ಮಹಾಭಾರತ ಯುದ್ಧದಲ್ಲಿ ಕರ್ಣನ ಎಲ್ಲ ಮಕ್ಕಳು ಹತರಾದರೂ, ಒಬ್ಬ ಮಗ ಮಾತ್ರ ಬದುಕುಳಿದ. ಯುದ್ಧದ ನಂತರ ಪಾಂಡವರಿಂದ ದತ್ತು ಪಡೆಯಲ್ಪಟ್ಟ ಇವನು ಮುಂದೆ ಅರ್ಜುನನ ಪ್ರಿಯ ಶಿಷ್ಯನಾಗಿ ಬೆಳೆದ. ಯಾರಿವನು? 

ಮಹಾಭಾರತದ ಕತೆಯಲ್ಲಿ ನಡೆಯುವ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನು ಅರ್ಜುನನಿಂದ ಹತನಾಗುತ್ತಾನೆ. ಕರ್ಣನ ಮಗನಾದ ವೃಷಸೇನನನ್ನು ಕೂಡ ಅರ್ಜುನನೇ, ಕರ್ಣನಿಗಿಂತ ಮೊದಲಿನ ಯುದ್ಧದಲ್ಲಿ ಕೊಲ್ಲುತ್ತಾನೆ. ಇದನ್ನು ಮೂಲ ವ್ಯಾಸರು ಬರೆದ ಮಹಾಭಾರತ ಎಂದು ಹೇಳಲಾಗುತ್ತದೆ. ಆದರೆ ಈ ಕತೆಗೆ ಬೇರೆ ಬೇರೆ ಆವೃತ್ತಿಗಳಿವೆ. ಕರ್ಣನಿಗೆ ಇಬ್ಬರು ಹೆಂಡತಿಯರು ಹಾಗೂ 10 ಜನ ಗಂಡು ಮಕ್ಕಳಿದ್ದರು ಎಂಬ ಕತೆಯೂ ಇದೆ. ಇವರಲ್ಲಿ, ಕುರುಕ್ಷೇತ್ರ ಯುದ್ಧದಲ್ಲಿ 9 ಗಂಡುಮಕ್ಕಳು ಮಡಿದರು. ಬದುಕುಳಿದವನು ವೃಷಕೇತು ಎಂಬ ಒಬ್ಬನೇ ಮಗ. ಈ ಮಗನೇ ಮುಂದೆ ಅರ್ಜುನನ ಪ್ರಿಯ ಶಿಷ್ಯನಾದವನು. ಈ ಕತೆಯನ್ನು ಈಗ ನೋಡೋಣ.

ವೃಷಾಲಿ ಎಂಬವಳು ಅವಳು ಕರ್ಣನ ಮೊದಲ ಹೆಂಡತಿ. ಅವಳು ದುರ್ಯೋಧನನ ಸಾರಥಿ ಸತ್ಯಸೇನನ ಸಹೋದರಿ. ಅವಳು ಅತ್ಯಂತ ಉನ್ನತ ವ್ಯಕ್ತಿತ್ವದ ಮಹಿಳೆಯಾಗಿದ್ದಳು ಮತ್ತು ಅದಕ್ಕಾಗಿಯೇ ಕರ್ಣನ ತಂದೆ ಅಧಿರಥನು ತನ್ನ ಮಗನನ್ನು ವೃಷಾಲಿಯೊಂದಿಗೆ ಮದುವೆಯಾಗಬೇಕೆಂದು ಬಯಸಿದನು. ಕರ್ಣನ ಮರಣದ ನಂತರ ಅವಳು ಸತಿ ವ್ರತವನ್ನು ಮಾಡಿದಳು. ಅವರಿಗೆ ಎಂಟು ಗಂಡು ಮಕ್ಕಳಿದ್ದರು.

ಇವರಲ್ಲಿ ವೃಷಸೇನ ಕರ್ಣನ ಹಿರಿಯ ಮಗ. ಅಭಿಮನ್ಯುವಿನ ಮರಣದ ನಂತರ, ಅರ್ಜುನನು ಹೀಗೆ ಶಪಥ ಮಾಡಿದ- ನಾನು ಇಲ್ಲದಿದ್ದಾಗ ಕರ್ಣನು ನನ್ನ ಮಗನನ್ನು (ಅಭಿಮನ್ಯು) ಕೊಂದನು. ಪ್ರತೀಕಾರವಾಗಿ ನಾನು ಅವನ ಮಗನನ್ನು ಅವನ ಮುಂದೆಯೇ ಕೊಲ್ಲುತ್ತೇನೆ ಎಂದು. ಮುಂದೆ ಯುದ್ಧದ ಹದಿನೇಳನೇ ದಿವಸ ಕರ್ಣನ ಮುಂದೆಯೇ ಯುದ್ಧ ಮಾಡಿ ವೃಷಸೇನನನ್ನು ಕೊಂದನು. ಮಗನನ್ನು ಉಳಿಸಿಕೊಳ್ಳಲು ಕರ್ಣನಿಂದ ಆಗಲಿಲ್ಲ.

ಇನ್ನುಳಿದ ಏಳು ಮಕ್ಕಳಲ್ಲಿ ಸುಶೇಣ, ಭಾನುಸೇನ ಹಾಗೂ ಸತ್ಯಸೇನರು ನಕುಲನಿಂದ ಕೊಲ್ಲಲ್ಪಟ್ಟರು. ಸತ್ಯಸಂಧ ಹಾಗೂ ಶತ್ರುಂಜಯರನ್ನು ಅರ್ಜುನನೇ ಕೊಂದ. ಪ್ರಸೇನಜಿತ್ ಎಂಬಾತ ಸಾತ್ಯಕಿಯಿಂದ ಕೊಲ್ಲಲ್ಪಟ್ಟ.

ವೃಷಕೇತು ಮುಂದೆ ಏನಾದ?

ಇನ್ನು ವೃಷಕೇತು ಎಂಬ ಮಗ ಮಹಾಭಾರತ ಯುದ್ಧದಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಬದುಕುಳಿದ. ಕರ್ಣನ ಏಕೈಕ ಜೀವಂತ ಮಗ. ಅವನು ರಾಜ ಯವನಾಥನ ಮಗಳನ್ನು ಮದುವೆಯಾದನು. ಯುದ್ಧದ ನಂತರ ಪಾಂಡವರು ಅವನನ್ನು ದತ್ತು ಪಡೆದರು. ಅರ್ಜುನನು ಅವನಿಗೆ ಬಿಲ್ಲುಗಾರಿಕೆಯಲ್ಲಿ ತರಬೇತಿ ನೀಡಿದನು. ಅವನು ಇತರ ಆಯುಧಗಳನ್ನು ನಿರ್ವಹಿಸುವಲ್ಲಿಯೂ ಸಹ ಬಹಳ ನಿಪುಣನಾಗಿದ್ದ. ಭೀಮನು ಅವನಿಗೆ ಗದಾಯುದ್ಧದ ತರಬೇತಿ ನೀಡಿದ. ಅಶ್ವಮೇಧ ಯಾಗದ ಜೈತ್ರಯಾತ್ರೆಯ ಸಂದರ್ಭದಲ್ಲಿ ಬಭ್ರುವಾಹನನ ಜೊತೆ ಸೆಣಸಾಡಿ ಯುದ್ಧದಲ್ಲಿ ಅವನು ಕೊಲ್ಲಲ್ಪಟ್ಟ. ನಂತರ ಅರ್ಜುನನ ಇನ್ನೊಬ್ಬ ಪತ್ನಿ ಉಲೂಪಿ, ನಾಗಮಣಿಯಿಂದ ಅವನ ಜೀವವನ್ನು ಮರಳಿ ಪಡೆದಳು.

ಇನ್ನು ಸುಪ್ರಿಯಾ ಎಂಬವಳು ಕರ್ಣನ ಎರಡನೇ ಹೆಂಡತಿ. ಕರ್ಣನು ದುರ್ಯೋಧನನ ಆತ್ಮೀಯ ಸ್ನೇಹಿತನಾಗಿ. ಸುಪ್ರಿಯಾ ದುರ್ಯೋಧನನ ಪತ್ನಿ ಭಾನುಮತಿಯ ಆತ್ಮೀಯ ಸ್ನೇಹಿತೆಯಾಗಿದ್ದಳು. ಇವರಿಗೆ ಇಬ್ಬರು ಗಂಡು ಮಕ್ಕಳು. ಇವರಲ್ಲಿ ಬನಸೇನ ಎಂಬಾತ 16ನೇ ದಿನ ಭೀಮನಿಂದ ಕೊಲ್ಲಲ್ಪಟ್ಟ. ದ್ವಿಪಾತ ಎಂಬವನು ಅರ್ಜುನನಿಂದ ಕೊಲ್ಲಲ್ಪಟ್ಟ.

ಆದರೆ ಮೂಲ ಮಹಾಭಾರತದಲ್ಲಿ ಇವರ ಉಲ್ಲೇಖಗಳು ಇಲ್ಲ. ಕರ್ಣನ ಹೆಂಡತಿ ಕೂಡ ಒಬ್ಬಳೇ ಎಂದು ತಿಳಿದುಬರುತ್ತದೆ. ಮಗನೂ ವೃಷಸೇನ ಒಬ್ಬನೇ ಇರಬಹುದು. ಯಾಕೆಂದರೆ ಬೇರೆ ಮಕ್ಕಳ ಉಲ್ಲೇಖ ಮೂಲಭಾರತದಲ್ಲಿ ಕಂಡುಬರುವುದಿಲ್ಲ. ಆದರೆ ವೃಷಸೇನ ಮಾತ್ರ ವೀರಾವೇಶದಿಂದ ಹೋರಾಡಿದ್ದು ಕಂಡುಬರುತ್ತದೆ. ಇನ್ನು ಜೈಮಿನಿ ಭಾರತದಲ್ಲಿ, ಅಶ್ವಮೇಧ ಯಾತ್ರೆಯ ಸಂದರ್ಭದಲ್ಲಿ ಕರ್ಣಪುತ್ರ ವೃಷಕೇತುವಿನ ವಿವರ, ಅವನ ಶೌರ್ಯ- ವೀರ್ಯಗಳ ಉಲ್ಲೇಖಗಳು ಇವೆ. ಹೀಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ಉಳಿದುಕೊಂಡವನು ವೃಷಕೇತು ಎಂದಷ್ಟು ಹೇಳಬಹುದು.