ತಾಯಿ, ಅವ್ವ, ಅಮ್ಮ, ಜನನಿ, ಮಾತೆ ಹೇಗೆ ಕರೆದರೂ ಅಷ್ಟೆ ಆಕೆಯ ಪ್ರೀತಿಗೆ ಬೆಲೆ ಕಟ್ಟಲಾಗದು. ಮಕ್ಕಳಿಗಾಗಿ ಆಕೆ ಮಾಡುವ ತ್ಯಾಗವನ್ನು ಲೆಕ್ಕ ಹಾಕಲಾಗದು. ಮಕ್ಕಳ ಖುಷಿಗಾಗಿ ಆಕೆ ಎಂಥವರನ್ನೂ ಎದುರಿಸಲು, ಜಗತ್ತನ್ನೇ ಜಯಿಸಲು ಸಿದ್ಧ. ಈಕೆಯೂ ಅಂಥಾ ಮಹಾತಾಯಿ. ಹೆತ್ತ ಮಗನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ವಿಧವೆ ತಾಯಿ ನಡೆಸಿದ್ದ ಹೋರಾಟದ ಕಥೆಯಿದು.
- ಶೋಭಾ ಎಂ.ಸಿ, ಏಷ್ಯಾನೆಟ್ ಸುವರ್ಣನ್ಯೂಸ್
ಈ ಕಥೆ ಯಾವ ತಾಯಿ ಸೆಂಟಿಮೆಂಟ್ ಸಿನಿಮಾಗೂ ಕಡಿಮೆ ಇಲ್ಲ. ಹೆತ್ತ ಮಗನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ವಿಧವೆ ತಾಯಿ ನಡೆಸಿದ್ದ ಹೋರಾಟದ ಕಥೆ. ಅದು ಆ ತಾಯಿಯ (Mother) ಬರೋಬ್ಬರಿ 7 ವರ್ಷಗಳ ಹೋರಾಟ. ಉತ್ತರ ಪ್ರದೇಶದ ಗೊಂಡಾದಲ್ಲಿ 2015ರಲ್ಲಿ, 10ನೇ ಕ್ಲಾಸ್ ಓದುತ್ತಿದ್ದ ಬಾಲಕಿ (Girl) ನಾಪತ್ತೆಯಾಗಿದ್ದಳು. ಕೆಲ ದಿನದ ಬಳಿಕ ಆಗ್ರಾದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಾಲಕಿಯನ್ನು ಅಪಹರಿಸಿ, ಕೊಲೆ ಮಾಡಿದ್ದಾನೆಂದು ಪಕ್ಕದ ಮನೆಯ 18 ವರ್ಷದ ಯುವಕ (Boy) ವಿಷ್ಣುವನ್ನು ಬಂಧಿಸಿ ಜೈಲಿಗಟ್ಟಿದ್ರು.
ಮಗನನ್ನು ಜೈಲಿಗಟ್ಟಿದ್ದರಿಂದ ವಿಷ್ಣುವಿನ ವಿಧವೆ (Widow) ತಾಯಿ ಸುನೀತಾ, ಕನಲಿ ಹೋಗಿದ್ದಳು. ನನ್ನ ಮಗ ಕೊಲೆ ಮಾಡಿರಲು ಸಾಧ್ಯವೇ ಇಲ್ಲ ಅಂತ ತಾಯಿ ಹೃದಯ ಬಲವಾಗಿ ನಂಬಿತ್ತು. ಸುಳ್ಳು ಕೇಸ್ನಲ್ಲಿ ಮಗನನ್ನು ಫಿಟ್ ಜೈಲಿಗಟ್ಟಿದ್ದಾರೆಂದು ಕಂಗಾಲಾದಳು. ಬೇಡದ ದೇವರಿಲ್ಲ. ನೆರವು ಕೇಳದ ಜನರಿಲ್ಲ. ವಿಷ್ಣು ನಿರಪರಾಧಿ ಎಂದು ನಂಬಲು ಯಾರೊಬ್ಬರೂ ತಯಾರಿರಲಿಲ್ಲ. ಆ ತಾಯಿ ಮಾತ್ರ, ಮಗ ತಪ್ಪು ಮಾಡಿಲ್ಲವೆಂದು ಬಲವಾಗಿ ನಂಬಿದ್ದಳು. ಕೆಲವರು ಸುನಿತಾಗೆ ಹುಚ್ಚು ಹಿಡಿದಿದೆ ಎಂದುಕೊಂಡರು.
ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ
ಇಷ್ಟೆಲ್ಲದರ ಮಧ್ಯೆ ತಾಯಿ ಸುನೀತಾ ಒಂದು ನಿರ್ಧಾರಕ್ಕೆ ಬಂದಿದ್ದದ್ದಳು, ಹೇಗಾದರೂ ಸರಿ, ಆ ಬಾಲಕಿ ಯನ್ನು ಪತ್ತೆ ಹಚ್ಚಿಯೇ ತೀರಬೇಕೆಂದು ಟೊಂಕ ಕಟ್ಟಿ ನಿಂತಿಬಿಟ್ಟಳು. ಬಾಲಕಿಯ ಫೋಟೋ ಹಿಡಿದುಕೊಂಡು ಊರೂರು ಅಲೆದಳು, ಸಿಕ್ಕಸಿಕ್ಕವರಿಗೆ ಫೋಟೋ ತೋರಿಸಿ, ಈ ಹುಡುಗಿ ಗೊತ್ತೇ ಎಂದು ಬೆನ್ನುಬಿದ್ದಳು. ತಿರುಗದ ಊರಿಲ್ಲ. ಊಟ, ನಿದ್ರೆ ಬಿಟ್ಟು ಅಲೆದಳು. ಮಗನ ಮೇಲಿದ್ದ ನಂಬಿಕೆ, ಆಕೆಯನ್ನು ಸ್ವಲ್ಪವೂ ನಿಶ್ಚಲಗೊಳಿಸಲಿಲ್ಲ.
ಆಕೆಯ ಕಣ್ಮುಂದೆ ಇದ್ದದ್ದೇ ಇಬ್ಬರು, ಜೈಲಿನಲ್ಲಿ ಇರೋ ಮಗ, ನಾಪತ್ತೆಯಾಗಿರೋ ಹುಡುಗಿ. ಒಂದಲ್ಲ, ಎರಡಲ್ಲ, ಬರೋಬ್ಬರಿ ಏಳು ವರ್ಷ ಆ ಕೊಲೆಯಾದ ಹುಡುಗಿಯ ಪತ್ತೆ ಕಾರ್ಯಾಚರಣೆ ನಡೆಸಿದಳು.
ಲೈನ್‌ಮ್ಯಾನ್ ಅಲ್ಲ ಲೈನ್ ವಿಮೆನ್..ಹೈ ವೋಲ್ಟೇಜ್ ಟವರ್ ಏರಿದ್ರು ಅಕ್ಕಾ ಬಾಂಡ್ !
ಹೀಗೆ ಹುಡುಕಾಟ ನಡೆಸುತ್ತಿದ್ದ ಸುನೀತಾ, ವೃಂದಾವನದಲ್ಲಿನ ಅಧ್ಯಾತ್ಮ ಗುರುವೊಬ್ಬರ ಬಳೀ ಬಂದಿದ್ದಳು. ಗುರುಜಿಯ ಪ್ರವಚನಕ್ಕೆ ಬರುತ್ತಿದ್ದ ಪ್ರತಿಯೊಬ್ಬರನ್ನೂ ನೋಡುತ್ತಿದ್ದ ತಾಯಿಗೆ, ಹೆಣ್ಣುಮಗಳೊಬ್ಬಳು ಕಣ್ಣಿಗೆ ಬಿದ್ದಳು. ಆಕೆ ಬೇರಾರು ಅಲ್ಲ, 7 ವರ್ಷದ ಹಿಂದೆ ನಾಪತ್ತೆಯಾಗಿದ್ದ ಬಾಲಕಿ. ಪೊಲೀಸರ ವಿಚಾರಣೆಯಲ್ಲಿ ಸತ್ಯ ಒಪ್ಪಿಕೊಂಡಳು. ಆಕೆಯ ತಂದೆಯೂ ಮಗಳನ್ನು ಗುರುತಿಸಿದ. ಮೊನ್ನೆ ಆ ಯುವತಿಯನ್ನು ಕೋರ್ಟ್ ಎದುರು ಹಾಜರುಪಡಿಸಲಾಯ್ತು. ವಿಚಾರಣೆ ನಡೆದಿದೆ.
7 ವರ್ಷದಲ್ಲಿ ಆಕೆ ಇಬ್ಬರು ಮಕ್ಕಳು, ಗಂಡನೊಂದಿಗೆ ಸುಖ ಸಂಸಾರ ನಡೆಸಿದ್ರೆ, ಅಮಾಯಕ ವಿಷ್ಣು, ಅಮೂಲ್ಯ ಏಳು ವರ್ಷಗಳನ್ನು ಜೈಲಿನಲ್ಲಿ ಕಳೆದುಕೊಂಡಿದ್ದಾನೆ. ಇಲ್ಲಿ ಗೆದ್ದಿದ್ದು ಕೊಲೆ ಮಾಡದ ವಿಷ್ಣುವಲ್ಲ, ಮಗ ನಿರಪರಾಧಿ ಎಂಬ ತಾಯಿಯ ಕರುಳುಬಳ್ಳಿಯ ನಂಬಿಕೆಯೇ ಗೆದ್ದಿತು.
ಇತಿಹಾಸದಲ್ಲಿ ಮೂರನೇ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ಸರ್ವ ಮಹಿಳಾ ಪೀಠ