
ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ... ಎನ್ನುವ ಹಾಡು ಕೇಳಿರಬಹುದು. ಅಮ್ಮ ಎನ್ನುವ ಶಬ್ದಕ್ಕೆ ಇರುವ ಶಕ್ತಿ ಅದು. ಮಕ್ಕಳು, ಕುಟುಂಬದ ವಿಷಯ ಬಂದರೆ ಎಂಥ ತ್ಯಾಗಕ್ಕೂ ಸಿದ್ಧ ಅಮ್ಮ. ಬೆರಳೆಣಿಕೆ ಪ್ರಕರಣಗಳಲ್ಲಿ ಇದಕ್ಕೆ ವಿರುದ್ಧವಾದ ಘಟನೆಗಳು ನಡೆಯುತ್ತಿದ್ದರೂ ತಾಯಿಗೆ ಸರಿಸಮಾನವಾದ ದೇವರು ಮತ್ತೊಬ್ಬರಿಲ್ಲ ಎನ್ನುವುದು ಸತ್ಯವಾದದ್ದು. ಇನ್ನು ದುಡಿಯುವ ಅಮ್ಮಂದಿರ ಕಥೆಯನ್ನು ಕೆಣಕುತ್ತಾ ಹೋದರೆ ಒಬ್ಬೊಬ್ಬರದ್ದು ಒಂದು ಕಥೆ, ಎಷ್ಟೋ ಮಂದಿಯ ಜೀವನದಲ್ಲಿ ಇದೊಂದು ರೀತಿಯ ವ್ಯಥೆ ಕೂಡ. ಇತ್ತ ಕುಟುಂಬವನ್ನೂ ಸರಿದೂಗಿಸಿ, ಅತ್ತ ಕಚೇರಿಯ ಕೆಲಸವನ್ನೂ ಬ್ಯಾಲೆನ್ಸ್ ಮಾಡಿ ಜೊತೆಗೆ ಅಮ್ಮನೆನ್ನುವ ಪಟ್ಟಕ್ಕೂ ನ್ಯಾಯ ಒದಗಿಸುವುದು ಅಷ್ಟು ಸುಲಭದ ಮಾತಲ್ಲ. ಕೆಲಸದ ಸ್ಥಳ ದೂರ ಇದ್ದರಂತೂ ಪ್ರಯಾಣವೆಂಬ ಪ್ರಯಾಸವೇ ಸರಿ.
ಈಗ ಅಂಥದ್ದೇ ಒಬ್ಬ ಭಾರತ ಮೂಲದ ಮಹಿಳೆಯ ವಿಷಯವೊಂದು ಇದೀಗ ವೈರಲ್ ಆಗಿದೆ. ಈಕೆಯ ಹೆಸರು ರಾಚೆಲ್ ಕೌರ್. ಮಲೇಷ್ಯಾದ ಏರ್‌ಏಷ್ಯಾದಲ್ಲಿ ಹಣಕಾಸು ಕಾರ್ಯಾಚರಣೆಗಳಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಕ್ಕಳಿಗಾಗಿ ಪ್ರತಿನಿತ್ಯವೂ 700 ಕಿಲೋ ಮೀಟರ್ ಪ್ರಯಾಣ ಬೆಳೆಸುತ್ತಾರೆ. ಅದು ವಿಮಾನದಲ್ಲಿ. ಆರಂಭದಲ್ಲಿ ಮೊದಲಿಗೆ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದರು. ಉಳಿದ ದಿನ ತಮ್ಮ ಕಚೇರಿಯ ಸಮೀಪವೇ ಇರುತ್ತಿದ್ದರು. ಆದರೆ ಚಿಕ್ಕ ಚಿಕ್ಕ ಮಕ್ಕಳು ತಾಯಿಯ ಪ್ರೀತಿಯಿಂದ ವಂಚಿತರಾಗುತ್ತಾರೆ ಎನ್ನುವ ಕಾರಣಕ್ಕೆ ಇದೀಗ ಪ್ರತಿನಿತ್ಯ ಮನೆಯಿಂದ ಕಚೇರಿಗೆ ವಿಮಾನದಲ್ಲಿ ಹೋಗಿ ಬರುತ್ತಾರೆ. ವಾರಕ್ಕೆ 5 ದಿನಗಳು ಅವರದ್ದು ಇದೇ ರೀತಿಯ ಕೆಲಸ.
ಡಿವೋರ್ಸ್ ಬಗ್ಗೆ ಮಾಳವಿಕಾ ಅವಿನಾಶ್ ಓಪನ್ ಮಾತು: 25 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ನಟಿ ಹೇಳಿದ್ದೇನು?
ಭಾರತದವರಾಗಿರುವ ರಾಚೆಲ್ ಕೌರ್, ಮಲೇಷಿಯಾದ ಪೆನಾಂಗ್ನಲ್ಲಿ ವಾಸವಿದ್ದಾರೆ. ಅವರು ಅಲ್ಲಿಂದ ಮಲೇಷಿಯಾದ ರಾಜಧಾನಿ ಕೌಲಾಲಂಪುರಕ್ಕೆ ಸುಮಾರು 350 ಕಿಲೋ ಮೀಟರ್ ದೂರ ಇದ್ದು, ಅಲ್ಲಿ ಪ್ರಯಾಣಿಸುತ್ತಾರೆ. ಈ ಬಗ್ಗೆ ಖುದ್ದು ಅವರು ನೀಡಿರುವ ಸಂದರ್ಶದ ವಿಡಿಯೋ ವೈರಲ್ ಆಗಿದೆ. ಇದರಿಂದ ನನ್ನ ಮಕ್ಕಳು ಮತ್ತು ಕೆಲಸದ ಜೀವನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ ಇವರು.
ಪ್ರತಿದಿನ ಬೆಳಿಗ್ಗೆ, ಲೆಕ್ಕವಿಲ್ಲದಷ್ಟು ಜನರು ತಮ್ಮ ಕಚೇರಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಲು ಕಾರುಗಳು, ಬಸ್‌ಗಳು, ಮೆಟ್ರೋಗಳು, ಹಂಚಿಕೆಯ ಟ್ಯಾಕ್ಸಿಗಳು ಮತ್ತು ಇತರ ರೀತಿಯ ಸಾರಿಗೆಯಲ್ಲಿ ಕೆಲಸಕ್ಕೆ ಧಾವಿಸುತ್ತಾರೆ. ಆದರೆ ಇಬ್ಬರು ಮಕ್ಕಳಾಗಿರುವ ನಾನು ಹೀಗೆ ಮಾಡುವುದು ಕಷ್ಟವಾಗುತ್ತದೆ. ಆದ್ದರಿಂದ ವಿಮಾನದ ಮೊರೆ ಹೋಗಿದ್ದೇನೆ. ಪ್ರತಿನಿತ್ಯವೂ ಮನೆಯಿಂದ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿ ಭದ್ರತಾ ತಪಾಸಣೆಗೆ ಒಳಗಾಗಿ ನಂತರ ವಿಮಾನಕ್ಕೆ ಹೋಗುತ್ತೇನೆ ಎಂದಿದ್ದಾರೆ.
2024 ರ ಆರಂಭದಲ್ಲಿ, ಅವರು ಪ್ರತಿದಿನ ವಿಮಾನ ಪ್ರಯಾಣವನ್ನು ಪ್ರಾರಂಭಿಸಲು ಆಯ್ಕೆ ಮಾಡಿಕೊಂಡೆ. ಆಶ್ಚರ್ಯಕರವಾಗಿ, ಈ ದಿನಚರಿಯು ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಿದೆ ಎಂದಿದ್ದಾರೆ ಇವರು. "ನನಗೆ ಇಬ್ಬರು ಮಕ್ಕಳಿದ್ದಾರೆ, ಇಬ್ಬರೂ ಬೆಳೆಯುತ್ತಿದ್ದಾರೆ. ನನ್ನ ಹಿರಿಯ ಮಗಳಿಗೆ 12 ವರ್ಷ, ಮತ್ತು ಕಿರಿಯವಳಿಗೆ ಮಗಳಿಗೆ 11 ವರ್ಷ. ಅವರು ಬೆಳೆಯುತ್ತಿದ್ದಂತೆ, ತಾಯಿ ಹೆಚ್ಚಾಗಿ ಇರಬೇಕಾದ ಅಗತ್ಯವನ್ನು ನಾನು ಭಾವಿಸುತ್ತೇನೆ. ಈ ವ್ಯವಸ್ಥೆಯಿಂದ, ನಾನು ಪ್ರತಿದಿನ ಮನೆಗೆ ಹೋಗಿ ರಾತ್ರಿಯಲ್ಲಿ ಅವರನ್ನು ನೋಡಲು ಸಾಧ್ಯವಾಗುತ್ತದೆ" ಎಂದಿದ್ದಾರೆ.
ತಮ್ಮ ದಿನಚರಿಯ ಬಗ್ಗೆ ಮಾತನಾಡುತ್ತಾ, ಅವರು, ನಾನು ಬೆಳಿಗ್ಗೆ 4 ಗಂಟೆಗೆ ಎದ್ದು, ಸಿದ್ಧವಾಗಿ, ಬೆಳಿಗ್ಗೆ 5 ಗಂಟೆಗೆ ಮನೆಯಿಂದ ಹೊರಡುತ್ತೇನೆ. ನಂತರ ಪೆನಾಂಗ್ ವಿಮಾನ ನಿಲ್ದಾಣಕ್ಕೆ ಕಾರು ಚಲಾಯಿಸಿ, ಅಲ್ಲಿ ಬೆಳಿಗ್ಗೆ 6.30 ಕ್ಕೆ ವಿಮಾನದಲ್ಲಿ ಕೌಲಾಲಂಪುರಕ್ಕೆ ಹೋಗುತ್ತೇನೆ. ಬೆಳಿಗ್ಗೆ 7.45 ರ ಹೊತ್ತಿಗೆ, ಕಚೇರಿಯನ್ನು ತಲುಪುತ್ತೇನೆ. ಕೆಲಸವನ್ನು ಮುಗಿಸಿದ ನಂತರ, ರಾತ್ರಿ 8 ಗಂಟೆಗೆ ಮನೆಗೆ ಹಿಂತಿರುಗುತ್ತೇನೆ ಎಂದಿದ್ದಾರೆ. ಈ ಹಿಂದೆ, ಬಾಡಿಗೆ ಮತ್ತು ಇತರ ಖರ್ಚುಗಳಿಗಾಗಿ ಅವಳು ತಿಂಗಳಿಗೆ ಕನಿಷ್ಠ $474 (ಸುಮಾರು 41 ಸಾವಿರ ರೂಪಾಯಿ) ಖರ್ಚಾಗುತ್ತಿತ್ತು. ಈಗ, ಮಾಸಿಕ ಪ್ರಯಾಣ ವೆಚ್ಚವನ್ನು $316 (ಅಂದರೆ ಸುಮಾರು 27 ಸಾವಿರಕ್ಕೆ) ಇಳಿಸಲಾಗಿದೆ ಎಂದಿದ್ದಾರೆ. ಮನೆಯಿಂದ ಕೆಲಸ ಮಾಡುವುದಕ್ಕಿಂತ ಕಚೇರಿಯಿಂದ ಕೆಲಸ ಮಾಡುವುದೇ ನನಗೆ ಇಷ್ಟ. ಏಕೆಂದರೆ ಕಚೇರಿಯ ವಾತಾವರಣವೇ ಬೇರೆಯಿರುತ್ತದೆ. ನೀವು ಜನರೊಂದಿಗೆ ಮುಖಾಮುಖಿಯಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ನಾನು ಕಚೇರಿಯಲ್ಲಿದ್ದಾಗ, ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸುತ್ತೇನೆ. ಮನೆಗೆ ಹಿಂದಿರುಗಿದಾಗ, ತನ್ನ ಕುಟುಂಬಕ್ಕೆ ಸಂಪೂರ್ಣವಾಗಿ ಸಮರ್ಪಿತಳಾಗಿರುತ್ತೇನೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.