ಡಾಕ್ಟರ್ ಅತ್ತಿದ್ಯಾಕೆ? ಹೆರಿಗೆಯಾದ್ಮೇಲೆ ನಸುನಕ್ಕ ಅಮ್ಮನನ್ನು ನೋಡಿ ಕಣ್ಣೀರಾದ ವೈದ್ಯ

By Suvarna NewsFirst Published Jul 13, 2021, 4:49 PM IST
Highlights

ಹೆರಿಗೆ ರೂಮಿನಲ್ಲಿ ಕರ್ತವ್ಯ ನಿರ್ವಹಿಸುವ ಒಬ್ಬ ಭಾರತೀಯ ಡಾಕ್ಟರ್, ಒಂದು ಹೃದಯ ವಿದ್ರಾವಕ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ. ಅದು ವೈರಲ್ ಆಗಿದೆ.

ಎಷ್ಟು ಕಷ್ಟಪಟ್ಟರೂ ಒಂದು ಜೀವವನ್ನು ಉಳಿಸಲು ಸಾಧ್ಯವಾಗದೆ ಹೋದಾಗ ವೈದ್ಯರಿಗೆ, ವೈದ್ಯ ವೃತ್ತಿಯಲ್ಲಿ ಅತ್ಯಂತ ನಿಷ್ಠೆ ಇಟ್ಟವರಿಗೆ ಎಷ್ಟು ಬೇಸರವಾಗುತ್ತದೆ ಎಂಬುದಕ್ಕೆ ಒಂದು ನಿದರ್ಶನ ಇಲ್ಲಿದೆ. ವೈದ್ಯರೊಬ್ಬರು ಇನ್‌ಸ್ಟಾಗ್ರಾಮ್‌ನ 'ದಿ ರಿಯಲ್ ಇಂಡಿಯನ್ ಸ್ಟೋರೀಸ್' ಪೇಜ್‌ನಲ್ಲಿ ತಮ್ಮ ಈ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿ ಹಾಗೂ ಆದರ ಜೊತೆಗೆ ವೈದ್ಯರು ಹತಾಶರಾಗಿ, ಖಿನ್ನರಾಗಿ ಅಳುತ್ತಾ ಕೂತಿರುವ ಈ ಚಿತ್ರ ಎಂಥವರ ಹೃದಯವನ್ನಾದರೂ ಕಲಕುವಂತಿದೆ.

ಅವರು ಹೇಳಿದ ಘಟನೆಯನ್ನು ಅವರ ಮಾತುಗಳಲ್ಲಿಯೇ ಓದಿ:

 

ಇಂದು ನನ್ನ ಜೀವನದ ಅತ್ಯಂತ ಶೋಕದ ದಿನ. ಒಬ್ಬ ವೈದ್ಯನಾಗಿ, ನಾನು ಹಲವಾರು ಗರ್ಭಿಣಿಯರನ್ನು, ಅವರ ಹೆರಿಗೆ ನೋವನ್ನು ನೋಡಿದ್ದೇನೆ. ಪ್ರತಿ ಸಲ ಹೆರಿಗೆ ಮಾಡಿಸಲು ಲೇಬರ್ ರೂಮ್‌ಗೆ ಹೋದಾಗಲೂ, ಈ ಹೆರಿಗೆ ಆರೋಗ್ಯವಂತವಾಗಿ ನಡೆಯಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ. ಹೆರಿಗೆ ರೂಮಿನಲ್ಲಿ ಮಹಿಳೆಯರು ಅನುಭವಿಸುವ ನೋವು ಊಹಿಸಲಾಗದ್ದು. ಹೊಸದೊಂದು ಜೀವವನ್ನು ಭೂಮಿಗೆ ತರಲು ಇವರು ಒಂಬತ್ತು ತಿಂಗಳು ಹೊರುವ ಭಾರ, ಅನುಭವಿಸುವ ನೋವು ವರ್ಣಿಸಲಸದಳ. ಜೊತೆಗೆ ಮಾನಸಿಕ ವಿಪ್ಲವ ಬೇರೆ.

ನನಗೆ ಇಂದು ಬಹಳ ದುಃಖವಾದುದಕ್ಕೆ ಕಾರಣ ಇಂದು ನಾವು ಒಬ್ಬಾಕೆ ಹೆಣ್ಣನ್ನು ಹೆರಿಗೆ ರೂಮಿನಲ್ಲಿ ಕಳೆದುಕೊಂಡೆವು.ನಾವು ಎಷ್ಟೇ ಪ್ರಯತ್ನಪಟ್ಟರೂ ಆಕೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ದೇವರ ಪ್ಲಾನೇ ಬೇರೆ ಇತ್ತು. ಈ ಶೋಕವನ್ನು ಇನ್ನಷ್ಟು ಗಾಢಗೊಳಿಸಿದ್ದು ಏನೆಂದರೆ, ಆಕೆ ಹದಿನಾಲ್ಕು ವರ್ಷಗಳ ಕಾಲ ಎಷ್ಟು ಬಯಸಿದರೂ ಆಕೆಗೆ ಮಕ್ಕಳಾಗಲಿಲ್ಲ. ಮಕ್ಕಳಾಗುವ ಸಾಧ್ಯತೆಯೂ ಕಾಣಿಸಿರಲಿಲ್ಲ. ಸಹಜ ಪ್ರಯತ್ನಗಳಿಂದ ಮಗು ಆಗುವ ಹಾಗಿರಲಿಲ್ಲ. ನಂತರ ಈಕೆ ಐವಿಎಫ್ ಮಾಡಿಸಿಕೊಂಡಳು. ಅದೂ ಸರಿಯಾಗಲಿಲ್ಲ. ಯಾವುದೂ ಫಲ ನೀಡಲಿಲ್ಲ.

ಕೊನೆಗೂ ದೇವರ ಕಣ್ಣು ಬಿಟ್ಟ ಎನ್ನುತ್ತಾರಲ್ಲ; ಹಾಗೆ ಯಾವುದೋ ಒಂದು ಅದೃಷ್ಟದಿಂದ ಆಕೆಯಲ್ಲಿ ಗರ್ಭ ನಿಂತಿತು. ಅದು ದೇವರ ಕೃಪೆ ಎಂದೇ ಹೇಳಬಹುದು. ಯಾಕೆಂದರೆ ಅದು ಹೇಗೆ ಆಗಲು ಸಾಧ್ಯ ಎನ್ನುವ ಬಗ್ಗೆ ಕೂಡ ನಮಗೆ ಸೂಕ್ತ ವ್ಯಾಖ್ಯಾನ ಸಿಗಲಿಲ್ಲ. ಆಕೆಯಲ್ಲಿ ಗರ್ಭಕೋಶದ ಸಿಸ್ಟ್‌ ಇತ್ತು. ಸಾಕಷ್ಟು ಫೈಬ್ರಾಯ್ಡ್‌ಗಳಿದ್ದವು. ಇಷ್ಟಿದ್ದರೂ ಆಕೆಯಲ್ಲಿ ಗರ್ಭ ನಿಂತಿತು. ಫೈಬ್ರಾಯ್ಡ್‌ಗಳು ಕರಗಲಾರಂಬಿಸಿದವು. ಎಲ್ಲವೂ ಸಹಜ ಸ್ಥಿತಿಯಲ್ಲಿದ್ದವು. ದೇವರು ತನ್ನ ಸಾಮರ್ಥ್ಯವನ್ನು ಹೇಗೆ ಬೇಕಾದರೂ ತೋರಿಸಬಲ್ಲ. ಇದು ಮಾನವನ ತಿಳುವಳಿಕೆ, ವಿಜ್ಞಾನ ಎಲ್ಲದಕ್ಕೂ ಅತೀತವಾಗಿತ್ತು.

ಮಗು ಚೆನ್ನಾಗಿ ನಿದ್ದೆ ಮಾಡಲು ಈ ನಿಯಮ ಟ್ರೈ ಮಾಡಿ ನೋಡಿ ...

೯ ತಿಂಗಳ ಬಳಿಕ, ಹೆರಿಗೆ ನೋವು ಕಾಣಿಸಿಕೊಂಡಿತು. ಗಂಡ ಆಕೆಯನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದ. ನಾನು ಬೇರೆಲ್ಲಾ ಕೆಲಸ ಬಿಟ್ಟು ಆಕೆಯ ಕಡೆಗೆ ಧಾವಿಸಿದೆ. ಸತತ ೭ ಗಂಟೆಗಳ ಕಾಲ ಆಕೆ ಹೆರಿಗೆ ನೋವಿನೊಂದಿಗೆ ಹೋರಾಡಿದಳು. ಅದು ಭಯಾನಕ ಯಾತನೆಯಾಗಿತ್ತು. ಕೊನೆಗೆ ಸಿಜೇರಿಯನ್ ಮೂಲಕ ಮಗುವನ್ನು ಹೊರಗೆ ತೆಗೆಯಲು ನಿರ್ಧರಿಸಿದೆವು. ಈ ಪ್ರಕ್ರಿಯೆಯಲ್ಲಿ ಆಕೆಯೆ ಉಸಿರು ನಿಂತಿತು. ಮಗು ಮಾತ್ರ ಜೀವಂತವಾಗಿ ಹೊರಗೆ ಬಂತು. ಸಾವಿಗೆ ಕೆಲವು ಕ್ಷಣಗಳ ಮುನ್ನ ಆಕೆ ತನ್ನ ಮಗುವನ್ನು ಕೈಯಲ್ಲಿ ಹಿಡಿದುಕೊಂಡು, ಒಂದು ಮಗುಳ್ನಗು ಸೂಸಿ, ''ದೇವರು ದೊಡ್ಡವನು'' ಎಂದು ಹೇಳಿ ತನ್ನ ಉಸಿರು ಚೆಲ್ಲಿದಳು.

ನಾನು ನೋವಿನಿಂದ ಛಿದ್ರವಾಗಿದ್ದೆ. ಆಕೆಯ ಗಂಡನಿಗೆ ನಾನೇ ಈ ಸುದ್ದಿ ಹೇಳಬೇಕಾಗಿತ್ತು. ಸುದ್ದಿಯನ್ನು ಕೇಳಿ ಆತ ಮೂರ್ಛೆ ಹೋದ. ಸವಿಯಾದ ಗಳಿಗೆ ಆಗಬೇಕಿದ್ದುದು ಕ್ಷಣಾರ್ಧದಲ್ಲಿ ಶೋಕಭರಿತವಾಗಿತ್ತು. ಹೊಸದೊಂದು ಜೀವ ಭೂಮಿಗೆ ಬರುವುದಕ್ಕಾಗಿ, ಒಂದು ಹೆಣ್ಣು ಜೀವ ತನ್ನ ಪ್ರಾಣವನ್ನೇ ಕೊಟ್ಟಿತ್ತು.

ನಾನು ಎಲ್ಲರಲ್ಲಿ ಕೇಳಿಕೊಳ್ಳುವುದು ಇಷ್ಟೆ- ಮಗುವನ್ನು ೯ ತಿಂಗಳ ಕಾಲ ಹೆರುವುದು ಸುಲಭವಲ್ಲ, ನಂತರ ಹೆರಿಗೆ ನೋವು ಕೂಡ ಹೆಣ್ಣನ್ನು ಸಾವಿನ ಕಡೆಗೆ ಎರಡು ಮೆಟ್ಟಿಲು ಹತ್ತಿಸಿ ಮರಳಿ ಕರೆತರುತ್ತದೆ. ನಿಮ್ಮ ಮಗುವಿಗೆ ಜೀವ ಕೊಡಲು ತನ್ನ ಜೀವವನ್ನೇ ನೀಡುವ ಹೆಣ್ಣುಮಕ್ಕಳನ್ನು ಗೌರವಿಸಿ, ಅವರು ಗರ್ಭಿಣಿಯಾದಾಗ ಚೆನ್ನಾಗಿ ನೋಡಿಕೊಳ್ಳಿ. ದೇವರು ಅಂಥ ಎಲ್ಲ ಹೆಣ್ಣುಮಕ್ಕಳನ್ನೂ ಚೆನ್ನಾಗಿ, ಆರೋಗ್ಯವಾಗಿಟ್ಟಿರಲಿ.

 

 

 

click me!