ಶನೀಶ್ವರನ ಕೆಂಡಗಣ್ಣಿನಿಂದ ಪಾರಾಗಲು ಹಲವರು ಎಳ್ಳು ದಾನ ಮಾಡುತ್ತಾರೆ, ಶನಿವಾರ ಶನೀಶ್ವರನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಬುದ್ಧಿವಂತರು, ಆಂಜನೇಯನ ಮೊರೆ ಹೋಗುತ್ತಾರೆ. ಯಾಕೆಂದರೆ ಹನುಮಂತನ ಮುಂದೆ ಶನಿದೇವರ ಆಟ ನಡೆಯುವುದಿಲ್ಲ. ಅದೇಕೆ? 

ಶನಿದೇವರು, ಶನೀಶ್ವರ ಎಂದರೆ ಎಲ್ಲರಿಗೂ ಆತಂಕ. ಜ್ಯೋತಿಷ್ಯ, ಗ್ರಹಚಾರ ವಿಚಾರ ಗೊತ್ತಿರುವ ಎಲ್ಲರಿಗೂ ಶನೀಶ್ವರನ ಪ್ರಭಾವ ಗೊತ್ತಿರುವುದೇ. ಶನಿಯ ಸಾಡೇಸಾತ್‌, ಪಂಚಮ ಶನಿ, ಅಷ್ಟಮ ಶನಿ- ಇವೆಲ್ಲವೂ ಜಾತಕನಿಗೆ ಸಾಕಷ್ಟು ಕಾಟ ನೀಡುವಂಥವೇ ಎಂಬುದು ಗೊತ್ತಿರುವ ವಿಚಾರವೇ. ಶನಿದೇವನನ್ನು ಕರ್ಮಫಲವನ್ನು ಕೊಡುವವನು ಎಂದು ಕರೆಯುತ್ತಾರೆ. ಶನಿದೇವನ ವಕ್ರ ದೃಷ್ಟಿ ಯಾರ ಮೇಲೆ ಬೀಳುತ್ತದೋ ಅವರು ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಶನೀಶ್ವರನ ಕೆಂಡಗಣ್ಣಿನಿಂದ ಪಾರಾಗಲು ಹಲವರು ಎಳ್ಳು ದಾನ ಮಾಡುತ್ತಾರೆ, ಶನಿವಾರ ಶನೀಶ್ವರನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಆದರೆ ಬುದ್ಧಿವಂತರು, ಆಂಜನೇಯನ ಮೊರೆ ಹೋಗುತ್ತಾರೆ. ಯಾಕೆಂದರೆ ಹನುಮಂತನ ಮುಂದೆ ಶನಿದೇವರ ಆಟ ನಡೆಯುವುದಿಲ್ಲ ಎಂಬ ಸತ್ಯ. ಶನಿದೇವರು, ಹನುಮಂತನ ಭಕ್ತರಿಗೆ ಏಕೆ ತೊಂದರೆ ಕೊಡುವುದಿಲ್ಲ?

ಭಗವಾನ್‌ ಹನುಮಂತ ಸೀತಾ ಮಾತೆಯನ್ನು ಹುಡುಕಿಕೊಂಡು ಲಂಕೆಯನ್ನು ತಲುಪಿದಾಗ, ಶನಿದೇವರು ಅಲ್ಲಿ ರಾವಣನ ಸೆರೆಮನೆಯಲ್ಲಿ ಇದ್ದನಂತೆ. ಜೈಲಿನಲ್ಲಿ ಆತ ತಲೆಕೆಳಗಾಗಿ ನೇತಾಡುತ್ತಿದ್ದ. ಕಾರಣ, ರಾವಣನು ತನ್ನ ಯೋಗಬಲದಿಂದ ಶನಿಯೊಂದಿಗೆ ಇನ್ನೂ ಇತರ ಅನೇಕ ಗ್ರಹಗಳನ್ನು ಬಂಧಿಸಿದ್ದ. ಆಗ ಹನುಮಂತನು ಶನಿ ಮಹಾರಾಜನನ್ನು ರಾವಣನ ಸೆರೆಯಿಂದ ಮುಕ್ತಗೊಳಿಸಿದ. ಇದರಿಂದ ಸಂತೋಷಗೊಂಡ ಶನಿದೇವರು, ಹನುಮಂತನಿಗೆ ವರವನ್ನು ಕೇಳಲು ಹೇಳಿದ. ಆಗ ಹನುಮಂತನು, ನನ್ನನ್ನು ಪೂಜಿಸುವವರಿಗೆ ಎಂದಿಗೂ ತೊಂದರೆ ಕೊಡುವುದಿಲ್ಲ ಎಂಬ ಭರವಸೆಯನ್ನು ನೀಡು ಎಂದು ಕೇಳಿಕೊಂಡ. ಅದಕ್ಕಾಗಿಯೇ ಶನಿ ಅಥವಾ ಸಾಡೇಸಾತಿ ನಿವಾರಣೆಗಾಗಿ ಹನುಮಂತನನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ.

ಇನ್ನೊಮ್ಮೆ, ಪವನಸುತನು ರಾಮಜಪದಲ್ಲಿ ಮಗ್ನನಾಗಿದ್ದ. ಆಗ ಶನಿದೇವರು ಅಲ್ಲಿಂದ ಹಾದುಹೋದ. ಅಹಂಕಾರದಿಂದ, ಹನುಮಂತನು ಮಾಡುತ್ತಿರುವ ರಾಮ ಪಠಣವನ್ನು ತಡೆಯಲು ಪ್ರಯತ್ನಿಸಿದ. ಹನುಮಂತನ ಗಮನವನ್ನು ಬೇರೆಡೆಗೆ ಸೆಳೆಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ. ತನ್ನ ಶಕ್ತಿಯನ್ನು ತೋರಿಸಿ ಹನುಮನನ್ನು ಹೆದರಿಸಲು ಪ್ರಯತ್ನಿಸಿದ. ಆದರೆ ಹನುಮಂತನು ಶನಿಯ ಈ ಆಟಕ್ಕೆ ಮಣಿಯಲಿಲ್ಲ. ನಾನು ಪ್ರಸ್ತುತ ನನ್ನ ಪ್ರೀತಿಯ ಶ್ರೀರಾಮನನ್ನು ಧ್ಯಾನಿಸುತ್ತಿದ್ದೇನೆ. ದಯವಿಟ್ಟು ನನ್ನ ಶಾಂತಿಗೆ ಭಂಗ ತರಬೇಡ ಎಂದು ಹನುಮಂತನು ಶನಿದೇವನಲ್ಲಿ ಕೇಳಿಕೊಂಡ. ಹನುಮಂತನು ಎಷ್ಟೇ ಹೇಳಿದರೂ ಕೇಳದ ಶನಿದೇವರು ಹನುಮಂತನ ತೋಳನ್ನು ಹಿಂಡಿದ. ಬಜರಂಗಬಲಿ ಕೋಪದಿಂದ ಶನಿದೇವರನ್ನು ತನ್ನ ಬಾಲದಲ್ಲಿ ಸುತ್ತಿಕೊಂಡ.

ಇಷ್ಟಾದರೂ ಕೂಡ ಬುದ್ಧಿ ಕಲಿಯದ ಶನಿಯು ಭಗವಾನ್‌ ರಾಮನನ್ನು ಹೀಯಾಳಿಸಲು ಮುಂದಾದ. ನಿನ್ನಿಂದ ಮಾತ್ರವಲ್ಲ, ನಿನ್ನ ಆ ಶ್ರೀರಾಮನಿಂದ ಕೂಡ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲವೆಂದು ಅಹಂಕಾರದ ಮಾತುಗಳನ್ನಾಡಿದ. ಆಗ ಕೋಪದಿಂದ ಹನುಮಂತನು ಶನಿಯನ್ನು ತನ್ನ ಬಾಲದಲ್ಲಿ ಸುತ್ತಿ ಕಲ್ಲಿನ ಮೇಲೆ ಅಪ್ಪಳಿಸಿದ. ಇದರಿಂದ ಶನಿದೇವರ ಸ್ಥಿತಿ ಶೋಚನೀಯವಾಯಿತು. ನೊಂದ ಶನಿದೇವರು ಹನುಮಂತನ ಬಳಿ ಕ್ಷಮೆ ಕೇಳಿದ. ಆಗ ಹನುಮಂತನು ಶನಿಯನ್ನು ಕುರಿತು, ಭವಿಷ್ಯದಲ್ಲಿ ಇಂತಹ ದುರಹಂಕಾರವನ್ನು ಎಂದಿಗೂ ತೋರಬೇಡ ಮತ್ತು ನನ್ನ ಭಕ್ತರಿಗೆ ಕಿರುಕುಳ ನೀಡಬೇಡ ಎಂದು ಹೇಳಿದ. ಅಂದಿನಿಂದ ಶನಿಯು ಹನುಮಂತನ ಆರಾಧಕರಿಗೆ ತೊಂದರೆ ಕೊಡುವುದಿಲ್ಲ.

ಈ ಮೇಲಿನ ಕಾರಣಗಳಿಂದ ಶನಿಯು ಹನುಮಂತನ ಭಕ್ತರಿಗೆ ಯಾವುದೇ ಥರದ ತೊಂದರೆಯನ್ನು ನಿಡುವುದಿಲ್ಲ. ಶನಿ ದೋಷಕ್ಕೆ ಒಳಗಾದ ವ್ಯಕ್ತಿಯು ಹನುಮಂತನನ್ನು ಪೂಜಿಸುವುದರಿಂದ ಅವರಿಗೂ ಕೂಡ ಶನಿಯು ಸಮಸ್ಯೆಗಳನ್ನು ನೀಡದೆ ಅವರಿಗಿರುವ ದೋಷಗಳನ್ನು ನಿವಾರಿಸುತ್ತಾನೆ. ಹಾಗಾಗಿ, ಶನಿ ದೋಷವಿರುವವರು ಇದರಿಂದ ಮುಕ್ತಿ ಹೊಂದಲು ಹನುಮಂತನನ್ನು ಪೂಜಿಸಬೇಕು.