ತಾಯಿ ಹಾಲಿನ ಕುರಿತಾದ ಐದು ಪ್ರಮುಖ ತಪ್ಪು ಕಲ್ಪನೆಗಳು; ಇದೆಲ್ಲವೂ ಕೇವಲ ಕಟ್ಟು ಕಥೆ

Published : Aug 06, 2026, 11:08 AM IST
breast milk

ಸಾರಾಂಶ

ಈ ಲೇಖನವು ತಾಯಿ ಹಾಲಿನ ಕುರಿತಾದ ಐದು ಪ್ರಮುಖ ತಪ್ಪು ಕಲ್ಪನೆಗಳನ್ನು ವಿವರಿಸುತ್ತದೆ. ಮೊದಲ ಹಳದಿ ಹಾಲು, ಮಗುವಿನ ಅಳು, ಬೇಸಿಗೆಯಲ್ಲಿ ನೀರು ಕೊಡುವುದು, ಜ್ವರವಿದ್ದಾಗ ಹಾಲುಣಿಸುವುದು ಮತ್ತು ಫಾರ್ಮುಲಾ ಹಾಲಿನ ಕುರಿತಾದ ತಪ್ಪು ನಂಬಿಕೆಗಳನ್ನು ವೈಜ್ಞಾನಿಕ ಸತ್ಯಗಳೊಂದಿಗೆ ನಿವಾರಿಸಲಾಗಿದೆ. ಆರೋಗ್ಯವಂತ ಮಗುವಿಗಾಗಿ ತಾಯಿಗೆ ಕುಟುಂಬ ಮತ್ತು ಸಮಾಜದ ಬೆಂಬಲದ ಮಹತ್ವವನ್ನು ಇದು ಒತ್ತಿಹೇಳುತ್ತದೆ.

- ಡಾ. ರವ್ನೀತ್ ಜೋಶಿ

ಮಕ್ಕಳ ತಜ್ಞರು ಹಾಗೂ ಐಬಿಸಿಎಲ್‌ಸಿ ಲ್ಯಾಕ್ಟೇಶನ್ ಸಲಹೆಗಾರರು, ಮಣಿಪಾಲ್‌ ಆಸ್ಪತ್ರೆ, ಬೆಂಗಳೂರು

ಆಗಸ್ಟ್‌ 1ರಿಂದ 7ರವರೆಗೆ ಆಚರಿಸಲಾಗುವ ವಿಶ್ವ ಸ್ತನ್ಯಪಾನ ಸಪ್ತಾಹ ತಾಯಿಹಾಲಿನ ಮಹತ್ವವನ್ನು ಮತ್ತೊಮ್ಮೆ ನೆನಪಿಸುತ್ತದೆ. ಈ ವರ್ಷದ ಧ್ಯೇಯವಾಕ್ಯ ‘ಸ್ತನ್ಯಪಾನಕ್ಕೆ ಆದ್ಯತೆ ನೀಡಿ: ಸುಸ್ಥಿರ ಬೆಂಬಲ ವ್ಯವಸ್ಥೆಗಳನ್ನು ನಿರ್ಮಿಸಿ’. ಮಗುವಿಗೆ ಎದೆ ಹಾಲುಣಿಸುವುದು ಕೇವಲ ತಾಯಿಯ ಜವಾಬ್ದಾರಿ ಅಲ್ಲ. ಕುಟುಂಬ, ವೈದ್ಯರು, ಉದ್ಯೋಗದಾತರು ಮತ್ತು ಸಮಾಜವೂ ಪ್ರತಿ ತಾಯೆಂದಿರ ಬೆನ್ನಿಗೆ ನಿಲ್ಲಬೇಕು.

ತಾಯಿ ಹಾಲು ಮಗುವಿನ ಹೊಟ್ಟೆ ತುಂಬಿಸುವ ಆಹಾರ ಮಾತ್ರವಲ್ಲ. ಅದರಿಂದ ಮಗುವಿಗೆ ಹತ್ತಾರು ಆರೋಗ್ಯಕರ ಲಾಭವೂ ಇದೆ. ಎದೆ ಹಾಲು ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಮೆದುಳಿನ ಬೆಳವಣಿಗೆಗೆ ನೆರವಾಗುತ್ತದೆ. ಆದರೆ ಇಂದಿಗೂ ಕೆಲವು ತಪ್ಪು ನಂಬಿಕೆಗಳು ತಾಯಿಯ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತಿವೆ.

ತಾಯಿ ಎದೆ ಹಾಲಿನ ಬಗ್ಗೆ ಇರುವ 5 ಪ್ರಮುಖ ತಪ್ಪು ಕಲ್ಪನೆಗಳು ಇಲ್ಲಿವೆ.

1. ಮೊದಲ ಹಳದಿ ಹಾಲು ಮಗುವಿಗೆ ಒಳ್ಳೆಯದಲ್ಲ

ಹೆರಿಗೆಯಾದ ತಕ್ಷಣ ಬರುವ ಹಳದಿ ಬಣ್ಣದ ಹಾಲನ್ನು ಕೊಲೋಸ್ಟ್ರಮ್ ಎಂದು ಕರೆಯುತ್ತಾರೆ. ಇದರಲ್ಲಿ ಸೋಂಕುಗಳಿಂದ ರಕ್ಷಿಸುವ ಪ್ರತಿಕಾಯಗಳು ಮತ್ತು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಇದನ್ನೇ ಮಗುವಿನ ಮೊದಲ ಲಸಿಕೆ ಎಂದು ಕರೆಯಲಾಗುತ್ತದೆ. ಹೀಗಾಗಿ ಒಂದು ಹನಿಯನ್ನೂ ವ್ಯರ್ಥ ಮಾಡದೆ ಮಗುವಿಗೆ ನೀಡಬೇಕು.

2. ಮಗು ಅಳುತ್ತಿದ್ದರೆ ಅದಕ್ಕೆ ಹಾಲು ಸಾಲುತ್ತಿಲ್ಲ

ನವಜಾತ ಶಿಶುಗಳು ಹಲವು ಕಾರಣಗಳಿಗೆ ಅಳುತ್ತವೆ. ಹಸಿವು, ನಿದ್ರೆ, ಅಸ್ವಸ್ಥತೆ ಅಥವಾ ತಾಯಿಯ ಮುದ್ದು ಬೇಕಾದರೂ ಅಳಬಹುದು. ಮೊದಲ ವಾರಗಳಲ್ಲಿ ಆಗಾಗ ಹಾಲು ಕುಡಿಯುವುದು ಸಹಜ. ಮಗು ಸರಿಯಾಗಿ ತೂಕ ಹೆಚ್ಚಿಸುತ್ತಿದ್ದರೆ ಮತ್ತು ಸಾಕಷ್ಟು ಮೂತ್ರ ಮಾಡುತ್ತಿದ್ದರೆ ಹಾಲು ಸಾಕಾಗುತ್ತಿದೆ ಎಂದರ್ಥ.

3. ಬೇಸಿಗೆಯಲ್ಲಿ ನೀರು ಕೊಡಲೇಬೇಕು

ಆರು ತಿಂಗಳವರೆಗೆ ಕೇವಲ ತಾಯಿ ಹಾಲು ಕುಡಿಯುವ ಮಗುವಿಗೆ ಹೆಚ್ಚುವರಿಯಾಗಿ ನೀರು ಕೊಡುವ ಅಗತ್ಯವಿಲ್ಲ. ತಾಯಿಹಾಲಿನಲ್ಲೇ ನೀರು ಮತ್ತು ಪೋಷಕಾಂಶಗಳು ಸಾಕಷ್ಟು ಇರುತ್ತವೆ. ನೀರು ಕೊಟ್ಟರೆ ಸೋಂಕಿನ ಅಪಾಯವೂ ಹೆಚ್ಚಾಗಬಹುದು.

4. ಜ್ವರ ಬಂದರೆ ಹಾಲುಣಿಸಬಾರದು

ಸಾಮಾನ್ಯ ಜ್ವರ, ನೆಗಡಿ ಅಥವಾ ಕೆಮ್ಮು ಇದ್ದರೂ ಹೆಚ್ಚಿನ ಸಂದರ್ಭಗಳಲ್ಲಿ ತಾಯಿ ಹಾಲುಣಿಸುವುದನ್ನು ಮುಂದುವರಿಸಬಹುದು. ತಾಯಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು ಹಾಲಿನ ಮೂಲಕ ಮಗುವಿಗೂ ತಲುಪುತ್ತವೆ. ಯಾವುದಾದರೂ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

5. ಫಾರ್ಮುಲಾ ಹಾಲು ಮತ್ತು ತಾಯಿಹಾಲು ಒಂದೇ

ತಾಯಿಹಾಲು ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಫಾರ್ಮುಲಾ ಹಾಲು ಉತ್ತಮ ಪರ್ಯಾಯ. ಆದರೆ ಅದು ತಾಯಿ ಹಾಲಿನಷ್ಟೇ ಪ್ರಯೋಜನಕಾರಿಯಲ್ಲ. ತಾಯಿ ಹಾಲಿನಲ್ಲಿ ರೋಗ ನಿರೋಧಕ ಅಂಶಗಳು, ಉತ್ತಮ ಬ್ಯಾಕ್ಟೀರಿಯಾಗಳು ಹಾಗೂ ಹ್ಯೂಮನ್ ಮಿಲ್ಕ್ ಒಲಿಗೋಸ್ಯಾಕರೈಡ್ಸ್ ಇವೆ. ಇವು ಮಗುವಿನ ಕರುಳಿನ ಆರೋಗ್ಯ ಮತ್ತು ಮೆದುಳಿನ ಬೆಳವಣಿಗೆಗೆ ನೆರವಾಗುತ್ತವೆ.

ಸ್ತನ್ಯಪಾನ ಯಶಸ್ವಿಯಾಗಲು ತಾಯಿಯೊಬ್ಬಳ ಪ್ರಯತ್ನ ಸಾಕಾಗುವುದಿಲ್ಲ. ಮನೆಯ ಕೆಲಸದಲ್ಲಿ ನೆರವಾಗುವ ತಂದೆ, ಪ್ರೋತ್ಸಾಹಿಸುವ ಅಜ್ಜ-ಅಜ್ಜಿ ಮತ್ತು ಸರಿಯಾದ ಮಾರ್ಗದರ್ಶನ ನೀಡುವ ವೈದ್ಯರು ಇದ್ದರೆ ತಾಯಿ ಹೆಚ್ಚು ಆತ್ಮವಿಶ್ವಾಸದಿಂದ ಮಗುವಿಗೆ ಹಾಲುಣಿಸಬಹುದು.

ಈ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ತಪ್ಪು ನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ಮಾಹಿತಿಯನ್ನು ಅಳವಡಿಸಿಕೊಳ್ಳೋಣ. ತಾಯಿಗೆ ಬೆಂಬಲ ನೀಡುವುದು ಎಂದರೆ ಆರೋಗ್ಯವಂತ ಮಗುವಿನ ಜೊತೆಗೆ ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಹೂಡಿಕೆಯಾಗಿದೆ.

ನೆನಪಿರಲಿ

  1. ಜನನದ ಮೊದಲ ಒಂದು ಗಂಟೆಯೊಳಗೆ ತಾಯಿ ಹಾಲುಣಿಸುವುದು ಉತ್ತಮ.
  2. ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಹಾಲೇ ಸಾಕು.
  3. ಈ ಅವಧಿಯಲ್ಲಿ ನೀರು ಅಥವಾ ಇತರೆ ಆಹಾರ ನೀಡುವ ಅಗತ್ಯವಿಲ್ಲ.
  4. ಆರು ತಿಂಗಳ ನಂತರ ಪೂರಕ ಆಹಾರದ ಜೊತೆಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ತಾಯಿಹಾಲು ಮುಂದುವರಿಸಬಹುದು.
  5. ಯಾವುದೇ ಅನುಮಾನ ಇದ್ದರೆ ಮಕ್ಕಳ ತಜ್ಞರು ಅಥವಾ ಲ್ಯಾಕ್ಟೇಶನ್ ಸಲಹೆಗಾರರನ್ನು ಸಂಪರ್ಕಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಖಾಲಿ ಬಾಟಲಿ ಬಿಸಾಡಬೇಡಿ! 5 ನಿಮಿಷದಲ್ಲಿ ಮಾಡಿ ಜೇಡರಬಲೆ ಓಡಿಸೋ ಪೊರಕೆ; ಶೂನ್ಯ ಬಂಡವಾಳ ಲೈಫ್‌ಟೈಮ್ ಪ್ರಾಡಕ್ಟ್!
ಅಡುಗೆ ಮನೆ, ಬಾತ್​ರೂಮ್​ ಸಿಂಕ್, ಡ್ರೈನ್​​ ಕಟ್ಟಿಹೋಗಿದ್ಯಾ? ಪ್ಲಂಬರ್​ ​ ಕರೆಯೋ ಮೊದಲು ನೀವೇ ಮಾಡಿ ಈ ಉಪಾಯ