ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಅವರ ಬರೇಲಿ ಮನೆ ಮೇಲೆ ನಡೆದ ಗುಂಡಿನ ದಾಳಿಗೆ ಅವರ ಯಾವ ರೀತಿಯಲ್ಲೂ ದಿಶಾ ಕಾರಣವಲ್ಲ. ಆದರೆ ದಾಳಿಗೆ ಕಾರಣವಾದವಳ ಹಿಸ್ಟರಿಯೂ ಸಣ್ಣದೇನಲ್ಲ. ಯಾರಾಕೆ?  ಅವಳ ಹಿನ್ನೆಲೆ ಏನು? 

ಮೊನ್ನೆ ಶುಕ್ರವಾರ ಸಂಜೆ, ಬರೇಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಬಾಲಿವುಡ್‌ ನಟಿ ದಿಶಾ ಪಟಾನಿ (Disha Patani) ಅವರ ಮನೆಯ ಹೊರಗಡೆ ಗುಂಡಿನ ದಾಳಿ ನಡೆಯಿತು. ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾದರು. ಈ ಗುಂಡಿನ ದಾಳಿಯ ಹೊಣೆಯನ್ನು ಗೋಲ್ಡಿ ಬ್ರಾರ್‌ ಎಂಬ ಗ್ಯಾಂಗ್‌ಸ್ಟರ್‌ನ ಗುಂಪು ಹೊತ್ತಿತು. ಇದಾದ ಮರುದಿನವೇ ಗುಂಡಿನ ದಾಳಿ ನಡೆಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದರು. ಗುಂಡಿನ ದಾಳಿಗೆ ಕಾರಣ ಏನು ಅಂತಲೂ ಗೊತ್ತಾಗಿದೆ. ದಿಶಾ ಪಟಾನಿಯ ಸಹೋದರಿ ಖುಷ್ಬೂ ಪಟಾನಿ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ.

ಲಿವ್-ಇನ್ ಸಂಬಂಧಗಳ ಕುರಿತು ಧಾರ್ಮಿಕ ನಾಯಕ ಅನಿರುದ್ಧಾಚಾರ್ಯ ಮಹಾರಾಜ್ ಒಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯನ್ನು ಖುಷ್ಬೂ ಪಟಾನಿ ಕಟುವಾಗಿ ಟೀಕಿಸಿದ್ದರು. ಇದರಿಂದ ರೊಚ್ಚಿಗೆದ್ದ ಗೋಲ್ಡಿ ಬ್ರಾರ್‌ ಸಂಗಡಿಗರು ಈ ದಾಳಿ ನಡೆಸಿದ್ದರು. ಅದರಲ್ಲೂ ಅನಿರುದ್ಧಾಚಾರ್ಯ ಮಹಾರಾಜ್‌, ಲಿವ್‌ ಇನ್‌ನಲ್ಲಿರುವ ಯುವತಿಯರ ಬಗ್ಗೆ ಕೇವಲವಾಗಿ ಮಾತನಾಡಿದ್ದರು. ಕಳಪೆ ಪದಗಳ ಬಳಕೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ಖುಷ್ಬೂ, ʼನಾನು ಅಲ್ಲಿದ್ದರೆ ಅವರ ಮುಖದ ಮೇಲೆಯೇ ಟೀಕೆ ಮಾಡುತ್ತಿದ್ದೆʼ ಎಂದು ಹೇಳಿದ್ದಲ್ಲದೆ ಕಟುವಾಗಿ ಟೀಕಿಸಿದ್ದರು. ಇದು ಅನಿರುದ್ಧಾಚಾರ್ಯರ ಭಕ್ತರನ್ನು ಸಿಟ್ಟಿಗೆಬ್ಬಿಸಿತ್ತು.

ಈ ಹಿಂದೆಯೂ ಖುಷ್ಬೂ ಪಟಾನಿ ಇಂಥ ಕೆಲವು ಹೇಳಿಕೆಗಳನ್ನು ಮಾಡಿದ್ದುಂಟು. ನವೆಂಬರ್ 1991ರಲ್ಲಿ ಬರೇಲಿಯಲ್ಲಿ ಜನಿಸಿದ ಖುಷ್ಬೂ ಪಟಾನಿ, ತಮ್ಮ ಸ್ಟಾರ್ ಸಹೋದರಿ ದಿಶಾ ಅವರಿಗಿಂತ ಭಿನ್ನ. ಖುಷ್ಬೂ ಬಿಬಿಎಲ್ ಪಬ್ಲಿಕ್ ಶಾಲೆಗೆ ಹೋದವರು. ನಂತರ ಡಿಐಟಿ ಸ್ಕೂಲ್ ಆಫ್ ಎಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಕಾಲೇಜಿನಲ್ಲಿದ್ದಾಗ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಬಹುರಾಷ್ಟ್ರೀಯ ಕಂಪನಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ ವೃತ್ತಿ ತೊರೆದು ತಮ್ಮ ಆಸಕ್ತಿಯ ಬೇರೆ ಕಡೆಗೆ ದೃಢನಿಶ್ಚಯದಿಂದ ಹೆಜ್ಜೆ ಹಾಕಿದರು.

"ನಾನು ನನ್ನ ಜೀವನದಲ್ಲಿ ವೈದ್ಯ ಮತ್ತು ಎಂಜಿನಿಯರ್ ಆಗಬೇಕೆಂದು ಬಯಸಿದ್ದೆ. ಈ ಮಹತ್ವಾಕಾಂಕ್ಷೆಯಿಂದಲೇ 11ನೇ ತರಗತಿಯಲ್ಲಿ ಜೀವಶಾಸ್ತ್ರ ಮತ್ತು ಗಣಿತ ಎರಡನ್ನೂ ಆಯ್ಕೆ ಮಾಡಿಕೊಂಡೆ. ಕೊನೆಗೆ, ನಾನು ಎಂಜಿನಿಯರಿಂಗ್ ಕಾಲೇಜಿಗೆ ಸೇರಿ ಎಲೆಕ್ಟ್ರಿಕಲ್ ಎಂಜಿನಿಯರ್ ಪದವಿ ಪಡೆದೆ. ಆದರೆ ನನ್ನ ಜೀವನದ ಹರಿವು ನನ್ನನ್ನು ಸೈನ್ಯದ ವೃತ್ತಿಜೀವನದತ್ತ ಸೆಳೆಯಿತು. ನನ್ನ ರಾಷ್ಟ್ರೀಯತೆಯ ಮನೋಭಾವ ಮತ್ತು ನನ್ನ ಸ್ತ್ರೀತ್ವವನ್ನು ಸಾಬೀತುಪಡಿಸುವ ಬಯಕೆ ನನ್ನನ್ನು ಸಶಸ್ತ್ರ ಪಡೆಗಳಿಗೆ ಸೇರುವಂತೆ ಮಾಡಿತು. ಆ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕೆ ನನಗೆ ಸಂತೋಷವಿದೆ" ಎಂದು ಖುಷ್ಬೂ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಖುಷ್ಬೂ ಭಾರತೀಯ ಸೇನೆಯಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಸೇನೆಯಲ್ಲಿದ್ದ ಸಮಯದಲ್ಲಿ, ಅವರು ದೇಶದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಲವು ಸಲ ಸ್ಥಳಾಂತರಗೊಂಡಿದ್ದಾರೆ. ವೈವಿಧ್ಯಮಯ ಭೂಪ್ರದೇಶಗಳು ಮತ್ತು ಸಂಸ್ಕೃತಿಗಳನ್ನು ನೋಡಿದ್ದಾರೆ. ನಾಗರಿಕ ಜೀವನ ಮೀರಿದ ಸವಾಲುಗಳನ್ನು ಸಹಿಸಿಕೊಂಡಿದ್ದಾರೆ. ಇದು ಅವರ ದೃಷ್ಟಿಕೋನವನ್ನು ರೂಪಿಸಿತು.

“ಈ ಅವಧಿಯು ನನ್ನಲ್ಲಿ ಸ್ವಾತಂತ್ರ್ಯದ ಮೌಲ್ಯ ಮತ್ತು ಮಾನಸಿಕ ಶಕ್ತಿಯ ಬಗ್ಗೆ ಆಳವಾದ ತಿಳುವಳಿಕೆಯನ್ನು ತುಂಬಿತು. ನಮ್ಮ ಮನಸ್ಸುಗಳು ನಮ್ಮ ಜೀವನವನ್ನು ಹೇಗೆ ನಿಯಂತ್ರಿಸಬಹುದು, ಉತ್ತಮ ಭವಿಷ್ಯಕ್ಕಾಗಿ ಈ ಶಕ್ತಿಯನ್ನು ನಾವು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನಾನು ಕಲಿತಿದ್ದೇನೆ” ಎಂದು ಖುಷ್ಬೂ ಬರೆಯುತ್ತಾರೆ.

ಸೇನೆಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಂತರ ಖುಷ್ಬೂ ನಿವೃತ್ತರಾದರು. ಗಡಿ ರಕ್ಷಿಸುವುದನ್ನು ಬಿಟ್ಟು ಜನರನ್ನು ರಕ್ಷಿಸುವುದರತ್ತ ಗಮನ ಹರಿಸಿದ್ದಾರೆ. ಪ್ರಸ್ತುತ ಆಕೆ ಪೂರ್ಣ ಸಮಯದ ಕ್ಷೇಮ ತರಬೇತುದಾರರಾಗಿ ಕೆಲಸ ಮಾಡುತ್ತಾರೆ. Instagram ನಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದಾರೆ. ಪೌಷ್ಟಿಕಾಂಶ, ಫಿಟ್ನೆಸ್ ತರಬೇತಿ ಮತ್ತು ಮಾನಸಿಕ ಸಮಾಲೋಚನೆಯಲ್ಲಿ ಆಕೆ ಪ್ರಮಾಣೀಕೃತ ತಜ್ಞೆ. ಸಾಮಾಜಿಕ ಮಾಧ್ಯಮದ ಮೂಲಕ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ.