Darshan New Bail Plan ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್, ಜಾಮೀನು ಪಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ತಮ್ಮ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯದ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ. 

ಬೆಂಗಳೂರು (ಅ.16): ಎಲ್ಲವೂ ಅಂದುಕೊಂಡಂತೆ ಆದರೆ, ದೀಪಾವಳಿ ವೇಳೆಗೆ ಅಥವಾ ದೀಪಾವಳಿ ಬೆನ್ನಲ್ಲೇ ಕಿಲ್ಲಿಂಗ್‌ ಸ್ಟಾರ್‌ ದರ್ಶನ್‌ಗೆ ನರಕದರ್ಶನದಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಹೇಗಾದರೂ ಮಾಡಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ಗೆ ಜಾಮೀನು ಕೊಡಿಸಲೇಬೇಕು ಎಂದು ಅವರ ವಕೀಲರ ತಂಡ ಪಣ ತೊಟ್ಟಿದ್ದು, ಅದಕ್ಕಾಗಿ ಇರುವ ಅವಕಾಶಗಳನ್ನೆಲ್ಲಾ ಬಳಸಿಕೊಳ್ಳಲು ಸಜ್ಜಾಗಿದೆ. ಈ ಬಾರಿ ದರ್ಶನ್‌ ತನ್ನ ತಾಯಿಯ ಆರೈಕೆ ಆಧಾರದ ಮೇಲೆ ಜಾಮೀನು ಪಡೆಯುವ ಪ್ಲ್ಯಾನ್‌ ಮಾಡುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಕಾರಣ ಜೈಲು ಸೇರಿರುವ ನಟ ದರ್ಶನ್‌, ಇದೀಗ ಹೊಸ ಕಾರ್ಯತಂತ್ರದೊಂದಿಗೆ ಹೊರಬರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಜಾಮೀನು ಷರತ್ತುಗಳನ್ನು ಪಾಲಿಸದ ಕಾರಣವೇ ದರ್ಶನ್ ಮತ್ತೆ ಜೈಲು ಸೇರುವಂತಾಯಿತು.

ಜಾಮೀನು ರದ್ದಾಗಲು ಕಾರಣ ಏನು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ದರ್ಶನ್‌, ಬೆನ್ನು ನೋವು ಮತ್ತು ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದು ಹೊರಬಂದಿದ್ದರು. ಆದರೆ, ಜಾಮೀನು ಸಿಕ್ಕ ಬಳಿಕ ವಕೀಲರು ನೀಡಿದ್ದ ಎಚ್ಚರಿಕೆಯನ್ನು ಅವರು ಪಾಲಿಸಲಿಲ್ಲ. ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಹಾಗೂ ಆರೋಗ್ಯ ಸಂಬಂಧಿತ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಬೇಕಿತ್ತು. ದರ್ಶನ್‌ ಅದನ್ನು ಮಾಡದ ಕಾರಣವೇ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಯಿತು.

ದರ್ಶನ್‌ರ ಹೊಸ 'ಪ್ಲಾನ್‌' ಏನು?

ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದರೆ ಮತ್ತೆ 6 ತಿಂಗಳವರೆಗೆ ಅದೇ ಕಾರಣ ನೀಡಿ ಜಾಮೀನು ಕೇಳಲು ಬರುವುದಿಲ್ಲ. ಹೀಗಾಗಿ ದರ್ಶನ್ ಈ ಬಾರಿ ಹೊಸ ಕಾರಣದೊಂದಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

ಈ ಬಾರಿ ದರ್ಶನ್ ಅವರು ತಮ್ಮ ತಾಯಿ ಮೀನಾ ತೂಗುದೀಪ ಅವರ ಅನಾರೋಗ್ಯ ಮತ್ತು ಅವರ ಆರೈಕೆಯ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸುವ ಬಗ್ಗೆ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಅದರೊಂದಿಗೆ ಜ್ಯೋತಿಷ್ಯದ ಮೊರೆ ಇಟ್ಟಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸುವ ವೇಳೆ, ದರ್ಶನ್ ಜ್ಯೋತಿಷ್ಯ ಮತ್ತು ಸಮಯಫಲವನ್ನು ನಂಬುತ್ತಿದ್ದು, ಯಾವ ಶುಭ ಮುಹೂರ್ತದಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಜ್ಯೋತಿಷಿಗಳ ಸಲಹೆಯನ್ನೂ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜಾಮೀನು ಸಿಗುವುದು ಕಷ್ಟ

ದರ್ಶನ್‌ ಅವರ ಹೊಸ ಜಾಮೀನು ಅರ್ಜಿಯ ಊರ್ಜಿತದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಏಕೆಂದರೆ, ದರ್ಶನ್ ಮತ್ತು ಅವರ ತಾಯಿ ಮೀನಾ ಅವರು ದರ್ಶನ್‌ ಜೊತೆ ವಾಸ ಮಾಡುತ್ತಿಲ್ಲ. ಅದಲ್ಲದೆ, ಮೀನಾ ಅವರಿಗೆ ದರ್ಶನ್ ಒಬ್ಬರೇ ಮಗನಲ್ಲ, ನಿರ್ದೇಶಕ ದಿನಕರ್ ತೂಗುದೀಪ ಮತ್ತು ಮಗಳು ಕೂಡ ಇರುವುದರಿಂದ, ಈ ಕಾರಣ ನೀಡಿ ಸಲ್ಲಿಸುವ ಅರ್ಜಿ ನ್ಯಾಯಾಲಯದಲ್ಲಿ ಮಾನ್ಯವಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.