ಪ್ರತಿದಿನವೂ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದು ಕೆಲವರಿಗೆ ಅನಿವಾರ್ಯ ಆಗಿರುವ ಈ ಸಂದರ್ಭದಲ್ಲಿ, ಇದಕ್ಕೆ ಸಂಬಂಧಿಸಿದ ಶಾಕಿಂಗ್ ವರದಿ ಬಂದಿದೆ. ಇಲ್ಲಿದೆ ನೋಡಿ ಡಿಟೇಲ್ಸ್...
ಹವಳದಂಥ ತುಟಿ ಎಂದು ಮಹಿಳೆಯರನ್ನು ವರ್ಣನೆ ಮಾಡುವಾಗ ಹೇಳುವುದು ಇದೆ. ಚಿಕ್ಕ ಮಕ್ಕಳ ಗುಲಾಬಿಯ ತುಟಿಗಳನ್ನು ನೋಡಿದಾಗ ಈ ಮಾತು ಅನ್ವಯ ಆಗುವುದು ನಿಜವೇ. ಆದರೆ ದೊಡ್ಡವರಾಗುತ್ತಿದ್ದಂತೆಯೇ ಕೃತಕ ಬಣ್ಣಗಳ ಮೊರೆ ಹೋಗುವುದು ಈಗಂತೂ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲಿಯೂ ಎಷ್ಟೋ ಮಹಿಳೆಯರು ಊಟ ಬೇಕಾದರೂ ಬಿಟ್ಟಾರು, ಲಿಪ್‌ಸ್ಟಿಕ್ ಬಿಡಲೊಲ್ಲರು ಎನ್ನುವ ಸ್ಥಿತಿ ಇದೆ. ಸಿನಿಮಾ ತಾರೆಯರಿಂದ ಪ್ರೇರೇಪಿತರಾಗುವುದು ಒಂದೆಡೆಯಾದರೆ, ವಯಸ್ಸಾದಂತೆಲ್ಲಾ ಚಿಕ್ಕವರಾಗಿ ಕಾಣಿಸುವ ಹಂಬದಲ್ಲಿ ಕೃತಕ ಬಣ್ಣಗಳ ಮೊರೆ ಇಡುತ್ತಿದ್ದಾರೆ. ಅದರಲ್ಲಿಯೂ ಸೌಂದರ್ಯದ ಮಾತು ಬಂದಾಗ ಲಿಪ್‌ಸ್ಟಿಕ್ ಕೊಡುಗೆ ಅಪಾರವಾಗಿದೆ.
ಇದೇ ಕಾರಣಕ್ಕೆ 2024 ರಲ್ಲಿ ಜಾಗತಿಕ ಲಿಪ್‌ಸ್ಟಿಕ್ ಮಾರುಕಟ್ಟೆ ಗಾತ್ರವು 17.49 ಬಿಲಿಯನ್ ಡಾಲರ್ ಆಗಿತ್ತು ಮತ್ತು 2025 ರಿಂದ 2030 ರವರೆಗೆ 4.7% ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಇನ್ನು ಭಾರತದ ವಿಷಯಕ್ಕೆ ಬರುವುದಾದರೆ, 2024 ರ ಹಣಕಾಸು ವರ್ಷದಲ್ಲಿ 629.42 ಮಿಲಿಯನ್ ಡಾಲರ್ ಆಗಿದ್ದು, 2032 ರ ವೇಳೆಗೆ 1305.69 ಮಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಈ ಪರಿಯಲ್ಲಿ ಲಿಪ್‌ಸ್ಟಿಕ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಆದರೆ ದಿನವೂ ಲಿಪ್‌ಸ್ಟಿಕ್ ಹಚ್ಚುವುದರಿಂದ ಹಲವು ಸಮಸ್ಯೆಗಳು ಇವೆ ಎನ್ನುವುದು ಲಿಪ್‌ಸ್ಟಿಕ್ ಹಚ್ಚುವುದು ಆರಂಭವಾದ ದಿನದಿಂದಲೂ ಕೇಳುತ್ತಲೇ ಬಂದಿದ್ದೇವೆ. ಆದರೆ ಈಗ ಶಾಕಿಂಗ್ ವರದಿಯೊಂದು ಬಿಡುಗಡೆಯಾಗಿದೆ. ಈಗ ಎಲ್ಲಿ ನೋಡಿದರೂ ಕ್ಯಾನ್ಸರ್ ಕ್ಯಾನ್ಸರ್. ಈ ಕ್ಯಾನ್ಸರ್‌ಗೆ ಲಿಪ್‌ಸ್ಟಿಕ್ ಕೊಡುಗೆಯೂ ಇದೆ ಎಂದು ವರದಿ ಹೇಳುತ್ತಿದೆ!
ಲಿಪ್ಸ್ಟಿಕ್ನಲ್ಲಿ ಕ್ಯಾಡ್ಮಿಯಂನಂತಹ ಲೋಹದ ಅಂಶ ಇರುತ್ತದೆ. ಕ್ಯಾಡ್ಮಿಯಮ್ ಎಂಬುದು ಶ್ವಾಸಕೋಶದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಹಾನಿಗೆ ಸಂಬಂಧಿಸಿದ ಕ್ಯಾನ್ಸರ್ ಕಾರಕವಾಗಿದೆ. ಲಿಪ್‌ಸ್ಟಿಕ್ ಹಚ್ಚಿದ ಸಂದರ್ಭದಲ್ಲಿ, ಉಸಿರಾಟವಾಡುವಾಗ ಅಥವಾ ಬಣ್ಣ ಬಳಿದುಕೊಂಡ ತುಟಿಯಿಂದಲೇ ಏನಾದರೂ ತಿನ್ನುವಾಗ ಅದು ಹೊಟ್ಟೆಗೆ ಹೋದ ಸಂದರ್ಭದಲ್ಲಿ, ಈ ಅಂಶ ಕ್ಯಾನ್ಸರ್‌ಗೆ ತಿರುಗಬಹುದು ಎಂದು ಅಧ್ಯಯನ ಹೇಳಿದೆ. ಕೆಲವು ಲಿಪ್‌ಸ್ಟಿಕ್‌ಗಳಲ್ಲಿ ಕಂಡುಬರುವ ಕ್ಯಾಡ್ಮಿಯಂನ ಸಾಂದ್ರತೆಯು ಸಾಮಾನ್ಯವಾಗಿ ಕಡಿಮೆ ಪ್ರಮಾಣದಲ್ಲಿ ಇರುತ್ತದೆ, ಆದರೆ ದಿನನಿತ್ಯವೂ ಸ್ವಲ್ಪ ಸ್ವಲ್ಪ ವಿಷ ಹೊಟ್ಟೆಗೆ ಹೋದರೆ ಅದೇ ದೊಡ್ಡದಾಗುತ್ತದೆ ಎನ್ನಲಾಗಿದೆ.
ಇನ್ನು ಕೆಲವರಿಗೆ ಲಿಪ್‌ಸ್ಟಿಕ್ ಅಲರ್ಜಿಯಾಗುವುದು ಉಂಟು. ಸೂರ್ಯನ ವಿಕಿರಣ ಲಿಪ್‌ಸ್ಟಿಕ್ ಮೇಲೆ ಬಿದ್ದಾಗ ತುಟಿಗಳ ನೈಸರ್ಗಿಕ ಬಣ್ಣ ನಾಶಪಡಿಸುತ್ತದೆ. ಪಿಗ್ಮೆಂಟೇಶನ್ ತುಟಿಗಳ ನೈಸರ್ಗಿಕ ಬಣ್ಣವನ್ನು ಕಪ್ಪಾಗಿಸುತ್ತದೆ. ಇದಲ್ಲದೇ, ಲಿಪ್ಸ್ಟಿಕ್ನಲ್ಲಿ ಇರುವ ಪ್ರಿಸರ್ವೇಟರ್ಗಳಿಂದ ಉಸಿರಾಟದ ತೊಂದರೆಗಳು ಮತ್ತು ಕಣ್ಣಿನ ಸೋಂಕುಗಳು ಸೇರಿದಂತೆ ಅನೇಕ ಸಮಸ್ಯೆ ಉಂಟಾಗುತ್ತದೆ ಎನ್ನುವುದು ಇದಾಗಲೇ ಸಾಬೀತಾಗಿದೆ. ಚರ್ಮದ ಕ್ಯಾನ್ಸರ್ ಕೂಡ ಬರುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳಿದ್ದೂ ಇವೆ. ಆದ್ದರಿಂದ ತಜ್ಞರು ಹೇಳುವಂತೆ, ಪ್ರತಿದಿನ ಲಿಪ್‌ಸ್ಟಿಕ್ ಅನ್ನು ಅನ್ವಯಿಸುವ ಸಮಯವನ್ನು ಕಡಿಮೆ ಮಾಡಿ. ವಿಶ್ವಾಸಾರ್ಹ ಬ್ರ್ಯಾಂಡ್‌ಗಳನ್ನು ಆರಿಸಿ, ಸುರಕ್ಷತಾ ಮಾನದಂಡಗಳನ್ನು ಪಾಲಿಸುವ ಪ್ರತಿಷ್ಠಿತ ತಯಾರಕರಿಂದ ಲಿಪ್‌ಸ್ಟಿಕ್‌ಗಳನ್ನು ಆರಿಸಿಕೊಳ್ಳಿ, ಉತ್ಪನ್ನ ಆಯ್ಕೆಗಳು ಮತ್ತು ಬಳಕೆಯ ಅಭ್ಯಾಸಗಳ ಬಗ್ಗೆ ಜಾಗರೂಕರಾಗಿರುವುದರಿಂದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದು. ಇವೆಲ್ಲವುಗಳ ಹೊರತಾಗಿಯೂ ಅತಿಯಾದರೆ ಅಮೃತವೂ ವಿಷ ಎನ್ನುವುದು ನೆನಪಿರಬೇಕಷ್ಟೇ.
ರಕ್ತದ ಗುಂಪು ಪರೀಕ್ಷೆ ಮಾಡಿರುವಿರಾ? ಯಾರ ಊಹೆಗೂ ನಿಲುಕದ 'ಬಾಂಬೆ ಬ್ಲಡ್ ಗ್ರೂಪ್' ನಿಮ್ಮದಾಗಿರಬಹುದು!