ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಕಿಚ್ಚ ಸುದೀಪ್ ಅವರ ಮುಂದಿನ ಏಳು ವರ್ಷಗಳಲ್ಲಿ ಅಡೆತಡೆಗಳು, ದ್ರೋಹ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಅಭಿಮಾನಿಗಳಿಂದ ಟೀಕೆ ವ್ಯಕ್ತವಾಗಿದೆ. ದರ್ಶನ್ ಪ್ರಕರಣದಲ್ಲಿ ಪ್ರಶಾಂತ್ ಕಿಣಿ ಅವರ ಭವಿಷ್ಯ ತಪ್ಪಾಗಿದೆ.
ಬೆಂಗಳೂರು (ಸೆ.2): ಕಿಚ್ಚ ಸುದೀಪ್ ಮಂಗಳವಾರ ತಮ್ಮ 52ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 1ರ ರಾತ್ರಿ ಅವರು ಅಭಿಮಾನಿಗಳೊಂದಿಗೆ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಇದರ ಆಚರಣೆಯನ್ನೂ ಮಾಡಿದ್ದಾರೆ. ಜನ್ಮದಿನದ ಸಂಭ್ರಮಕ್ಕೆ ಬಂದ ಅಭಿಮಾನಿಗಳಿಗೆ ಊಟ, ತಿಂಡಿ ಕೊಟ್ಟು ಸಂಭ್ರಮಿಸಿದ್ದಾರೆ. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಸುದೀಪ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಅದರೊಂದಿಗೆ ಕ್ರಿಸ್‌ಮಸ್ ವೇಳೆ ತಮ್ಮ ಹೊಸ ಚಿತ್ರ ಮಾರ್ಕ್ ತೆರೆಗೆ ಬರಲಿದೆ ಎಂದೂ ಮಾಹಿತಿ ನೀಡಿದ್ದರು.
ಹೀಗಿರುವಾಗ ಟ್ವಿಟರ್‌ನಲ್ಲಿ ತಮ್ಮ ಜ್ಯೋತಿಷ್ಯದ ಮೂಲಕವೇ ಫೇಮಸ್ ಆಗಿರುವ ಆಸ್ಟ್ರೋಲಾಜರ್ ಪ್ರಶಾಂತ್ ಕಿಣಿ (@AstroPrashanth9) ಕಿಚ್ಚ ಸುದೀಪ್ ಅವರ ಬಗ್ಗೆ ಭಾರೀ ಭವಿಷ್ಯ ನುಡಿದಿದ್ದಾರೆ. ಹೆಚ್ಚೂ ಕಡಿಮೆ ಸುದೀಪ್ ಅವರಿಗೆ ಈ ವರ್ಷದಿಂದಲೇ ಸಾಡೇಸಾಥ್ ಆರಂಭವಾಗುತ್ತದೆ ಎನ್ನುವ ಅರ್ಥದಲ್ಲಿ ಅವರು ಮಾಡಿರುವ ಪೋಸ್ಟ್ ಭಾರೀ ವೈರಲ್ ಆಗಿದೆ.
ಪ್ರಶಾಂತ್ ಕಿಣಿ ಆಗಸ್ಟ್ 31 ರಂದು ಮಾಡಿರುವ ಪೋಸ್ಟ್..
ಕನ್ನಡ ಚಲನಚಿತ್ರ ನಟ ಕಿಚ್ಚ ಸುದೀಪ್ 2032 ರವರೆಗೆ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ... ವೈಫಲ್ಯಗಳು ಗಾಯಗಳು ಆರ್ಥಿಕ ನಷ್ಟಗಳು ಮಾತ್ರವಲ್ಲದೆ, ನಂಬಿದವರಿಂದಲೇ ಅವರಿಗೆ ದ್ರೋಹವಾಗಲಿದೆ. ಅದರೊಂದಿಗೆ ಆರೋಗ್ಯ ಸಮಸ್ಯೆಗಳು ಕೂಡ ಕಾಡಲಿದೆ. ಏಪ್ರಿಲ್ 2028 ರಿಂದ ಏಪ್ರಿಲ್ 2029 ರ ನಡುವೆ ಅವರು ಬಹಳ ಜಾಗರೂಕರಾಗಿರಬೇಕು. ಮತ್ತು ಏಪ್ರಿಲ್ 2030 ರಿಂದ ಮೇ 2031 ರವರೆಗೆ ಕೂಡ ಎಚ್ಚರಿಕೆಯಲ್ಲಿರಬೇಕು.
ಪ್ರಶಾಂತ್ ಕಿಣಿ ಅವರ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿದ್ದು, ಹೆಚ್ಚಿನವರು ಇವರಿಗೆ ಬೈದಿದ್ದಾರೆ. ಕೆಲವೊಂದು ವಿಚಾರದಲ್ಲಿ ಪ್ರಶಾಂತ್ ಕಿಣಿ ಹೇಳಿರುವ ಜ್ಯೋತಿಷ್ಯ ನಿಜವಾಗಿದ್ದರೆ, ಇನ್ನೂ ಕೆಲವು ವಿಚಾರದಲ್ಲಿ ಅವರು ಹೇಳಿದ್ದೆಲ್ಲಾ ಉಲ್ಟಾ ಆಗಿದೆ. ಅದಕ್ಕೆ ಇತ್ತೀಚಿನ ವಿಚಾರ ಎಂದರೆ ದರ್ಶನ್ ತೂಗುದೀಪ ಜಾಮೀನು ವಿಚಾರ.
ಉಲ್ಟಾ ಹೊಡೆದಿತ್ತು ಭವಿಷ್ಯ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜಾಮೀನು ಅರ್ಜಿ ಏನಾಗಲಿದೆ ಎಂದು ಅಭಿಮಾನಿಯೊಬ್ಬರು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಪ್ರಶಾಂತ್, 'ನಿಮಗೆ ನನ್ನದೊಂದು ಭವಿಷ್ಯ ಇದೆ. ನೀನು ಹಾಗೂ ನಿಮ್ಮ ಬಾಸ್‌ಗೆ ಶೀಘ್ರದಲ್ಲಿಯೇ ಬೇಸರವಾಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜಾಮೀನು ರದ್ದು ಆಗೋದಿಲ್ಲ. ನಿಮ್ಮ ಕಾಮೆಂಟ್ಸ್‌ಗಳಿಗೆ ಥ್ಯಾಂಕ್‌ಯು' ಎಂದು ಪೋಸ್ಟ್ ಮಾಡಿದ್ದರು. ಆದರೆ, ಇವರ ಜ್ಯೋತಿಷ್ಯ ಉಲ್ಟಾ ಹೊಡೆದು, ದರ್ಶನ್ ಜಾಮೀನು ರದ್ದಾಗಿ ಈಗ ಜೈಲು ಸೇರಿದ್ದಾರೆ.
ಕಿಚ್ಚನ ಅಭಿಮಾನಿಗಳ ಆಕ್ರೋಶ
ಸುದೀಪ್ ಅಭಿಮಾನಿಗಳಿಂದ ಭಾರೀ ಟೀಕೆ ಬಂದ ಬೆನ್ನಲ್ಲಿಯೇ ಮತ್ತೊಂದು ಟ್ವೀಟ್‌ಮಾಡಿರುವ ಪ್ರಶಾಂತ್ ಕಿಣಿ, 'ಕಿಚ್ಚ ಸುದೀಪ್ ಅವರ ಮುಂದಿನ 7 ವರ್ಷಗಳ ಭವಿಷ್ಯಕ್ಕೆ ಅನೇಕ ಕಿಚ್ಚ ಸುದೀಪ್ ಅಭಿಮಾನಿಗಳು ದ್ವೇಷಪೂರಿತ ಕಾಮೆಂಟ್‌ಗಳನ್ನು ಕಳುಹಿಸುತ್ತಿದ್ದಾರೆ. ಮುಂದಿನ 7 ವರ್ಷಗಳಲ್ಲಿ ಅವರು ಖಂಡಿತವಾಗಿಯೂ ಯಶಸ್ಸಿನ ರುಚಿಯನ್ನು ನಿಯಮಿತವಾಗಿ ಪಡೆಯುತ್ತಾರೆ ಎಂದು ನಾನು ಹೇಳುತ್ತೇನೆ. ಆದರೆ, ಅವರಿಗೆ ಆಗುವ ಗಾಯಗಳು ಹಾಗೂ ದ್ರೋಹಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಎಲ್ಲಾ ಕನ್ನಡ ಚಲನಚಿತ್ರ ತಾರೆಯರು, ಸ್ವಾರ್ಥಪರ ಹಾಗೂ ಡಿವೈಡ್ & ರೂಲ್, ದ್ರೋಹ ಮಾಡುವ ಅಭಿಮಾನಿಗಳಿಂದ ಸುತ್ತುವರಿದಿದ್ದಾರೆ' ಎಂದು ಪೋಸ್ಟ್ ಮಾಡಿದ್ದಾರೆ.
