ಗರ್ಭಿಣಿಗೆ ಸುಖಾಸುಮ್ಮನೆ ಸಲಹೆ ಕೊಡೋ ಬದ್ಲು ಇಂಥ ಮಾತನಾಡಿ

By Suvarna News  |  First Published Apr 1, 2020, 6:24 PM IST

ಪ್ರಗ್ನೆಂಟ್ ಮಹಿಳೆ ಸಿಕ್ಕರೆ ಸಾಕು, ಆಕೆಗೆ ತಮ್ಮ ಅನುಭವಾಮೃತ ಉಣಿಸಲು ಹಲವಾರು ಮಹಿಳೆಯರು ಕಾತರಿಸುತ್ತಾರೆ. ಆದರೆ, ಗರ್ಭಿಣಿಯ ಬಳಿ ನೀವು ಮಾತನಾಡಬೇಕಾದುದು, ಮಾತನಾಡುವ ರೀತಿಯೇ ಬೇರೆ. 


ಗರ್ಭಿಣಿಯೊಬ್ಬಳು ಕಣ್ಣಿಗೆ ಕಂಡ ತಕ್ಷಣ ಆಕೆ ಪರಿಚಯವಿರಲಿ, ಇಲ್ಲದಿರಲಿ- ಬಹುತೇಕ 'ಅನುಭವಸ್ಥ' ಮಹಿಳೆಯರು ಸಲಹೆಗಳ ಹೊಳೆಯನ್ನೇ ಹರಿಸುತ್ತಾರೆ. ತಮ್ಮ ನಂಬಿಕೆಗಳನ್ನೆಲ್ಲ ಆಕೆಯ ಮೇಲೆ ಹೇರುತ್ತಾರೆ. ಆದರೆ, ಈ ಸಲಹೆಗಳನ್ನು ಇಷ್ಟ ಪಡೋ, ಅದರಂತೆ ನಡೆಯೋ ಒಬ್ಬರಾದರೂ ಪ್ರಗ್ನೆಂಟ್ ಸಿಗಲಿಕ್ಕಿಲ್ಲ. ಯಾರಿಗೆ ಕೂಡಾ ಸಲಹೆಗಳು ಬೇಕಾಗಿಲ್ಲ. 

ಅರೆ, ಏನೋ ಮಾತನಾಡಬೇಕಲ್ಲಾ ಎಂದು ಮಾತನಾಡುತ್ತೀವಪ್ಪಾ, ಅದೇ ಬೇಡ ಎಂದರೆ ಎನ್ನಬೇಡಿ. ಹೀಗೆ ಏನೋ ಮಾತನಾಡಲು ಕೂಡಾ ಕೆಲ ಪಾಸಿಟಿವ್ ವಿಷಯಗಳಿರುತ್ತವೆ. ಅವು ಕೆಲವು ಆಕೆಗೆ ಸಹಾಯಕವಾಗುವಂಥದ್ದಾಗಿದ್ದರೆ, ಮತ್ತೆ ಕೆಲವು ಆಕೆಗೆ ಸಂತೋಷ ನೀಡುವಂಥವು. ಹಾಗಿದ್ದರೆ, ಇನ್ನು ಮುಂದೆ ಗರ್ಭಿಣಿ ಮಹಿಳೆಯೊಂದಿಗೆ ಮಾತಿಗಿಳಿದರೆ ಇಂಥ ಮಾತುಗಳನ್ನಾಡಿ. 

ಅಜ್ಜ-ಅಜ್ಜಿ ಸಾಂಗತ್ಯ ನೀಡಿದರೆ, ಮಕ್ಕಳಿಗದೇ ಬೆಸ್ಟ್ ಗಿಫ್ಟ್!

'ನೀನು ಬಹಳ ಹೆಲ್ದಿಯಾಗಿ ಕಾಣಿಸುತ್ತಿದ್ದಿ'
ತಾವು ಚೆನ್ನಾಗಿ ಕಾಣಿಸುತ್ತಿದ್ದೇವೆ ಎಂಬುದನ್ನು ಮತ್ತೊಬ್ಬರ ಬಾಯಿಯಿಂದ ಕೇಳಿದಾಗ ಖುಷಿ ಪಡದವರು ಯಾರೂ ಇರಲಿಕ್ಕಿಲ್ಲ. ಅದರಲ್ಲೂ ಚೆಂದ ಎಂಬುದಕ್ಕಿಂತ ಹೆಲ್ದೀ ಎಂಬುದು ಹೆಚ್ಚು ಉತ್ತಮ. ಪ್ರಗ್ನೆನ್ಸಿಯಲ್ಲಿ ದೇಹ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಚಿಂತಿತರಾಗಿರುವವರಿಗೆ ಈ ಮಾತು ಸಮಾಧಾನ ಹಾಗೂ ಸಂತೋಷ ನೀಡುತ್ತದೆ. 

Latest Videos

undefined

'ಕೊಡು, ನಾನದನ್ನು ತಂದುಕೊಡುವೆ'
ಪ್ರಗ್ನೆನ್ಸಿಯ ಆರನೇ ತಿಂಗಳ ಬಳಿಕ ಗರ್ಭಿಣಿಗೆ ನಡೆಯುವುದೇ ಕಷ್ಟ ಎಂಬಂತಾಗಿರುತ್ತದೆ. ಅಂಥ ಸಂದರ್ಭದಲ್ಲಿ ಆಕೆ ಏನನ್ನಾದರೂ ಹೊತ್ತು ಹೋಗುತ್ತಿದ್ದರೆ, ಅಂಗಡಿಯಿಂದ ತರಕಾರಿ ತರುತ್ತಿದ್ದರೆ ನೀವದನ್ನು ಮನೆವರೆಗೂ ತೆಗೆದುಕೊಂಡು ಹೋಗಿ ಕೊಡುವುದು, ಆಕೆಗೆ ಕೂರಲು ಸ್ಥಳವಿಲ್ಲವೆಂದಾದಾಗ ಕೂರಲು ವ್ಯವಸ್ಥೆ ಮಾಡುವುದು ಇವೆಲ್ಲ ಆಕೆಗೆ ನೀವು ಮಾಡಬಹುದಾದ ಅತ್ಯುತ್ತಮ ಸಹಾಯಗಳು. ಇದರಿಂದ ಆಕೆಗೆ ತನ್ನ ಪ್ರಗ್ನೆನ್ಸಿ ಹೆಚ್ಚು ವಿಶೇಷ ಎನಿಸುವುದರ ಜೊತೆಗೆ, ಆ ಸಮಯದ ಕಷ್ಟಗಳನ್ನು ಅರ್ಥ ಮಾಡಿಕೊಂಡು ಸಹಕರಿಸುವವರು ಸುತ್ತಲಿದ್ದಾರಲ್ಲಾ ಎಂಬ ಸಮಾಧಾನವೂ ಆಗುತ್ತದೆ. 

'ನಿನ್ನ ಈ ಸುಂದರ ಕೂದಲೇ ಮಗುವಿಗೆ ಬರುತ್ತದೆ ಎನಿಸುತ್ತದೆ.'
ಇಂಥ ಮಾತುಗಳು ಖಂಡಿತಾ ಆ ಮಹಿಳೆಯಲ್ಲಿ ಸಂತಸ ಉಕ್ಕಿಸುತ್ತವೆ. ಇಲ್ಲಿ ನೀವು ಆಕೆಯ ಸೌಂದರ್ಯ ಹೊಗಳುವ ಜೊತೆಗೇ ಆಕೆಯ ಮಗುವಿನ ಬಗ್ಗೆಯೂ ಮಾತನಾಡುತ್ತೀರಿ. ತಾವು ಅತ್ಯಂತ ಎಕ್ಸೈಟ್ ಆಗಿರುವ, ನೂರಾರು ಕನಸುಗಳನ್ನು ಹೊತ್ತು ಕಾದಿರುವ ಆ ಮಗುವಿನ ಕುರಿತು ಯಾರಾದರೂ ಮಾತನಾಡಿದರೆ ಅದಕ್ಕಿಂತ ಖುಷಿ ಆಕೆಗಿನ್ನೇನಿದೆ. ಮಗು ಹೇಗಿರುತ್ತದೋ ಎಂದು ಕಲ್ಪನೆಯಲ್ಲಿ ತೇಲಾಡುವ ಅವರಲ್ಲಿ ಈ ಮಾತಿನ ಮೂಲಕ ನೀವೂ ಒಂದು ಕಲ್ಪನೆ ಹರಿಬಿಡುತ್ತೀರಿ. ಇದಕ್ಕಾಗಿ ಖಂಡಿತಾ ಅವರು ನಗುತ್ತಾ ನಿಮಗೆ ಥ್ಯಾಂಕ್ಸ್ ಹೇಳುತ್ತಾರೆ. 

'ಪ್ರಗ್ನೆನ್ಸಿ ಕಳೆ ಮುಖದಲ್ಲಿ ಉಕ್ಕುತ್ತಿದೆ. ನೀನು ಆ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಿ'
ಗರ್ಭಿಣಿಯಾದಾಗ ದೇಹ ದಪ್ಪಗಾಗುತ್ತದೆ, ಕಪ್ಪು ಕಲೆಗಳು ಸಾಮಾನ್ಯವಾಗುತ್ತವೆ. ಹಾರ್ಮೋನು ಏರುಪೇರಿನಿಂದಾಗಿ ದೈಹಿಕವಾಗಿ  ಹಲವಾರು ಬದಲಾವಣೆಗಳಾಗುತ್ತವೆ. ಇದರಿಂದ ಮಹಿಳೆ ಕೀಳರಿಮೆ ಬೆಳೆಸಿಕೊಳ್ಳುವ ಅಪಾಯವಿರುತ್ತದೆ. ಆದರೆ, ಆಕೆಗೆ ಪರಿಚಯಸ್ಥರು ಸಿಕ್ಕಾಗ, ಗರ್ಭಿಣಿಯ ಕಳೆ ಹೊಳೆಯುತ್ತಿದೆ ಎಂದಾಗ, ಮಗುವಿನ ಕಾಳಜಿ ಮಾಡುತ್ತಿದ್ದಿ ಎಂದಾಗ ಆಕೆಯಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೆ, ಪ್ರಗ್ನೆನ್ಸಿಯಲ್ಲಿ ಈ ಬದಲಾವಣೆಗಳು ಸಾಮಾನ್ಯ ಎಂಬಂತೆಯೂ ನಮ್ಮ ವರ್ತನೆಯಿದ್ದಾಗ ಆಕೆ ಹೆಚ್ಚು ನಿರಾಳವಾಗುತ್ತಾಳೆ. 

'ನೀನು ಈಗಲೇ ಇಷ್ಟು ಒಳ್ಳೆ ತಾಯಾಗಿದ್ದಿ, ನಿನ್ನ ಮಗು ಅದೃಷ್ಟ ಮಾಡಿದೆ'
ಎಲ್ಲ ಪೋಷಕರು ಹಾಗೂ ಪೋಷಕರಾಗಲಿರುವವರಿಗೆ ತಾವು ಉತ್ತಮ ತಂದೆತಾಯಿ ಆಗುತ್ತೇವೋ ಇಲ್ಲವೋ ಎಂಬ ಬಗ್ಗೆ ಅನುಮಾನ, ಆತಂಕಗಳಿರುತ್ತವೆ. ಉತ್ತಮ ತಂದೆತಾಯಿಯಾಗಲು ಏನು ಮಾಡಬೇಕೆಂಬ ಕುರಿತು ಅವರು ಹಲವಾರು ಲೇಖನಗಳನ್ನು ಓದುತ್ತಲಿರುತ್ತಾರೆ. ಅಂಥ ಸಂದರ್ಭದಲ್ಲಿ ಆ ಗರ್ಭವತಿಗೆ, ನೀನು ಮಗುವನ್ನು ಎಷ್ಟೊಂದು ಪ್ರೀತಿಸುತ್ತಿದ್ದಿ, ಈಗಲೇ ಅದರ ಕಾಳಜಿ ಇಷ್ಟು ಚೆನ್ನಾಗಿ ಮಾಡುತ್ತಿದ್ದಿ ಎಂದರೆ ಮಗುವಿಗೆ ಖಂಡಿತಾ ಉತ್ತಮ ತಾಯಾಗುತ್ತಿ ಎಂದು ಹೇಳಿದರೆ ಕೇಳಿದವರ ಆನಂದಕ್ಕೆ ಪಾರವೇ ಇರುವುದಿಲ್ಲ. ಜೊತೆಗೆ ಅವರ ಆತಂಕವೂ ಕಡಿಮೆಯಾಗುತ್ತದೆ. 

ಕ್ವಾರಂಟೈನ್ ಸಮಯವನ್ನು ಮಜವಾಗಿ ಕಳೆಯಿರಿ

'ಸರಿಯಾದ ಸೈಜ್ ಇದ್ದಿ'
ಕೆಲವರಿರುತ್ತಾರೆ, ಗರ್ಭಿಣಿಯನ್ನು ನೋಡಿದೊಡನೆ, ಏಳು ತಿಂಗಳಾದರೂ ಸ್ವಲ್ಪವೂ ಹೊಟ್ಟೆಯೇ ಬಂದಿಲ್ಲ ಎಂದು ಮಗುವಿನ ಬೆಳವಣಿಗೆ ಬಗ್ಗೆ ಆತಂಕ ಮೂಡಿಸುವವರು. ಇಲ್ಲದಿದ್ದಲ್ಲಿ, ಮೂರು ತಿಂಗಳಿಗೇ ಏಳು ತಿಂಗಳ ಗರ್ಭಿಣಿಯಂತಾಗಿದ್ದಿ ಎನ್ನುವವರು. ಆದರೆ, ಇದರಿಂದ ಹೇಳಿದವರಿಗೂ ಲಾಭವಿಲ್ಲ, ಕೇಳಿದವರ ಶಾಂತಿಯೂ ಕದಡುತ್ತದೆ. ಬದಲಿಗೆ, ಗರ್ಭಿಣಿಯು ಯಾವುದೇ ಸೈಜ್‌ನಲ್ಲಿರಲಿ, ಎಷ್ಟೇ ತಿಂಗಳ ಪ್ರಗ್ನೆಂಟ್ ಆಗಿರಲಿ, ಈ ಸಮಯಕ್ಕೆ ಎಷ್ಟು ಇರಬೇಕಿತ್ತೋ, ಅಷ್ಟೇ ಗಾತ್ರ ಹೊಂದಿದ್ದಿ ಎಂದರೆ ಕಳೆದುಕೊಳ್ಳುವುದೇನಿಲ್ಲವಲ್ಲ. ಅದು ಸುಳ್ಳು ಕೂಡಾ ಆಗಿರಲಾರದು. ಏಕೆಂದರೆ ಪ್ರತಿಯೊಬ್ಬರ ದೇಹಪ್ರಕೃತಿಗೆ ಅನುಗುಣವಾಗಿ ಹೊಟ್ಟೆ ಕಾಣಿಸುತ್ತದೆ. ಜಾಸ್ತಿ ಹೊಟ್ಟೆ ಬಂದ ಕೂಡಲೇ ಮಗು ದೊಡ್ಡದಿದೆ ಎಂಬುದು, ಕಡಿಮೆ ಹೊಟ್ಟೆ ಬಂದ ಕೂಡಲೇ ಮಗು ಬೆಳವಣಿಗೆಯಾಗಿಲ್ಲ ಎಂಬುದು ಸುಳ್ಳು.

click me!