ಮಹಾವಿಷ್ಣುವಿಗೆ ಇಬ್ಬರು ಪತ್ನಿಯರಿದ್ದರೂ, ಅವನ ಅವತಾರವಾದ ರಾಮನಿಗೆ ಒಬ್ಬಳೇ ಪತ್ನಿ ಏಕೆ? ಪುರಾಣದ ಕಥೆಗಳಲ್ಲಿ ಈ ರಹಸ್ಯಕ್ಕೆ ಉತ್ತರ ಇದೆ. 

ರಾಮಾಯಣದ ಶ್ರೀರಾಮನನ್ನು ಮಹಾವಿಷ್ಣುವಿನ ಅವತಾರ ಎಂದು ಪುರಾಣಗಳು ಕೊಂಡಾಡುತ್ತವೆ. ಹಿಂದೂಗಳು ಹಾಗೆಯೇ ನಂಬಿ ಆರಾಧಿಸುತ್ತ ಬಂದಿದ್ದಾರೆ. ಮಹಾವಿಷ್ಣುವಿಗೆ ಇಬ್ಬರು ಹೆಂಡಿರು- ಶ್ರೀದೇವಿ (ಲಕ್ಷ್ಮಿದೇವಿ) ಹಾಗೂ ಭೂದೇವಿ. ಆದರೆ ವಿಷ್ಣುವಿನ ಅವತಾರವಾದ ಶ್ರೀರಾಮನಿಗೇಕೆ ಸೀತೆ ಒಬ್ಬಳೇ ಹೆಂಡತಿ? ಸೀತೆಯು ಲಕ್ಷ್ಮಿದೇವಿಯ ಅವತಾರ ಎನ್ನಲಾಗುತ್ತದೆ. ಹಾಗಾದರೆ ಭೂದೇವಿ ಯಾಕೆ ಜೊತೆಯಾಗಿ ಬರಲಿಲ್ಲ?

ಇದಕ್ಕೆ ಹಲವು ಉತ್ತರ ಕೊಡಬಹುದು. ಮೊದಲನೆಯದಾಗಿ, ಮಾನವನಾಗಿ ಜನಿಸುವಂತೆ ಶಾಪ ಇದ್ದುದು ವಿಷ್ಣುವಿಗೆ ಮಾತ್ರ. ಆ ಕತೆ ಹೀಗೆ- ಮತ್ಸ್ಯ ಪುರಾಣದ ಪ್ರಕಾರ, ದೇವತೆಗಳ ಮತ್ತು ರಾಕ್ಷಸರ ನಡುವೆ ಆಗಾಗ ಯುದ್ಧ ನಡೆಯುತ್ತಿತ್ತು. ದೇವತೆಗಳ ವಿಶಿಷ್ಟ ಶಕ್ತಿಯಿಂದ ರಾಕ್ಷಸರು ಸೋಲನ್ನು ಅನುಭವಿಸುತ್ತಿದ್ದರು. ಇದರಿಂದ ಅವಮಾನಗೊಂಡ ರಾಕ್ಷಸರ ಗುರು ಶುಕ್ರಾಚಾರ್ಯರು ಶಿವನನ್ನು ಧ್ಯಾನಿಸಿ, ರಾಕ್ಷಸರನ್ನು ಅಜೇಯರನ್ನಾಗಿಸುವ ಮೃತಸಂಜೀವಿನಿ ಸ್ತೋತ್ರವನ್ನು ಶಿವನಿಂದ ಪಡೆದುಕೊಂಡರು. ಶುಕ್ರಾಚಾರ್ಯರು ತನ್ನ ತಂದೆ ಭೃಗು ಮಹರ್ಷಿಯ ಆಶ್ರಮದಲ್ಲಿ ರಾಕ್ಷಸರಿಗೆ ಆಶ್ರಯವನ್ನು ನೀಡಿದರು. ಇದನ್ನರಿತ ದೇವತೆಗಳು ಶುಕ್ರಾಚಾರ್ಯರ ಅನುಪಸ್ಥಿತಿಯಲ್ಲಿ ಭೃಗು ಮಹರ್ಷಿಯ ಆಶ್ರಮದ ಬಳಿ ಬಂದರು.

ಆಗ ರಾಕ್ಷಸರು ಭೃಗು ಮಹರ್ಷಿಗಳ ಪತ್ನಿಯಲ್ಲಿ ಆಶ್ರಯವನ್ನು ಕೇಳುತ್ತಾರೆ. ಭೃಗು ಮಹರ್ಷಿಗಳ ಪತ್ನಿಯು ಇಂದ್ರನಿಂದ ಅಪಾರ ಶಕ್ತಿಯನ್ನು ಪಡೆದುಕೊಂಡಿದ್ದಳು. ಆಕೆಯ ಶಕ್ತಿಯಿಂದ ದೇವತೆಗಳು ಕಂಗಾಲಾದರು. ವಿಷ್ಣುವಿನ ಸಹಾಯವನ್ನು ಕೇಳಿದರು. ವಿಷ್ಣು ಇಂದ್ರನ ಬಳಿ ತನ್ನ ದೇಹವನ್ನು ಸೇರಿಕೋ, ಅದರಿಂದ ಭೃಗುವಿನ ಪತ್ನಿಯ ಶಕ್ತಿಯನ್ನು ನಾಶಗೊಳಿಸಬಹುದೆಂದು ಹೇಳುತ್ತಾರೆ. ಆಗ ಭೃಗುವಿನ ಪತ್ನಿ ಒಂದು ವೇಳೆ ಹಾಗೇನಾದರೂ ಮಾಡಿದರೆ ಇಬ್ಬರನ್ನೂ ಸುಟ್ಟು ಬಿಡುತ್ತೇನೆ ಎನ್ನುತ್ತಾಳೆ. ಇದರಿಂದ ಇಂದ್ರನು ವಿಷ್ಣುವಿನ ಬಳಿ ಆಕೆಯನ್ನು ಸಂಹರಿಸಲು ಹೇಳುತ್ತಾನೆ. ವಿಷ್ಣು ತಡಮಾಡದೆ ತನ್ನ ಸುದರ್ಶನ ಚಕ್ರದಿಂದ ಭೃಗುವಿನ ಪತ್ನಿಯ ತಲೆಯನ್ನು ಕತ್ತರಿಸುತ್ತಾನೆ. ಭೃಗು ಮಹರ್ಷಿಗಳು ಹಿಂದಿರುಗಿದಾಗ ತನ್ನ ಪತ್ನಿಯ ಸಾವನ್ನು ಕಂಡು ಕೋಪಗೊಂಡು, ವಿಷ್ಣುವಿಗೆ ಶಪಿಸುತ್ತಾರೆ. ನೀನು ಭೂಮಿಯಲ್ಲಿ ಅನೇಕ ಬಾರಿ ಜನ್ಮ ತಾಳಬೇಕು. ಸಾವಿನ ಮತ್ತು ಲೌಕಿಕ ಜೀವನದ ನೋವನ್ನು ಅನುಭವಿಸುವಂತಾಗಬೇಕು ಎಂದು ಶಪಿಸುತ್ತಾರೆ. ಇದರಿಂದ ವಿಷ್ಣು ರಾಮನಾಗಿ, ಕೃಷ್ಣನಾಗಿ ಭೂಮಿಯಲ್ಲಿ ಮತ್ತೆ ಮತ್ತೆ ಜನಿಸುತ್ತಾನೆ. ಆದರೆ ಲಕ್ಷ್ಮಿಗಾಗಲೀ, ಭೂದೇವಿಗಾಗಲೀ ಯಾವುದೇ ಶಾಪವಿಲ್ಲ. ಭೂಭಾರಹರಣದಲ್ಲಿ ವಿಷ್ಣುವಿಗೆ ಸಹಾಯ ಮಾಡಲು ಲಕ್ಷ್ಮಿದೇವಿ ಸೀತೆಯಾಗಿ ಜನಿಸುತ್ತಾಳೆ.

ಇನ್ನೊಂದು ಕತೆ ವೇದಾವತಿಯದ್ದು. ವೇದಾವತಿಯು ವಿಷ್ಣು ದೇವನ ಮಹಾನ್‌ ಭಕ್ತೆ. ಅವನನ್ನು ತನ್ನ ಪತಿಯನ್ನಾಗಿ ಪಡೆದುಕೊಳ್ಳಲು ಕಠಿಣ ತಪಸ್ಸನ್ನು ಮಾಡುತ್ತಿದ್ದಳು. ವೇದಾವತಿಯು ತಪಸ್ಸು ಮಾಡುತ್ತಿದ್ದ ಮಾರ್ಗದಲ್ಲಿ ರಾವಣ ಹಾದು ಹೋಗುತ್ತಿದ್ದ. ಅವನ ಕಣ್ಣುಗಳು ವೇದಾವತಿಯ ಮೇಲೆ ಬಿದ್ದವು. ಆಕೆಯ ಸೌಂದರ್ಯವನ್ನು ನೋಡಿ ಮರುಳಾಗಿ, ಅವಳನ್ನು ಪಡೆದುಕೊಳ್ಳಬೇಕೆಂದು ಆಕೆಯ ತಪಸ್ಸನ್ನು ಭಂಗ ಮಾಡಲು ಮುಂದಾದ. ರಾವಣನ ಈ ನೀಚ ಕೃತ್ಯದಿಂದ ಮನನೊಂದ ವೇದಾವತಿ ಬೆಂಕಿಗೆ ಹಾರಿ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾಳೆ. ಈ ಸಮಯದಲ್ಲಿ ವೇದಾವತಿ ನಿನ್ನ ಸಾವಿಗೆ ಮುಂದಿನ ಜನ್ಮದಲ್ಲಿ ನಾನೇ ಕಾರಣಳಾಗುತ್ತೇನೆ ಎಂದು ಶಾಪವನ್ನು ನೀಡುತ್ತಾಳೆ. ಅದೇ ವೇದಾವತಿ ಮತ್ತೆ ಸೀತೆಯಾಗಿ ಜನಿಸಿ ರಾಮನನ್ನು ಮದುವೆಯಾಗಿ, ರಾವಣನ ಸಾವಿಗೆ ಕಾರಣಳಾದಳು. ಈ ವೇದಾವತಿಯೂ ಲಕ್ಷ್ಮಿಯ ಅವತಾರ. ಇಲ್ಲಿಯೂ ಭೂದೇವಿ ಇಲ್ಲ. ಶ್ರೀರಾಮನನು ಭೂಪತಿಯೇ (ರಾಜ) ಆದುದರಿಂದ, ಅವನು ಭೂದೇವಿಗೂ ಪತಿ ಎಂದುಕೊಳ್ಳಬಹುದು.