ದೆಹಲಿ ಏಮ್ಸ್ ನಲ್ಲಿ ಅಚ್ಚರಿ ಘಟನೆ ನಡೆದಿದೆ. ಕೋಮಾದಲ್ಲಿದ್ದ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಘಟನೆ ಎನ್ನುತ್ತಾರೆ ವೈದ್ಯರು. ಅಷ್ಟಕ್ಕೂ ಆಗಿದ್ದೇನು ಎಂಬುದರ ವಿವರ ಇಲ್ಲಿದೆ.
ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಮಗುವನ್ನು ಹೊತ್ತು ಸಾಕಷ್ಟು ನೋವುಂಡ ನಂತ್ರ ಕೈಗೆ ಬರುವ ಕರುಳ ಕುಡಿ ಎಲ್ಲವನ್ನೂ ಮರೆಸುತ್ತದೆ. ಮಹಿಳೆಗೆ ಹೊಸ ಜನ್ಮ ನೀಡುವುದು ಹೆರಿಗೆ. ಮಕ್ಕಳಾದ್ಮೇಲೆ ತಾಯಿ ಬದುಕು ಬದಲಾಗುತ್ತದೆ. ತಾಯಿಯಾಗೋದು ಪ್ರತಿಯೊಬ್ಬ ಮಹಿಳೆಯ ಸೌಭಾಗ್ಯ. ಮಗು ಗರ್ಭದಲ್ಲಿ ಬೆಳೆಯುತ್ತಿದೆ ಎಂಬುದು ತಿಳಿದ ನಂತ್ರ ಮಹಿಳೆ ಜಾಗೃತಳಾಗ್ತಾಳೆ. ಆಹಾರ, ನಿದ್ರೆ, ಓಡಾಟ ಎಲ್ಲವನ್ನೂ ಎಚ್ಚರಿಕೆಯಿಂದ ಮಾಡ್ತಾಳೆ. ಹಾಗೆ ಹೆರಿಗೆಯಾದ್ಮೇಲೆ ಮುದ್ದಾದ ಮಗುವಿಗೆ ಸ್ತನಪಾನ ಮಾಡಿ, ಜಗತ್ತಿನಲ್ಲಿ ಬೆಲೆ ಕಟ್ಟಲು ಸಾಧ್ಯವಾಗದ ಸಂತೋಷವನ್ನು ಪಡೆಯುತ್ತಾಳೆ. ಆದ್ರೆ ಈ ತಾಯಿಗೆ ಆ ಭಾಗ್ಯವಿಲ್ಲ. ಗರ್ಭಿಣಿಯಾದಾಗ ಮಗುವಿಗಾಗಿ ಆಕೆ ಯಾವುದೇ ವಿಶೇಷ ಆಹಾರ ಸೇವನೆ ಮಾಡಿಲ್ಲ, ಮಗುವಿನ ಬಗ್ಗೆ ಕನಸು ಕಂಡಿಲ್ಲ, ಹೆರಿಗೆ ನೋವು ಕೂಡ ಆಕೆಗೆ ತಿಳಿಯಲೇ ಇಲ್ಲ. ಆದ್ರೆ ಆಕೆಯ ಕಂದಮ್ಮ ಸುರಕ್ಷಿತವಾಗಿ ಭೂಮಿಗೆ ಬಂದಿದೆ. ಕೋಮಾದಲ್ಲಿದ್ದ ಮಹಿಳೆಯೊಬ್ಬಳು ಅಚ್ಚರಿ ಎಂಬಂತೆ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ವೈದ್ಯಕೀಯ ಜಗತ್ತಿನಲ್ಲಿ ಸಾಕಷ್ಟು ಸೌಲಭ್ಯ ಲಭ್ಯವಿದೆ. ಅದ್ರ ಸಹಾಯದಿಂದ ಕೋಮಾದಲ್ಲಿದ್ದ ಮಹಿಳೆ, ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿದೆ.
ಮಗುವಿಗೆ ಜನ್ಮ ನೀಡಿದ ಕೋಮಾ (Coma) ದಲ್ಲಿದ್ದ ಮಹಿಳೆ : ಈ ಘಟನೆ ನಡೆದಿರೋದು ದೆಹಲಿಯ ಏಮ್ಸ್ ಟ್ರಾಮಾ ಸೆಂಟರ್ (AIIMS Trauma Center) ನಲ್ಲಿ. ತಲೆಗೆ ಗಂಭೀರ ಗಾಯವಾಗಿದ್ದ ಮಹಿಳೆ ಕೋಮಾಕ್ಕೆ ಹೋಗಿದ್ದಳು. ಈಗ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
23 ವರ್ಷದ ಶಫಿಯಾ (Shafia) ಹೆಸರಿನ ಮಹಿಳೆಗೆ ಗಂಡು ಮಗು ಜನಿಸಿದೆ. ಶಫಿಯಾ ಮಾರ್ಚ್ 31ರಂದು ಪತಿ ಜೊತೆ ಬೈಕ್ ನಲ್ಲಿ ಹೋಗ್ತಿರುವಾಗ ಅಪಘಾತಕ್ಕೊಳಗಾಗಿದ್ದಳು. ಆಕೆ ಹೆಲ್ಮೆಟ್ ಧರಿಸಿರಲಿಲ್ಲ. ಹಾಗಾಗಿ ಆಕೆ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಪ್ರಥಮ ಚಿಕಿತ್ಸೆಯ ನಂತರ ಆಕೆಯನ್ನು ಬುಲಂದ್‌ಶಹರ್‌ನ ಏಮ್ಸ್ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಯಿತು. ಏಪ್ರಿಲ್ ಒಂದರಂದು ಶಫಿಯಾಳನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದ ಸಂದರ್ಭದಲ್ಲಿ ಶಫಿಯಾ 40 ದಿನಗಳ ಗರ್ಭಿಣಿಯಾಗಿದ್ದಳು. ಏಮ್ಸ್ ಟ್ರಾಮಾ ಸೆಂಟರ್ ನಲ್ಲಿ ಶಫಿಯಾಗೆ ಚಿಕಿತ್ಸೆ ನಡೆಯುತ್ತಿದೆ. ನಾಲ್ಕು ನ್ಯೂರೋ ಸರ್ಜರಿಗೆ ಕೂಡ ಶಫಿಯಾ ಒಳಗಾಗಿದ್ದಾಳೆ. ಶಫಿಯಾ ಕಣ್ಣು ತೆರೆಯುತ್ತಾಳೆ. ಆದ್ರೆ ಯಾವುದೇ ಆದೇಶವನ್ನು ಪಾಲನೆ ಮಾಡೋದಿಲ್ಲ.
ಮಗು ಜನಿಸಿದ ತಕ್ಷಣ ತಾಯಿ ಈ ಕೆಲಸ ಮಾಡಿದ್ರೆ ತುಂಬಾ ಪ್ರಯೋಜನವಿದೆ
18 ವಾರಗಳ ಗರ್ಭಿಣಿಯಾಗಿದ್ದಾಗ ಶಫಿಯಾಗೆ ಅಲ್ಟ್ರಾಸೌಂಡ್ ಸ್ಕ್ಯಾನ್ (Ultrasound Scanning) ಮಾಡಲಾಗಿತ್ತು. ಆ ವೇಳೆ ಮಗು ಆರೋಗ್ಯವಾಗಿದೆ ಎಬುದು ದೃಢಪಟ್ಟಿತ್ತು. ಅಕ್ಟೋಬರ್ 22ರಂದು ಶಫಿಯಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ (Surgery) ಹೆರಿಗೆ ನಡೆದಿದೆ ಎಂದು ವೈದ್ಯರು ಹೇಳಿದ್ದಾರೆ. ಈಗ್ಲೂ ಮಹಿಳೆಗೆ ಬಂದಿಲ್ಲ ಪ್ರಜ್ಞೆ : ಮಹಿಳೆ ಈಗ್ಲೂ ಕೋಮಾದಲ್ಲಿಯೇ ಇದ್ದಾಳೆ. ಮಗುವಿನ ಬೆಳವಣಿಗೆಯಿಂದ ಹಿಡಿದು ಹೆರಿಗೆಯವರೆಗೆ ಯಾವುದೇ ಸಂಗತಿ ಮಹಿಳೆಗೆ ತಿಳಿದಿಲ್ಲ. ಶಫಿಯಾಗೆ ಪ್ರಜ್ಞೆ ಬರುವ ಸಾಧ್ಯತೆ ಶೇಕಡಾ 10ರಿಂದ 15ರಷ್ಟು ಮಾತ್ರ ಇದೆ ಎಂದು ನ್ಯೂರೋ ಸರ್ಜನ್ ದೀಪಕ್ ಗುಪ್ತಾ ಹೇಳಿದ್ದಾರೆ.
#FEELFREE: ಪ್ಯುಬಿಕ್ ಕೂದಲು ತೆಗೆಯಲು ಹೇರ್ ಕ್ರೀಮ್ ಬಳಸ್ಬೋದಾ ?
ಗರ್ಭಧಾರಣೆ ಮುಂದುವರೆಸುವ ಬಗ್ಗೆ ಇತ್ತು ಅನುಮಾನ : ತಾಯಿ ಕೋಮಾದಲ್ಲಿರುವ ಕಾರಣ ಗರ್ಭಧಾರಣೆ ಮುಂದುವರಿಸಬೇಕೇ ಅಥವಾ ಗರ್ಭಪಾತದ (Termination of Pregnancy) ನಿರ್ಧಾರ ಕೈಗೊಳ್ಳಬೇಕೆ ಎನ್ನುವ ಬಗ್ಗೆ ವೈದ್ಯರಲ್ಲಿ ಗೊಂದಲವಿತ್ತಂತೆ. ಎರಡು ಬಾರಿ ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿದ ನಂತ್ರ ಮಗು ಯಾವುದೇ ಸಮಸ್ಯೆಯಿಲ್ಲದೆ ಬೆಳೆಯುತ್ತಿದೆ ಎಂಬ ಸಂಗತಿ ವೈದ್ಯರಿಗೆ ತಿಳಿದಿದೆ. ನಂತ್ರ ಗರ್ಭಧಾರಣೆ ಮುಂದುವರೆಸುವ ನಿರ್ಧಾರವನ್ನು ಕುಟುಂಬಕ್ಕೆ ಬಿಟ್ಟಿತ್ತಂತೆ. ಕುಟುಂಬದ ದೃಢ ನಿರ್ಧಾರದಿಂದ ಈಗ ಮಗು ಜನಿಸಿದೆ. ಏಮ್ಸ್ ನಲ್ಲಿ ನನ್ನ 22 ವರ್ಷಗಳ ವೃತ್ತಿ ಜೀವನದಲ್ಲಿ ಇಂಥ ಘಟನೆಯನ್ನು ನಾನು ನೋಡಿಲ್ಲವೆಂದು ವೈದ್ಯ ದೀಪಕ್ ಗುಪ್ತಾ ಹೇಳಿದ್ದಾರೆ. ಶಫಿಯಾ ಪತಿ ಖಾಸಗಿ ವಾಹನದ ಚಾಲಕನಾಗಿದ್ದನಂತೆ. ಆದ್ರೆ ಪತ್ನಿ ಆರೈಕೆಗಾಗಿ ಕೆಲಸ ಬಿಟ್ಟಿದ್ದಾನೆ. ಮುಂದೇನು ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಾನೆ ಆತ.