ನವೆಂಬರ್ 1 ರಿಂದ ಜಾರಿಗೆ ಬರುವ ಹೊಸ ಬ್ಯಾಂಕಿಂಗ್ ನಿಯಮದ ಪ್ರಕಾರ, ಖಾತೆದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಒಬ್ಬರ ಬದಲು ನಾಲ್ಕು ಜನರನ್ನು ನಾಮಿನಿಗಳಾಗಿ ನೇಮಿಸಬಹುದು. ಈ ಬದಲಾವಣೆಯು ನಾಮಿನಿಗಳಿಗೆ ಷೇರುಗಳನ್ನು ನಿಗದಿಪಡಿಸಲು ಸಹ ಅವಕಾಶ ನೀಡುತ್ತದೆ. ಇಲ್ಲಿದೆ ಡಿಟೇಲ್ಸ್​

ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರೆ ಅಥವಾ ಲಾಕರ್​ನಲ್ಲಿ ಒಡವೆಗಳನ್ನು ಇಟ್ಟಿದ್ದರೆ ಅದಕ್ಕೆ ನಾಮಿನಿ ಮಾಡುವುದು ಕಡ್ಡಾಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಮೂಲ ಮಾಲೀಕ ಮೃತಪಟ್ಟರೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಆ ಹಣ ಅಥವಾ ಒಡವೆ, ವಸ್ತು ಯಾರಿಗೆ ಸೇರಬೇಕು ಎನ್ನುವುದಕ್ಕಾಗಿ ನಾಮಿನಿ ಮಾಡಿಕೊಳ್ಳಲಾಗುತ್ತದೆ. ಅಪ್ಪ-ಅಮ್ಮ, ಪತಿ-ಪತ್ನಿ, ಮಕ್ಕಳು... ಹೀಗೆ ಯಾರದ್ದೇ ಹೆಸರಿನಲ್ಲಿ ನಾಮಿನಿ ಮಾಡುವ ಅವಕಾಶ ಮಾಲೀಕರಿಗೆ ಇರುತ್ತದೆ. ಇದೀಗ ಬ್ಯಾಂಕ್​ ನವೆಂಬರ್​ 1ರಿಂದ ಹೊಸ ರೂಲ್ಸ್​ ಜಾರಿಗೊಳಿಸಿದೆ.

ನಾಲ್ವರ ನಾಮಿನೇಷನ್​

ಇದರ ಅನ್ವಯ, ಬ್ಯಾಂಕ್ ಖಾತೆದಾರರು ತಮ್ಮ ಖಾತೆಗಳಿಗೆ ಇನ್ನುಮುಂದೆ ನಾಲ್ಕು ಮಂದಿಯನ್ನು ನಾಮಿನಿಗಳನ್ನಾಗಿ ಮಾಡಬಹುದಾಗಿದೆ. ಇಲ್ಲಿಯವರೆಗೆ ಇದ್ದ ಒಬ್ಬರೇ ನಾಮಿನಿ ಬದಲು ಇನ್ನು ನಾಲ್ವರನ್ನು ಮಾಡಬಹುದಾಗಿದೆ. ಕೆಲವು ಸಂದರ್ಭಗಳಲ್ಲಿ ಮಾಲೀಕನಿಗಿಂತ ಮೊದಲೇ ನಾಮಿನಿ ಮೃತಪಟ್ಟರೆ ಗೋಜು ಗೊಂದಲಿಗಳಿಗೆ ಅವಕಾಶ ಇದ್ದವು. ಆದ್ದರಿಂದ ಆ ನಿಮಯವನ್ನು ಈಗ ಬದಲಾಯಿಸಲಾಗಿದೆ. ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ 2025 ರ ಅಡಿಯಲ್ಲಿ ಪರಿಚಯಿಸಲಾದ ಈ ಬದಲಾವಣೆಯಿಂದ ಖಾತೆದಾರರು ತಮ್ಮ ಠೇವಣಿ ಅಥವಾ ಲಾಕರ್​ಗೆ ಬೇರೆ ಬೇರೆ ರೀತಿಯ ನಾಮಿನಿ ಮಾಡಬಹುದು ಮಾತ್ರವಲ್ಲದೇ, ಯಾರಿಗೆ ಎಷ್ಟು ಶೇರ್​ ಸಿಗಬೇಕು ಎನ್ನುವ ಬಗ್ಗೆಯೂ ಮೊದಲೇ ಬರೆದಿಡಬಹುದು.

ನಾಮನಿರ್ದೇಶಿತರನ್ನು ಹೇಗೆ ಆಯ್ಕೆ ಮಾಡುವುದು

ಗ್ರಾಹಕರು ಏಕಕಾಲದಲ್ಲಿ ಅಥವಾ ಅನುಕ್ರಮವಾಗಿ ನಾಲ್ಕು ನಾಮಿನಿಗಳನ್ನು ಆಯ್ಕೆ ಮಾಡಬಹುದು. ಅನುಕ್ರಮವಾಗಿ ಆಯ್ಕೆ ಮಾಡಿದರೆ, ಮೊದಲ ನಾಮಿನಿ ಮೊದಲನೆಯವರಾಗಿರುತ್ತಾರೆ, ನಂತರ ಎರಡನೆಯವರು, ನಂತರ ಮೂರನೆಯವರು ಮತ್ತು ನಾಲ್ಕನೆಯವರು. ಒಬ್ಬ ನಾಮಿನಿ ಮರಣ ಹೊಂದಿದ ಸಂದರ್ಭದಲ್ಲಿ ಇದು ಸ್ವಯಂಚಾಲಿತವಾಗಿ ಮೊದಲ ನಾಮಿನಿಗೆ ಎಂದರೆ ಯಾರ ಹೆಸರು ಮೊದಲು ಇರುತ್ತದೆಯೋ ಅವರಿಗೆ ಹಕ್ಕುಗಳನ್ನು ವರ್ಗಾಯಿಸುತ್ತದೆ.

ಬ್ಯಾಂಕ್ ಲಾಕರ್ ಮತ್ತು ಸುರಕ್ಷಿತ ಕಸ್ಟಡಿ ನಿಯಮಗಳು

ಗ್ರಾಹಕರು ಈಗ ಲಾಕರ್ ಅಥವಾ ಸುರಕ್ಷಿತ ಕಸ್ಟಡಿ ವಸ್ತುಗಳಿಗೂ ನಾಲ್ಕು ನಾಮಿನಿಗಳನ್ನು ಸೇರಿಸಬಹುದು. ಎಲ್ಲವುಗಳಲ್ಲಿ ನಿಯಮ ಒಂದೇ. ಮೊದಲ ನಾಮಿನಿಗೆ ಮೊದಲ ಪ್ರಿಫರೆನ್ಸ್​. ಇದರರ್ಥ ಎರಡನೇ ನಾಮಿನಿಗೆ ಹಣ ವರ್ಗಾವಣೆ ಅಥವಾ ಹಕ್ಕು ಬರಬೇಕು ಎಂದರೆ, ಅದು ಮೊದಲ ನಾಮಿನಿಯ ಮರಣದ ನಂತರ ಮಾತ್ರ ಸಾಧ್ಯ. ಅದೇ ರೀತಿ 2ನೇಯವರ ಬಳಿಕ 3, ಆ ಬಳಿಕ 4... ಹೀಗೆ ಮುಂದುವರೆಯುತ್ತದೆ.

ಪ್ರಯೋಜನಗಳು ಮತ್ತು ಪರಿಣಾಮ

ಈ ಹೊಸ ನಿಯಮವು ಖಾತೆದಾರರು ತಮ್ಮ ಕುಟುಂಬ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳಿಗೆ ತಮ್ಮ ಪಾಲಿನ ಹಣ ಅಥವಾ ಸರಕುಗಳನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ. ಖಾತೆದಾರರ ಮರಣದ ನಂತರ ಕ್ಲೈಮ್ ಇತ್ಯರ್ಥಗಳು ವೇಗವಾಗಿರುತ್ತವೆ, ದೀರ್ಘ ಕಾನೂನು ಪ್ರಕ್ರಿಯೆಗಳನ್ನು ತಪ್ಪಿಸುತ್ತವೆ. ಇದು ಕುಟುಂಬಗಳೊಳಗಿನ ಹಣಕಾಸಿನ ವಿವಾದಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಬ್ಯಾಂಕ್‌ಗಳಲ್ಲಿ ಕ್ಲೈಮ್-ಸಂಬಂಧಿತ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ.

ನವೆಂಬರ್ 1 ರಿಂದ ಜಾರಿಗೆ ಬರಲಿರುವ ಈ ಹೊಸ ಬ್ಯಾಂಕಿಂಗ್ ನಿಯಮವು ಖಾತೆದಾರರಿಗೆ ಪ್ರಮುಖ ಪರಿಹಾರವಾಗಿದೆ. ಇದು ಅವರ ಬ್ಯಾಂಕ್ ಖಾತೆ ಮತ್ತು ಲಾಕರ್‌ನಲ್ಲಿ ಒಂದಕ್ಕಿಂತ ಹೆಚ್ಚು ನಾಮಿನಿಗಳನ್ನು ಹೊಂದಲು, ಅವರ ಹಣ ಮತ್ತು ವಸ್ತುಗಳನ್ನು ರಕ್ಷಿಸಲು ಮತ್ತು ಕುಟುಂಬದೊಳಗೆ ಕ್ಲೈಮ್ ಇತ್ಯರ್ಥವನ್ನು ಸುಗಮಗೊಳಿಸಲು ಅನುವು ಮಾಡಿಕೊಡುತ್ತದೆ.