
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಮಹಿಳೆಯರಲ್ಲೇ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಂಡುಬರುವುದೇಕೆ? ಇದಕ್ಕೆ ಹಾರ್ಮೋನ್ಗಳಲ್ಲಿನ ಬದಲಾವಣೆಗಳೇ ಕಾರಣವೇ ಅಥವಾ ಮಹಿಳೆಯರ ಸ್ವಭಾವ, ಒತ್ತಡ ಮತ್ತು ಮುಚ್ಚಿಟ್ಟ ಭಾವನೆಗಳಿಗೂ ಸಂಬಂಧವಿದೆಯೇ ಎಂಬ ಪ್ರಶ್ನೆಗಳು ಮೂಡುತ್ತವೆ. ಅಲ್ಲದೇ ಇದಕ್ಕೆ ಮಹಿಳೆಯರ ದೇಹದಲ್ಲಿ ಸಂಭವಿಸುವ ಸಂಕೀರ್ಣ ಹಾರ್ಮೋನ್ ಬದಲಾವಣೆಗಳು, ಗರ್ಭಧಾರಣೆ, ಋತುಚಕ್ರ, ಮೆನೋಪಾಸ್ ಮತ್ತು ರೋಗನಿರೋಧಕ ವ್ಯವಸ್ಥೆಯಲ್ಲಿನ ವ್ಯತ್ಯಾಸಗಳು ಪ್ರಮುಖ ಕಾರಣಗಳಾಗಿವೆ.
1.ಹಾರ್ಮೋನ್ಗಳಲ್ಲಿನ ಏರಿಳಿತ
ಮಹಿಳೆಯರ ಜೀವನದಲ್ಲಿ ಪ್ರೌಢಾವಸ್ಥೆ, ಗರ್ಭಧಾರಣೆ ಮತ್ತು ಮೆನೋಪಾಸ್ನಂತಹ ಹಂತಗಳಲ್ಲಿ ಹಾರ್ಮೋನ್ಗಳಲ್ಲಿ ಪ್ರಮುಖ ಬದಲಾವಣೆಗಳು ಸಂಭವಿಸುತ್ತವೆ. ಈ ಅವಧಿಗಳಲ್ಲಿ ಥೈರಾಯ್ಡ್ನ ಕಾರ್ಯನಿರ್ವಹಣೆ ಮತ್ತು ಹಾರ್ಮೋನ್ಗಳ ಅಗತ್ಯದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತದೆ.
2. ಆಟೋಇಮ್ಯೂನ್ ಕಾಯಿಲೆಗಳು
ಮಹಿಳೆಯರಲ್ಲಿ ಹಾಶಿಮೋಟೋಸ್ ಥೈರಾಯ್ಡಿಟಿಸ್ (Hashimoto’s Thyroiditis) ನಂತಹ ಆಟೋಇಮ್ಯೂನ್ ಕಾಯಿಲೆಗಳು ಹೆಚ್ಚು ಸಾಮಾನ್ಯ. ಈ ಸ್ಥಿತಿಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯೇ ತಪ್ಪಾಗಿ ಥೈರಾಯ್ಡ್ ಗ್ರಂಥಿಯ ಮೇಲೆ ದಾಳಿ ಮಾಡುತ್ತದೆ. ಇದರಿಂದ ಗ್ರಂಥಿಯ ಕಾರ್ಯನಿರ್ವಹಣೆ ಕಡಿಮೆಯಾಗಿ ಹೈಪೋಥೈರಾಯ್ಡಿಸಂ ಉಂಟಾಗಬಹುದು.
3. ನಿರಂತರ ಒತ್ತಡ ಮತ್ತು ಬಹುಕಾರ್ಯಗಳ ಹೊರೆ
ಮನೆ, ಉದ್ಯೋಗ, ಮಕ್ಕಳು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಒಟ್ಟಿಗೆ ನಿಭಾಯಿಸುವಾಗ ಅನೇಕ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ದೀರ್ಘಕಾಲದ ಒತ್ತಡವು ನಿದ್ರೆ, ಮನಸ್ಥಿತಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತಮ್ಮ ಒತ್ತಡ, ಮಾನಸಿಕ ಸ್ಥಿತಿ ಬಗ್ಗೆ ಯಾರ ಜೊತೆಯೂ ಮಾತನಾಡದೇ ಇದ್ದಾಗ, ಒಳಗಿನಿಂದಲೇ ಸಮಸ್ಯೆ ಹೆಚ್ಚಾಗಿ ಅದರಿಂದರೂ ಥೈರಾಯ್ಡ್ ಸಮಸ್ಯೆ ಬರುವ ಸಾಧ್ಯತೆ ಇದೆ.
ಥೈರಾಯ್ಡ್ ಸಮಸ್ಯೆಯಿಂದ ದೂರವಿರಲು ಏನು ಮಾಡಬೇಕು?
ತಜ್ಞರ ಸಲಹೆಯಂತೆ, ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಲು ಔಷಧಿಗಳ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನೂ ಪಾಲಿಸುವುದು ಮುಖ್ಯ.
1. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ: ಮನಸ್ಸಿನಲ್ಲಿರುವ ನೋವು, ಕೋಪ ಅಥವಾ ಒತ್ತಡವನ್ನು ಸದಾ ಮುಚ್ಚಿಡಬೇಡಿ. ನಂಬಿಕಸ್ಥ ವ್ಯಕ್ತಿಗಳೊಂದಿಗೆ ಮಾತನಾಡಿ. ಅಗತ್ಯವಿದ್ದರೆ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ.
2. ಒತ್ತಡವನ್ನು ನಿರ್ವಹಿಸಿ: ಯೋಗ, ಧ್ಯಾನ, ಉಸಿರಾಟದ ವ್ಯಾಯಾಮ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ. ಸಾಕಷ್ಟು ನಿದ್ರೆ ಪಡೆಯುವುದಕ್ಕೂ ಆದ್ಯತೆ ನೀಡಿ.
3. ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ: ಥೈರಾಯ್ಡ್ ಸಮಸ್ಯೆಯ ಲಕ್ಷಣಗಳಿದ್ದರೆ ಅಥವಾ ವೈದ್ಯರು ಸೂಚಿಸಿದರೆ TSH ಪರೀಕ್ಷೆ ಮಾಡಿಸಿಕೊಳ್ಳಿ. ಅಗತ್ಯಕ್ಕೆ ಅನುಗುಣವಾಗಿ T3, T4 ಮತ್ತು ಇತರ ಪರೀಕ್ಷೆಗಳನ್ನು ವೈದ್ಯರು ಶಿಫಾರಸು ಮಾಡಬಹುದು.
4. ಆರೋಗ್ಯಕರ ಆಹಾರ ಸೇವಿಸಿ: ಸಮತೋಲಿತ ಆಹಾರ ಸೇವಿಸಿ. ವೈದ್ಯರ ಸಲಹೆಯಿಲ್ಲದೆ ಅಯೋಡಿನ್ ಅಥವಾ ಇತರ ಪೂರಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬೇಡಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.