
ಪೋಷಕರ ಹತ್ತು ಹಲವು ಜವಾಬ್ದಾರಿಗಳಲ್ಲಿ ಮುಖ್ಯವಾದುದೊಂದು ಮಕ್ಕಳಿಗೆ ಹಣದ ಮೌಲ್ಯ ಅರಿವು ಮೂಡಿಸುವುದು. ಪ್ರೀತಿಯ ನೆಪದಲ್ಲಿ ಮಕ್ಕಳು ಕೇಳಿದ್ದೆಲ್ಲ ಕೊಡಿಸುವ ಪರಿಪಾಠ ಬೆಳೆಸಿಕೊಂಡಿರುವ ಇಂದಿನ ಪೋಷಕರು, ಹಣವೆಂಬುದು ಮರದಲ್ಲಿ ಬೆಳೆಯುವುದಲ್ಲ, ನೀವು ಕಷ್ಟಪಟ್ಟು ಸಂಪಾದಿಸಿದ್ದು ಎಂಬುದನ್ನು ಮಕ್ಕಳಿಗೆ ಅರ್ಥ ಮಾಡಿಸಲು ಹೆಣಗಬೇಕಾಗುತ್ತದೆ. ನಮ್ಮ ಶಾಲೆಕಾಲೇಜುಗಳಲ್ಲಿ ಹಣ, ಉಳಿತಾಯ, ಗಳಿಕೆ ಮುಂತಾದವುಗಳ ಬಗ್ಗೆ ಏನನ್ನೂ ಹೇಳಿಕೊಡುವುದಿಲ್ಲವಾದ ಕಾರಣ ಮಕ್ಕಳಿಗೆ ಮನೆಯಲ್ಲೇ ಆಗಬೇಕು ಮನಿ ಪಾಠ.
ಮಕ್ಕಳಿಗೆ ಹಣದ ಕುರಿತು ತಿಳಿಸುವ ಮುನ್ನ ನೀವು ಅದನ್ನು ಎಷ್ಟು ಬುದ್ಧಿವಂತಿಕೆಯಿಂದ ಬಳಸುತ್ತಿದ್ದೀರಿ, ಎಷ್ಟು ಉಳಿತಾಯ ಮಾಡುತ್ತಿದ್ದೀರಿ ಎಂಬ ಬಗ್ಗೆ ಗಮನ ಹರಿಸುವುದು ಮುಖ್ಯ. ಏಕೆಂದರೆ ಮಕ್ಕಳಿಗೆ ಪೋಷಕರೇ ಉದಾಹರಣೆಯಾದಾಗ ಮಾತ್ರ ಅವರು ತಂದೆತಾಯಿಯ ಮಾತನ್ನು ಕೇಳುತ್ತಾರೆ. ಅದರಲ್ಲೂ ನೀವು ಕಾರ್ ಲೋನ್, ಹೋಂ ಲೋನ್, ಕ್ರೆಡಿಟ್ ಕಾರ್ಡ್ ಲೋನ್ ಎಂದೆಲ್ಲ ಪ್ರತಿ ತಿಂಗಳೂ ಲೋನ್ ತೀರಿಸಲು ಒದ್ದಾಡುತ್ತಿದ್ದು ನಿಮ್ಮ ಮಕ್ಕಳೂ ಮುಂದೆ ಹೀಗೆ ಒದ್ದಾಡಬಾರದೆಂದರೆ ಅವರಿಗೆ ಹಣದ ಉಳಿತಾಯದ ಕುರಿತು ಹಲವಷ್ಟನ್ನು ತಿಳಿಸಿಕೊಡಬೇಕು.
ಅಜ್ಜ-ಅಜ್ಜಿ ಸಾಂಗತ್ಯ ನೀಡಿದರೆ, ಮಕ್ಕಳಿಗದೇ ಬೆಸ್ಟ್ ಗಿಫ್ಟ್!
ಮನಿ ಪಾಠಗಳು
ಮಕ್ಕಳಿಗೆ ಪ್ರಮುಖವಾಗಿ ಹಣದ ಕುರಿತು ಈ ಕೆಳಗೆ ನೀಡಿರುವ ಏಳು ಪಾಠಗಳನ್ನು ಹೇಳಿಕೊಡಿ.
ಹಣದ ಉಳಿತಾಯ
ಎಲ್ಲಕ್ಕಿಂತ ಮೊದಲು ಮಕ್ಕಳಿಗೆ ಹೇಳುವುದನ್ನು ನೀವು ಮಾಡಿತೋರಿಸಿ. ಹೌದು, ಮಕ್ಕಳಿಗೆ ಸೇವಿಂಗ್ಸ್ ಮಹತ್ವ ತಿಳಿಸಲು, ಅಗತ್ಯ ಬಿದ್ದಾಗ ಮಾತ್ರ ಬಳಸುವಂತೆ ಹೇಳಿಕೊಡಲು ನೀವು ಸೇವಿಂಗ್ಸ್ ಆರಂಭಿಸಿ. ಏಕೆಂದರೆ, ಮಕ್ಕಳು ಪೋಷಕರನ್ನು ಕಾಪಿ ಮಾಡುತ್ತಾರೆ. ನಂತರ ಮಕ್ಕಳಿಗೆ ಎರಡು ಜಾರ್ ಕೊಟ್ಟು ಒಂದರ ಮೇಲೆ ಸೇವಿಂಗ್ಸ್ ಎಂದೂ, ಮತ್ತೊಂದರ ಮೇಲೆ ಸ್ಪೆಂಡಿಂಗ್ಸ್ ಎಂದೂ ಲೇಬಲ್ ಅಂಟಿಸಿ. ಬರ್ತ್‌ಡೇ, ಮತ್ತಿತರೆ ಸಂದರ್ಭದಲ್ಲಿ ಸಿಕ್ಕ ಹಣ, ಪಾಕೆಟ್ ಮನಿಯಾಗಿ ದೊರೆತಿದ್ದರಲ್ಲಿ ಎರಡು ಭಾಗ ಮಾಡಿ ಎರಡೂ ಜಾರ್‌ಗಳಿಗೆ ಹಾಕಲು ಹೇಳಿ. ಸ್ಪೆಂಡಿಂಗ್ಸ್‌ನಲ್ಲಿರುವ ಹಣವನ್ನು ಮಾತ್ರ ಮಗು ತನ್ನ ಅಗತ್ಯಕ್ಕೆ ಬಳಸುವಂತೆ ತಿಳಿಸಿ. ಸೇವಿಂಗ್ಸ್ ಹಣ ಅದರಲ್ಲೇ ಬೆಳೆಯುತ್ತಾ ಹೋಗಲಿ.
ಬಜೆಟ್ ಮಿತಿ ಮೀರದಿರಲು ತಿಳಿಸಿ
ನೀವು ಮಕ್ಕಳಿಗೆ ತಿಂಗಳಿಗಿಷ್ಟು ಎಂದು ಪಾಕೆಟ್ ಮನಿ ನೀಡಿದಾಗ, ಅದರಲ್ಲೇ ಅವರ ಎಲ್ಲ ಖರ್ಚುಗಳನ್ನೂ ಪೂರೈಸಿಕೊಳ್ಳಬೇಕೆಂದೂ, ತಿಂಗಳು ಮುಗಿವವರೆಗೆ ಬೇರೆ ಹಣ ಕೊಡುವುದಿಲ್ಲವೆಂದೂ ಸ್ಟ್ರಿಕ್ಟ್ ಆಗಿ ತಿಳಿಸಿ. ಆಗ ಮಕ್ಕಳು ಪ್ರತಿಯೊಂದು ರುಪಾಯಿ ಖರ್ಚು ಮಾಡುವಾಗಲೂ ತಿಂಗಳಲ್ಲಿ ಇನ್ನೂ ಎಷ್ಟು ದಿನ ಇದೆ, ಯಾವುದಕ್ಕೆ ಹಣ ಬೇಕಾಗುತ್ತದೆ ಎಂದೆಲ್ಲ ಯೋಚಿಸಲು ಕಲಿಯುತ್ತಾರೆ.
ಕಾಸ್ಟ್ಲಿ ವಸ್ತು ಕೊಳ್ಳಲು ಸೇವ್ ಮಾಡುವಂತೆ ಮಾಡಿ
ನಿಮ್ಮ ಮಗು ಕೇಳಿದ್ದನ್ನೆಲ್ಲ ತಕ್ಷಣಕ್ಕೆ ಕೊಡಿಸಿ ಬಿಡುವ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಅವರಿಗೆ ದುಡ್ಡಿನ ಬೆಲೆ ತಿಳಿಯಲಾಗದು. ಬದಲಿಗೆ ಅವರು ಕಾಸ್ಲ್ಟಿ ಉಡುಗೊರೆ ಕೋರಿದಾಗ, ಉದಾಹರಣೆಗೆ ಸೈಕಲ್, ಬ್ಯಾಟರಿ ಕಾರ್ ಇತ್ಯಾದಿ- ಅದನ್ನು ಅವರಿಗೆ ಕೊಡುವ ಹಣದಲ್ಲೇ ಉಳಿತಾಯ ಮಾಡಿ ಅದರಿಂದ ಕೊಳ್ಳುವಂತೆ ಸೂಚಿಸಿ. ಇದರಿಂದ ತಮಗೆ ಅತಿ ಪ್ರಿಯವಾದ ವಸ್ತುವೊಂದಕ್ಕಾಗಿ ಕಾಯುವುದನ್ನು ಕಲಿಯುತ್ತಾರೆ. ದೊಡ್ಡವರಾದ ಬಳಿಕ ಇಂಪಲ್ಸ್ ಶಾಪಿಂಗ್ ಅಭ್ಯಾಸ ರೂಢಿಸಿಕೊಳ್ಳದೆ ಬದುಕುವುದನ್ನು ಕಲಿಯುತ್ತಾರೆ.
ಖರ್ಚನ್ನು ಬರೆದಿಡಲು ಹೇಳಿ
ಮಗುವಿಗೆ ಪುಟ್ಟದೊಂದು ನೋಟ್‌ಬುಕ್ ನೀಡಿ. ಅವರು ಒಂದೊಂದು ರುಪಾಯಿ ಖರ್ಚು ಮಾಡಿದಾಗಲೂ ಅದನ್ನು ನೋಟ್‌ಬುಕ್‌ನಲ್ಲಿ ಬರೆದಿಡುವಂತೆ ಸೂಚಿಸಿ. ಜೊತೆಗೆ, ಬಿಲ್, ರಸೀದಿಗಳನ್ನು ಸಂಗ್ರಹಿಸಿಡಲು ತಿಳಿಸಿ. ಈ ಅಭ್ಯಾಸದಿಂದ ಅವರ ಖರ್ಚುವೆಚ್ಚದ ಕಾರಣ ಪೋಷಕರಿಗೆ ತಿಳಿಯುವ ಜೊತೆಗೆ, ಮಕ್ಕಳಿಗೂ ತಾವೆಲ್ಲಿ ಉಳಿಸಬಹುದಿತ್ತು, ಬಿಲ್‌ಗಳನ್ನು ಇಟ್ಟುಕೊಳ್ಳುವ ಜವಾಬ್ದಾರಿ ಮುಂತಾದ ವಿಷಯಗಳು ಅರಿವಿಗೆ ಬರುತ್ತವೆ.
ಜಾಹಿರಾತಿನ ಹಿಂದಿನ ಉದ್ದೇಶ ತಿಳಿಸಿ
ಜಾಹಿರಾತಿನಲ್ಲಿ ನೋಡಿದ ಕೂಡಲೇ ಅದು ಆಸೆಯಾಗಿ ಬೇಕೆನ್ನುವುದು ಮಕ್ಕಳ ಅಭ್ಯಾಸ. ಹಾಗಾಗಿ, ಪೋಷಕರು ಜಾಹಿರಾತು ಯಾಕಾಗಿ ಮಾಡುತ್ತಾರೆ, ಜಾಹಿರಾತಿನಲ್ಲಿ ತೋರಿಸುವ ವಸ್ತು ಎಷ್ಟು ಒಳ್ಳೆಯದು ಅಥವಾ ಅದರ ಕೆಟ್ಟ ಗುಣಗಳೇನು, ಮಾರ್ಕೆಟಿಂಗ್‌ಗಾಗಿ ಏನೇನು ಸ್ಟ್ರ್ಯಾಟಜಿ ಮಾಡುತ್ತಾರೆ ಎಂಬುದನ್ನೆಲ್ಲ ಮಕ್ಕಳಿಗೆ ತಿಳಿಸಿ ಹೇಳಬೇಕು. ಆಗ ಆಕರ್ಷಕವಾಗಿ ಕಂಡದ್ದೆಲ್ಲ ಒಳ್ಳೆಯದಲ್ಲ ಎಂಬುದು ಅವರ ಅರಿವಿಗೆ ಬರುತ್ತದೆ.
ಹಣ ಮರದಲ್ಲಿ ಬೆಳೆಯುವುದಿಲ್ಲ
ಹಣವನ್ನು ಸಂಪಾದಿಸುವುದು ಎಷ್ಟು ಕಷ್ಟ, ಅದನ್ನು ಖರ್ಚು ಮಾಡುವುದು ಎಷ್ಟೊಂದು ಸುಲಭ ಎಂಬುದನ್ನು ಮಕ್ಕಳಿಗೆ ತಿಳಿಸಿ ಹೇಳಿ. ಇದನ್ನು ಅರ್ಥ ಮಾಡಿಸಲು ಸುಲಭ ವಿಧಾನವೆಂದರೆ, ಮಗು ಪೋಷಕರಿಗಾಗಿ ಮಾಡಿಕೊಡುವ ಕೆಲಸಗಳಿಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ. ನಾವು ಕಷ್ಟ ಪಟ್ಟಾಗ ಮಾತ್ರ ಹಣ ಸಿಗುತ್ತದೆ. ಅಂತೆಯೇ ನೀನು ಕೂಡಾ ಕಷ್ಟ ಪಟ್ಟರೆ ಮಾತ್ರ ಹಣ ಸಿಗುತ್ತದೆ ಎಂಬುದನ್ನು ತಿಳಿಸಿ. ಮನೆ ಗುಡಿಸಿದ್ದಕ್ಕೆ, ಪಾತ್ರೆ ತೊಳೆದಿದ್ದಕ್ಕೆ, ಗಿಡಗಳಿಗೆ ನೀರು ಹಾಕಿದ್ದಕ್ಕೆ, ಅಂಗಡಿಗೆ ಹೋಗಿ ಸಾಮಾನು ತಂದಿದ್ದಕ್ಕೆ ಇತ್ಯಾದಿ ಕೆಲಸಗಳಿಗೆ ಇಂತಿಷ್ಟು ಹಣ ಕೊಡುತ್ತೇನೆ ಎಂದು ನಿಗದಿ ಮಾಡಿ. ಅದರಂತೆಯೇ ಅವರಿಗೆ ಹಣ ನೀಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.