ಆಕೆಯ ಕಡೆಗಣಿಸಿ ಪಡೆಯೋದು ಇಷ್ಟೇ, ನೀನಿಲ್ಲದೆ ಬದುಕೋದು ಕಲಿಸುವಿರಷ್ಟೇ

By Suvarna NewsFirst Published Feb 6, 2020, 12:17 PM IST
Highlights

ವ್ಯಕ್ತಿಯು ದೂರವಿದ್ದಷ್ಟೂ ಅವರ ಮಹತ್ವ ಅರಿವಾಗುತ್ತದೆ, ಕೆಲವರನ್ನು ದೂರವಿಟ್ಟಾಗ ಮಾತ್ರ ಅವರು ಮತ್ತೆ ಮತ್ತೆ ನಮ್ಮನ್ನೇ ಬಯಸಿ, ಸುತ್ತಿ ಬರುತ್ತಾರೆ ಎಂಬ ನಂಬಿಕೆ(ಮೂಢ)ಯೊಂದು ಚಾಲ್ತಿಯಲ್ಲಿದೆ. ಆದರೆ, ಇದೇ ಅಭ್ಯಾಸವಾದರೆ, ಅವರು ನೀವಿಲ್ಲದೆ ಲೀಲಾಜಾಲವಾಗಿ ಬದುಕುವುದನ್ನು ಕಲಿತುಕೊಳ್ಳುತ್ತಾರೆ. 

ಸಂಬಂಧದ ವಿಷಯದಲ್ಲಿ ಈ ಗಂಡು ಜಾತಿಗಂಟಿದ ಒಂದಿಷ್ಟು ಮೂಢನಂಬಿಕೆಗಳಿವೆ. ಅವುಗಳಲ್ಲೊಂದು ತಮ್ಮ ಜೀವನದಲ್ಲಿರುವ ಮಹಿಳೆಯ ಕಡೆಗೆ ಡೋಂಟ್ ಕೇರ್ ಆ್ಯಟಿಟ್ಯೂಡ್ ತೋರಿಸಿದರೆ, ಅದರಿಂದ ತಮಗೆ ಬೇಕಾದ ಫಲಿತಾಂಶ ಸಿಗುತ್ತದೆ ಎಂಬುದು. ಆಕೆಯನ್ನು ಕಡೆಗಣಿಸಿದರೆ, ತಮ್ಮ ಗಮನ ಹಾಗೂ ಪ್ರೀತಿಯನ್ನು ಪಡೆಯಲು ಆಕೆ ಹಿಂದೆ ಹಿಂದೆ ಬರುತ್ತಾಳೆ, ಇದರಿಂದ ತಮ್ಮ ಮೇಲೆ ಆಕೆಯ ಪ್ರೀತಿ, ಮೋಹ ಇನ್ನೂ ಹೆಚ್ಚಾಗುತ್ತದೆ ಎಂದು ಭಾವಿಸುವ ಯುವಕರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ, ಇಂಥ ಕ್ರೂರ ತಂತ್ರಗಳೆಲ್ಲ ಆರಂಭದಲ್ಲಿ ಒಂದೆರಡು ಬಾರಿ ತಾವಂದುಕೊಂಡಂತೆಯೇ ಫಲ ನೀಡಬಹುದು. ಅದರಲ್ಲೂ ಟೀನೇಜ್ ಮುಗಿಯದ ಕೆಲ ಯುವತಿಯರು ಇಂಥ ತಂತ್ರಕ್ಕೆ ದಾಳವಾಗಬಹುದು. ಆದರೆ, ಪದೇ ಪದೆ ಪುನರಾವರ್ತನೆಯಾದರೆ ತಾವೆಸೆದ ಬಾಣ ತಮಗೇ ತಿರುಗುಬಾಣವಾಗಬಹುದು. 

ವೀಕೆಂಡ್‌ನಲ್ಲಿ ಮಾತ್ರ ಜೊತೆಯಾಗ್ತಾರೆ ಗಂಡ ಹೆಂಡತಿ! ಇದು ಈ ಕಾಲದ ಟ್ರೆಂಡ್ ಕಣ್ರೀ.....

ಇಂದಿನ ಬಹುತೇಕ ಯುವತಿಯರಿಗೆ, ಅದರಲ್ಲೂ ಉದ್ಯೋಗಸ್ಥ ಮಹಿಳೆಯರಿಗೆ ಇರುವ ಸ್ವಾಭಿಮಾನ ಅಪಾರ. ಆಕೆಯಲ್ಲಿ ಅತೃಪ್ತಿ ಇಲ್ಲ. ಇಂಥ ಬೇಡದ ಪ್ರೀತಿಯ ಆಟಗಳನ್ನಾಡಲು ಸಮಯವಿಲ್ಲ. ನೀವು ಪ್ರಾಮಾಣಿಕವಾಗಿ ಪ್ರೀತಿಸಿ, ಆಕೆಯನ್ನು ಸರಿಯಾಗಿ ನಡೆಸಿಕೊಂಡರೆ ನಿಮಗೆ ಕೂಡಾ ಅದೇ ರೀತಿಯ ಪ್ರೀತಿ ದಕ್ಕಿಸುವಲ್ಲಿ ಆಕೆ ಶತಪ್ರಯತ್ನ ಮಾಡುತ್ತಾಳೆ. ಆದರೆ, ನೀವು ಅಪ್ರಾಮಾಣಿಕರೆಂದು ಕಂಡುಬಂದರೆ ಮಾತ್ರ ಆಕೆ ಎಂದಿಗೂ ಮತ್ತೆ ನಿಮ್ಮ ಬದುಕಿಗೆ ಹಿಂದಿರುಗಿ ಬರದಷ್ಟು ದೂರಕ್ಕೆ ಪಶ್ಚಾತ್ತಾಪವೇ ಇರದೆ ಹೋಗಿಬಿಡಬಲ್ಲಳು. ಇದನ್ನು ಪುರುಷ ಜಗತ್ತು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. 

ಕಡೆಗಣಿಸಿ ಕಡೆಗಣನೆಯಾಗದಿರಿ
ನಿಮಗೆ ಕಚೇರಿಯಲ್ಲಿ ವಿಪರೀತ ಕೆಲಸವಿದ್ದು ಆಕೆಯತ್ತ ಗಮನ ಕೊಡದಷ್ಟು ಬ್ಯುಸಿ ಇರಬಹುದು. ಹೇಳಿದರೆ ಆಕೆ ಅರ್ಥ ಮಾಡಿಕೊಳ್ಳುತ್ತಾಳೆ. ಅಥವಾ ನೀವು ನಿಮ್ಮ ಗೆಳೆಯರ ಜೊತೆ ಪಾರ್ಟಿಯಲ್ಲಿ ತಲ್ಲೀನರಾಗಿರಬಹುದು. ಒಂದು ಮಾತು ತಿಳಿಸಿದರೆ ಮತ್ತಾಕೆಗೆ ಯಾವ ಅಭ್ಯಂತರವೂ ಇರುವುದಿಲ್ಲ. ನೀವು ಹುಷಾರಿಲ್ಲದ ತಾಯಿಯನ್ನು ನೋಡಿಕೊಳ್ಳಬೇಕಿರುವ ಕಾರಣ ನಿಮ್ಮಾಕೆಯತ್ತ ಗಮನ ಹರಿಸಲು ಸಾಧ್ಯವಾಗುತ್ತಿಲ್ಲದಿರಬಹುದು. ನಿಮ್ಮ ಈ ಸಮಸ್ಯೆಯನ್ನು ಹೇಳಿಕೊಂಡರೆ ನಿಮ್ಮ ಮನಸ್ಸೂ ಹಗುರಾಗುತ್ತದೆ, ಆಕೆಯೂ ಅರಿತುಕೊಳ್ಳುತ್ತಾಳೆ. ಆದರೆ, ಇದಾವುದೂ ಇಲ್ಲದೆ ಸುಖಾಸುಮ್ಮನೆ ನಿರ್ಲಕ್ಷ್ಯ ತೋರುವುದಿದೆಯಲ್ಲ... ಅದನ್ನು ಮಾತ್ರ ಆಕೆಗೆ ಅರ್ಥ ಮಾಡಿಕೊಳ್ಳಲಾಗುವುದಿಲ್ಲ. 

ಬೇಕೆಂದೇ ನಿರ್ಲಕ್ಷಿಸುವ ತಪ್ಪು
ಹಲವು ಬಾರಿ ತಮ್ಮನ್ನು ಪ್ರೀತಿಸುವ ಹೆಣ್ಣಿಗೆ ತಮ್ಮ ಬೆಲೆ ಅರ್ಥ ಮಾಡಿಸಲೆಂದೋ, ತಮಗಾಗಿ ಆಕೆ ಹಪಹಪಿಸುವುದನ್ನು ನೋಡುವ ಹಂಬಲದಿಂದಲೋ, ಅವಳು ನಾನೇ ಬೇಕೆಂದು ನನ್ನ ಸುತ್ತ ಸುತ್ತಲಿ ಎಂದೋ ಅವಳನ್ನು ಇಗ್ನೋರ್ ಮಾಡುವ, ಅವಳಲ್ಲಿ ಮನದ ಭಾವನೆಗಳನ್ನು ಹೇಳಿಯೇಕೊಳ್ಳದೆ ಅವಳೇ ಎಲ್ಲ ಅರ್ಥ ಮಾಡಿಕೊಳ್ಳಲಿ ಎಂದು ಬಯಸುವ ಯುವಕರಿಗೆ ತಾವು ಮಾಡುತ್ತಿರುವ ತಪ್ಪಿನ ಅರಿವೇ ಆಗುವುದಿಲ್ಲ. ಯಾರನ್ನೇ ಆಗಲಿ, ಒಂದೆರಡು ಬಾರಿ ಇಗ್ನೋರ್ ಮಾಡಿದಾಗ, ಅವರು ತಮ್ಮನ್ನು ಓಲೈಸಿ, ಸಂತೈಸಿ ಹಿಂದೆ ಹಿಂದೆ ಬರಬಹುದು. ಆದರೆ, ಇದು ಮತ್ತೆ ಮತ್ತೆ ನಡೆದಾಗ ಅವರಿಗದು ಅಭ್ಯಾಸವಾಗಿ ಬಿಡುತ್ತದೆ. ನಿಧಾನವಾಗಿ ಅವರು ನೀವಿಲ್ಲದೆಯೇ, ನಿಮ್ಮ ಗಮನ, ಪ್ರೀತಿ ಯಾವುದೊಂದೂ ಇಲ್ಲದೆಯೇ ಸಂತೋಷವಾಗಿ ಬದುಕಲು ಕಲಿಯುತ್ತಾರೆ. ಅದರಲ್ಲೂ ಆರ್ಥಿಕವಾಗಿ ಸ್ವತಂತ್ರರಾಗಿದ್ದರಂತೂ ಅವರು ನೀವು ತೋರಿದ ನಿರ್ಲಕ್ಷ್ಯದ ಹತ್ತು ಪಟ್ಟನ್ನು ನಿಮಗೆ ತಿರುಗಿಸಿ, ಮರುಕವೇ ಇಲ್ಲದಂತೆ ದೂರಾಗಬಲ್ಲರು. 

ಕೋಚಿಂಗ್ ಇಲ್ಲದೇ ಕೆಎಎಸ್ ಪಾಸಾದ ಗೃಹಿಣಿ

ಪ್ರಾಮಾಣಿಕತೆಯೊಂದೇ ಅಸ್ತ್ರ
ಪ್ರೀತಿ, ಗೌರವ, ಗಮನ ಹಾಗೂ ಕಾಳಜಿಯಿಂದಷ್ಟೇ ಯಾವುದೇ ಹೆಣ್ಣಿನ ಮನಸ್ಸನ್ನು ಗೆಲ್ಲಲು ಸಾಧ್ಯ. ಅದು ಬಿಟ್ಟು ಬೇರೇನೇ ಟ್ರಿಕ್‌ಗಳನ್ನು ನಡೆಸಿದರೂ ಅವು ಫಲ ನೀಡಲು ಸಾಧ್ಯವಿಲ್ಲ. ಪ್ರಾಮಾಣಿಕತೆಯೊಂದೇ ಆಕೆ ಬಯಸುವುದು. ನಿಮ್ಮ ಕಣ್ಣುಗಳಲ್ಲಿ, ಮಾತುಗಳಲ್ಲಿ, ನಡೆಗಳಲ್ಲಿ, ಭಾವನೆಗಳಲ್ಲಿ ಇಣುಕುವ ಪ್ರಾಮಾಣಿಕತೆ ಆಕೆಯನ್ನು ಹುಚ್ಚೆಬ್ಬಿಸಬಹುದು. ಅದರ ಹೊರತಾದ ಯಾವ ತಂತ್ರಗಳಾಗಲೀ, ಹಣವಾಗಲೀ, ಸ್ಟೇಟಸ್ ಆಗಲಿ ಹೆಣ್ಣನ್ನು, ಆಕೆಯ ಪ್ರೀತಿಯನ್ನು ನಿಮಗೆ ಒಲಿಸಲಾರವು. 

'ಹಣ ಹೆಚ್ಚಾದಾಗ ಪುರುಷರಿಗೆ ಹೆಚ್ಚು ಮಹಿಳೆಯರ ಸಖ್ಯ ಬೇಕೆನಿಸುತ್ತದೆ. ಆದರೆ ಯುವತಿಗೆ ಹಣ ಹೆಚ್ಚಾದಾಗ ಏಕಮಾತ್ರ ಪುರುಷನೂ, ಆತ ಅಪ್ರಾಮಾಣಿಕನಾಗಿದ್ದರೆ, ಬೇಡ ಎನಿಸುತ್ತದೆ' ಎಂಬುದನ್ನು ಅರ್ಥ ಮಾಡಿಕೊಳ್ಳಿ. ಆಕೆ ಪುರುಷರಷ್ಟು ಅವಲಂಬಿತೆಯಲ್ಲ. ಹಿಂದಿನಂತೆ ಈಗ ಆಕೆಯನ್ನು ಯಾರೂ ಸಾಕುವ ಅನಿವಾರ್ಯತೆಯೂ ಇಲ್ಲ. ಹಾಗಾಗಿಯೇ ಪ್ರೀತಿಯೊಂದೇ ಆಕೆಯನ್ನು ಪಡೆವ, ಅವಳ ಪ್ರೀತಿಯನ್ನು ಗಳಿಸುವ ಗುಟ್ಟು. 

click me!