300 ತಾಲಿಬಾನ್‌ ಉಗ್ರರ ಹತ್ಯೆ?, ವಿರೋಧಿ ಬಣದಿಂದ ಉಗ್ರರ ಮಾರಣಹೋಮ!

By Kannadaprabha NewsFirst Published Aug 24, 2021, 7:53 AM IST
Highlights

* ಅಂದರಬ್‌ ಸೇರಿ ಹಲವೆಡೆ ವಿರೋಧಿ ಬಣದಿಂದ ಉಗ್ರರ ಮಾರಣಹೋಮ

* 20 ತಾಲಿಬಾನಿಗಳ ಸೆರೆ

* ವಿರೋಧಿ ಗುಂಪಿನ ಸದಸ್ಯನೊಬ್ಬ ಸಾವು

ಕಾಬೂಲ್‌(ಆ.24): ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ವಿರುದ್ಧ ಸಡ್ಡು ಹೊಡೆದಿರುವ ತಾಲಿಬಾನ್‌ ವಿರೋಧಿ ಗುಂಪುಗಳು, ಉಗ್ರರ ವಿರುದ್ಧ ಹೋರಾಟ ಮುಂದುವರಿಸಿವೆ. ಅಂದರಬ್‌ ಹಾಗೂ ಇತರ ಕೆಲವು ಪ್ರಾಂತ್ಯಗಳಲ್ಲಿ ರಕ್ತಪಾತವೇ ನಡೆದು ಹೋಗಿದ್ದು, 50ರಿಂದ 300ರಷ್ಟುತಾಲಿಬಾನ್‌ ಉಗ್ರರನ್ನು ಸೋಮವಾರ ಹತ್ಯೆ ಮಾಡಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ತಾಲಿಬಾನ್‌ ಉಗ್ರರ ವಿರುದ್ಧ ತಿರುಗಿಬಿದ್ದಿರುವ ಆಫ್ಘನ್‌ ಜನರು, ಬಾನು ಜಿಲ್ಲೆಯ ತಾಲಿಬಾನ್‌ ಮುಖ್ಯಸ್ಥ ಸೇರಿದಂತೆ ಹಲವಾರು ತಾಲಿಬಾನ್‌ ಉಗ್ರರನ್ನು ಕೊಂದು ಹಾಕಿದ್ದಾರೆ. ಅಲ್ಲದೆ 20 ತಾಲಿಬಾನಿಗಳನ್ನು ಸೆರೆಯಾಳುಗಳನ್ನಾಗಿ ಮಾಡಿಕೊಂಡಿದ್ದಾರೆ. ಫಜ್‌್ರ ಪ್ರದೇಶದಲ್ಲಿ 50 ತಾಲಿಬಾನಿಗಳನ್ನು ಕೊಲ್ಲಲಾಗಿದೆ. ಒಟ್ಟಾರೆ ಸುಮಾರು 300 ತಾಲಿಬಾನಿಗಳು ಹತ್ಯೆ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಉಗ್ರರು ಮತ್ತು ತಾಲಿಬಾನ್‌ ವಿರೋಧಿ ಗುಂಪಿನ ನಡುವಿನ ಜಟಾಪಟಿಯಲ್ಲಿ ತಾಲಿಬಾನ್‌ ವಿರೋಧಿ ಗುಂಪಿನ ಓರ್ವ ಸದಸ್ಯ ಸಾವನ್ನಪ್ಪಿದ್ದು, ಇತರ 6 ಮಂದಿ ಗಾಯಗೊಂಡಿದ್ದಾರೆ.

ಸೋವಿಯತ್‌ ವಿರೋಧಿ ಮುಜಾಹಿದೀನ್‌ ಕಮಾಂಡರ್‌ ಆಗಿರುವ ಅಹ್ಮದ್‌ ಶಾ ಮಸೌದ್‌ ಅವರ ಪುತ್ರ ಅಹ್ಮದ್‌ ಮಸೌದ್‌ ಅವರಿಗೆ ನಿಷ್ಠ ಹೊಂದಿದ ಪಡೆಗಳು ಪಂಜ್‌ಶೀರ್‌ ಕಣಿವೆಯಲ್ಲಿ ನೆಲೆಯೂರಿವೆ. ಅಲ್ಲದೆ ಈ ಪಡೆಯು 2001ರಿಂದಲೂ ತಾಲಿಬಾನ್‌ ವಿರೋಧಿ ನಿಲುವು ಹೊಂದಿದೆ. ಇಡೀ ಆಫ್ಘನ್‌ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ತಾಲಿಬಾನ್‌ ತನ್ನ ಕಣಿವಿಗೆ ಕಾಲಿಟ್ಟರೆ ಅದನ್ನು ಪ್ರತಿರೋಧಿಸುವುದಾಗಿ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ನೂರಾರು ತಾಲಿಬಾನ್‌ ಬಂಡುಕೋರರು ಭಾನುವಾರವೇ ಪಂಜ್‌ಶೀರ್‌ನತ್ತ ಧಾವಿಸಿತ್ತು. ಇದರಿಂದಾಗಿ ತಾಲಿಬಾನ್‌ ವಿರೋಧಿ ಗುಂಪು ಮತ್ತು ತಾಲಿಬಾನ್‌ ಮಧ್ಯೆ ರಕ್ತಪಾತ ನಡೆದಿದೆ ಎನ್ನಲಾಗಿದೆ.

click me!