ದೆಹಲಿಯಲ್ಲಿ ಲಾಕ್ ಮಾಡಿದ್ದ ಹುಂಡೈ ಕ್ರೇಟಾ ಕಾರನ್ನು ಕೇವಲ 60 ಸೆಕೆಂಡ್‌ಗಳಲ್ಲಿ ಕಳವು ಮಾಡಲಾಗಿದೆ. ಈ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಭದ್ರತಾ ವ್ಯವಸ್ಥೆಯನ್ನು ಹ್ಯಾಕ್ ಮಾಡಿ ಕಳ್ಳತನ ಮಾಡಲಾಗಿದೆ.

ನವದೆಹಲಿ: ಲಾಕ್ ಮಾಡಿದ್ದ ಹುಂಡೈ ಕ್ರೇಟಾ ಕಾರನ್ನು ಖದೀಮರು ಕೇವಲ 60 ಸೆಕೆಂಡ್‌ನಲ್ಲಿ ಕಣ್ಣಿಗೆ ಕಾಣದಂತೆ ಮಾಯ ಮಾಡಿದ ರೋಚಕ ಕಳ್ಳತನ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದು, ಈ ಕಳ್ಳತನವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 20 ಲಕ್ಷ ಮೌಲ್ಯದ ದುಬಾರಿ ಹುಂಡೈ ಕ್ರೇಟಾ ಕಾರಿನ ಸೆಕ್ಯೂರಿಟಿ ಸಿಸ್ಟಂನ್ನೇ ಹ್ಯಾಕ್ ಮಾಡಿ ಕಳ್ಳರು ಈ ಕೃತ್ಯವೆಸಗಿದ್ದು, ಕೇವಲ ಒಂದು ನಿಮಿಷದಲ್ಲಿ ಕಾರಿನೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಕೃತ್ಯದ ಸಂಪೂರ್ಣ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೆಹಲಿಯ ಸಫ್ದರ್‌ಜಂಗ್ ಇನ್ಲೇವ್‌ನಲ್ಲಿರುವ ಮನೆಯ ಮುಂದೆ ಜೂನ್ 21ರಂದು ಈ ಘಟನೆ ನಡೆದಿದೆ.

ಇನ್ನು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದ ಜನ ಆಘಾತ ವ್ಯಕ್ತಪಡಿಸಿದ್ದಾರೆ. ರಿಷಬ್ ಚೌಹಾಣ್ ಎಂಬುವವರ ಕಾರು ಇದಾಗಿದ್ದು, ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವೀಡಿಯೋ ಸಹಿತ ಘಟನೆಯ ಬಗ್ಗೆ ವಿವರಿಸಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ನಿಲ್ಲಿಸಿದ್ದ, ಹುಂಡೈ ಕ್ರೇಟಾ ಕಾರಿನ ಪಕ್ಕದಲ್ಲೇ ಕಾರೊಂದು ಬಂದು ನಿಲ್ಲುತ್ತದೆ. ಆ ಕಾರಿನಿಂದ ಇಳಿದ ವ್ಯಕ್ತಿಯೊಬ್ಬ ಹುಂಡೈ ಕ್ರೇಟಾ ಕಾರಿನ ಬಳಿ ಬಂದು ಗ್ಲಾಸ್ ಕಟ್ಟರ್‌ನಲ್ಲಿ ಸುಲಭವಾಗಿ ಕಾರಿನ ಚಾಲಕ ಕುಳಿತುಕೊಳ್ಳುವ ಕಿಟಕಿಯ ಗಾಜನ್ನು ಒಡೆದು ಹಾಕುತ್ತಾನೆ. ನಂತರ ಆ ಕಾರು ಅಲ್ಲಿಂದ ಹೋಗಿದ್ದು, ಮತ್ತೆ ಕೆಲ ಸೆಕೆಂಡ್‌ಗಳಲ್ಲಿ ಅದೇ ಕಾರು ಅಲ್ಲಿ ಬಂದು ನಿಂತಿದೆ. ಆ ಕಾರಿನಿಂದ ಮತ್ತೊಬ್ಬ ಕೆಳಗೆ ಇಳಿದಿದ್ದಾನೆ. ಆತ ಮಾಸ್ಕ್ ಧರಿಸಿದ್ದು, ಆತ ಕ್ರೇಟಾ ಕಾರಿನ ಸೆಕ್ಯೂರಿಟಿ ಸಿಸ್ಟಂನ್ನು ಹ್ಯಾಕ್ ಮಾಡಿದ್ದು, ಕೆಲ ಸೆಕೆಂಡ್‌ಗಳಲ್ಲಿ ಹುಂಡೈ ಕ್ರೇಟಾ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾನೆ.

ಈ ಕಾರು ಖರೀದಿಸಿ ಕೇವಲ ಆರು ತಿಂಗಳು ಕಳೆದಿತ್ತಷ್ಟೇ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹುಂಡೈ ಕ್ರೇಟಾ ಕಾರನ್ನು ಎಷ್ಟು ಸುಲಭವಾಗಿ ಕಳ್ಳತನ ಮಾಡಬಹುದು ಹೀಗಾಗಿ ಇದನ್ನು ಖರೀದಿಸುವ ಮೊದಲು ಯೋಚಿಸುವುದು ಒಳಿತು ಎಂದು ಅವರು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಅವರು, 'ಹಾಯ್, ನನ್ನ ಹುಂಡೈ ಕ್ರೆಟಾ ಜೂನ್ 21, 2025 ರಂದು 60 ಸೆಕೆಂಡುಗಳಲ್ಲಿ ಕಳುವಾಯಿತು.

ನನ್ನ ಸಿಸಿಟಿವಿ ಕ್ಯಾಮೆರಾದಿಂದ ನಾನು ತೆಗೆದ ಈ ವೀಡಿಯೊದಲ್ಲಿ ಕಾಣುವಂತೆ, ಹುಂಡೈ ಕ್ರೇಟಾ ಇನ್ನು ಮುಂದೆ ಹೊರಗೆ ನಿಲ್ಲಿಸಿದರೆ ಸುರಕ್ಷಿತವಾಗಿರಲ್ಲ ಮತ್ತು ಅದರ ಭದ್ರತಾ ವ್ಯವಸ್ಥೆಯನ್ನು 60 ಸೆಕೆಂಡ್‌ನಲ್ಲಿ ಹ್ಯಾಕ್ ಮಾಡಿ ಕಾರನ್ನು ಕಳವು ಮಾಡಲಾಗಿದೆ. ಹುಂಡೈ ಇಂಡಿಯಾದವರು ತಮ್ಮ ಸುರಕ್ಷತಾ ಸಾಫ್ಟ್‌ವೇರ್‌ಗಳಲ್ಲಿ ಮತ್ತಷ್ಟು ಸುಧಾರಣೆ ಮಾಡುವ ಅಗತ್ಯವಿದೆ. ಘಟನೆ ನಡೆದು ಇಷ್ಟು ದಿನವಾದರೂ ದೆಹಲಿ ಪೊಲೀಸರಿಗೆ ಈ ಕಾರನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ರಾಜಧಾನಿಯಾಗಿರುವ ದೆಹಲಿಯಲ್ಲಿಯೇ ಇಂತಹ ಅನಾಹುತವಾದರೆ ನಾವು ರಾಜ್ಯದ ಇತರ ಭಾಗವನ್ನು ನಾವು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಬರೆದುಕೊಂಡಿದ್ದು, ಹುಂಡೈ ಇಂಡಿಯಾ ಹಾಗೂ ದೆಹಲಿ ಪೊಲೀಸರನ್ನು ತಮ್ಮ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಈ ವೀಡಿಯೋವನ್ನು 3 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ಕೆಲವರು ಕಾಮೆಂಟ್ ಮಾಡಿ ತಮಗಾದ ಅನುಭವವನ್ನು ಹೇಳಿದ್ದಾರೆ. 2022ರ ನವಂಬರ್‌ನಲ್ಲಿ ತಮ್ಮ ಕ್ರೇಟಾ ಕಾರು ಕೂಡ ಇದೇ ರೀತಿ ಕಳ್ಳತನವಾಗಿದೆ. ನಮಗೆ ಇಲ್ಲಿವರೆಗೆ ಅದರ ಸುಳಿವು ಸಿಕ್ಕಿಲ್ಲ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಹುಂಡೈ ಹಾಗೂ ಅದರ ಡೀಲರ್ ಹಾಗೂ ಇನ್ಶ್ಯುರೆನ್ಸ್ ಸಂಸ್ಥೆ ವಿರುದ್ಧ ಕೇಸ್ ಹಾಕಿದ್ದೇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಹಾಗೆಯೇ ಮತ್ತೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ' ನೀವು ಕಾರಿನ ಹಿಂಬದಿ ವಿಂಡೋದ ಮೇಲಿರುವ ಸ್ಟಿಕ್ಕರ್ ಅನ್ನು ತೆಗೆದು ಹಾಕಬೇಕಿತ್ತು. ಅದು ನಿಮ್ಮ ಕಾರಿಗೆ ಸಂಬಂಧಿಸಿದ ಸೂಕ್ಷ್ಮವಾದ ಮಾಹಿತಿಗಳನ್ನು ಹೊಂದಿರುತ್ತದೆ. ಯಾವುದಾದರೂ ಟೆಕ್ಕಿ ಕೈಗೆ ಈ ಸೂಕ್ಷ್ಮ ಮಾಹಿತಿಗಳು ಸಿಕ್ಕಿದರೆ ನಿಮ್ಮ ಕಾರನ್ನು ಕಳವು ಮಾಡುವುದು ಅವರಿಗೆ ಕೆಲ ಸೆಕೆಂಡ್‌ನ ಕೆಲಸ ಅಷ್ಟೇ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ವೀಡಿಯೋ ಇಲ್ಲಿದೆ ನೋಡಿ:

View post on Instagram