ವಿಶ್ವ ತಾಯಂದಿರ ದಿನವಾದ ಮೇ 8ರಂದು ನಿಮ್ಮ ತಾಯಿಯ ಆರೋಗ್ಯಕ್ಕೆ ಪೂರಕವಾಗುವಂಥ ಉಡುಗೊರೆಯನ್ನು ನೀಡಿ. ಈ ಸಂಬಂಧ ಏನು ಕೊಡಬಹುದೆಂದು ನಾವು ತಿಳಿಸುತ್ತೇವೆ.
ನಮಗೆ ಜಗತ್ತನ್ನೇ ಕೊಟ್ಟ, ಮಕ್ಕಳೇ ಜಗತ್ತು ಎಂದುಕೊಂಡ ತಾಯಿಗೆ ನಾವೇನು ಕೊಟ್ಟಿದ್ದೇವೆ?
ನಮಗೆ ಅಳು ಬಂದಾಗ ಹೆಗಲಾಗುತ್ತಾಳೆ, ನಕ್ಕಾಗ ನಗುತ್ತಾಳೆ, ಕಷ್ಟದಲ್ಲಿ ಹೆಚ್ಚಿನ ಭಾರ ಹೊರಲು ಹೆಗಲು ಕೊಡುತ್ತಾಳೆ, ನಮ್ಮ ಆರೋಗ್ಯ ಕೆಟ್ಟಾಗ ರಾತ್ರಿಯೆಲ್ಲ ನಿದ್ದೆಗೆಟ್ಟು ತನ್ನಿಂದ ಸಾಧ್ಯವಾದುದನ್ನೆಲ್ಲ ಮಾಡಿ ನೋಡಿಕೊಳ್ಳುತ್ತಾಳೆ. ಅಂಥ ಸಹೃದಯಿ ಅಮ್ಮನಿಗೆ ನಾವೇನು ಕೊಟ್ಟಿದ್ದೇವೆ? ಏನೂ ಕೊಡದಿದ್ದರೂ ಪರವಾಗಿಲ್ಲ, ಕನಿಷ್ಠ ಪಕ್ಷ ಆಕೆ ನಮಗೆ ಎಷ್ಟು ವಿಶೇಷ ಎಂಬುದನ್ನಾದರೂ ಆಗಾಗ ತಿಳಿಸಬೇಕಲ್ಲವೇ?
ಅಮ್ಮ ನಮಗೆ ಸ್ಪೆಶಲ್ ಎಂಬುದನ್ನು ಯಾವುದೇ ಸಾಮಾನ್ಯ ದಿನವೂ ತಿಳಿಸಬಹುದು. ಆದರೆ, ಆ ಕೆಲಸವನ್ನು ಇದುವರೆಗೂ ಮಾಡಿಲ್ಲವೆಂದರೆ ಇಲ್ಲಿದೆ ವಿಶೇಷ ದಿನ. ಅದೇ ಅಮ್ಮಂದಿರ ದಿನ(Mother's day).
ಹೌದು, ಮೇ 8ರಂದು ಅಮ್ಮಂದಿರ ದಿನ. ಅಮ್ಮ ತಮ್ಮ ಪಾಲಿಗೆ ಎಷ್ಟು ವಿಶೇಷವಾದವಳು ಎಂದು ಮಕ್ಕಳು ತಿಳಿಸಲು ಇದು ಅತ್ಯುತ್ತಮ ದಿನ. ಇಷ್ಟಕ್ಕೂ ಅಮ್ಮನಿಗೆ ಬೇಕಾದುದೇನು? ಅವಳು ಕೇಳುವುದು ಮಕ್ಕಳ ಸಂತೋಷವೊಂದೇ. ನಾವೇ ಆಕೆಗೆ ಅತ್ಯುತ್ತಮವಾದುದೇನಾದರೂ ನೀಡಬೇಕೆಂದರೆ ಅದು ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದುದಾದರೆ ಚೆನ್ನಾಗಿರುತ್ತದೆಯಲ್ಲವೇ? ಏಕೆಂದರೆ ಆರೋಗ್ಯಕ್ಕಿಂತ ಮಿಗಿಲಾದುದು ಬೇರೇನೂ ಇಲ್ಲ. ಸೀರೆ, ಒಡವೆಗಳಿಗಿಂತ ಹೆಚ್ಚು ಅಮೂಲ್ಯವಾದುದು ಆರೋಗ್ಯ. ಅದರಲ್ಲೂ ತಾಯಂದಿರು ಮನೆಯ ಇತರ ಎಲ್ಲರ ಆರೋಗ್ಯ ಕಾಳಜಿ ಮಾಡುತ್ತಾ ತಮ್ಮದನ್ನು ನಿರ್ಲಕ್ಷಿಸುತ್ತಿರುತ್ತಾರೆ. ಹೀಗಾಗಿ, ಈ ಮದರ್ಸ್ ಡೇ ದಿನ ನಿಮ್ಮ ತಾಯಿಗೆ ಆರೋಗ್ಯಕ್ಕೆ ಸಂಬಂಧಿಸಿದ ಈ ರೀತಿಯ ಉಡುಗೊರೆಗಳನ್ನು ನೀಡಿ ಬೆಂಬಲ ವ್ಯಕ್ತಪಡಿಸಿ.
Mothers Day 2022: ತಾಯಂದಿರ ದಿನವನ್ನು ಯಾಕೆ ಆಚರಿಸುತ್ತಾರೆ ? ಇತಿಹಾಸ ಮತ್ತು ಮಹತ್ವವೇನು ?
ಜಿಮ್ ಸದಸ್ಯತ್ವ(Gym membership)
ಮಾನಸಿಕ ಆರೋಗ್ಯವು ದೈಹಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಅವುಗಳಲ್ಲಿ ಯಾವುದಾದರೂ ಒಂದು ಕೈಕೊಟ್ಟರೆ ಮತ್ತೊಂದರ ಮೇಲೆ ಪರಿಣಾಮ ಬೀರುತ್ತದೆ. ತಾಯಿಯ ವಯಸ್ಸು ಹೆಚ್ಚಾದಂತೆ, ಆಕೆಯ ದೈಹಿಕ ಚಟುವಟಿಕೆಯು ಕಡಿಮೆಯಾಗುತ್ತದೆ. ಅವರು ಪ್ರತಿದಿನ ವ್ಯಾಯಾಮ ಮಾಡುವುದರಿಂದ ಆರೋಗ್ಯ ಚೆನ್ನಾಗಿಟ್ಟುಕೊಳ್ಳುವುದು. ಹೀಗೆ ಅವರು ಪ್ರತಿ ದಿನ ವ್ಯಾಯಾಮದಲ್ಲಿ ತೊಡಗುವಂತೆ ಮಾಡುವುದಕ್ಕೆ ಅವರಿಗೆ ಜಿಮ್ ಸದಸ್ಯತ್ವ ಕಲ್ಪಿಸಿಕೊಡಿ. ಇದಕ್ಕಾಗಿ ಎನಿಟೈಮ್ ಫಿಟ್‌ನೆಸ್ ಇಂಡಿಯಾದ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು. ಇದು ನಿಮ್ಮ ತಾಯಿಗೆ ಯಾವುದೇ ಸಮಯದಲ್ಲಿ, ಎಲ್ಲಿಂದಲಾದರೂ ವ್ಯಾಯಾಮ ಮಾಡಲು ಸಹಾಯ ಮಾಡುತ್ತದೆ ಮತ್ತು ಅವರ ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇರಿಸುತ್ತದೆ. ಇಲ್ಲವೇ ಮನೆಯ ಹತ್ತಿರದ ಜಿಮ್‌ಗೆ ಸೇರಿಸಿ ನೀವೂ ಅವರಿಗೆ ಕಂಪನಿ ಕೊಡಿ.
ಒಂದು ಚಿಕಿತ್ಸೆ ಅಧಿವೇಶನ(A healing session)
ಕೆಲವೊಮ್ಮೆ ನಮಗೆ ಮುಖ್ಯವಾಗಿ ಏನು ಬೇಕೋ ಅದನ್ನೇ ನಿರ್ಲಕ್ಷಿಸುತ್ತಿರುತ್ತೇವೆ. ವಯಸ್ಸಾದಂತೆಲ್ಲ ತಾಯಂದಿರ ಅಸಹಾಯಕತೆ ಹೆಚ್ಚುತ್ತದೆ. ಜೊತೆಗೆ ಅವರು ಹಳೆಯ ತಲೆಮಾರಾಗಿ ಬಿಡುತ್ತಾರೆ. ಇದು ಅವರಲ್ಲಿ ತಾವು ಇತರರಿಗಿಂತ ಕಡಿಮೆ ಎಂಬ ಭಾವನೆ ಹುಟ್ಟಿಸುತ್ತದೆ. ಇಂಥ ಸಂದರ್ಭದಲ್ಲಿ ಆಕೆಯ ಆಂತರಿಕ ಶಕ್ತಿ ಮತ್ತು ಮಾನಸಿಕ ಶಕ್ತಿ ಹೆಚ್ಚಿಸಲು ಲೈಫ್ ಕೋಚ್ ಮತ್ತು ಆಧ್ಯಾತ್ಮಿಕ ಹೀಲರ್ ಜೊತೆ ಅವರನ್ನು ಭೇಟಿ ಮಾಡಿಸಿ. ಅವರು ನಿಮ್ಮ ತಾಯಿಯ ಮಾನಸಿಕ ಸ್ಥಿತಿ ಬಲಗೊಳಿಸಲು ಸಹಾಯ ಮಾಡುತ್ತಾರೆ.
ಪೂರಕ ಆಹಾರಗಳು(supplements)
ಅಮ್ಮಂದಿರಿಗೆ ವಯಸ್ಸಾದಂತೆಲ್ಲ ಪೋಷಕಸತ್ವಗಳ ಕೊರತೆಯಾಗುತ್ತದೆ. ಐರನ್, ಕ್ಯಾಲ್ಶಿಯಂ ಸೇರಿದಂತೆ ಬಹುತೇಕ ವಿಟಮಿನ್‌ಗಳು ಕಡಿಮೆಯಾಗುತ್ತವೆ. ಇಂಥ ಸಂದರ್ಭದಲ್ಲಿ ನಿಮ್ಮ ತಾಯಿಗೆ ಪ್ರತಿ ದಿನ ಸೇವಿಸಲು ಈ ಎಲ್ಲವನ್ನೂ ಒಳಗೊಂಡಂಥ ದೊಡ್ಡ ಆಹಾರ ಪದಾರ್ಥಗಳ ಚೀಲವನ್ನೇ ಉಡುಗೊರೆಯಾಗಿ ನೀಡಬಹುದು. ಅದರಲ್ಲಿ ಡ್ರೈಫ್ರೂಟ್ಸ್, ಪ್ರೋಟೀನ್, ಪ್ರೋಬಯಾಟಿಕ್‌ಗಳು, ಆಯುರ್ವೇದ ಔಷಧೀಯ ಪದಾರ್ಥಗಳು ಸೇರಿದಂತೆ ಅತ್ಯುತ್ತಮ ಆಹಾರವೆನಿಸಿಕೊಂಡಂಥ ಎಲ್ಲವೂ ಇರಲಿ.
ಸಂಪೂರ್ಣ ದೇಹದ ತಪಾಸಣೆ(whole body checkup)
ವಯಸ್ಸಾದಂತೆ ವಿವಿಧ ಆರೋಗ್ಯ ಸಮಸ್ಯೆಗಳೂ ಬರುತ್ತವೆ. ಕೆಲವೊಮ್ಮೆ ನಾವು ಸಮಸ್ಯೆಗಳನ್ನು ಗುರುತಿಸಬಹುದು, ಮತ್ತೆ ಕೆಲವೊಮ್ಮೆ ಸಮಸ್ಯೆ ಗಂಬೀರವಾಗುವವರೆಗೆ ಏನೂ ತಿಳಿಯುವುದಿಲ್ಲ. 40 ದಾಟಿದ ಮೇಲೆ ಪ್ರತೀ ವರ್ಷಕ್ಕೊಮ್ಮೆ ಫುಲ್ ಬಾಡಿ ಚೆಕಪ್ ಮಾಡಿಸಲು ಸಲಹೆ ಮಾಡಲಾಗುತ್ತದೆ. ಆದರೆ ಬಹುತೇಕರು ಈ ಗೊಡವೆಗೆ ಹೋಗುವುದಿಲ್ಲ. ಆದರೆ, ತಾಯಂದಿರ ದಿನದಂದು ಆಕೆಗೆ ಉಡುಗೊರೆಯಾಗಿ ನೀವು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಫುಲ್ ಬಾಡಿ ಚೆಕಪ್ ಮಾಡಿಸಿ. ಇದರಿಂದ ಅವರ ಆರೋಗ್ಯದ ಕುರಿತು ಸ್ಪಷ್ಟ ಚಿತ್ರಣ ಪಡೆಯಲು ಸಾಧ್ಯವಾಗುತ್ತದೆ.
ಆಡುವ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ, ಐದು ವರ್ಷಕ್ಕೇ ಮಗುವೊಂದು ಮಡಿಲಿನಲ್ಲಿತ್ತು !
ಫಿಸಿಯೋಥೆರಪಿ(A physiotherapy session)
ನಿಮ್ಮ ತಾಯಿಯು ಮೈ ಕೈ ನೋವು, ಕೀಲು ನೋವುಗಳಂತಹ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದ್ದರೆ, ಅದು ಹೆಚ್ಚಾಗುವ ಮೊದಲು ಅದರತ್ತ ಗಮನ ಹರಿಸಿ. ತಾಯಂದಿರ ದಿನದಂದು ತಾಯಿಗೆ ಫಿಸಿಯೋಥೆರಪಿಯ ಸೆಶನ್ ತೆಗೆದುಕೊಳ್ಳುವುದನ್ನೇ ಉಡುಗೊರೆಯಾಗಿ ನೀಡಿ. ಇದರಿಂದ ಅವರಿಗೆ ಹಿತಕರವೆನಿಸುತ್ತದೆ.