ದಾವಣಗೆರೆಯ ಬೆಣ್ಣೆ ದೋಸೆಯನ್ನು ಮುಂಬೈನಲ್ಲಿ ಆರಂಭಿಸಿ ತಿಂಗಳಿಗೆ ಒಂದು ಕೋಟಿ ರೂಪಾಯಿ ಗಳಿಸ್ತಿರೋ ಮುಂಬೈ ದಂಪತಿಯ ಯಶೋಗಾಥೆ ಕೇಳಿ...
ಮನಸ್ಸೊಂದಿದ್ದರೆ ಮಾರ್ಗವು ಉಂಟು... ಎನ್ನುವ ಮಾತೇ ಇದ್ಯಲ್ಲಾ. ಅದು ಆಗಾಗ್ಗೆ ಸಾಬೀತು ಆಗುತ್ತಲೇ ಇರುತ್ತದೆ. ಅಷ್ಟು ಕಲಿತೆ, ಇಷ್ಟು ಕಲಿತೆ. ನನ್ನ ಕಲಿಕೆಗೆ ತಕ್ಕಂತೆ ಉದ್ಯೋಗ ಸಿಕ್ತಿಲ್ಲ ಎಂದು ಕೊರಗಿ ಕೊರಗಿ ಸಿಕ್ಕ ಉದ್ಯೋಗವನ್ನೂ ಮಾಡದೇ ನಿರುದ್ಯೋಗಿಗಳಾಗಿ ಅಲೆದಾಡುವವರು ಅದೆಷ್ಟೋ ಮಂದಿ ಇದ್ದಾರೆ. ಡಬಲ್ ಡಿಗ್ರಿ ಪಡೆದಿರುವೆ, ಇಷ್ಟು ಚಿಕ್ಕ ಕೆಲ್ಸ ಮಾಡಬೇಕಾ, ಅವರ ಕೆಳಗೆ ಸೇವೆ ಸಲ್ಲಿಸಬೇಕಾ ಎಂದೆಲ್ಲಾ ಅಹಂ ಅನ್ನು ತಂದುಕೊಂಡು ಕೆಲಸವೇ ಇಲ್ಲದೆ, ಕೊನೆಗೆ ಸರ್ಕಾರ ನಮಗೆ ಉದ್ಯೋಗ ಕೊಡ್ತಿಲ್ಲ ಎಂದು ಸರ್ಕಾರಗಳ ಮೇಲೆ ಗೂಬೆ ಕೂಡ್ರಿಸುವವರಿಗೂ ಏನೂ ಕಮ್ಮಿ ಇಲ್ಲ. ಇಲ್ಲಿ ಇವರ ಗೋಳಾಟ ನಡೆದೇ ಇರುವ ನಡುವೆಯೇ, ಅತ್ತ ಒಂದಿಷ್ಟು ಮಂದಿ ಯಾವುದೇ ಆಹಾರದ ಅಂಗಡಿ ಇಟ್ಟುಕೊಂಡು ಸದ್ದಿಲ್ಲದೇ ಲಕ್ಷ ಲಕ್ಷ ದುಡಿಯತ್ತಿರುವುದು ನಮ್ಮ ಕಣ್ಣ ಮುಂದೆಯೇ ಇದೆ.
ಒಂದು ಕೋಟಿಗೂ ಅಧಿಕ ಸಂಪಾದನೆ
ಇದಕ್ಕೆ ಸಾಕ್ಷಿಯಾಗಿ ಇತ್ತೀಚಿಗೆ 45 ಲಕ್ಷ ವ್ಯವಹಾರ ನಡೆಸುತ್ತಿರುವವರಿಗೆ GST ನೋಟಿಸ್ ಕೊಟ್ಟಾಗ ಅದೆಷ್ಟು ಮಂದಿ ಸಿಡಿದೆದ್ದರು ಎನ್ನುವುದು ಗೊತ್ತೇ ಇದೆ. ಇದರ ಅರ್ಥ ಈ ವ್ಯಾಪಾರಿಗಳು ಅಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ, ಇದೇ ಕಾರಣಕ್ಕೆ ಸ್ಕ್ಯಾನಿಂಗ್ ತೆಗೆದಿಟ್ಟು ಕ್ಯಾಷ್ ಪಡೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಕೆಲಸ ಮಾಡುವ ಮನಸ್ಸು ಇದ್ದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಇನ್ನೊಂದು ತಾಜಾ ಉದಾಹರಣೆ ತಿಂಗಳಿಗೆ ಒಂದು ಕೋಟಿಗೂ ಅಧಿಕ ಹಣ ಗಳಿಸುತ್ತಿರುವ ಈ ದಂಪತಿ. ಅದು ಕೇವಲ ದೋಸೆ ವ್ಯಾಪಾರದಿಂದ!
ಇದನ್ನೂ ಓದಿ: ಡಿವೋರ್ಸ್ ಪಡೆದ ಭಾರತದ ಮೊದಲ ಮಹಿಳೆ ಈಕೆ! ಸ್ತ್ರೀ ಸಬಲೀಕರಣಕ್ಕೆ ಕಾರಣವಾದ ರೋಚಕ ಸ್ಟೋರಿ
ಮುಂಬೈ ದಂಪತಿ ಯಶೋಗಾಥೆ
ಮುಂಬೈ ಮೂಲದ ದಂಪತಿಗಳಾದ ಅಖಿಲ್ ಅಯ್ಯರ್ ಮತ್ತು ಶ್ರಿಯಾ ನಾರಾಯಣ ಅವರು ಇದೀಗ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ. ಕರ್ನಾಟಕ ಅದರಲ್ಲಿಯೂ ದಾವಣಗೆರೆ ಶೈಲಿಯ ದೋಸೆಗೆ ಅದರದ್ದೇ ಆದ ವಿಶೇಷತೆ ಇದೆ. ಅದನ್ನು ಕೇಳಿ ತಿಳಿದುಕೊಂಡ ಈ ದಂಪತಿ ದೋಸೆಯ ಅಂಗಡಿ ಇಡುವ ಪ್ಲ್ಯಾನ್ ಮಾಡಿದರು. ಹೋಟೆಲ್ ಮ್ಯಾನೇಜ್ಮೆಂಟ್, ಆ ಡಿಗ್ರಿ, ಈಡಿಗ್ರಿ ಏನೂ ಪಡೆಯದಿದ್ದರೂ, ಈ ಬಗ್ಗೆ ಅಷ್ಟು ನಾಲೆಜ್ ಇಲ್ಲದಿದ್ದರೂ ಆಹಾರ ಉದ್ಯಮದಲ್ಲಿ ಹಿಂದಿನ ಅನುಭವವಿಲ್ಲದಿದ್ದರೂ ಬಾಂದ್ರಾದಲ್ಲಿ ಒಂದು ಸಣ್ಣ ಕೆಫೆಯನ್ನು ತೆರೆದರು.
ಅವರ ಉಪಾಹಾರ ಗೃಹವು ಕೇವಲ 12 ಸೀಟುಗಳೊಂದಿಗೆ ಪ್ರಾರಂಭವಾಯಿತು. ಆದರೆ ತ್ವರಿತವಾಗಿ ಅವರ ದೋಸೆಯ ಪರಿಮಳ ಸುತ್ತಲೂ ಘಮಘಮಿಸಿತು. ಜನರನ್ನು ಆಕರ್ಷಿಸಿತು. ಅದು ಎಷ್ಟು ಫೇಮಸ್ ಆಯಿತು ಎಂದರೆ ಎಲ್ಲೆಲ್ಲಿಂದಲೋ ಜನರು ಹುಡುಕಿ ಬರಲು ಆರಂಭಿಸಿದರು. ಸೆಲೆಬ್ರಿಟಿಗಳ ವರೆಗೂ ಈ ವಿಷಯ ಹೋಯಿತು.ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರಂತಹ ತಾರೆಯರೂ ಬಂದು ಸವಿದು ಹೋದ ಮೇಲೆ ಈ ದಂಪತಿಯ ಅದೃಷ್ಟವೇ ಖುಲಾಯಿಸಿತು. ಪ್ರತಿದಿನ 800- ಒಂದು ಸಾವಿರ ದೋಸೆಗಳನ್ನು ಮಾರಾಟ ಮಾಡುತ್ತಾರೆ. ಇದೇ ಕಾರಣಕ್ಕೆ ಅವರ ಉದ್ಯಮವು ತಿಂಗಳಿಗೆ ಸುಮಾರು 1 ಕೋಟಿ ರೂ.ಗಳಷ್ಟು ಆದಾಯವನ್ನು ಗಳಿಸುವ ಅಭಿವೃದ್ಧಿ ಹೊಂದುತ್ತಿರುವ ವ್ಯವಹಾರವಾಗಿ ಮಾರ್ಪಟ್ಟಿದೆ.
ನಿಜವಾದ ರುಚಿ, ದೊಡ್ಡ ಯಶಸ್ಸು
ಅವರ ಯಶಸ್ಸಿನ ರಹಸ್ಯವೆಂದರೆ ಶುದ್ಧತೆ ಮತ್ತು ತಾಜಾ ಪದಾರ್ಥಗಳನ್ನು ಬಳಸುವುದು. ಜೊತೆಗೆ ಆಲಂಕಾರಿಕ ಒಳಾಂಗಣಗಳು... ಸಾಧಾರಣವಾಗಿ ಆರಂಭವಾದ ಈ ಸಂಸ್ಥೆ ಈಗ ಒಂದು ಬ್ರ್ಯಾಂಡ್ ಆಗಿದೆ. ಅಖಿಲ್ ಮತ್ತು ಶ್ರಿಯಾ ಅವರಿಗೆ, ಈ ಪ್ರಯಾಣವು ಕೇವಲ ಲಾಭಕ್ಕಿಂತ ಹೆಚ್ಚಿನದಾಗಿದೆ. ಇದೀಗ ಇತ್ತ ಬರುವವರೆಲ್ಲರೂ ದೋಸೆ ಸವಿದೇ ಹೋಗುತ್ತಾರೆ. ಕೆಲಸದ ಜೊತೆ ಅದೃಷ್ಟವೂ ಇರಲೇಬೇಕು ಎನ್ನುವುದು ನಿಜವಾದರೂ, ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ... ಎನ್ನುವ ಅಣ್ಣಾವ್ರ ಹಾಡನ್ನು ನೆನಪಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಚೀನಾದ ಡೇಂಜರಸ್ ಬೆಳ್ಳುಳ್ಳಿ: ಗುರುತಿಸೋದು ಹೇಗೆ? ಡಿಟೇಲ್ಸ್ ಇಲ್ಲಿದೆ..
