ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರ ಸಂಖ್ಯೆ ನೂರು ದಾಟಿರುತ್ತದೆ. ಆದ್ರೆ ಕೆಲವರ ಪರಿಚಯವೇ ನಮಗಿರುವುದಿಲ್ಲ. ಹಿಂದೆ ಸ್ನೇಹಿತರ ದಂಡಿರುವ ಬದಲು ಪಕ್ಕದಲ್ಲಿ ಒಬ್ಬ ಒಳ್ಳೆಯ ಸ್ನೇಹಿತನಿದ್ರೆ ಆನೆ ಬಲ ಸಿಗುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಸ್ನೇಹಿತೆಯರು ದೊಡ್ಡ ಶಕ್ತಿ.
ಸ್ನೇಹ (Friendship )ಬಿಡಿಸಲಾಗದ ಬಂಧ. ಸಂತೋಷ (Happiness) ಹೆಚ್ಚಿಸಿ,ದುಃಖ ಮರೆಸುವ ಸಾಮರ್ಥ್ಯ ಸ್ನೇಹಕ್ಕಿದೆ. ಶಾಲೆ-ಕಾಲೇಜುಗಳಲ್ಲಿ ಸ್ನೇಹಿತರ ಸಂಖ್ಯೆ ಹೆಚ್ಚಿರುತ್ತದೆ. ಉದ್ಯೋಗ,ಮದುವೆ ನಂತ್ರ ಜವಾಬ್ದಾರಿ (Responsibility) ಹೆಚ್ಚಾಗಿ ಜನರು ಸ್ನೇಹಿತರನ್ನು ದೂರವಿಡ್ತಾರೆ. ಮಹಿಳೆಯರಲ್ಲಿ ಇದು ಸರ್ವೆ ಸಾಮಾನ್ಯ. ಮನೆ,ಮಕ್ಕಳು,ಕುಟುಂಬದ ಜವಾಬ್ದಾರಿ ಹೆಚ್ಚಾದಂತೆ ಸ್ನೇಹಿತರ ಜೊತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಮಕ್ಕಳು ಚಿಕ್ಕವರಿರುವಾಗ ಸಮಯ ಕಳೆದದ್ದು ತಿಳಿಯುವುದಿಲ್ಲ. ಆದ್ರೆ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಮಹಿಳೆಯರಿಗೆ ಒಂಟಿತನ ಕಾಡುವುದು ಹೆಚ್ಚು. ಸಿಕ್ಕ ಸಮಯವನ್ನು ಹೇಗೆ ಕಳೆಯಬೇಕೆಂಬುದು ತಿಳಿಯುವುದಿಲ್ಲ. ಕೆಲ ಮಹಿಳೆಯರು ಪುರುಷ ಸ್ನೇಹಿತರನ್ನು ಹೊಂದಿರುತ್ತಾರೆ. ಕಷ್ಟದ ಸಮಯದಲ್ಲಿ ನಮಗೆ ನೆರವಾಗುವವರು ಅವರೆಂದು ಭಾವಿಸುತ್ತಾರೆ. ಇದ್ರಲ್ಲಿ ತಪ್ಪಿಲ್ಲ. ಆದ್ರೆ ಗೆಳತಿಯರನ್ನು ಹೊಂದುವ ಅವಶ್ಯಕತೆಯೂ ಸಾಕಷ್ಟಿದೆ. ಜೀವನದ ಪ್ರತಿಯೊಂದು ಹಂತದಲ್ಲೂ ಗೆಳತಿಯರ ಅಗತ್ಯವಿದೆ. ವಯಸ್ಸಿನಲ್ಲಿ ಚಿಕ್ಕವರಾಗಿರಲಿ,ನಿಮ್ಮದೇ ವಯಸ್ಸಿನವರಾಗಿರಲಿ ಇಲ್ಲ ನಿಮಗಿಂತ ದೊಡ್ಡವರಾಗಿರಲಿ,ಮಹಿಳೆಯಾದವಳು ಕೆಲ ಗೆಳತಿಯರನ್ನು ಹೊಂದಿರಬೇಕು. ಗೆಳತಿಯರು ನಿಮ್ಮ ಆರೋಗ್ಯ ವೃದ್ಧಿಸಬಲ್ಲರು. ಇಂದು ಮಹಿಳೆಯರಿಗೆ ಮಹಿಳಾ ಗೆಳತಿಯರ ಅವಶ್ಯಕತೆ ಏಕಿದೆ ಎಂಬುದನ್ನು ಹೇಳ್ತೆವೆ.
ಒತ್ತಡ ನಿವಾರಣೆ : ಸ್ನೇಹ ಒತ್ತಡ ನಿವಾರಣೆ ಔಷಧಿ ಅಂದ್ರೆ ತಪ್ಪಾಗಲಾರದು. ಸ್ನೇಹಿತೆ ಜೊತೆ ಮಾತನಾಡುವ ಮೂಲಕ ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಮಾತನಾಡ್ತಾರೆ. ಮನಸ್ಸಿನಲ್ಲಿರುವುದನ್ನು ತೋಡಿಕೊಂಡರೆ ಅವರಿಗೆ ಸಮಾಧಾನ. ಆದ್ರೆ ಕೆಲ ಮಹಿಳೆಯರಿಗೆ ಈ ಭಾವನೆಗಳನ್ನು ಹೇಳಿಕೊಳ್ಳಲು ಯಾರೂ ಇರುವುದಿಲ್ಲ. ಪತಿ,ಕುಟುಂಬಸ್ಥರಿಗಿಂತ ಸ್ನೇಹಿತೆ ನಿಮ್ಮ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಳ್ಳಬಲ್ಲಳು. ಒತ್ತಡದಿಂದ ಬಳಲುತ್ತಿದ್ದರೆ ಅವಶ್ಯಕವಾಗಿ ನಿಮ್ಮ ಸ್ನೇಹಿತೆಯ ಮುಂದೆ ನಿಮ್ಮ ನೋವನ್ನು ಹೇಳಿಕೊಳ್ಳಿ. ನಂತ್ರ ನಿರಾಳತೆಯ ಅನುಭವ ನಿಮಗಾಗುತ್ತದೆ. ಈವರೆಗೂ ಸ್ನೇಹಿತೆಯರಿಲ್ಲ ಎನ್ನುವವರು ಈಗಲಾದ್ರೂ ಸ್ನೇಹ ಬೆಳೆಸುವ ಪ್ರಯತ್ನ ನಡೆಸಿ.
Acne Problem: ಮಧ್ಯವಯಸ್ಸಲ್ಲಿ ಮೊಡವೆಯೇ? ಕಾರಣ ಅರಿಯಿರಿ
ಪುರುಷರಿಗಿಂತ ಹೆಚ್ಚು ಆಪ್ತತೆ : ಮಹಿಳೆ ನೋವನ್ನು ಮಹಿಳೆ ಮಾತ್ರ ತಿಳಿಯಬಲ್ಲಳು. ಬಹುತೇಕ ಮಹಿಳೆಯರಿಗೆ ಸಹಾನುಭೂತಿಯ ಅವಶ್ಯಕತೆ ಇರುತ್ತದೆ. ಪುರುಷ ಸ್ನೇಹಿ ಕೆಲವೊಂದು ವಿಷ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲ. ನಿಮ್ಮ ಅತ್ತೆ,ಮಕ್ಕಳ ಬಗ್ಗೆ ನೀವು ಅವರ ಬಳಿ ಹೇಳಿಕೊಂಡರೆ ಅವರು ಅರ್ಥೈಸಿಕೊಳ್ಳುವುದು ಅಪರೂಪ. ಅದೇ ಗೆಳತಿಯಾದವಳು ಸುಲಭವಾಗಿ ನಿಮ್ಮ ಭಾವನೆ ತಿಳಿಯಬಲ್ಲಳು. ನಿಮಗೆ ಸಾಂತ್ವಾನ ಹೇಳಬಲ್ಲಳು. ಧೈರ್ಯ ನೀಡಬಲ್ಲಳು. ಉಪಾಯ ಹೇಳಬಲ್ಲಳು.
ನಿಮ್ಮ ಇಂಟಿಮೆಟ್ ಹೆಲ್ತ್ ಪ್ರಾಬ್ಲಮ್ ಗೆ ಪರಿಹಾರ : ಮುಟ್ಟು, ಸಂಭೋಗ, ಗರ್ಭಧಾರಣೆ ಹೀಗೆ ಅನೇಕ ಗೌಪ್ಯ ವಿಷ್ಯಗಳಿವೆ. ಅವುಗಳನ್ನು ಮಹಿಳೆಯರು ಯಾರ ಬಳಿಯೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಪುರುಷರ ಮುಂದೆ ಇದನ್ನು ಹೇಳುವುದು ಅಸಾಧ್ಯ. ಆದ್ರೆ ಗೆಳತಿ ಮುಂದೆ ಮುಜುಗರವಿಲ್ಲದೆ ಹೇಳಿಕೊಳ್ಳಬಹುದು. ನಿಮ್ಮ ಸಮಸ್ಯೆ ಅವರಿಗೂ ಕಾಡಿದೆಯಾ ಎಂಬ ಪ್ರಶ್ನೆಯನ್ನು ಮುಂದಿಡಬಹುದು. ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಂಡಿದ್ದಾರೆ ಎಂಬುದನ್ನು ಕೇಳಿ ತಿಳಿಯಬಹುದು. ಇವುಗಳನ್ನು ಮಾತನಾಡುವಾಗ ನಿಮಗೆ ನಾಚಿಕೆಯಾಗುವುದಿಲ್ಲ.
Woman Health : ವೈದ್ಯರ ಬಳಿ ಮಹಿಳೆಯರು ಎಂದೂ ಈ ಸಂಗತಿ ಮುಚ್ಚಿಡಬೇಡಿ!
ಆತ್ಮವಿಶ್ವಾಸ ಹೆಚ್ಚಳ : ಉತ್ತಮ ಸ್ನೇಹಿತೆಯಾದವಳು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾಳೆ. ಸ್ತ್ರೀ ಸ್ನೇಹಿತೆಯರು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತೆ ನಡೆದುಕೊಳ್ಳುವುದಿಲ್ಲ. ಒಬ್ಬ ಒಳ್ಳೆಯ ಸ್ನೇಹಿತೆ ನೀವು ನಾಚಿಕೊಳ್ಳುವಂತಹ ಕೆಲಸ ಮಾಡುವುದಿಲ್ಲ. ಯಾವುದೇ ಸಂದರ್ಭದಲ್ಲೂ ನಿಮಗೆ ನಾಚಿಕೆಯಾಗದಂತೆ ನೋಡಿಕೊಳ್ಳುತ್ತಾಳೆ. ನಿಮ್ಮ ಅಂತರಾಳವನ್ನು ಅರ್ಥಮಾಡಿಕೊಂಡಿರುವ ಸ್ನೇಹಿತೆ ನಿಮಗೆ ಪ್ರೋತ್ಸಾಹ ನೀಡುತ್ತಾಳೆ. ನಿಮಗೆ ಅಸಾಧ್ಯವೆಂದು ಕುಳಿತಿದ್ದ ಕೆಲಸವನ್ನು ಮಾಡಿಸುತ್ತಾಳೆ. ಸದಾ ನಿಮ್ಮ ಜೊತೆಗಿರುತ್ತೇನೆಂದು ಧೈರ್ಯ ತುಂಬುತ್ತಾಳೆ. ಇತ್ತೀಚಿನ ಸಂಶೋಧನೆಯು,ಸ್ನೇಹಿತೆಯರು ನಿಮ್ಮ ಸಂಗಾತಿಗಿಂತ ಹೆಚ್ಚು ನಿಮ್ಮನ್ನು ತಿಳಿದಿರುತ್ತಾರೆ ಎಂದಿದೆ. ನಿಮಗೆ ಯಾವಾಗ ಕೇಳುವ ಕಿವಿ ಬೇಕು, ಯಾವಾಗ ಅಳಲು ಭುಜ ಬೇಕು ಹಾಗೆ ಯಾವಾಗ ನೃತ್ಯ ಮಾಡಲು ಪಾರ್ಟನರ್ ಬೇಕೆಂಬುದು ಗೊತ್ತಿರುತ್ತದೆ.
ಸಂತೋಷಕ್ಕೆ ಸ್ನೇಹಿತೆಯರು : ದಿನನಿತ್ಯದ ಬದುಕು ಬೇಸರ ತಂದಿರುತ್ತದೆ. ಸ್ವಲ್ಪ ಬದಲಾವಣೆಯನ್ನು ಮನಸ್ಸು ಬಯಸುತ್ತಿರುತ್ತದೆ. ಅಂಥ ಸಂದರ್ಭದಲ್ಲಿ ಸ್ನೇಹಿತೆಯರ ಜೊತೆ ಸ್ವಲ್ಪ ಸಮಯ ಕಳೆದರೂ ಮನಸ್ಸು ಸಂತೋಷಗೊಳ್ಳುತ್ತದೆ. ಪಾರ್ಟಿ,ಶಾಪಿಂಗ್,ಚಾಟಿಂಗ್ ಹೀಗೆ ನಿಮಗಿಷ್ಟವಾದ ಕೆಲಸವನ್ನು ನೆಚ್ಚಿನ ಸ್ನೇಹಿತೆಯರ ಜೊತೆ ಮಾಡಿದ್ರೆ ನೀವು ಫ್ರೆಶ್ ಆಗ್ತೀರಿ.