ಆಚಾರ್ಯ ಚಾಣಕ್ಯರು ಮನುಷ್ಯನ ಆರೋಗ್ಯದ ರಹಸ್ಯ ಆಹಾರದಲ್ಲಿದೆ ಎನ್ನುತ್ತಾರೆ. ಆದರೆ ಆಹಾರ ಸೇವಿಸುವಾಗ ಮೂರು ಎಚ್ಚರಿಕೆ ಇರಬೇಕಂತೆ. ಚಾಣಕ್ಯ ನೀತಿ (Chanakya Niti) ಪ್ರಕಾರ ಅದು ಯಾವುದು?

ನಾವು ಬದುಕುತ್ತಿರುವುದು ಆಹಾರದಿಂದ, ಆಹಾರಕ್ಕಾಗಿ. ನೀರು ಕೂಡ ಒಂದು ರೀತಿಯಲ್ಲಿ ಆಹಾರವೇ. ರುಚಿಕರ ಆಹಾರ ಎಲ್ಲ ಜೀವಿಗಳ ಮೊದಲ ಆದ್ಯತೆ. ಜೀವನದ ಮೂಲಾಧಾರವೇ ಅದು. ಆಹಾರ ಸಂತೋಷ ಹಾಗೂ ಆರೋಗ್ಯದ ಮೂಲವಾಗಬೇಕು. ಆದರೆ ಇಂದು ಅದು ಒತ್ತಡದ ಬದುಕಿನಲ್ಲಿ ಅನಾರೋಗ್ಯದ ಮೂಲವೂ ಆಗುತ್ತಿದೆ. ಆಚಾರ್ಯ ಚಾಣಕ್ಯರು ಆಹಾರದ ಬಗ್ಗೆಯೂ ಹೇಳಿದ್ದಾರೆ. ಆಹಾರ ಸೇವನೆಯ ಬಗ್ಗೆ ಅವರು ಒಂದು ಕತೆಯನ್ನು ಹೇಳುತ್ತಾರೆ. ಅದು ಹೀಗಿದೆ:

ಒಮ್ಮೆ ದೇವವೈದ್ಯನಾದ ಧನ್ವಂತರಿಯು, ಮಹಾತ್ಮನೂ ಶ್ರೇಷ್ಠ ವೈದ್ಯನೂ ಆದ ಚರಕನನ್ನು ಪರೀಕ್ಷಿಸುವುದಕ್ಕಾಗಿ ಆಗಮಿಸಿದ. ಚರಕ ತನ್ನ ಆಶ್ರಮದಲ್ಲಿ ಮರವೊಂದರ ಕೆಳಗೆ ವಿಶ್ರಮಿಸುತ್ತಿದ್ದ. ಧನ್ವಂತರಿ ಒಂದು ಹಕ್ಕಿಯ ರೂಪವನ್ನು ತಾಳಿ ಹಾರಿ ಬಂದು ಆ ಮರದ ಮೇಲೆ ಕುಳಿತು “ಕೋಃರುಕ್, ಕೋಃರುಕ್, ಕೋಃರುಕ್?ʼʼ ಎಂದು ಮೂರು ಸಲ ಕೂಗಿದ. ಇದನ್ನು ಕೇಳಿ ಚರಕ ಆಶ್ಚರ್ಯಚಕಿತನಾದ. ನಂತರ ಸಾವಧಾನವಾಗಿ ಉತ್ತರಿಸಿದ- "ಹಿತಭುಕ್, ಮಿತಭುಕ್, ಋತುಭುಕ್, ಸೋಃರುಕ್” ಎಂದು.‌ ಇದನ್ನು ಕೇಳಿ ಧನ್ವಂತರಿ ತೃಪ್ತನಾಗಿ ಹಾರಿಹೋದ. ಹಾಗಾದರೆ ಧನ್ವಂತರಿ ಕೇಳಿದ್ದೇನು, ಚರಕ ಹೇಳಿದ್ದೇನು?

ಧನ್ವಂತರಿ ಕೇಳಿದ್ದಿಷ್ಟೆ- ʼಕೋಃರುಕ್‌ʼ ಎಂದರೆ ʼರೋಗವಿಲ್ಲದವನು ಯಾರು?ʼ ಎಂದು. ಇದನ್ನೇ ಮೂರು ಸಲ ಕೇಳುತ್ತಾನೆ. ಇದಕ್ಕೆ ಮೂರು ಗುಣಗಳನ್ನು ಹೊಂದಿದವನು ರೋಗವಿಲ್ಲದವನು ಎಂದು ಚರಕ ಉತ್ತರಿಸುತ್ತಾನೆ. ಆ ಮೂರು ಗುಣಗಳ ವಿವರಣೆ ಕೆಳಗಿದೆ.

ಹಿತಭುಕ್

ಹಿತವಾದುದನ್ನು ಸೇವಿಸುವವನು. ಕೆಲವರು ಜಂಕ್‌ ಫುಡ್‌ ಸೇವಿಸಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರೆ. ಸ್ವೀಟ್ ಸೇವಿಸಿದರೆ ಆಗುವುದಿಲ್ಲ ಎಂದು ಗೊತ್ತಿದ್ದರೂ ಸೇವಿಸಿ ಮಧುಮೇಹ ಉಲ್ಬಣಗೊಳಿಸಿಕೊಳ್ಳುತ್ತಾರೆ. ಕರಿದ ಪದಾರ್ಥ ಹೆಚ್ಚು ಸೇವಿಸಿ ರಕ್ತನಾಳಗಳು ಕಟ್ಟಿಕೊಳ್ಳುವಂತೆ ಮಾಡಿ ಹೃದಯ ಕಾಯಿಲೆಗೆ ತುತ್ತಾಗುತ್ತಾರೆ. ಜಠರ, ಕರುಳು, ಲಿವರ್‌ ಇತ್ಯಾದಿಗಳು ಸಹಿಸಿಕೊಳ್ಳಬಹುದಾದ್ದು, ಜೀರ್ಣವಾಗಬಹುದಾದ್ದು, ಚೆನ್ನಾಗಿ ಪಚನವಾಗಿ ರಕ್ತಕ್ಕೆ ಸೇರಿ ಶಕ್ತಿಯಾಗುವುದನ್ನು ಮಾತ್ರ ಸೇವಿಸಬೇಕು.

ಮಿತಭುಕ್‌

ಹಸಿವಾಯಿತೆಂದು ಹೊಟ್ಟೆ ಒಡೆಯುವಂತೆ ಸೇವಿಬಾರದು. ಹೊಟ್ಟೆಯಲ್ಲಿ ಯಾವಾಗಲೂ ಸ್ವಲ್ಪ ಖಾಲಿ ಜಾಗ ಬಿಟ್ಟಿರಬೇಕು. ಇಂಥವರು ಯಾವಾಗಲೂ ಆರೋಗ್ಯವಾಗಿರುತ್ತಾರೆ. ಇದರಿಂದಾಗಿ ಅವರು ದೀರ್ಘಕಾಲ ಬದುಕುತ್ತಾರೆ ಎಂದು ಹೇಳಿದ್ದಾರೆ. ಆದ್ದರಿಂದ, ವ್ಯಕ್ತಿಯು ತನ್ನ ಹಸಿವಿಗಿಂತ ಸ್ವಲ್ಪ ಕಡಿಮೆ ತಿನ್ನಬೇಕು. ಅಂತಹ ವ್ಯಕ್ತಿಯು ಜೀವನದಲ್ಲಿ ಅನೇಕ ರೋಗಗಳಿಂದ ಸುರಕ್ಷಿತವಾಗಿ ಉಳಿಯುತ್ತಾನೆ. ಅವನನ್ನು ಯಾವುದೇ ರೋಗವು ಕೂಡ ಬಾಧಿಸುವುದಿಲ್ಲ. ಅತಿಯಾಗಿ ತಿನ್ನುವುದು ಅನಾರೋಗ್ಯಕ್ಕೆ ದಾರಿ ಮಾಡಿಕೊಡುವುದು.

ಋತಭುಕ್‌

ಸಮಯಕ್ಕೆ ಅನುಸಾರವಾಗಿ, ಹಸಿವಾದಾಗ ಮಾತ್ರ ಭೋಜನ ಮಾಡಬೇಕು. ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ, ಒಬ್ಬ ವ್ಯಕ್ತಿಯು ದಿನದಲ್ಲಿ ತನಗಾಗಿ, ತನ್ನ ಆಹಾರ ಸೇವನೆಗಾಗಿ ಸಮಯವನ್ನು ಮೀಸಲಿಡಬೇಕು. ಆತನಿಗೆ ಅದೆಷ್ಟೇ ಕೆಲಸವಿದ್ದರೂ ಆ ಸಮಯವನ್ನು ತನ್ನ ಕಾರ್ಯಕ್ಕಾಗಿ ಇಟ್ಟುಕೊಂಡಿರಲೇಬೇಕು. ಏಕೆಂದರೆ ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಕಡೆಗೂ ಗಮನ ಹರಿಸುವುದು ಮುಖ್ಯ. ಇದರಿಂದ ಮಾತ್ರ ಅವನು ಆರೋಗ್ಯವಂತನಾಗಿರಲು ಸಾಧ್ಯ. ಹಸಿವಿಲ್ಲದಿದ್ದರೂ ಊಟ ಮಾಡುವವನನ್ನು ಆಹಾರವೇ ತ್ಯಜಿಸುತ್ತದೆ.

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ, ಯಾವಾಗಲೂ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ವ್ಯಕ್ತಿಯು ಯಾವಾಗಲೂ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಾನೆ. ಏಕೆಂದರೆ ನಿಮ್ಮ ದೇಹದ ಸಾಮರ್ಥ್ಯಕ್ಕಿಂತ ಹೆಚ್ಚು ತಿನ್ನುವುದು ರೋಗಗಳನ್ನು ಆಹ್ವಾನಿಸುತ್ತದೆ. ಅದೇ ಸಮಯದಲ್ಲಿ, ಮೊದಲ ಊಟವನ್ನು ಜೀರ್ಣಿಸಿದ ನಂತರ ಮಾತ್ರ ಎರಡನೇ ಊಟವನ್ನು ಅಥವಾ ಆಹಾರವನ್ನು ತೆಗೆದುಕೊಳ್ಳಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಆಹಾರ ಇದೆ ಸಿಕ್ಕ ಸಿಕ್ಕ ಹಾಗೆಲ್ಲಾ ತಿಂದರೆ ಅದರಿಂದ ನಿಮ್ಮ ಆರೋಗ್ಯ ಹಾಳಾಗುವುದು. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅನಾರೋಗ್ಯಕ್ಕೆ ತುತ್ತು ಮಾಡಬಹುದು. ಇದು ವ್ಯಕ್ತಿಯ ದೇಹವನ್ನು ಕಾಯಿಲೆಗೆ ಆಹ್ವಾನಿಸುತ್ತದೆ.