Jayam Ravi And Kenishaa Fransis: ತಮಿಳು ನಟ ಜಯಂ ರವಿ ಹಾಗೂ ಆರತಿ ಡಿವೋರ್ಸ್‌ ಕೇಸ್‌ ಇನ್ನೂ ಕೋರ್ಟ್‌ ಅಂಗಳದಲ್ಲಿದೆ. ಹೀಗಿರುವಾಗ ಜಯಂ ರವಿ ಅವರು ವೇದಿಕೆಯೊಂದರಲ್ಲಿ ಗರ್ಲ್‌ಫ್ರೆಂಡ್‌ ಬಗ್ಗೆ ಹೊಗಳಿದ್ದಾರೆ. 

ನಟ ರವಿ ಮೋಹನ್ ಮತ್ತು ಆರತಿ ವಿಚ್ಛೇದನಕ್ಕೆ ಕೆನಿಷಾ ಕಾರಣ ಎಂಬ ವದಂತಿಗಳ ನಡುವೆ, ತಮ್ಮ ಯಶಸ್ಸಿಗೆ ಕೆನಿಷಾ ಕಾರಣ ಎಂದು ರವಿ ಮೋಹನ್ ಹೇಳಿದ ವಿಡಿಯೋ ವೈರಲ್ ಆಗಿದೆ. ಜಯಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರವಿ ಮೋಹನ್, ಈಗ ಪರಾಶಕ್ತಿ, ತನಿ ಒರುವನ್ 2, ಜೆನಿ ಮತ್ತು ಕರಾಟೆ ಬಾಬು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ಬ್ಯುಸಿ ನಟನಾಗಿದ್ದರೂ, ವೈಯಕ್ತಿಕ ಜೀವನದಲ್ಲಿ ಕಹಿ ಘಟನೆಗಳನ್ನು ಎದುರಿಸುತ್ತಿದ್ದಾರೆ.

ಕೆನಿಷಾ ಫ್ರಾನ್ಸಿಸ್‌, ಜಯಂ ರವಿ ಲವ್

2009 ರಲ್ಲಿ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಪುತ್ರಿ ಆರತಿಯನ್ನು ವಿವಾಹವಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, 2024 ರಲ್ಲಿ ಆರತಿಯಿಂದ ದೂರವಾಗುವುದಾಗಿ ಘೋಷಿಸಿದರು. ಬಳಿಕ ರವಿ ಮೋಹನ್ ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ರವಿ ಮೋಹನ್ ಮತ್ತು ಆರತಿ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ನಡುವೆ, ರವಿ ಮೋಹನ್ ಮತ್ತು ಗಾಯಕಿ ಕೆನಿಷಾ ಫ್ರಾನ್ಸಿಸ್ ಒಟ್ಟಿಗೆ ಇರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ರವಿ ಮೋಹನ್ ವಿಚ್ಛೇದನಕ್ಕೆ ಕೆನಿಷಾ ಕಾರಣ ಎಂಬ ವದಂತಿಗಳು ಹಬ್ಬಿದ್ದವು.

ಆರ್‌ ಎಂ ಸ್ಟುಡಿಯೋಸ್‌ ಉದ್ಘಾಟನೆ

ಜಯಂ ರವಿ ಅವರು ಆರ್ ಎಂ ಸ್ಟುಡಿಯೋಸ್ ಎಂಬ ಪ್ರೊಡಕ್ಷನ್‌ ಹೌಸ್‌ ಆರಂಭಿಸಿದ್ದಾರೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಕೆನಿಷಾ ಬಗ್ಗೆ ಭಾವುಕರಾಗಿ ಮಾತನಾಡಿದ ರವಿ ಮೋಹನ್, ತಮ್ಮ ಬೆಳವಣಿಗೆಯಲ್ಲಿ ಕೆನಿಷಾ ಪ್ರಮುಖ ಪಾತ್ರ ವಹಿಸಿದ್ದಾರೆ, ಅವರು ದೇವರು ಕಳುಹಿಸಿದ ಕೊಡುಗೆ ಎಂದು ಹೇಳಿದ್ದಾರೆ. ರವಿ ಮೋಹನ್ ತಮ್ಮ ಹೆಸರಿನಲ್ಲಿ ಸ್ಟುಡಿಯೋವನ್ನು ಆರಂಭಿಸಿದ್ದಾರೆ. ಉದ್ಘಾಟನಾ ಸಮಾರಂಭ ಚೆನ್ನೈನಲ್ಲಿ ನಡೆಯಿತು. ಶಿವಕಾರ್ತಿಕೇಯನ್, ಕಾರ್ತಿ, ಶಿವರಾಜ್ ಕುಮಾರ್, ಜೆನಿಲಿಯಾ, ಶ್ರದ್ಧಾ ಶ್ರೀನಾಥ್, ಎಸ್ ಜೆ ಸೂರ್ಯ ಸೇರಿದಂತೆ ಹಲವು ಸಿನಿಮಾ ತಾರೆಯರು ಭಾಗವಹಿಸಿದ್ದರು.

ನನ್ನ ಆಸ್ತಿ ಮುಟ್ಟುಗೋಲು ಹಾಕಿದ್ರು

ರವಿ ಮೋಹನ್ ಸಹೋದರ ಮೋಹನ್ ರಾಜ ಮತ್ತು ತಾಯಿ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎರಡು ಸಿನಿಮಾಗಳನ್ನು ನಿರ್ಮಿಸುವುದಾಗಿ ಮತ್ತು ಒಂದು ಸಿನಿಮಾವನ್ನು ನಿರ್ದೇಶಿಸುವುದಾಗಿ ಘೋಷಿಸಿದರು. ಕೆನಿಷಾ ಫ್ರಾನ್ಸಿಸ್ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, ಕೆನಿಷಾ ದೇವರು ನೀಡಿದ ಕೊಡುಗೆ ಎಂದರು. ಒಂದು ಹಂತದಲ್ಲಿ ಸ್ಥಗಿತಗೊಂಡಾಗ ದೇವರು ವಸ್ತುವನ್ನಾಗಲಿ ಅಥವಾ ವಾಹನವನ್ನಾಗಲಿ ಕಳುಹಿಸುತ್ತಾನೆ. ಆದರೆ ನನಗೆ ಅವರು ಕಳುಹಿಸಿದ ಕೊಡುಗೆ ಕೆನ್. ಅವರಿಲ್ಲದಿದ್ದರೆ ಈ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಹೇಳಿದರು. ಆದರೆ ನಿಜವಾದ ಆಸ್ತಿ ಎಂದರೆ ಅದು ನೀವು. ನಿಮ್ಮ ನಿಜವಾದ ಪ್ರೀತಿಯನ್ನು ಗಳಿಸಿದ್ದೇನೆ ಎಂದು ಭಾವಿಸುವಾಗ ಸಂತೋಷವಾಗುತ್ತದೆ ಎಂದು ಭಾವುಕರಾಗಿ ನುಡಿದರು.

ಮೂರು ಸಿನಿಮಾಗಳು ಘೋಷಣೆ

ರವಿ ಮೋಹನ್ ಸ್ಟುಡಿಯೋಸ್ ನಿರ್ಮಿಸಲಿರುವ ಎರಡು ಸಿನಿಮಾಗಳಲ್ಲಿ ಒಂದನ್ನು ಕಾರ್ತಿಕ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ Bro Code ಎಂದು ಹೆಸರಿಡಲಾಗಿದೆ. ರವಿ ಮೋಹನ್ ನಾಯಕನಾಗಿ ನಟಿಸುತ್ತಿದ್ದು, ಎಸ್.ಜೆ.ಸೂರ್ಯ, ಶ್ರದ್ಧಾ ಶ್ರೀನಾಥ್ ಕೂಡ ನಟಿಸುತ್ತಿದ್ದಾರೆ. ಮತ್ತೊಂದು ಚಿತ್ರ An Ordinaru Man. ಯೋಗಿ ಬಾಬು ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ರವಿ ಮೋಹನ್ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಎರಡೂ ಚಿತ್ರಗಳ ಮುಹೂರ್ತ ಇಂದು ನೆರವೇರಿತು.