410 ಕೋಟಿ ಬಾಡಿಗೆ: ವಿಶ್ವದ ಅತಿದೊಡ್ಡ ಎಸ್ಟೇಟ್ ಮ್ಯಾನೇಜ್ಮೆಂಟ್‌ ಕಂಪನಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ 10 ವರ್ಷಗಳ ಅವಧಿಗೆ 410 ಕೋಟಿ ರೂಪಾಯಿ ಮೌಲ್ಯದ ಕಚೇರಿ ಸ್ಥಳವನ್ನು ಗುತ್ತಿಗೆಗೆ ಪಡೆದಿದೆ.  

ಬೆಂಗಳೂರು: ವಿಶ್ವದ ಅತಿದೊಡ್ಡ ಎಸ್ಟೇಟ್ ಮ್ಯಾನೇಜ್ಮೆಂಟ್‌ ಕಂಪನಿ ಬ್ಲ್ಯಾಕ್‌ರಾಕ್ ಬೆಂಗಳೂರಿನಲ್ಲಿ ತನ್ನ ಶಾಖೆ ಆರಂಭಿಸಲಿದೆ. ಇದಕ್ಕಾಗಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಟ್ಟಡದಲ್ಲಿನ ಒಂದು ಭಾಗವನ್ನು ಬಾಡಿಗೆಗೆ ಪಡೆದುಕೊಂಡಿದೆ. ಎಂಜಿ ರೋಡ್ ಬೆಂಗಳೂರಿನ ಕೇಂದ್ರ ವ್ಯವಹಾರಿಕ ಪ್ರದೇಶವಾಗಿರೋದರಿಂದ ದುಬಾರಿ ಬಾಡಿಗೆ ಪಾವತಿಸಲು ಬ್ಲ್ಯಾಕ್‌ರಾಕ್ ಮುಂದಾಗಿದೆ. MG ರಸ್ತೆಯಲ್ಲಿನ ಇಂಡಿಕ್ಯೂಬ್‌ ಸಿಂಫನಿ ಕಟ್ಟಡ 143,0000 ಚದರ ಅಡಿ ವಿಸ್ತೀರ್ಣದಲ್ಲಿದೆ. ಈ ಒಪ್ಪಂದ 10 ವರ್ಷಗಳ ಅವಧಿಗೆ ಏರ್ಪಟ್ಟಿದ್ದು, ಒಟ್ಟು ಮೊತ್ತ 410 ಕೋಟಿ ರೂಪಾಯಿ ಆಗುತ್ತದೆ. ದೇಶದಲ್ಲಿ ನಡೆದ ಅತಿದೊಡ್ಡ ಎಂಟರ್‌ಪ್ರೈಸ್ ಫ್ಲೆಕ್ಸಿಬಲ್ ಸ್ಪೇಸ್ ವಹಿವಾಟುಗಳಲ್ಲಿ ಈ ಡೀಲ್ ಒಂದಾಗಿದೆ.

ಬಾಡಿಗೆ ಒಪ್ಪಂದದ ಪ್ರಮುಖ ಅಂಶಗಳು

ಪ್ರಾಪ್‌ಸ್ಟ್ಯಾಕ್ ಮಾಹಿತಿಯ ಪ್ರಕಾರ, 1ನೇ ಅಕ್ಟೋಬರ್ 2025ರಿಂದ ಈ ಬಾಡಿಗೆ ಒಪ್ಪಂದ ಆರಂಭವಾಗಲಿದೆ. ಸ್ಟೆಪ್ಟೆಂಬರ್ ತಿಂಗಳ ಆರಂಭದಲ್ಲಿಯೇ ಈ ಬಾಡಿಗೆ ಒಪ್ಪಂದವನ್ನು ನೋಂದಾಯಿಸಲಾಗಿದೆ. ಈ ಒಪ್ಪಂದದ ಪ್ರಕಾರ, ಬ್ಲ್ಯಾಕ್‌ರಾಕ್ ಪ್ರತಿ ತಿಂಗಳು 2.72 ಕೋಟಿ ರೂಪಾಯಿ ಬಾಡಿಗೆಯನ್ನು ಪಾವತಿಸಬೇಕು. ಪ್ರತಿ ಚದರ ಅಡಿಗೆ 190 ರೂಪಾಯಿ ಆಗುತ್ತದೆ. ಭದ್ರತಾ ಠೇವಣಿಯಾಗಿ 21.75 ಕೋಟಿ ರೂ. ಹಣವನ್ನು ಡೆಪಾಸಿಟ್ ಆಗಿ ಇರಿಸಲಾಗಿದೆ. ಇಂಡಿಕ್ಯೂಬ್‌ ಸಿಂಫನಿ ಬಹುಮಹಡಿ ಕಟ್ಟಡವಾಗಿದ್ದು, G+5 ಮಹಡಿಯನ್ನು ಬ್ಲ್ಯಾಕ್‌ರಾಕ್ ಪಡೆದುಕೊಳ್ಳಲಿದೆ. ಪ್ರತಿ ವರ್ಷ ಬಾಡಿಗೆ ಮೊತ್ತ ಶೇ.5ರಷ್ಟು ಏರಿಕೆಯಾಗಲಿದೆ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಈ ಬಹುದೊಡ್ಡ ಒಪ್ಪಂದ ಬೆಂಗಳೂರು ನಗರ ಜಾಗತೀಕ ಮಾರುಕಟ್ಟೆಯ ಕೇಂದ್ರ ಬಿಂದುವಾಗುತ್ತಿರೋದನ್ನು ತೋರಿಸುತ್ತಿದೆ. ಜಾಗತೀಕ ಕಂಪನಿಗಳು ಭಾರತದತ್ತ ಮುಖ ಮಾಡುತ್ತಿದ್ದು, ತಮ್ಮ ಪ್ರಧಾನ ಕಚೇರಿಗಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಿವೆ. ಈ ಒಪ್ಪಂದದ ಕುರಿತು ಪ್ರತಿಕ್ರಿಯಿಸಲು ಇಂಡಿಕ್ಯೂಬ್ ನಿರಾಕರಿಸಿದೆ ಎಂದು ವರದಿಯಾಗಿದೆ. ಬೆಂಗಳೂರು ಸಿಬಿಡಿಯ ಮೂರು ಗೋಪುರಗಳಲ್ಲಿ ಇಂಡಿಕ್ಯೂಬ್ ಒಟ್ಟು 320,000 ಚದರ ಅಡಿ ಜಾಗವನ್ನು ಖರೀದಿಸಿದ್ದು, ಇದು 15 ವರ್ಷಗಳ ಪ್ರಾಜೆಕ್ಟ್ ಆಗಿದೆ. ಈ ಪ್ರದೇಶದಲ್ಲಿ ಉತ್ತಮ ಕೆಲಸದ ವಾತಾವರಣ ನಿರ್ಮಿಸುವ ಗುರಿಯನ್ನು ಹೊಂದಿದೆ.

115 ಕೇಂದ್ರಗಳನ್ನು ಹೊಂದಿರುವ ಇಂಡಿಕ್ಯೂಬ್

ಮಾರ್ಚ್‌ವರೆಗೆ ಇಂಡಿಕ್ಯೂಬ್ 15 ನಗರಗಳಲ್ಲಿ 115 ಕೇಂದ್ರಗಳನ್ನು ನಡೆಸುತ್ತಿದೆ. ಇದು ಒಟ್ಟು 8.4 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಪ್ರದೇಶ ಹೊಂದಿದ್ದು, ಇದರಲ್ಲಿ 186,719 ಆಸನಗಳನ್ನು ಹೊಂದಿದೆ. ಇಂದು ಇಂಡಿಕ್ಯೂಬ್ ಅತಿದೊಡ್ಡ ಮಾರುಕಟ್ಟೆಯಾಗಿ ಬದಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 65 ಸೆಂಟರ್‌ಗಳನ್ನು ಹೊಂದಿದ್ದು, 5.43 ಮಿಲಿಯನ್ ಚದರ ಅಡಿ ವಿಸ್ತೀರ್ಣದ ಪ್ರದೇಶವನ್ನು ಹೊಂದಿದೆ. ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಆಫಿಸ್ ಮಾರ್ಕೆಟ್ ಬೆಳವಣಿಗೆ ಹೊಂದುತ್ತಿದ್ದು, ಫ್ಲೆಕ್ಸ್ ಸ್ಪೇಸ್ ಇಂದು ವಿಶೇಷ ವ್ಯವಹಾರವಾಗಿದೆ.

ಕೋಲಿಯರ್ಸ್ ವರದಿ ಪ್ರಕಾರ, ಫ್ಲೆಕ್ಸ್ ಲೀಸಿಂಗ್ ಬ್ಯುಸಿನೆಸ್ ವರ್ಷದಿಂದ ವರ್ಷಕ್ಕೆ ಶೇ.48ರಷ್ಟು ಬೆಳವಣಿಗೆಯಾಗುತ್ತಿದೆ. 2025ರ ಮೊದಲ ಆರು ತಿಂಗಳಲ್ಲಿ 6.5 ಮಿಲಿಯನ್ ಚದರ ಅಡಿಗೆ ತಲುಪಿದೆ. ಇದು ಶೇ.19 ಏರಿಕೆ ಎಂದು ಕೋಲಿಯರ್ಸ್ ಹೇಳಿದೆ.

ಇದನ್ನೂ ಓದಿ: ಹೂಡಿಕೆದಾರರಿಗೆ 2323% ಲಾಭ ನೀಡಿದ ಷೇರು; 1 ಲಕ್ಷ ಇದೀಗ 24 ಲಕ್ಷ, 6 ತಿಂಗಳಲ್ಲಿ 172% ಪ್ರಚಂಡ ಲಾಭ

ಮುಂಬೈನಲ್ಲಿ ಕಚೇರಿ ಆರಂಭಿಸಿದೆ ಬ್ಲ್ಯಾಕ್‌ರಾಕ್

ಇದಕ್ಕೂ ಮೊದಲು ಬ್ಲ್ಯಾಕ್‌ರಾಕ್ ಮುಂಬೈನ ವರ್ಲಿ ಪ್ರದೇಶದಲ್ಲಿ ಪ್ರೀಮಿಯಂ ಕಮರ್ಶಿಯಲ್ ಟವರ್‌ನಲ್ಲಿ 42,700 ಚದರ ಅಡಿ ವಿಸ್ತೀರ್ಣದ ಕಚೇರಿಯನ್ನು ಲೀಸ್‌ಗೆ ಪಡೆದುಕೊಂಡಿದೆ. ಬ್ಲ್ಯಾಕ್‌ರಾಕ್ ಕಂಪನಿಯ ಸಿಇಒ ಲ್ಯಾರಿ ಫಿಂಕ್, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಬ್ಲ್ಯಾಕ್‌ರಾಕ್ ಕಂಪನಿ ಜಾಗತೀಕ ಮಾರುಕಟ್ಟೆಯಲ್ಲಿ $10 ಟ್ರಿಲಿಯನ್‌ಗಿಂತ ಹೆಚ್ಚಿನ ಆಸ್ತಿಯನ್ನು ನಿರ್ವಹಣೆ ಮಾಡುತ್ತದೆ. ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿರುವ ಭಾರತದ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಸಾಧಿಸಲು ಬ್ಲ್ಯಾಕ್‌ರಾಕ್ ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: EPFO: ನಿವೃತ್ತಿ ಬಳಿಕ ಪ್ರತಿ ತಿಂಗಳು 7071ರೂ. ಪಿಂಚಣಿ ಪಡೆಯೋದು ಹೇಗೆ? ಇಪಿಎಫ್ಓ ಕ್ಯಾಲ್ಕುಲೇಟರ್ ಬಳಕೆ ಹೇಗೆ?