿಸ್ತು ಎಂದು ಕೇಳಿದ್ದಾರೆ. ಅದಕ್ಕೆ ವಿನಯ್ ರಾಜ್ ಕುಮಾರ್, ಅವಳನ್ನು ಮೀಟ್ ಮಾಡಿ ಮೂರು ವರ್ಷ ಆಯ್ತಲ್ಲಾ, ಅದಕ್ಕೆ ಅವಳಿಗೆ ಏನಾದ್ರೂ ಕೊಡಿಸೋಣ ಎಂದುಕೊಂಡಿದ್ದೇನೆ ಎಂದಿದ್ದಾರೆ.
ರಿಂಗ್ ಆರಿಸಿದ ರಮ್ಯಾ
ಕೊನೆಗೆ ರಮ್ಯಾ ತಾವೇ ಒಂದು ರಿಂಗ್ ಆರಿಸಿದ್ದಾರೆ. ಅದನ್ನು ನೋಡಿ ಅಂಗಡಿಯವ ಕಂಗ್ರಾಟ್ಸ್ ಎಂದಾಗ, ರಮ್ಯಾ ಎಲ್ಲರೂ ಹಾಗೆಯೇ ಅಂದುಕೊಂಡಿದ್ದಾರೆ. ಆದರೆ ನಾವು ಜಸ್ಟ್ ಫ್ರೆಂಡ್ಸ್ ಎಂದಿದ್ದಾರೆ. ಕೊನೆಗೆ ವಿನಯ್ ರಾಜ್‌ಕುಮಾರ್ ಅವರು ಸೈಜ್ ಫಿಟ್ ಆಗಿಲ್ಲ ಎಂದರೆ ಅವರನ್ನೇ ಕರೆದುಕೊಂಡು ಬರುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಇದನ್ನು ನೋಡಿದ ಫ್ಯಾನ್ಸ್ ತಲೆಗೆ ಹುಳು ಬಿಟ್ಟಿದ್ದಾರೆ.
ಡೇಟಿಂಗ್ ಚರ್ಚೆ ಯಾಕೆ?
ಅಷ್ಟಕ್ಕೂ ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಡೇಟಿಂಗ್ ಚರ್ಚೆಗೆ ಬರಲು ಕಾರಣವೂ ಇದೆ. ಅದೇನೆಂದರೆ, ರಮ್ಯಾ ಹಾಗೂ ವಿನಯ್ ರಾಜ್ ಕುಮಾರ್ ಫೋಟೋ ಶೂಟ್ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಅದಲ್ದೆ ವಿನಯ್ ರಾಜ್ ಕುಮಾರ್ ಜೊತೆ ಫಾರೆನ್ ಪ್ರವಾಸ ಕೈಗೊಂಡಿದ್ರು ರಮ್ಯಾ. ವಿನಯ್ ಜೊತೆ ಪುನಿತ್ ರಾಜ್ ಕುಮಾರ್ ಮಗಳು ವಂದಿತಾ ಕೂಡ ರಮ್ಯಾ ಜೊತೆ ಟ್ರಿಪ್ ಎಂಜಾಯ್ ಮಾಡಿದ್ದಾರೆ. ಈ ಫೋಟೋಗಳನ್ನು ರಮ್ಯಾ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಲ್ಲ ಕಡೆ ರಮ್ಯಾ ಜೊತೆ ವಿನಯ್ ರಾಜ್ ಕುಮಾರ್ ನೋಡಿದ ಫ್ಯಾನ್ಸ್ ಗೆ ಅನುಮಾನ ಬಂದಿದೆ. ರಮ್ಯಾ ಹಾಗೂ ವಿನಯ್ ಮಧ್ಯೆ ಏನೋ ಇದೆ, ಇಬ್ಬರು ಡೇಟ್ ಮಾಡ್ತಿದ್ದಾರೆ ಅಂತ ಸುದ್ದಿ ಮಾಡಿದ್ದಾರೆ.
ವಿನಯ್ ರಾಜ್‌ಕುಮಾರ್ ಕುರಿತು...
ಇನ್ನು ನಟ ವಿನಯ್ ರಾಜ್‌ಕುಮಾರ್ ಕುರಿತು ಹೇಳುವುದಾದರೆ, ಇವರು, ನಟ ರಾಜ್‌ಕುಮಾರ್ ಅವರ ಮೊಮ್ಮಗ ಮತ್ತು ಚಲನಚಿತ್ರ ನಿರ್ಮಾಪಕ ಮತ್ತು ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಮಗ, ವಿನಯ್ ಅವರು, 2014 ರಲ್ಲಿ ಸಿದ್ಧಾರ್ಥ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಿದರು. ಬಾಲಕನಾಗಿದ್ದಾಗಲೇ "ಒಡ ಹುಟ್ಟಿದವರು", "ಆಕಸ್ಮಿಕ", "ಅನುರಾಗದ ಅಲೆಗಳು" ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಾರ್ಥ್ ಸೇರಿದಂತೆ ರನ್ ಆಂಟನಿ, ಆರ್ ದಿ ಕಿಂಗ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಮೋಹಕ ತಾರೆ ನಟಿ ರಮ್ಯಾ...
ಇನ್ನು ನಟಿ ರಮ್ಯಾ ಕುರಿತು ಎಲ್ಲರಿಗೂ ತಿಳಿದಿರುವುದೇ. ಇವರು ಮೋಹಕತಾರೆ ಎಂದೇ ಫೇಮಸ್ಸು. ಕನ್ನಡ ಮಾತ್ರವಲ್ಲದೇ ತಮಿಳು ಚಿತ್ರರಂಗಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅಂದಹಾಗೆ ನಟಿರಯ ಹುಟ್ಟು ಹೆಸರು ದಿವ್ಯ ಸ್ಪಂದನ. ರಮ್ಯಾರವರು 'ಅಭಿ' ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಇವರು 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಲೋಕಸಭೆಗೆ ಪ್ರವೇಶ ಮಾಡಿದ ಕನ್ನಡದ ಮೊದಲ ನಟಿ
ರಮ್ಯಾ ಅವರು ಕರ್ನಾಟಕ ರಾಜ್ಯದ ಪ್ರದೇಶ ಕಾಂಗ್ರೆಸ್‌ನ ಸಕ್ರಿಯ ಸದಸ್ಯರಾಗಿದ್ದು. ಮಂಡ್ಯ ಕ್ಷೇತ್ರದಿಂದ ಲೋಕಸಭೆ ಸದಸ್ಯರಾಗಿಯೂ ಆಯ್ಕೆಯಾದವರು. 2013 ರಂದು ನಡೆದ ಲೋಕಸಭಾ ಉಪ-ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು. ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿರುವುದರಲ್ಲಿ ರಮ್ಯಾ ಮೊದಲಿಗರು.