ಕೌಟುಂಬಿಕ ದೌರ್ಜನ್ಯದ ಡಿವೋರ್ಸ್‌: ಪತ್ನಿ ಜೀವನಾಂಶ ಪಡೆಯಲು ಅರ್ಹಳೆಂದ ಬಾಂಬೆ ಹೈ

By Suvarna NewsFirst Published Feb 7, 2023, 1:23 PM IST
Highlights

ವಿಚ್ಛೇದನಕ್ಕೆ ಸಂಬಂಧಿಸಿದಂತೆ ಭಾರತದ ಕಾನೂನಿನಲ್ಲಿ ಮಹಿಳೆಗೆ ಸಾಕಷ್ಟು ಭದ್ರತೆ ನೀಡಲಾಗಿದೆ. ಮನಸ್ಸಿಗೆ ಬಂದಾಗ ವಿಚ್ಛೇದನ ನೀಡಲು ಸಾಧ್ಯವಿಲ್ಲ. ಹಾಗೆ ಬೇರೆಯಾದ್ಮೇಲೆ ಎಲ್ಲ ಮುಗಿತು ಅಂತಾ ದೂರ ಮಾಡುವ ಹಾಗಿಲ್ಲ. ದುಡಿಯುತ್ತಿರುವ ವ್ಯಕ್ತಿ, ಮಾಜಿ ಪತ್ನಿ ಜೀವನಕ್ಕೆ ಒಂದಿಷ್ಟು ಹಣ ನೀಡ್ಲೇಬೇಕು. 
 

ವಿಚ್ಛೇದಿತ ಮಹಿಳೆಯರ ಜೀವನಾಂಶಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಚ್ಛೇದನದ ನಂತರವೂ ಮಹಿಳೆ ಜೀವನಾಂಶಕ್ಕೆ ಅರ್ಹಳು ಎಂದು ನ್ಯಾಯಾಲಯ ಹೇಳಿದೆ.  ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ವಿಚ್ಛೇದಿತ ಪತ್ನಿ ಜೀವನಾಂಶ ಪಡೆಯಲು ಅರ್ಹಳೇ ಎಂಬ ಪ್ರಶ್ನೆಯನ್ನು ಅರ್ಜಿಯಲ್ಲಿ ಕೇಳಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿದ ಕೋರ್ಟ್, ಜೀವನಾಂಶಕ್ಕೆ ಅರ್ಹಳು ಎನ್ನುವ ತೀರ್ಪು ನೀಡಿದೆ.  

ಕೋರ್ಟ್ (Court) ಹೇಳಿದ್ದೇನು? : ಬಾಂಬೆ (Bombay) ಹೈ ಕೋರ್ಟ್ ನ ನ್ಯಾಯಮೂರ್ತಿ ಆರ್‌ಜಿ ಅವಚತ್ ಅವರ ಏಕ ಸದಸ್ಯ  ಪೀಠ ಈ ತೀರ್ಪನ್ನು ನೀಡಿದೆ. ಸೆಷನ್ಸ್ (sessions) ನ್ಯಾಯಾಲಯದ ಮೇ 2021 ರಲ್ಲಿ ನೀಡಿದ ತೀರ್ಪನ್ನು ಆರ್ ಜಿ ಅವಚತ್ ಪೀಠ ಎತ್ತಿ ಹಿಡಿದಿದೆ.  ವಿಚ್ಛೇದಿತ ಪತ್ನಿಗೆ ತಿಂಗಳಿಗೆ 6 ಸಾವಿರ ರೂಪಾಯಿ ಜೀವನಾಂಶವನ್ನು ನೀಡುವಂತೆ ಪೊಲೀಸ್ ಪೇದೆಯೊಬ್ಬರಿಗೆ ನಿರ್ದೇಶನ ನೀಡಿದೆ. ವಿಚ್ಛೇದಿತ ಮಹಿಳೆಯು ಡಿವಿ ಕಾಯ್ದೆಯಡಿ ಜೀವನಾಂಶ ಪಡೆಯಲು ಅರ್ಹಳೇ ಎಂಬ ಪ್ರಶ್ನೆಯನ್ನು ಕೇಳಿದ್ದಳು. ಇದಕ್ಕೆ ಉತ್ತರಿಸಿದ ಪೀಠ, ಇಬ್ಬರು ವ್ಯಕ್ತಿಗಳು ಮದುವೆ ಅಥವಾ ವೈವಾಹಿಕ  ಸಂಬಂಧಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರೆ, ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೆ ಅಥವಾ ಹಿಂದೆ ವಾಸವಾಗಿದ್ದರೆ ಅದನ್ನು ಗೃಹ ಸಂಬಂಧದ ಅಡಿಯಲ್ಲಿ ನೋಡಬಹುದು ಎಂದಿದೆ.  

ಪೊಲೀಸ್ ಪೇದೆ ಅದೃಷ್ಟವಂತ ಎಂದ ಕೋರ್ಟ್ : ಪೊಲೀಸ್ ಪೇದೆ, ವಿಚ್ಛೇದನದ ನಂತ್ರವೂ ಹೆಂಡತಿಯ ಪೋಷಣೆ  ಜವಾಬ್ದಾರಿ ಹೊರಬೇಕು. ಆದ್ರೆ ಪೊಲೀಸ್ ಪೇದೆ ಇದ್ರಲ್ಲಿ ವಿಫಲರಾಗಿದ್ದರು. ಹಾಗಾಗಿ ಪತ್ನಿ ಅರ್ಜಿ ಸಲ್ಲಿಸಿದ್ದರು.  ಹೆಂಡತಿಗೆ ಡಿವಿ ಆಕ್ಟ್ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವುದನ್ನು ಹೊರತುಪಡಿಸಿ ಯಾವುದೇ ಆಯ್ಕೆ ಇರಲಿಲ್ಲ. ಪೊಲೀಸ್ ಸೇವೆಯಲ್ಲಿದ್ದು ತಿಂಗಳಿಗೆ 25 ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುತ್ತಿರುವ ಪೇದೆ ತಿಂಗಳಿಗೆ ಕೇವಲ 6 ಸಾವಿರ ಜೀವನಾಂಶವನ್ನು ಪತ್ನಿಗೆ ನೀಡಬೇಕು. ಇದು ಪೇದೆಯ ಅದೃಷ್ಟವೆಂದು ನ್ಯಾಯಮೂರ್ತಿ ಅವಾಚತ್ ಹೇಳಿದ್ದಾರೆ..

ಗರ್ಭಿಣಿಯರು ಇಷ್ಟನೇ ತಿಂಗಳಿಂದ ಗಾಜಿನ ಬಳೆಗಳನ್ನು ಧರಿಸಿದ್ರೆ ಮಗು ಮೆದುಳು ಚುರುಕಾಗುತ್ತೆ!

ನಡೆದ ಘಟನೆ ಏನು? : ಅರ್ಜಿಯ ಪ್ರಕಾರ, ಪೊಲೀಸ್ ಪೇದೆ ಮತ್ತು ಮಹಿಳೆ ಮೇ 2013 ರಲ್ಲಿ ಮದುವೆಯಾಗಿದ್ದರು.  ವೈವಾಹಿಕ ಭಿನ್ನಾಭಿಪ್ರಾಯದಿಂದ ಜುಲೈ 2013 ರಿಂದ ಪ್ರತ್ಯೇಕ ವಾಸ ಶುರು ಮಾಡಿದ್ದರು. ನಂತ್ರ ವಿಚ್ಛೇದನ ಪಡೆದಿದ್ದರು. ವಿಚ್ಛೇದನ ಅರ್ಜಿಯ ವಿಚಾರಣೆ ವೇಳೆ ಮಹಿಳೆ ಡಿವಿ ಕಾಯ್ದೆಯಡಿ ಜೀವನಾಂಶ ನೀಡುವಂತೆ ಕೋರಿದ್ದರು. ಆಕೆಯ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು.  ನಂತರ ಅವರು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ನ್ಯಾಯಾಲಯವು ಮೇ 2021 ರಲ್ಲಿ ಮಹಿಳೆಯ ಬೇಡಿಕೆಯನ್ನು ಅಂಗೀಕರಿಸಿತ್ತು. ಪೇದೆ, ಜೀವನಾಂಶ ನೀಡಬೇಕೆಂದು ಸೂಚನೆ ನೀಡಿತ್ತು. ಆದ್ರೆ ಪೇದೆ ಯಾವುದೇ ಜೀವನಾಂಶ ನೀಡಿರಲಿಲ್ಲ. ಹಾಗಾಗಿ ಮಹಿಳೆ ಮೇಲ್ಮನವಿ ಸಲ್ಲಿಸಿದ್ದಳು. 

ಪೇದೆ ಪರ ವಕೀಲರು ಹೇಳಿದ್ದೇನು? : ಇಬ್ಬರ ನಡುವೆ ಯಾವುದೇ ವೈವಾಹಿಕ ಸಂಬಂಧ ಅಸ್ತಿತ್ವದಲ್ಲಿಲ್ಲದ ಕಾರಣ, ಅವರ ಮಾಜಿ ಪತ್ನಿ ಡಿವಿ ಕಾಯ್ದೆಯಡಿ ಯಾವುದೇ ಪರಿಹಾರಕ್ಕೆ ಅರ್ಹರಲ್ಲ ಎಂದು ಪೇದೆ ಪರ ವಕೀಲರು ಅರ್ಜಿಯಲ್ಲಿ ಹೇಳಿದ್ದರು.  ವಿಚ್ಛೇದನದ ಸಂದರ್ಭದಲ್ಲಿ  ಎಲ್ಲಾ ಬಾಕಿಗಳನ್ನು ಪಾವತಿಸಲಾಗಿದೆ ಎಂದು ಅವರು ಹೇಳಿದ್ದರು.

Personality Tips: ಕೆಲವರನ್ನ ಬದಲಾಯ್ಸೋಕೆ ಸಾಧ್ಯನೇ ಇಲ್ಲ, ಅದ್ಯಾಕೆ ಗೊತ್ತಾ?

ಡಿವಿ ಆಕ್ಟ್ ಅಂದ್ರೇನು?  : ಮಾಜಿ ಪತಿಯ ಅರ್ಜಿಗೆ ಪತ್ನಿ ಉತ್ತರ ನೀಡಿದ್ದಳು.  ಡಿವಿ ಆಕ್ಟ್ ನ ನಿಬಂಧನೆಗಳು ವಿಚ್ಛೇದನ ಪಡೆದ ಅಥವಾ ವಿಚ್ಛೇದನ ನೀಡಲ್ಪಟ್ಟ ಪತ್ನಿಯೂ ಜೀವನಾಂಶ ಮತ್ತು ಇತರ ಪರಿಹಾರವನ್ನು ಪಡೆಯಲು ಅರ್ಹಳು ಎಂದು ಖಚಿತಪಡಿಸುತ್ತದೆ ಎಂದಿದ್ದಳು. ಡಿವಿ ಕಾಯ್ದೆ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯಿದೆಯಾಗಿದ್ದು, 2005ರಲ್ಲಿ ಭಾರತದ ಸಂಸತ್ತು ಅಂಗೀಕರಿಸಿದ ಕಾಯಿದೆಯಾಗಿದೆ. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಮತ್ತು ಸಂತ್ರಸ್ತರಿಗೆ ಕಾನೂನು ನೆರವು ನೀಡುವ ಉದ್ದೇಶ ಹೊಂದಿದೆ. ಇದು 26 ಅಕ್ಟೋಬರ್ 2006 ರಂದು ಜಾರಿಗೆ ಬಂದಿತು.
 

click me!