
ಮನೆಮಂದಿಗೆಲ್ಲ ಹೊಟ್ಟೆ ತುಂಬಾ ಊಟ ಬಡಿಸಿ ಕೊನೆಯಲ್ಲಿ ಊಟಕ್ಕೆ ಕೂರುವುದು ಎಲ್ಲ ಗೃಹಿಣಿಯರ ಅಭ್ಯಾಸ. ಎಷ್ಟೋ ಬಾರಿ ಸಾಂಬಾರಿಗೆ ಹಾಕಿದ ತರಕಾರಿಯೆಲ್ಲ ಖಾಲಿಯಾಗಿ ತಳದಲ್ಲಿ ಉಳಿದ ಸಾರಿನಲ್ಲಿ ಊಟ ಮುಗಿಸುವ ಅಭ್ಯಾಸ ಭಾರತೀಯ ನಾರಿಮಣಿಗಳಲ್ಲಿ ಇಂದಿಗೂ ಇದೆ. ಈ ವಿಚಾರದಲ್ಲಿ ಹಳ್ಳಿ-ಪಟ್ಟಣ ಎಂಬ ವ್ಯತ್ಯಾಸವೇನೂ ಇಲ್ಲ.
ಗಂಡು ಮಗುವಿನ ಹೊಟ್ಟೆ ಹೆಣ್ಣು ಮಗುವಿಗಿಂತ ದೊಡ್ಡದು, ಹೀಗಾಗಿ ಆತನಿಗೆ ತಿಂಡಿಯಿಂದ ಹಿಡಿದು ಊಟದ ತನಕ ಎಲ್ಲದರಲ್ಲೂ ಹೆಚ್ಚಿನ ಪಾಲು ನೀಡುವ ಅಭ್ಯಾಸ ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ, ಪುರುಷನಿಗೆ ಹೋಲಿಸಿದರೆ ಮಹಿಳೆಗೆ ಹೆಚ್ಚಿನ ಪೌಷ್ಟಿಕಾಂಶಯಕ್ತ ಆಹಾರದ ಅಗತ್ಯವಿದೆ ಎಂದು ‘ನ್ಯುಟ್ರಿಷನಲ್ ನ್ಯುರೋಸೈನ್ಸ್’ ಎಂಬ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನವೊಂದು ತಿಳಿಸಿದೆ. ಹೌದು, ಮಹಿಳೆಯು ಮಾನಸಿಕವಾಗಿ ಸದೃಢಳಾಗಿರಲು ಪುರುಷನಿಗಿಂತ ಹೆಚ್ಚಿನ ಪೋಷಕಾಂಶಗಳ ಅಗತ್ಯವಿದೆ ಎಂದಿದೆ ಈ ಅಧ್ಯಯನ.
ಸಾರ್ವಜನಿಕ ಸ್ಥಳದಲ್ಲಿ ಹಾಲುಣಿಸಿ ಭೇಷ್ ಎಂದೆನಿಸಿಕೊಂಡ ತಾಯಂದಿರು!
ಅಧ್ಯಯನದ ಸುತ್ತ: ನ್ಯೂಯಾರ್ಕ್‍ನ ಬಿಂಗ್‍ಹ್ಯಾಮ್ಟನ್ ವಿಶ್ವವಿದ್ಯಾಲಯದ ಹೆಲ್ತ್ ಆಂಡ್ ವೆಲ್‍ನೆಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಲೀನಾ ಬೆಗ್ಡಚೆ ನೇತೃತ್ವದ ತಂಡ ಆಹಾರ ಕ್ರಮ ಹೇಗೆ ಮಹಿಳೆ ಮತ್ತು ಪುರುಷನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ 563 (ಶೇ.48 ಪುರುಷರು ಹಾಗೂ ಶೇ.52 ಮಹಿಳೆಯರು) ಜನರನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯಕ್ಕೆ ಪುರುಷರಿಗಿಂತ ಹೆಚ್ಚಿನ ಪೋಷಕಾಂಶಗಳ ಅಗತ್ಯವಿರುವುದು ತಿಳಿದುಬಂದಿದೆ. ‘ಮಹಿಳೆಯರು ಉತ್ತಮ ಮನಸ್ಥಿತಿಯಲ್ಲಿರಬೇಕೆಂದರೆ ಅವರ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಪೋಷಕಾಂಶಗಳು ಪೂರೈಕೆಯಾಗಬೇಕು. ಮಹಿಳೆಯರಿಗೆ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪುರುಷರಿಗಿಂತ ಹೆಚ್ಚಿನ ಪ್ರಮಾಣದ ಪೋಷಕಾಂಶಗಳ ಅಗತ್ಯವಿದೆ’ ಎನ್ನುತ್ತಾರೆ ಲೀನಾ ಬೆಗ್ಡಚೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ಖಿನ್ನತೆ ಹಾಗೂ ಉದ್ವೇಗಕ್ಕೊಳಗಾಗು ಸಾಧ್ಯತೆ ಎರಡು ಪಟ್ಟು ಹೆಚ್ಚಿರುವುದಕ್ಕೆ ಅವರು ಸೇವಿಸುವ ಆಹಾರದಲ್ಲಿ ಅಗತ್ಯ ಪ್ರಮಾಣದ ಪೋಷಕಾಂಶಗಳು ಇಲ್ಲದಿರುವುದೇ ಕಾರಣ. ಇಂದು ನಾವು ಸೇವಿಸುವ ಆಹಾರದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟ್ ಇದೆಯೇ ಹೊರತು ಮಿದುಳಿನ ರಚನೆ ಹಾಗೂ ಕಾರ್ಯನಿರ್ವಹಣೆಗೆ ಅಗತ್ಯವಾದ ಪ್ರಮುಖ ಪೋಷಕಾಂಶಗಳ ಕೊರತೆಯಿದೆ ಎಂದು ಅಧ್ಯಯನ ತಿಳಿಸಿದೆ. ಇನ್ನು ಮಹಿಳೆಯರು ಹಾಗೂ ಪುರುಷರ ದೈಹಿಕ ಹಾಗೂ ಭಾವನಾತ್ಮಕ ಜವಾಬ್ದಾರಿಗಳಲ್ಲಿ ವ್ಯತ್ಯಾಸವಿರುವ ಕಾರಣ ಅವರಿಗೆ ಅಗತ್ಯವಿರುವ ಶಕ್ತಿ ಹಾಗೂ ಪೋಷಕಾಂಶಗಳ ಪ್ರಮಾಣ ಬೇರೆ ಬೇರೆಯಾಗಿರುವ ಸಾಧ್ಯತೆಯಿದೆ ಎನ್ನುವ ಅಭಿಪ್ರಾಯವನ್ನು ಕೂಡ ಈ ಅಧ್ಯಯನ ಹೊರಹಾಕಿದೆ.
ಅಮ್ಮನನ್ನು ಆರಾಧಿಸಲು, ಆಕೆಯ ಖುಷಿ ಪಡಿಸಲು ಇಲ್ಲಿವೆ ಟಿಪ್ಸ್
ಹೆಣ್ಣು ಭಾವಜೀವಿ: ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಹೆಚ್ಚು ಭಾವುಕರು. ಪ್ರೀತಿ, ಕರುಣೆ, ಅನುಕಂಪಕ್ಕೆ ಬಹುಬೇಗ ಮನಸೋಲುವ ಇವರು, ಕಷ್ಟ, ನೋವಿಗೆ ಅಷ್ಟೇ ಬೇಗ ಕರಗಿ ಕಣ್ಣೀರಾಗುತ್ತಾರೆ. ಅಮ್ಮ ಅತ್ತಂತೆ ಅಪ್ಪ ಅತ್ತಿದ್ದನ್ನು ನೀವೆಂದಾದರೂ ನೋಡಿದ್ದೀರಾ? ಮಹಿಳೆಯ ದೇಹದಲ್ಲಿನ ಹಾರ್ಮೋನ್‍ಗಳು ಮುಟ್ಟು, ಹೆರಿಗೆ, ಮಗುವಿಗೆ ಎದೆಹಾಲುಣಿಸುವ ಪ್ರಕ್ರಿಯೆಗಳ ಸಂದರ್ಭಗಳಲ್ಲಿ ನಿರಂತರ ಬದಲಾವಣೆಗೆ ಒಳಗಾಗುತ್ತವೆ. ಪರಿಣಾಮ ಆಕೆ ಕೆಲವೊಮ್ಮೆ ಕಾರಣವಿಲ್ಲದೆ ರೇಗುತ್ತಾಳೆ, ಅಳುತ್ತಾಳೆ, ಸಿಡುಕುತ್ತಾಳೆ. ಅಂದರೆ ಆಕೆಯ ದೇಹದಲ್ಲಾಗುವ ಕೆಲವು ಬದಲಾವಣೆಗಳು ಅವಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ. ಹೀಗಾಗಿ ಮಹಿಳೆಯರ ಮಾನಸಿಕ ಆರೋಗ್ಯದಲ್ಲಿ ಪುರುಷರಿಗಿಂತ ಹೆಚ್ಚಿನ ಏರಿಳಿತಗಳು ಕಂಡುಬರುತ್ತವೆ.
ಸದೃಢ ಮಾನಸಿಕ ಆರೋಗ್ಯಕ್ಕೆ ಟಿಪ್ಸ್:
* ಆಧುನಿಕ ಮಹಿಳೆಯರಿಗೆ ಮನೆ ಹಾಗೂ ಉದ್ಯೋಗ ಎರಡನ್ನೂ ನಿಭಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿರುವುದರಿಂದ ಸಹಜವಾಗಿಯೇ ಒತ್ತಡ ಹೆಚ್ಚಿರುತ್ತದೆ. ಬಹುತೇಕರಿಗೆ ಬೆಳಗ್ಗೆ ಆಫೀಸ್‍ಗೆ ಹೋಗುವ ಗಡಿಬಿಡಿಯಲ್ಲಿ ಸರಿಯಾಗಿ ಬ್ರೇಕ್‍ಫಾಸ್ಟ್ ಮಾಡಲು ಸಮಯ ಸಿಗದೆ ಹೋಗಬಹುದು. ಹಾಗಂತ ಖಾಲಿ ಹೊಟ್ಟೆಯಲ್ಲಿರಬೇಡಿ. ತಿಂಡಿಯನ್ನು ಬಾಕ್ಸ್‍ಗೆ ಹಾಕಿಕೊಂಡು ಹೋಗಿ ಆಫೀಸ್‍ನಲ್ಲಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ.
* ಹಸಿರು ತರಕಾರಿ ಹಾಗೂ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಿ.
* ಒಣಹಣ್ಣುಗಳು ಮಿದುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಹೀಗಾಗಿ ಬರೀ ಮಕ್ಕಳಿಗೆ ನೀಡಿ ಖುಷಿಪಡಬೇಡಿ, ನೀವು ಕೂಡ ಪ್ರತಿದಿನ ಇದರ ರುಚಿ ನೋಡಿ.
ವಿರೋಧಿಸಿ ಮನೆಯಿಂದ ಹೊರಬಿದ್ದ ಗುಲ್‌ರುಖ್ ಸಾಧಕಿಯಾದದ್ದು ಹೀಗೆ
* ಡೈರಿ ಉತ್ಪನ್ನಗಳು ಹಾಗೂ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿ.
* ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ.
* ನೀವು ತಯಾರಿಸಿದ ಆಹಾರವನ್ನು ಮನೆಯವರಿಗೆಲ್ಲ ಹಂಚುವಾಗ ನಿಮಗೂ ಸಮನಾದ ಪಾಲನ್ನು ತೆಗೆದಿರಿಸಿಕೊಳ್ಳಲು ಮರೆಯಬೇಡಿ.
* ಪ್ರತಿ ದಿನ ಕನಿಷ್ಠ 3-4 ಲೀಟರ್ ನೀರು ಕುಡಿಯಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.