Bengaluru to Introduce Congestion Tax: ಬೆಂಗಳೂರಿನ ತೀವ್ರ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು, ಕರ್ನಾಟಕ ಸರ್ಕಾರವು ಕಾರಿನಲ್ಲಿ ಒಬ್ಬರೇ ಪ್ರಯಾಣಿಸುವವರಿಗೆ ದಟ್ಟಣೆ ತೆರಿಗೆ ವಿಧಿಸಲು ಚಿಂತನೆ ನಡೆಸಿದೆ. ಈ ಪ್ರಸ್ತಾವಿತ ನಿಯಮವನ್ನು ಮೊದಲು ಔಟರ್ ರಿಂಗ್ ರಸ್ತೆಯಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ.
ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಹೊಸ ಯೋಜನೆಯೊಂದಿಗೆ ಬಂದ ರಾಜ್ಯ ಸರ್ಕಾರ
ಬೆಂಗಳೂರು: ಉದ್ಯಾನಗರಿ ಖ್ಯಾತಿಯ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅನೇಕ ಬಾರಿ ಈ ಟ್ರಾಫಿಕ್ ಜಾಮ್ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಈಗ ಕರ್ನಾಟಕ ಸರ್ಕಾರ ಟ್ರಾಫಿಕ್ ಜಾಮ್ ನಿಯಂತ್ರಿಸುವುದಕ್ಕೆ ಹೊಸದೊಂದು ನಿಯಮವನ್ನು ಜಾರಿಗೆ ತರಲು ಮುಂದಾಗಿದ್ದು, ಈ ನಿಯಮ ಜಾರಿಗೆ ಬಂದಲ್ಲಿ ನಗರದ ಜನ ಹೊಸದಂಡಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಹೌದು ಒಬ್ಬನೇ ಸಂಚರಿಸುವ ಕಾರುಗಳಿಗೆ ದಂಡ ವಿಧಿಸುವುದಕ್ಕೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಔಟರ್ ರಿಂಗ್ ರೋಡಲ್ಲಿ ಯೋಜನೆ ಪ್ರಾಯೋಗಿಕ ಜಾರಿ
ಒಬ್ಬನೇ ಸಂಚರಿಸುವ ಕಾರುಗಳಿಗೆ ಕಂಜೆಸ್ಚನ್ ಟಾಕ್ಸ್ ಅಥವಾ ದಟ್ಟಣೆ ತೆರಿಗೆ ಹಾಕುವುದಕ್ಕೆ ಸರ್ಕಾರ ಯೋಚಿಸುತ್ತಿದೆ. ಈ ಯೋಜನೆಯನ್ನು ಮೊದಲಿಗೆ ನಗರದ ಅತ್ಯಂತ ಹೆಚ್ಚು ಸಂಚಾರ ದಟ್ಟಣೆ ಇರುವ ನಗರದ ಟೆಕ್ ಕಾರಿಡಾರ್ ಎನಿಸಿರುವ ಔಟರ್ ರಿಂಗ್ ರಸ್ತೆಯಲ್ಲಿ (ORR) ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ರಸ್ತೆಯಲ್ಲಿ ಲಕ್ಷಾಂತರ ಜನ ದಿನವೂ ಪ್ರಯಾಣಿಸುತ್ತಾರೆ.
ಉದ್ಯಮಿಗಳ ಜೊತೆ ಸಭೆ ನಡೆಸಿದ ರಾಜ್ಯ ಸರ್ಕಾರ
ಈ ವಿಚಾರದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ, ಯುಲು ಸಹ ಸಂಸ್ಥಾಪಕಿ ಆರ್.ಕೆ. ಮಿಶ್ರಾ ಮತ್ತು ನಗರದ ವಿನ್ಯಾಸಕ ನರೇಶ್ ನರಸಿಂಹನ್ ಅವರಂತಹ ಉದ್ಯಮ ನಾಯಕರು ಈ ಉನ್ನತ ಮಟ್ಟದ ಸಭೆಯಲ್ಲಿ ಹಾಜರಿದ್ದರು. ಅವರ ಮುಂದೆ ಸರ್ಕಾರ ಈ ಪ್ರಸ್ತಾಪವನ್ನು ಚರ್ಚಿಸಿದೆ.
ಒಬ್ಬನೇ ಸಂಚರಿಸುವ ಕಾರುಗಳಿಗೆ ದಂಡ
ಸರ್ಕಾರದ ಈ ಯೋಜನೆಯ ಕಲ್ಪನೆ ಬಹಳ ಸರಳವಾಗಿದೆ. ಔಟರ್ ರಿಂಗ್ ರೋಡ್‌ನಂತಹ ರಸ್ತೆಯಲ್ಲಿ ನೀವು ಕಾರಿನಲ್ಲಿ ಏಕಾಂಗಿಯಾಗಿ ಸಂಚರಿಸಿದರೆ ನೀವು ದಂಡ ಪಾವತಿ ಮಾಡಬೇಕಾಗುತ್ತದೆ. ಬಹುಶಃ ಫಾಸ್ಟ್ಯಾಗ್ ಮೂಲಕ ಹಣ ಕಡಿತವಾಗುವ ಸಾಧ್ಯತೆ ಇದೆ. ಈ ರಸ್ತೆಯಲ್ಲಿ ಸಂಚರಿಸುವಾಗ ಕಾರಿನಲ್ಲಿ ಎರಡಕ್ಕಿಂತ ಹೆಚ್ಚು ಪ್ರಯಾಣಿಕರಿದ್ದರೆ ಅಂತಹ ಕಾರುಗಳಿಗೆ ವಿನಾಯಿತಿ ನೀಡಲಾಗುತ್ತದೆ. ಈ ಹೊಸ ನಿಯಮವು ಕಾರುಪೂಲಿಂಗ್‌ಗೆ ಹಾಗೂ ರಸ್ತೆಯಲ್ಲಿ ಕಡಿಮೆ ವಾಹನಗಳ ಸಂಚಾರಕ್ಕೆ ಪ್ರೋತ್ಸಾಹ ನೀಡುತ್ತದೆ.
ರಸ್ತೆ ಸರಿ ಮಾಡದೇ ಯೋಜನೆ ಜಾರಿ ಮಾಡ್ತಿರೋದಕ್ಕೆ ಆಕ್ರೋಶ
ಆದರೆ ಸರ್ಕಾರದ ಈ ಪ್ರಯೋಗಕ್ಕೆ ಆನ್‌ಲೈನ್‌ನಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಉತ್ತಮ ಸಾರ್ವಜನಿಕ ಸಾರಿಗೆ ಇಲ್ಲದೆ ಸಂಚಾರ ದಟ್ಟಣೆ ತೆರಿಗೆ ವಿಧಿಸುವುದು ಶಿಕ್ಷೆಯೇ ಹೊರತು ನೀತಿಯಲ್ಲ ಎಂದು ಉದ್ಯಮಿ ಟಿ.ವಿ. ಮೋಹನದಾಸ್ ಪೈ ಪೋಸ್ಟ್ ಮಾಡಿದ್ದಾರೆ.
ಹಾಗಂತ ಈ ಯೋಜನೆ ದೇಶದಲ್ಲೇ ಮೊದಲಲ್ಲ, ಅಥವಾ ಕರ್ನಾಟಕವೇ ಮೊದಲಲ್ಲ, ಈ ಕಲ್ಪನೆಯೊಂದಿಗೆ ಬಂದಿರುವ ಏಕೈಕ ನಗರ ಬೆಂಗಳೂರು ಅಲ್ಲ. ಕಳೆದ ವರ್ಷ ದೆಹಲಿ ಸರ್ಕಾರವು 13 ಪ್ರಮುಖ ಗಡಿಗಳಲ್ಲಿ ರಾಜಧಾನಿಯನ್ನು ಪ್ರವೇಶಿಸುವ ವಾಹನಗಳಿಗೆ ಸಂಚಾರ ದಟ್ಟಣೆ ತೆರಿಗೆಯನ್ನು ಪರಿಚಯಿಸಲು ಯೋಜಿಸುತ್ತಿದೆ ಎಂದು ಸಾಕಷ್ಟು ವರದಿಯಾಗಿದ್ದವು. ಆದರೆ ಈ ಯೋಜನೆಯ ಕುರಿತು ಹೆಚ್ಚಿನ ಬೆಳವಣಿಗೆ ನಡೆಯಲಿಲ್ಲ.
ಆದರೆ ವಿದೇಶಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಲಂಡನ್ ಮತ್ತು ಸಿಂಗಾಪುರದಂತಹ ನಗರಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಜಾರಿಯಲ್ಲಿದೆ. ಎರಡೂ ನಗರಗಳು ವಿಶ್ವ ದರ್ಜೆಯ ಸಾರ್ವಜನಿಕ ಸಾರಿಗೆಯನ್ನು ಹೊಂದಿವೆ. ಆದರೆ ಬೆಂಗಳೂರು ಅಪೂರ್ಣ ಯೋಜನೆಗಳು ಮತ್ತು ಹದಗೆಟ್ಟ ರಸ್ತೆಗಳಿಂದಾಗಿ ಸದಾ ಸುದ್ದಿಯಲ್ಲಿರುವುದರ ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಹೀಗಿರುವಾಗ ಈ ರೀತಿಯ ಹೊಸ ಯೋಜನೆ ಜನರ ಆಕ್ರೋಶಕ್ಕೆ ಗುರಿಯಾಗಿಸುವ ಸಾಧ್ಯತೆ ಇದೆ.
