
ಮನೆಯಲ್ಲಿ ಹೆಣ್ಣು ಇದ್ದರೆ ಒಡಲಿನಲ್ಲಿ ಬೆಂಕಿ ಇಟ್ಟುಕೊಂಡಂತೆ ಎನ್ನುವ ಗಾದೆಮಾತು ಈಗಲೂ ರೂಢಿಯಲ್ಲಿದೆ. ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡದಿದ್ದರೆ, ಆಡುವ ಕುಹಕದ ಮಾತುಗಳಿಗೆ ನೋವನ್ನು ಅನುಭವಿಸುವ ಜೀವಗಳು ಅದೆಷ್ಟೋ. ಇಂದಿನ ಆಧುನಿಕ ಯುಗದಲ್ಲಿ ಹೆಣ್ಣು ಹಾಗೆ, ಹೀಗೆ ಎಂದೆಲ್ಲಾ ಎಷ್ಟೇ ಬೀಗಿದರೂ, ಎಷ್ಟೇ ಹೆಮ್ಮೆ ಪಟ್ಟುಕೊಂಡರೂ, ಮದುವೆಯಾಗದ ಹೆಣ್ಣು ಇದ್ದರೆ ಆಕೆಯನ್ನು ಕಾಣುವ ಪತಿ ಆ ದೇವರಿಗೇ ಪ್ರೀತಿ. ಇದು ಒಂದೆಡೆಯಾದರೆ, ತಮ್ಮ ಕರುಳಬಳ್ಳಿ ಹೋದ ಮನೆಯಲ್ಲಿ ಚೆನ್ನಾಗಿ ಇರಲಿ ಎನ್ನುವ ಕಾರಣ, ಸಾಲ ಸೋಲ ಮಾಡಿ ವರದಕ್ಷಿಣೆ ಕೊಟ್ಟು ವಿಜೃಂಭಣೆಯಿಂದ ಮದುವೆ ಮಾಡುವ ಜನರು ಮತ್ತೊಂದಿಷ್ಟು ಮಂದಿ. ಒಬ್ಬಳು ಮಗಳಿಗೆ ಮದುವೆ ಮಾಡಿ, ತಾವು ಜೀವನ ಪೂರ್ತಿ ಆ ಸಾಲವನ್ನು ತೀರಿಸುತ್ತಲೇ ಇರುತ್ತಾರೆ. ಆದರೆ ಇಂಥ ಹಣದ ಪಿಶಾಚಿಗಳಿಗೆ ಹಣದ ದಾಹ ಮುಗಿಯುವುದಿಲ್ಲ, ಅದೊಂದು ನಿರಂತರ ಪ್ರಕ್ರಿಯೆ ಎನ್ನುವುದು ಎಷ್ಟೋ ಹೆಣ್ಣು ಹೆತ್ತವರ ಅರಿವಿಗೆ ಬಾರದೇ ಇರುವುದು ಮಾತ್ರ ಶೋಚನೀಯ ಸಂಗತಿ. ಗಂಡನ ಮನೆಯ ಕಿರುಕುಳ ತಾಳದೇ ಮನೆಗೆ ಬಂದ ಮಗಳನ್ನು ತವರಿನವರು ಮತ್ತೆ ಗಂಡನ ಮನೆಗೆ ಬುದ್ಧಿಮಾತು ಹೇಳಿ ಕಳುಹಿಸಿ ನಂತರ ಮಗಳ ಹೆಣ ನೋಡಿ ಅಳುವ ಘಟನೆಗಳು ನಮ್ಮ ಕಣ್ಣ ಮುಂದೆಯೇ ಇವೆ!
ವರದಕ್ಷಿಣೆ ಎನ್ನುವ ಪೆಡಂಭೂತ ಕಾಲ ಬದಲಾದರೂ ಇಂದೂ ನಿಂತಿಲ್ಲ. ಕಾನೂನು ಏನೇ ಇದ್ದರೂ ಮಗಳು ಚೆನ್ನಾಗಿ ಇರಲಿ ಎನ್ನುವ ಕಾರಣದಿಂದ ಧನ ಪಿಶಾಚಿಗಳು ಕೇಳಿದಷ್ಟು ಹಣ ಕೊಟ್ಟು ಮಗಳನ್ನು ಮದುವೆ ಮಾಡಿಕೊಡುತ್ತಾರೆ. ಆದರೆ ಇಂಥ ರಾಕ್ಷಸರು ಹಣದ ಬೇಡಿಕೆ ಒಡ್ಡಿದಾಗಲೇ ಅವರು ಎಂಥ ನೀಚ ಮನಸ್ಥಿತಿಯವರು ಎನ್ನುವ ಅರಿವು ಕೂಡ ಅಪ್ಪ-ಅಮ್ಮನಿಗೆ ಆಗದೇ ಕೊನೆಗೆ ಮಗಳ ಬಾಳನ್ನು ನರಕ ಮಾಡಿ, ಆಕೆಯನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ಮಾತ್ರ ಎಂದೆಂದಿನ ದುರಂತವೇ ಸರಿ. ಅಂಥ ಒಂದು ರಕ್ಕಸರ ಬಾಯಲ್ಲಿ ಹೋದ ಮಹಿಳೆಗೆ ಈಗ ಸಿಕ್ಕಿರುವುದು ಎಚ್ಐವಿ ಸೋಂಕು! ಎಚ್‌ಐವಿ ಸೋಂಕಿತ ಸಿರಿಂಜ್ ಚುಚ್ಚುಮದ್ದು ನೀಡಿದ್ದಾರೆ ಈ ಮಹಿಳೆಯ ಅತ್ತೆ-ಮಾವ!
ಪೊಲೀಸರ ಪ್ರಕಾರ, ಮಹಿಳೆಯ ತಂದೆ ನ್ಯಾಯಾಲಯಕ್ಕೆ ಆಕೆ ಫೆಬ್ರವರಿ 2023 ರಲ್ಲಿ ವಿವಾಹವಾಗಿದ್ದಾಳೆ ಮತ್ತು ಕುಟುಂಬವು ಮದುವೆಗೆ ಸುಮಾರು 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ತಿಳಿಸಿದರು. "ನಾವು ವರನ ಕುಟುಂಬಕ್ಕೆ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು 15 ಲಕ್ಷ ರೂಪಾಯಿಗಳನ್ನು ನಗದು ನೀಡಿದ್ದೇವೆ, ಆದರೆ ನಂತರ ಅವರು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿಗಳನ್ನು ಮತ್ತು ದೊಡ್ಡ ಎಸ್‌ಯುವಿಯನ್ನು ಕೇಳಿದರು" ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಸಹರಾನ್‌ಪುರಲ್ಲಿ ನಡೆದಿರುವ ಘಟನೆಯಿಂದ 2023ರಲ್ಲಿ ಯುವತಿಯನ್ನು ಮದುವೆ ಮಾಡಿ ಕೊಡಲಾಗಿತ್ತು. ಆಕೆಯನ್ನೇನೂ ಬರಿಗೈಯಲ್ಲಿ ಕಳಿಸಿರಲಿಲ್ಲ ಅಪ್ಪ-ಅಮ್ಮ. ಮದುವೆಗೆ ಸುಮಾರು 45 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದರು. ಅಳಿಯನಿಗೆ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು 15 ಲಕ್ಷ ರೂಪಾಯಿಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದರು. ಆದರೆ, ಈ ರಾಕ್ಷಸರಿಗೆ ಹಣದ ದಾಹ ನಿಲ್ಲಲಿಲ್ಲ. ಮತ್ತಷ್ಟು, ಇನ್ನಷ್ಟು ದುಡ್ಡು ತಂದುಕೊಡುವಂತೆ ಸೊಸೆಯನ್ನು ಒತ್ತಾಯಿಸುತ್ತಿದ್ದರು. ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿಗಳನ್ನು ಮತ್ತು ದೊಡ್ಡ ಎಸ್‌ಯುವಿಯನ್ನು ಕೇಳಿದ್ದರು. ಅದನ್ನು ತರಲು ಸೊಸೆ ವಿಫಲಳಾದ ಕಾರಣ ಆಕೆಗೆ ಎಚ್ಐವಿ ಸೋಂಕು ಇರುವ ಇಂಜೆಕ್ಷನ್ ಚುಚ್ಚಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಗಂಡ, ಅತ್ತೆ-ಮಾವ ಸೇರಿದಂತೆ ಗಂಡನ ಮನೆಯವರ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ ಹಣ ತರುವಂತೆ ಈಕೆಯನ್ನು ಮನೆಯಿಂದ ಹೊರಕ್ಕೆ ದಬ್ಬಲಾಗಿತ್ತು. ತವರಿಗೆ ಬಂದಾಕೆಗೆ ಬುದ್ಧಿಮಾತು ಹೇಳಿ ವಾಪಸ್ ಕಳುಹಿಸಲಾಗಿತ್ತು. ಆಮೇಲೆ ಆದದ್ದು ಮಾತ್ರ ಘೋರ ದುರಂತ! ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. "ಸಂತ್ರಸ್ತ ಮಹಿಳೆಯ ಪತಿ (32), ಅಳಿಯ (38), ಅತ್ತಿಗೆ (35), ಮತ್ತು ಅತ್ತೆ (56) ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆಗೆ ಯತ್ನ), 498 ಎ (ಪತಿ ಅಥವಾ ಅವನ ಸಂಬಂಧಿಕರಿಂದ ಮಹಿಳೆಯ ಮೇಲೆ ಕ್ರೌರ್ಯ), 323 (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು), 328 (ವಿಷ ನೀಡುವ ಮೂಲಕ ಹಾನಿ ಉಂಟುಮಾಡುವುದು), 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು ಗಂಗೋ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವರದಕ್ಷಿಣೆ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.