
ತಾಯಿ, ಅಮ್ಮ, ಜನನಿ, ಮಾತೆ, ಅವ್ವ, ಅಬ್ಬೆ ಆಕೆಗೆ ಹೆಸರು ಹಲವು. ಆದರೆ ಪ್ರೀತಿ ಮಾತ್ರ ಸಾಗರಕ್ಕಿಂತ ಅಗಾಧವಾದುದು. ಮಮತೆ ಮಾತಿಗೂ ಸಿಲುಕದ್ದು. ಮೇ 8 ರಂದು ತಾಯಂದಿರ ದಿನ (Mother's Day) ಬರುತ್ತದೆ. ಮಕ್ಕಳಿಗಾಗಿ ಜೀವವನ್ನೇ ಮುಡಿಪಾಗಿರುವ ತಾಯಂದಿರು ಎಲ್ಲರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತಾರೆ. ಹೀಗಾಗಿಯೇ ಪ್ರಪಂಚದಾದ್ಯಂತ ಮದರ್ಸ್ ಡೇ ಆಚರಿಸಲಾಗುತ್ತದೆ. ಮಗುವನ್ನು ಗರ್ಭದಲ್ಲಿ ಹೊತ್ತ ತಾಯಿ ಅಲ್ಲಿಂದ ತೊಡಗಿ ಜೀವನಪೂರ್ತಿ ಮಗುವಿಗಾಗಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಳ್ಳುತ್ತಾಳೆ. ಮಕ್ಕಳ (Children) ಖುಷಿಯಲ್ಲೇ ತನ್ನ ಖುಷಿಯನ್ನು ಕಂಡುಕೊಳ್ಳುತ್ತಾಳೆ. ಅವರಿಗಾಗಿ ಜೀವನದಲ್ಲಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧವಾಗುತ್ತಾಳೆ. ಇಂಥಾ ತಾಯಿಗಾಗಿ ಒಂದು ದಿನವಲ್ಲ, ವರ್ಷ ಪೂರ್ತಿ ಮೀಸಲಿಟ್ಟರೂ ಕಡಿಮೆಯೇ.
ಮೇ 8 ರಂದು ತಾಯಂದಿರ ದಿನ (Mother's Day).ಭಾರತ ಸೇರಿದಂತೆ ಪ್ರಪಂಚದಾದ್ಯಂತ ಮೇ 8 ಅನ್ನು ವಿಶ್ವ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ತಾಯಂದಿರ ದಿನಕ್ಕೆ ನಾವು ನಿಮಗೊಂದು ಅಚ್ಚರಿಯ ವಿಷಯ ಹೇಳುತ್ತಿದ್ದೇವೆ. ಈಕೆ ಇಡೀ ಜಗತ್ತನ್ನೇ ಅಚ್ಚರಿಗೊಳಪಡಿಸಿದ ತಾಯಿ. ಕೇವಲ 5 ವರ್ಷ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದಾಕೆ. ಇಂದಿಗೂ ಜಗತ್ತಿನಾದ್ಯಂತ ವೈದ್ಯರಿಗೆ ಇದೊಂದು ಪ್ರಶ್ನಾರ್ಥಕವಾಗಿ ಉಳಿದಿದೆ. ಕೇವಲ 5 ವರ್ಷ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂದು ವೈದ್ಯರು ಇಲ್ಲಿಯವರೆಗೂ ಅರ್ಥಮಾಡಿಕೊಂಡಿಲ್ಲ.
Mothers Day 2022: ಅಮ್ಮನನ್ನು ಖುಷಿಪಡಿಸಲು ಈ ರೀತಿ ಸರ್‌ಪ್ರೈಸ್ ನೀಡಿ
ಕೇವಲ 5 ವರ್ಷ ವಯಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದಾಕೆಯನ್ನು ವಿಶ್ವದ ಅತ್ಯಂತ ಕಿರಿಯ ತಾಯಿ ಎಂದು ಕರೆಯಲಾಗುತ್ತದೆ. ಈ ತಾಯಿಯ ಹೆಸರು ಲೀನಾ ಮದೀನಾ. ಲೀನಾ ಮದೀನಾ 27 ಸೆಪ್ಟೆಂಬರ್ 1933ರಂದು ಪೆರುವಿನ ಟಿಕ್ರಾಪೋದಲ್ಲಿ ಜನಿಸಿದರು. ಲೀನಾ ಕೇವಲ 5 ವರ್ಷದವಳಿದ್ದಾಗ, ಇದ್ದಕ್ಕಿದ್ದಂತೆ ಅವಳ ಹೊಟ್ಟೆಯ ಗಾತ್ರವು ಹೆಚ್ಚಾಗತೊಡಗಿತು. ಮೊದಮೊದಲು ಲೀನಾ ಅವರ ಪೋಷಕರು ಟ್ಯೂಮರ್‌ನಿಂದ ಹೊಟ್ಟೆ ಬೆಳೆಯುತ್ತಿದೆ ಎಂದು ಭಾವಿಸಿದ್ದರು. ಆದರೆ ಅದರ ಅಸಲಿಯತ್ತೇ ಬೇರೆಯಾಗಿತ್ತು.
ವೈದ್ಯರು ಲೀನಾಳನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವುದು ಕಂಡುಬಂದಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡುವುದು ಹೇಗೆ ಎಂಬುದು ವೈದ್ಯರ ಮುಂದಿದ್ದ ದೊಡ್ಡ ಸವಾಲಾಗಿತ್ತು. ಅಷ್ಟು ಸಣ್ಣ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದು ಲೀನಾಳ ಜೀವಕ್ಕೆ ಅಪಾಯಕಾರಿಯಾಗಿತ್ತು.
ಮಾತ್ರವಲ್ಲ ಹೆರಿಗೆ ಮಾಡಿಸುವುದು ವೈದ್ಯರ ಪಾಲಿಗೂ ಸವಾಲಾಗಿತ್ತು. ಇದು ಲೀನಾಳ ಜೀವಕ್ಕೆ ಅಪಾಯಕಾರಿಯಾಗಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ಅಂತಿಮವಾಗಿ ಮೇ 14, 1939ರಂದು ಲೀನಾ ಮದೀನಾ ಕೇವಲ 5 ವರ್ಷ ವಯಸ್ಸಿನಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದರು. ಈ ಸುದ್ದಿ ಆ ಸಮಯದಲ್ಲಿ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
Mothers Day 2022: ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಲು ಬಯಸಿದ್ದರೆ ಹೀಗೆ ಮಾಡಿ
ಲೀನಾಗೆ ಹೆರಿಗೆಯಾದಾಗ ಆಕೆಯ ಮಗುವಿನ ತೂಕ 2.7 ಕೆಜಿ ಇತ್ತು. ಲೀನಾಗೆ ಪ್ರಿಕೋಸಿಯಸ್ ಪ್ಯೂಬರ್ಟಿ ಎಂಬ ಸಮಸ್ಯೆ ಇತ್ತು ಎಂಬ ಸತ್ಯ ಬಳಿಕ ಬಹಿರಂಗವಾಯ್ತು. ಈ ಸಮಸ್ಯೆ ಎದುರಿಸುವವರಿಗೆ ಲೈಂಗಿಕ ಅಂಗಗಳು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಯುತ್ತವೆ. ವರದಿಯ ಪ್ರಕಾರ ಲೀನಾಗೆ 3 ವರ್ಷ ವಯಸ್ಸಿನಲ್ಲೇ ಪಿರಿಯಡ್ಸ್ ಬರಲಾರಂಭಿಸಿತ್ತು ಎಂದು ತಿಳಿದುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.