ಇತ್ತೀಚೆಗೆ ‘ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್’ ಟ್ರೇಲರ್‌ ಲಾಂಚ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಆರ್ಯನ್ ಖಾನ್‌ ಕಾಣಿಸಿಕೊಂಡು ಮಾತನಾಡಿದರು.

ಸ್ಟಾರ್ ನಟರ ಮಕ್ಕಳು ಚಿತ್ರರಂಗಕ್ಕೆ ಬರುವ ಸಂಗತಿ ಹೊಸದೇನಲ್ಲ, ಆದರೆ ಸ್ಟಾರ್ ಕಿಡ್ಸ್‌ ನಟನೆ ಬಿಟ್ಟು, ನಿರ್ದೇಶಕನ ಕ್ಯಾಪ್‌ ಧರಿಸುವುದು ಅಪರೂಪ. ಬಾಲಿವುಡ್‌ ಬಾದ್‌ಷಾ ಶಾರೂಖ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಇದೀಗ ‘ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್’ ಎಂಬ ಟಿವಿ ಸೀರೀಸ್‌ ಅನ್ನು ನಿರ್ದೇಶಿಸುತ್ತಿದ್ದಾರೆ. ಇದು ಸೆಪ್ಟೆಂಬರ್‌ 19ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಈ ಸೀರೀಸ್‌ನ ಟ್ರೇಲರ್‌ ಬಿಡುಗಡೆಯಾಗಿದೆ. ಇಂದಿನ ಜೆನ್‌ ಜೀ ಮೈಂಡ್‌ಸೆಟ್‌ನಲ್ಲಿ ಬಂದಿರುವ ಈ ಸೀರೀಸ್‌ನಲ್ಲಿ ಸ್ಟಾರ್‌ ಆಗುವ ಕನಸಿನಲ್ಲಿ ಬಾಲಿವುಡ್ ಅಂಗಳಕ್ಕೆ ಬರುವ ತರುಣನ ಕಥೆ ಇದೆ. ಪ್ರೇಮ, ಡ್ರಾಮಾ ಜೊತೆಗೆ ರುಚಿಗೆ ತಕ್ಕಷ್ಟು ಆ್ಯಕ್ಷನ್ನು ಇದೆ. ಆದರೆ ಬಿಡುಗಡೆಯಾಗುತ್ತಿರುವ ಶಾರೂಖ್‌ ಮಗನ ನಿರ್ದೇಶನದ ಈ ಸೀರೀಸ್‌ಗಿಂತಲೂ ಜನ ಆರ್ಯನ್ ಖಾನ್ ಅವರ ಲುಕ್, ನಿಲುವು, ಧ್ವನಿ ಕೇಳಿ ದಂಗಾಗಿ ಹೋಗಿದ್ದಾರೆ.

ಇತ್ತೀಚೆಗೆ ‘ದಿ ಬ್ಯಾಡ್ಸ್‌ ಆಫ್‌ ಬಾಲಿವುಡ್’ ಟ್ರೇಲರ್‌ ಲಾಂಚ್‌ನಲ್ಲಿ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಯೊಂದರಲ್ಲಿ ಆರ್ಯನ್ ಖಾನ್‌ ಕಾಣಿಸಿಕೊಂಡು ಮಾತನಾಡಿದರು. ಥೇಟ್‌ ಶಾರೂಕ್‌ ಅವರದೇ ಧ್ವನಿ, ಅದೇ ರೀತಿಯ ಬಾಡಿ ಲ್ಯಾಂಗ್ವೇಜ್, ಮ್ಯಾನರಿಸಂ. 90ರ ದಶಕದ ಮೋಸ್ಟ್‌ ರೊಮ್ಯಾಂಟಿಕ್‌ ಹ್ಯಾಂಡ್ಸಮ್‌ ಹೀರೋ ಶಾರೂಖ್‌ ಖಾನ್‌, ಆರ್ಯನ್ ಅವರಲ್ಲಿ ಮೈದಳೆದು ಬಂದ ಹಾಗಿತ್ತು.

ಈ ವೇಳೆ ಸರಳವಾಗಿ, ತೋರಿಕೆ ಇಲ್ಲದೆ ಮಾತನಾಡಿದ ಆರ್ಯನ್‌, ಬಹಳ ನರ್ವಸ್‌ ಆಗಿದ್ದೀನಿ. ಮೂರ್ನಾಲ್ಕು ರಾತ್ರಿಗಳಲ್ಲಿ ಮತ್ತೆ ಮತ್ತೆ ನಾನಿಲ್ಲಿ ಆಡಬೇಕಿರುವ ಮಾತುಗಳನ್ನು ಪ್ರಾಕ್ಟೀಸ್‌ ಮಾಡಿದ್ದೀನಿ. ಅದಕ್ಕಾಗಿ ಟೆಲಿ ಪ್ರಾಂಪ್ಟರ್‌ ಇಟ್ಟುಕೊಂಡಿದ್ದೀನಿ, ಎಲ್ಲಾದರೂ ಕರೆಂಟ್‌ ಕೈಕೊಟ್ಟರೆ ಅಂತ ಚೀಟಿಯಲ್ಲೂ ಬರೆದು ತಂದಿದ್ದೀನಿ. ಇಷ್ಟಾದರೂ ನನ್ನಿಂದ ತಪ್ಪಾದರೆ ದಯಮಾಡಿ ಕ್ಷಮಿಸಿ.

ಏಕೆಂದರೆ ಇದು ನನ್ನ ಮೊದಲ ಪ್ರಯತ್ನ ಎಂದಿದ್ದು ಸೀರೀಸ್‌ ರಿಲೀಸ್‌ಗೂ ಮೊದಲೆ ಜನರ ಮನಗೆದ್ದು ಬಿಟ್ಟಿತು. ಮುಂದಿನ ತಿಂಗಳು ರಿಲೀಸ್‌ ಆಗುತ್ತಿರುವ ಶಾರೂಖ್ ಪುತ್ರನ ವೆಬ್‌ ಸೀರೀಸ್‌ ಕ್ಲಿಕ್‌ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ಅವರ ಮೊದಲ ಅಭಿವ್ಯಕ್ತಿಯಂತೂ ಮೋಡಿ ಮಾಡಿದೆ. ಈ ಮೂಲಕ ಹಿಂದೆ ಅಂಟಿಕೊಂಡಿದ್ದ ಡ್ರಗ್ಸ್‌ ಕಳಂಕವೂ ಕೊಂಚಮಟ್ಟಿಗೆ ತೊಳೆದುಹೋದಂತಾಗಿದೆ.