Woman Driver: ಬಸ್ ಚಾಲಕಿ ಸೀಟ್ ನಲ್ಲಿ ಯುವ ಮಹಿಳೆ, ಜನರೆಲ್ಲ ಸೆಲ್ಫಿ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು

By Suvarna News  |  First Published Apr 2, 2023, 9:44 AM IST

ವೆಹಿ ವೆಹಿಕಲ್ಸ್ ಓಡಿಸುವ ಮಹಿಳೆಯರು ಕಡಿಮೆ ಇರಬಹುದು. ಆದರೆ, ಅವರಲ್ಲಿ ಕೌಶಲವಿಲ್ಲ ಎಂದರ್ಥವಲ್ಲ. ಸೂಕ್ತ ತರಬೇತಿ ಪಡೆದರೆ ಮಹಿಳೆಯರು ಬಸ್, ಲಾರಿಗಳನ್ನು ಓಡಿಸಲು ಸಮರ್ಥರಿದ್ದಾರೆ. ತಮಿಳುನಾಡಿನ ಗಾಂಧಿಪುರಂನ ಖಾಸಗಿ ಬಸ್ ಚಾಲಕಿಯಾಗಿ ಇತ್ತೀಚೆಗಷ್ಟೇ ಕಾರ್ಯ ಆರಂಭಿಸಿರುವ ಎಂ.ಶರ್ಮಿಳಾ ಈ ನಿಟ್ಟಿನಲ್ಲಿ ಹಲವರಿಗೆ ಮಾದರಿ.
 


ಮಹಿಳೆಯರು ಡ್ರೈವಿಂಗ್ ಮಾಡುವುದು ಇಂದಿನ ದಿನಗಳಲ್ಲಿ ಹೊಸದೇನಲ್ಲ. ವಾಹನ ಚಾಲನೆ ಮಾಡುವುದೊಂದು ಸ್ಕಿಲ್ ಆಗಿರುವುದರಿಂದ ಇದನ್ನು ಹೊಂದಲು ಬಹುತೇಕ ಎಲ್ಲರೂ ಬಯಸುತ್ತಾರೆ ಹಾಗೂ ಸಾಕಷ್ಟು ಮಂದಿ ಪ್ರಯತ್ನಿಸುತ್ತಾರೆ. ಹೀಗಾಗಿ ಟೂ ವೀಲರ್, ಕಾರುಗಳನ್ನು ಓಡಿಸುವುದು ಸಾಮಾನ್ಯವಾಗಿದೆ. ಆದರೆ, ದೊಡ್ಡ ವಾಹನಗಳಾದ ಬಸ್, ಲಾರಿ ಇಂಥವುಗಳ ಡ್ರೈವಿಂಗ್ ಸೀಟ್ ನಲ್ಲಿ ಮಹಿಳೆಯರು ಕುಳಿತಾಗ ಇಂದಿಗೂ ಹುಬ್ಬೇರಿಸುವಂತಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಹೆವಿ ವೆಹಿಕಲ್ಸ್ ಡ್ರೈವಿಂಗ್ ಮಾಡುವುದು ಕಡಿಮೆ. ಇತ್ತೀಚೆಗೆ ಅಲ್ಲೊಬ್ಬರು, ಇಲ್ಲೊಬ್ಬರು ದೊಡ್ಡ ವಾಹನಗಳನ್ನು ಚಾಲನೆ ಮಾಡುವುದು ಕಂಡುಬರುತ್ತಿದೆ. 
ಕಳೆದ ವಾರ ತಮಿಳುನಾಡಿನ ಕೊಯಮತ್ತೂರಿನ (Coimbatore) ಗಾಂಧಿಪುರಂ ಬಸ್ ನಿಲ್ದಾಣದಲ್ಲಿ (Bus Station) ಬಸ್ ಕಾಯುತ್ತ ನಿಂತವರಿಗೆ ಒಂದು ಅಚ್ಚರಿ ಕಾದಿತ್ತು. ಅದೆಂದರೆ, ಖಾಸಗಿ (Private) ಬಸ್ ಒಂದರ ಡ್ರೈವರ್ ಆಗಿ ಮಹಿಳೆಯೊಬ್ಬರು ಕುಳಿತಿದ್ದರು. ಜನರು ತಮ್ಮ ಕುತೂಹಲವನ್ನು ತಣಿಸಿಕೊಳ್ಳದೆ ಇರಲಿಲ್ಲ. ಮಹಿಳೆಯ (Woman) ಸುತ್ತ ನೆರೆದು ಹಲವು ಪ್ರಶ್ನೆಗಳನ್ನು ಕೇಳಿದರು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಈಕೆ 24 ವರ್ಷದ ಎಂ ಶರ್ಮಿಳಾ (Sharmila). ಕಳೆದ ಶುಕ್ರವಾರ ಅವರ ಮೊದಲ ಡ್ಯೂಟಿ ಡೇ. ಹೀಗಾಗಿ, ಅವರಿಗೆ ಸಹಜವಾಗಿ ಮರೆಯಲಾಗದ ಅನುಭವ. ಇವರು ತಿರುವಳ್ಳುವರ್ ನಗರದ ವಡವಳ್ಳಿಯ ನಿವಾಸಿ. ನಗರದ ಮೊಟ್ಟ ಮೊದಲ ಬಸ್ ಚಾಲಕಿ (Woman Driver). ಜನರೆಲ್ಲ ಈಕೆಯ ಧೈರ್ಯವನ್ನು ಶ್ಲಾಘಿಸಿದ್ದೇ ಶ್ಲಾಘಿಸಿದ್ದು. “ನನಗೆ ಅಚ್ಚರಿಯಾಯಿತು, ಜನರೆಲ್ಲ ನನ್ನ ಸುತ್ತ ನೆರದು ಮಾಹಿತಿ ಪಡೆದರು, ಮೆಚ್ಚುಗೆ ವ್ಯಕ್ತಪಡಿಸಿದರು, ಸೆಲ್ಫೀ ಪಡೆದರು. ನನಗೆ ಹೆಮ್ಮೆ ಎನಿಸಿದೆ’ ಎಂದು ಶರ್ಮಿಳಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

Viral News: ನನ್ನ ವರ ಎಲ್ಲಿ? ಹುಡುಕ್ತಾ ಬಂದ ವಧುವಿನ ವಿಡಿಯೋ ವೈರಲ್

Tap to resize

Latest Videos

ಡ್ರೈವಿಂಗ್ ಆಸಕ್ತಿ
ಫಾರ್ಮಸಿಯಲ್ಲಿ ಡಿಪ್ಲೊಮಾ (Diploma) ಪಡೆದಿರುವ ಶರ್ಮಿಳಾ ಅವರಿಗೆ ಮೊದಲಿನಿಂದಲೂ ಡ್ರೈವಿಂಗ್ ಬಗ್ಗೆ ಆಸಕ್ತಿ ಇತ್ತು. ಮೊದಲು ಆಟೋರಿಕ್ಷಾ ಓಡಿಸಿದ ಅನುಭವವೂ ಇದೆ. ಕಾಲ್ ಟ್ಯಾಕ್ಸಿಗಳನ್ನೂ ಓಡಿಸಿದ್ದಾರೆ. ವೆಹಿ ವೆಹಿಕಲ್ಸ್ ಡ್ರೈವಿಂಗ್ (Heavy Vehicles) ಲೈಸೆನ್ಸ್ ಪಡೆದ ಬಳಿಕ ಬಸ್ ಚಾಲಕಿಯಾಗಿ ನಿಯುಕ್ತಿಗೊಂಡಿದ್ದಾರೆ. “ಇದೊಂದು ಸವಾಲಿನ ವೃತ್ತಿ (Profession) ಯಾಗಿದ್ದು, ಧೈರ್ಯದಿಂದ ಮುನ್ನಡೆಯಬೇಕಾಗಿದೆ’ ಎನ್ನುತ್ತಾರೆ. ಈಕೆ ಚಾಲಕಿಯಾಗಿರುವುದು ಖಾಸಗಿ ಬಸ್ ಒಂದಕ್ಕೆ. ಇದು ಗಾಂಧಿಪುರಂನಿಂದ ಸೋಮನೂರುವರೆಗೆ ಸಂಚರಿಸುತ್ತದೆ. ಇವರ ತಂದೆ ಕೆ.ಮಹೇಶ್ ಆಟೋರಿಕ್ಷಾ ಚಾಲಕರಾಗಿದ್ದಾರೆ. 
ಡ್ರೈವರ್ ಆಗಲು ಇವರ ತಂದೆಯೇ ಇವರಿಗೆ ಸ್ಫೂರ್ತಿ (Inspiration). ದೀರ್ಘ ಸಮಯದಿಂದಲೂ ಚಾಲಕಿಯಾಗಬೇಕೆಂಬ ಆಸೆ ಇವರಲ್ಲಿತ್ತು. “ಈ ಆಸೆ ಈಗ ಪೂರ್ಣಗೊಂಡಿದೆ. ಪುರುಷರಷ್ಟೇ ಅಲ್ಲ, ಮಹಿಳೆಯರೂ ಕೌಶಲಯುಕ್ತವಾಗಿ (Skilfully) ಬಸ್ ಚಲಾಯಿಸಬಲ್ಲರು’ ಎನ್ನುವುದು ಇವರ ಆತ್ಮವಿಶ್ವಾಸದ ನುಡಿ. 

ಪತ್ನಿ ಅನುಷ್ಕಾ ಮುಂದೆ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಕೊಹ್ಲಿ,ವಿಡಿಯೋ ವೈರಲ್!

ಹೆವಿ ವೆಹಿಕಲ್ಸ್ ಮಹಿಳೆಯರಿಗಲ್ಲ!
ಹೆವಿ ವೆಹಿಕಲ್ಸ್ ಡ್ರೈವಿಂಗ್ ಕ್ಲಾಸಿಗೆ ಸೇರಿಕೊಂಡಾಗ ಹಲವರು ಇವರನ್ನು ಲೇವಡಿ ಮಾಡಿದ್ದರು. ಮಹಿಳೆಯರಿಗೆ ಇದು ಸಾಧ್ಯವಿಲ್ಲ ಎಂದು ಹೆದರಿಸಿದ್ದರು. ಆದರೆ, ಈಕೆ ಈ ಮಾತುಗಳನ್ನು ಪರಿಗಣಿಸಿರಲಿಲ್ಲ. ಒಮ್ಮೆ ಲೈಸೆನ್ಸ್ ಪಡೆದ ಬಳಿಕ, ಈ ಹಿಂದೆ ಟೀಕಿಸಿದವರೇ ಮೆಚ್ಚುಗೆ (Appreciate) ವ್ಯಕ್ತಪಡಿಸಿದರು. ಖಾಸಗಿ ಬಸ್ ಸಂಸ್ಥೆಯವರು ತಮ್ಮ ಕೌಶಲದ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಅವರಿಗೆ ತಮ್ಮ ಸಾಮರ್ಥ್ಯದ (Ability) ಬಗ್ಗೆ ನಂಬಿಕೆಯಿದೆ ಎಂದು ತಿಳಿಸಿದ್ದಾರೆ. 

ಹಲವು ಪ್ರಯಾಣಿಕರು ಶರ್ಮಿಳಾ ಬಸ್ ಚಲಾಯಿಸುವುದನ್ನೂ ವಿಡಿಯೋ ಮಾಡಿಕೊಂಡಿದ್ದಾರೆ. ಎಲ್ಲರೊಂದಿಗೂ ಖುಷಿಯಾಗಿ ಮಾತನಾಡಿ, ಅವರೊಂದಿಗೆ ಒಡನಾಡಿರುವ ಶರ್ಮಿಳಾ ಯುವ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಕೋವಿಡ್ (Covid) ಸಮಯದಲ್ಲಿ ತಮ್ಮ ಆಟೋರಿಕ್ಷಾದಲ್ಲಿ ಕೊರೋನಾ (Corona) ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದುದು ಇವರ ಹೆಗ್ಗಳಿಕೆ. ಧೈರ್ಯಗುಂದದೆ ನೆರವು (Help) ಕಾರ್ಯದಲ್ಲಿ ಕೈ ಜೋಡಿಸಿದ್ದರು. 

click me!