Latest Videos

ಬಾಡಿಗೆ ತಾಯಂದಿರಿಗೂ ಹೆರಿಗೆ ರಜೆ ಪಡೆಯುವ ಹಕ್ಕಿದೆ; ಹೈಕೋರ್ಟ್‌ನಿಂದ ಮಹತ್ತರ ಆದೇಶ

By Vinutha PerlaFirst Published Nov 9, 2023, 12:18 PM IST
Highlights

ಮಾತೃತ್ವ ರಜೆಗೆ ಸಂಬಂಧಿಸಿದಂತೆ ತಾಯಿಗೆ ತಾರತಮ್ಯ ಮಾಡಬಾರದು, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತಿದ್ದಾಳೆ ಅನ್ನೋ ಕಾರಣಕ್ಕೆ ಆಕೆಗೆ ಮೆಟರ್ನಿಟಿ ಲೀವ್‌ ನಿರಾಕರಿಸುವಂತಿಲ್ಲ ಎಂಬುದಾಗಿ ರಾಜಸ್ಥಾನ ಹೈಕೋರ್ಟ್ ಹೇಳಿದೆ.

ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಂಡ ಉದ್ಯೋಗಸ್ಥ ಮಹಿಳೆಯರೂ ಹೆರಿಗೆ ರಜೆ ಪಡೆಯಲು ಅರ್ಹರೆಂದು ರಾಜಸ್ಥಾನ ಹೈಕೋರ್ಟ್ ತಿಳಿಸಿದೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆರುವ ತಾಯಿಗೆ ಹೆರಿಗೆ ರಜೆಯನ್ನು ನಿರಾಕರಿಸುವಂತಿಲ್ಲ ಎಂದು ರಾಜಸ್ಥಾನ ಹೈಕೋರ್ಟ್‌ನ ಜೈಪುರ ಪೀಠ ಸ್ಪಷ್ಟಪಡಿಸಿದೆ. ಏಕಸದಸ್ಯ ನ್ಯಾಯಮೂರ್ತಿ ಅನೂಪ್ ಕುಮಾರ್ ಧಾಂಡ್ ಅವರು ಮಾತೃತ್ವ ರಜೆಗೆ ಸಂಬಂಧಿಸಿದಂತೆ ತಾಯಿಗೆ ತಾರತಮ್ಯ ಮಾಡಬಾರದು, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತಿದ್ದಾಳೆ ಅನ್ನೋ ಕಾರಣಕ್ಕೆ ಆಕೆಗೆ ಮೆಟರ್ನಿಟಿ ಲೀವ್‌ ನಿರಾಕರಿಸುವಂತಿಲ್ಲ ಎಂಬುದಾಗಿ ತೀರ್ಪು ನೀಡಿದರು.

ಬಾಡಿಗೆ ತಾಯಂದಿರಿಗೆ ಹೆರಿಗೆ ರಜೆಯನ್ನು (Maternity leave) ನಿರಾಕರಿಸುವುದು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಅವರ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ (Court) ಹೇಳಿದೆ. 'ಆರ್ಟಿಕಲ್ 21 ರ ಅಡಿಯಲ್ಲಿ ಜೀವಿಸುವ ಹಕ್ಕು ಮಾತೃತ್ವದ ಹಕ್ಕನ್ನು ಮತ್ತು ಪ್ರತಿ ಮಗುವಿನ ಪೂರ್ಣ ಬೆಳವಣಿಗೆಯ ಹಕ್ಕನ್ನು ಒಳಗೊಂಡಿದೆ. ಸರ್ಕಾರವು ದತ್ತು ಪಡೆದ ತಾಯಿಗೆ ಹೆರಿಗೆ ರಜೆ ನೀಡಲು ಸಾಧ್ಯವಾದರೆ, ತಾಯಿಗೆ ಹೆರಿಗೆ ರಜೆ ನೀಡಲು ನಿರಾಕರಿಸುವುದು ಸಂಪೂರ್ಣವಾಗಿ ಅನುಚಿತವಾಗಿದೆ' ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಬಾಡಿಗೆ ತಾಯ್ತನದ (Surrogacy) ಮೂಲಕ ಅವಳಿ ಮಕ್ಕಳನ್ನು ಪಡೆದ ಮಹಿಳೆಯೊಬ್ಬರು ಸಲ್ಲಿಸಿದ ಮನವಿಯ ಮೇರೆಗೆ ಈ ಆದೇಶವನ್ನು ನೀಡಲಾಗಿದೆ.

ದೇಶದ ಕಂಪನಿಗಳಿಗೆ ಮಾದರಿಯಾಗುವಂಥ ಹೆರಿಗೆ ರಜೆ ನೀತಿಯನ್ನು ಜಾರಿ ಮಾಡಿದ ಮಹೀಂದ್ರಾ & ಮಹೀಂದ್ರಾ!

ಬಾಡಿಗೆ ತಾಯಂದಿರಿಗೆ ತಾರತಮ್ಯ ಮಾಡಬಾರದು ಎಂದ ಕೋರ್ಟ್‌
'ಬಾಡಿಗೆ ತಾಯ್ತನದ ಮೂಲಕ ಜನಿಸಿದ ಶಿಶುಗಳನ್ನು ಇತರರ ಬಳಿ ಬಿಡಲಾಗುವುದಿಲ್ಲ. ಏಕೆಂದರೆ ಶಿಶುಗಳಿಗೆ ತಮ್ಮ ಶೈಶವಾವಸ್ಥೆಯಲ್ಲಿ ತಾಯಿಯ ಪ್ರೀತಿ, ಕಾಳಜಿ, ರಕ್ಷಣೆ ಮತ್ತು ಗಮನ ಬೇಕಾಗುತ್ತದೆ. ಏಕೆಂದರೆ ಈ ಅವಧಿಯಲ್ಲಿ ತಾಯಿ ಮತ್ತು ಮಕ್ಕಳ ನಡುವೆ ಪ್ರೀತಿ ಮತ್ತು ವಾತ್ಸಲ್ಯದ ಬಾಂಧವ್ಯ ಬೆಳೆಯುತ್ತದೆ' ಎಂದು ಕೋರ್ಟ್ ಹೇಳಿದೆ.

ಅವಳಿ ಮಕ್ಕಳ ಜನನದ ನಂತರ, ಅರ್ಜಿದಾರರು ರಾಜಸ್ಥಾನ ಸೇವಾ ನಿಯಮಗಳು, 1958ರ ಪ್ರಕಾರ ಹೆರಿಗೆ ರಜೆಯನ್ನು ಪಡೆಯಲು ಕೋರಿದರು. ಆದರೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಹೆರಿಗೆ ರಜೆ ನೀಡಲು 1958 ರ ನಿಯಮಗಳ ಅಡಿಯಲ್ಲಿ ಯಾವುದೇ ಅವಕಾಶವಿಲ್ಲ ಎಂಬ ಕಾರಣಕ್ಕಾಗಿ ಆಕೆಗೆ ಹೆರಿಗೆ ರಜೆಯನ್ನು ನಿರಾಕರಿಸಲಾಯಿತು. ಆ ನಂತರ ಅರ್ಜಿದಾರರಿಗೆ 180 ದಿನಗಳ ಹೆರಿಗೆ ರಜೆ ನೀಡುವಂತೆ ರಾಜ್ಯ ಅಧಿಕಾರಿಗಳಿಗೆ ಆದೇಶಿಸಿದ ಪೀಠ, ದೇಶಾದ್ಯಂತ ನ್ಯಾಯಾಲಯಗಳು ಜೈವಿಕ ಅಥವಾ ಬಾಡಿಗೆ ತಾಯಂದಿರಿಗೆ ಅಂತಹ ರಜೆಗಳನ್ನು ನೀಡುವಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಅಭಿಪ್ರಾಯಪಟ್ಟಿದೆ.

ಈ ರಾಜ್ಯದ ಮಹಿಳೆಯರಿಗೆ ಸಿಗಲಿದೆ ಒಂದು ವರ್ಷದ ಮೆಟರ್ನಿಟಿ ಲೀವ್‌

ಸೂಕ್ತ ಕಾನೂನು ತರಲು ಸರಿಯಾದ ಸಮಯವೆಂದ ನ್ಯಾಯಾಧೀಶರು
'ಆರ್ಟಿಕಲ್ 21 ಮತ್ತು ಬಾಡಿಗೆ ತಾಯ್ತನದ ಪ್ರಕ್ರಿಯೆಯಿಂದ ಜನಿಸಿದ ಮಕ್ಕಳು ತಮ್ಮ ತಾಯಿಯ ಮೂಲಕ ಜೀವನ, ಆರೈಕೆ, ರಕ್ಷಣೆ, ಪ್ರೀತಿ, ವಾತ್ಸಲ್ಯ ಮತ್ತು ಬೆಳವಣಿಗೆಯ ಹಕ್ಕನ್ನು ಹೊಂದಿರುತ್ತಾರೆ, ನಂತರ ಖಂಡಿತವಾಗಿಯೂ ಅಂತಹ ತಾಯಂದಿರಿಗೆ ಹೆರಿಗೆ ರಜೆ ಪಡೆಯುವ ಹಕ್ಕಿದೆ' ಎಂದು ನ್ಯಾಯಾಲಯ ಒತ್ತಿಹೇಳಿತು. ಆದರೆ ಈ ನಿಟ್ಟಿನಲ್ಲಿ ಕಾನೂನು ಮೌನವಾಗಿದೆ ಎಂದು ಗಮನಿಸಿದ ಕೋರ್ಟ್, ಸರ್ಕಾರ ಸೂಕ್ತ ಕಾನೂನು ತರುವಂತೆ ಒತ್ತಾಯಿಸಿತು. 'ಬಾಡಿಗೆ ತಾಯಂದಿರಿಗೆ ಹೆರಿಗೆ ರಜೆ ನೀಡಲು ಸರ್ಕಾರವು ಸೂಕ್ತ ಕಾನೂನು ತರಲು ಇದು ಸರಿಯಾದ ಸಮಯವಾಗಿದೆ' ಎಂದು ನ್ಯಾಯಾಧೀಶರು ಶಿಫಾರಸು ಮಾಡಿದರು.

ಆದೇಶದ ಪ್ರತಿಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಹಾಗೂ ಪ್ರಧಾನ ಕಾರ್ಯದರ್ಶಿ, ಕಾನೂನು ಮತ್ತು ಕಾನೂನು ವ್ಯವಹಾರಗಳ ಇಲಾಖೆ, ರಾಜಸ್ಥಾನ ಸರ್ಕಾರಕ್ಕೆ ಕ್ರಮಕ್ಕಾಗಿ ರವಾನಿಸಲು ಹೈಕೋರ್ಟ್ ರಿಜಿಸ್ಟ್ರಿಗೆ ಆದೇಶಿಸಿದೆ. ಅರ್ಜಿದಾರರ ಪರ ವಕೀಲರಾದ ರಾಜೇಶ್ ಕಪೂರ್ ಮತ್ತು ಹರ್ಷದ್ ಕಪೂರ್ ವಾದ ಮಂಡಿಸಿದರು. ಹೆಚ್ಚುವರಿ ಅಡ್ವೊಕೇಟ್ ಜನರಲ್ ಡಾ ವಿ ಬಿ ಶರ್ಮಾ ರಾಜ್ಯವನ್ನು ಪ್ರತಿನಿಧಿಸಿದರು.

click me!