ಖ್ಯಾತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ, ‘ಹಣಕ್ಕಾಗಿ ಕತೆಗಾರರ ಸೃಜನಶೀಲತೆ ಮೇಲೆ ಕೊಡಲಿಯೇಟು ಹಾಕುವ ಬೆಳವಣಿಗೆ ಇದು’ ಎಂದು ಹೇಳಿದ್ದಾರೆ.

ಕಳೆದ ವರ್ಷ ಕನ್ನಡದಲ್ಲಿ ದಿಗಂತ್‌ ನಟನೆಯ ‘ಪೌಡರ್‌’ ಎಂಬ ಸಿನಿಮಾ ನಿರ್ಮಿಸಿದ್ದ ವಿಜಯ್‌ ಸುಬ್ರಹ್ಮಣ್ಯಂ ಇದೀಗ ತನ್ನ ಲೈಫ್‌ ಅಟ್‌ ಕಲೆಕ್ಟಿವ್‌ ಆರ್ಟಿಸ್ಟ್‌ ನೆಟ್‌ವರ್ಕ್‌ ಬ್ಯಾನರ್‌ನಲ್ಲಿ ಎಐ ನಿರ್ಮಿತ ‘ಚಿರಂಜೀವಿ ಹನುಮಾನ್‌ - ದಿ ಎಟರ್ನಲ್‌’ ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಎಐ ಚಿತ್ರಕ್ಕೆ ಖ್ಯಾತ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಛೀಮಾರಿ ಹಾಕಿದ್ದಾರೆ.

ಖ್ಯಾತ ನಿರ್ದೇಶಕ ವಿಕ್ರಮಾದಿತ್ಯ ಮೋಟ್ವಾನೆ, ‘ಹಣಕ್ಕಾಗಿ ಕತೆಗಾರರ ಸೃಜನಶೀಲತೆ ಮೇಲೆ ಕೊಡಲಿಯೇಟು ಹಾಕುವ ಬೆಳವಣಿಗೆ ಇದು’ ಎಂದು ಹೇಳಿದ್ದಾರೆ. ನಿರ್ದೇಶಕ ಅನುರಾಗ್‌ ಕಶ್ಯಪ್‌, ‘ಅಭಿನಂದನೆಗಳು ವಿಜಯ್‌ ಸುಬ್ರಹ್ಮಣ್ಯಂ. ಈ ವ್ಯಕ್ತಿ ತನ್ನ ಬ್ಯಾನರ್‌ಗೆ ಲೈಫ್‌ ಅಟ್‌ ಕಲೆಕ್ಟಿವ್‌ ಆರ್ಟಿಸ್ಟ್‌ ನೆಟ್‌ವರ್ಕ್‌ ಅಂತ ಹೆಸರಿಟ್ಟು ಕಲಾವಿದರನ್ನು, ಬರಹಗಾರರನ್ನು ಮತ್ತು ನಿರ್ದೇಶಕರನ್ನು ಪ್ರತಿನಿಧಿಸುತ್ತಿದ್ದಾರೆ.

ಕಥೆಗಾರರ, ಕಲಾವಿದರ ಹಿತಾಸಕ್ತಿ ಕಾಯುವುದು ಬಹಳ ಮುಖ್ಯ ಎನ್ನುವ ಉದ್ದೇಶ ತೋರಿಸಿಕೊಂಡು ಅವರೀಗ ಎಐ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಹೊರಗೇನೇ ತೋರಿಸಿಕೊಂಡರೂ ಕೊನೆಗೂ ಇಂಥಾ ಏಜೆನ್ಸಿಗಳಿಗೆ ಹಣ ಮಾಡುವುದಷ್ಟೇ ಮುಖ್ಯವಾಗುತ್ತದೆ. ಸಿನಿಮಾ ಹೆಸರಿನಲ್ಲಿ ಏನೋ ಮಾಡಿ ಜನರ ಮುಂದೆ ಇಡುತ್ತಾರೆ, ಪ್ರೇಕ್ಷಕರಿಂದ ಸೂಕ್ತ ಸ್ಪಂದನೆ ಸಿಗದೆ ಹಣಬರದಿದ್ದಾಗ ಎಐ ಸಿನಿಮಾ ಮಾಡುತ್ತಾರೆ.

ನಮ್ಮ ಕಲಾವಿದರ ಅಭಿನಯ ಈ ವ್ಯಕ್ತಿಯ ಎಐ ಪ್ರದರ್ಶನವನ್ನು ಸರಿಗಟ್ಟಲಾರದು. ಇದನ್ನು ಖಂಡಿಸದ ಹಿಂದಿ ಚಿತ್ರರಂಗದ ಬೆನ್ನುಮೂಳೆ ಇಲ್ಲದ ಹೇಡಿ. ಕಲಾವಿದರ ಭವಿಷ್ಯ ಇಲ್ಲಿದೆ. ವೆಲ್‌ ಡನ್‌ ವಿಜಯ ಸುಬ್ರಹ್ಮಣ್ಯಂ. ಇದನ್ನು ನಾಚಿಕೆಗೇಡು ಅಂದರೆ ಸಾಕಾಗಲ್ಲ, ನೀವು ಕೊಚ್ಚೆಯಲ್ಲೇ ಇರಿ’ ಎಂದು ಛೀಮಾರಿ ಹಾಕಿದ್ದಾರೆ. ಇದು 2026ರ ಹನುಮಾನ್‌ ಜಯಂತಿಯಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸುಮಾರು 50 ಎಐ ಇಂಜಿನಿಯರ್‌ಗಳು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ.