
ಪಾಶ್ಚಿಮಾತ್ಯ ದೇಶಗಳಲ್ಲಿ ಗರ್ಭಪಾತದ ಮೇಲಿನ ಸಂಪೂರ್ಣ ನಿಷೇಧದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಬೀದಿಗಳಲ್ಲಿ ಆತಂಕಕಾರಿ ಕೋಲಾಹಲ ಉಂಟಾಗಿರುವ ಸಮಯದಲ್ಲಿ, ಗರ್ಭಪಾತ ಕುರಿತ ಭಾರತದ ಉದಾರ ನಿಲುವು ಸಮಾಧಾನಕರವಾದ ಗರ್ಭಗುಡಿಯಂತಿದೆ.
ವಾಣಿಜ್ಯ ಬಾಡಿಗೆ ತಾಯ್ತನದ ಮೇಲಿನ ನಿಷೇಧ ಮತ್ತು ವಿವಾಹದ ವೇಳೆ ಪುರುಷರು ಮತ್ತು ಮಹಿಳೆಯರ ಕನಿಷ್ಠ ವಯಸ್ಸನ್ನು ಏಕರೂಪಗೊಳಿಸುವ ಪ್ರಸ್ತಾಪದೊಂದಿಗೆ, ಸಂತಾನೋತ್ಪತ್ತಿಯ ಸ್ವಾಯತ್ತತೆಯನ್ನು ರಕ್ಷಿಸುವ ರಾಷ್ಟ್ರಗಳ ಅತ್ಯುನ್ನತ ಶ್ರೇಣಿಗಳಲ್ಲಿ ಭಾರತವು ಸುಭದ್ರ ಸ್ಥಾನ ಪಡೆದಿದೆ.
ಭಾರತದ ಸಾಂವಿಧಾನಿಕ ನೀತಿಗಳು ಅನುಚ್ಛೇದ 21ರ ಮೂಲಕ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧವಾಗಿವೆ. ಗರ್ಭಪಾತ ಅಥವಾ ಗರ್ಭಧಾರಣೆಯನ್ನು ಕೊನೆಗೊಳಿಸುವ ಬಗ್ಗೆ ಸ್ವಯಂ-ನಿರ್ಧರಿಸುವುದು ಮಹಿಳೆಯ ವಿಶೇಷಾಧಿಕಾರವಾಗಿದೆ. ಮಹಿಳೆಯರು ತಮ್ಮ ಜೈವಿಕ ಪೂರ್ವರಚನೆಯ ಹಿನ್ನೆಲೆಯಲ್ಲಿ ಮಕ್ಕಳನ್ನು ಹೊತ್ತು ಹೆತ್ತು ಸಾಕಲು ವಿಶೇಷವಾಗಿ ಉತ್ಸುಕರಾಗಿರುತ್ತಾರೆ. ಸಾಮಾಜಿಕ-ಸಾಂಸ್ಕೃತಿಕ ಸಂರಚನೆಗಳು ಸಹ ಮಹಿಳೆಯರಿಗೆ ಮಕ್ಕಳ ಪಾಲನೆಯಲ್ಲಿ ಅಸಮಾನ ಪಾಲು ನೀಡುತ್ತವೆ.
Women Health: ಈ ಸಮಯದಲ್ಲಾಗುತ್ತೆ ಹೆಚ್ಚು ಗರ್ಭಪಾತ..! ಗರ್ಭಧಾರಣೆ ಮುನ್ನ ತಿಳಿಯಿರಿ
24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ
ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಕಾಯ್ದೆ-2021 ಈ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ನಿರೀಕ್ಷೆಯಲ್ಲಿರುವ ತಾಯಂದಿರು ತಮ್ಮ ಮನೆಗಳಿಗೆ ಹೊಸ ಜೀವವನ್ನು ಸ್ವಾಗತಿಸುವಲ್ಲಿ ಸ್ವಯಂ ದೃಢನಿರ್ಧಾರವನ್ನು ಪ್ರದರ್ಶಿಸುತ್ತಾರೆ ಎಂದು ಇದು ಖಚಿತಪಡಿಸುತ್ತದೆ. ಈ ಕಾಯ್ದೆಯ ಅಡಿಯಲ್ಲಿ, ತಾಯಿಯ ಜೀವಕ್ಕೆ ಅಪಾಯ, ಮಾನಸಿಕ ವೇದನೆ, ಅತ್ಯಾಚಾರ, ಅನೈತಿಕ ಸಂಬಂಧ, ಗರ್ಭನಿರೋಧಕದ ವೈಫಲ್ಯ ಅಥವಾ ಭ್ರೂಣದ ಅಸಹಜತೆಗಳ ರೋಗನಿರ್ಣಯದ ಆಧಾರದ ಮೇಲೆ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶವಿದೆ. ಈ ಕಾಯ್ದೆಯು 1971ರ ಎಂಟಿಪಿ ಕಾಯ್ದೆಯಿಂದ ವಿಧಿಸಲಾಗಿದ್ದ 20 ವಾರಗಳ ಸವಾಲನ್ನು ದೂರ ಮಾಡುತ್ತದೆ ಹಾಗೂ ಆರೋಗ್ಯ ಮತ್ತು ಸಂತಾನೋತ್ಪತ್ತಿ ವಿಜ್ಞಾನ ಕ್ಷೇತ್ರದಲ್ಲಿನ ಪ್ರಗತಿಗೆ ಪೂರಕವಾಗಿದೆ. ಇದು ಲೈಂಗಿಕ ಕಿರುಕುಳ ಅಥವಾ ಅನೈತಿಕ ಸಂಬಂಧದ ಸಂದರ್ಭಗಳಲ್ಲಿಯೂ ಸಹ ಗರ್ಭಧಾರಣೆಯ ನಂತರ ಗರ್ಭಪಾತಕ್ಕೆ ಅನುಮತಿ ನೀಡದ ದೇಶಗಳಿಗೆ ಪ್ರತಿಯಾದ ಉದಾರ ಸಾಧನೆಯಾಗಿದೆ.
ಎಂಟಿಪಿ ಕಾಯ್ದೆ-2021, ಅದರ ಜನ್ಮದಾತರ ಅಂತರ್‌ದೃಷ್ಟಿಮತ್ತು ದೂರದೃಷ್ಟಿಯನ್ನು ದೃಢೀಕರಿಸುತ್ತದೆ. ಮಕ್ಕಳ ಸಿದ್ಧತೆ ಮತ್ತು ಅಪೇಕ್ಷೆಯು ತಾಯಂದಿರು, ಕುಟುಂಬಗಳು ಮತ್ತು ಮಕ್ಕಳ ಜೀವನ ಪಥವನ್ನು ನಿರ್ಣಾಯಕವಾಗಿ ರೂಪಿಸುತ್ತದೆ. ಅನಗತ್ಯ ಗರ್ಭಧಾರಣೆಗಳು ಅನಿರೀಕ್ಷಿತವಾಗಿ ಪೋಷಕರ, ವಿಶೇಷವಾಗಿ ತಾಯಂದಿರ ಜೀವನದ ಆಯ್ಕೆಗಳನ್ನು ಮೊಟಕುಗೊಳಿಸುತ್ತವೆ ಮತ್ತು ಅವರ ಮಾನಸಿಕ ಯೋಗಕ್ಷೇಮ ಮತ್ತು ವæೖಯಕ್ತಿಕ ಬೆಳವಣಿಗೆಯನ್ನು ಮಿತಿಗೊಳಿಸಬಹುದಾಗಿರುತ್ತದೆ.
ಇದಲ್ಲದೆ, ಅನಗತ್ಯವಾಗಿ ಜನಿಸಿದ ಮಕ್ಕಳು ಅಲ್ಪ ಅವಕಾಶಗಳಿಂದ ಸಂಕಷ್ಟಅನುಭವಿಸಬಹುದು. ಹೀಗಾಗಿ ಡಬ್ಲ್ಯೂಎಚ್‌ಒ ಇಷ್ಟಪಟ್ಟು ಮಕ್ಕಳನ್ನು ಮಾಡಿಕೊಳ್ಳುವ ಸಾಧ್ಯತೆಯ ಕುರಿತಂತೆ ಅವರ ಶಿಕ್ಷಣದಲ್ಲಿ ಒತ್ತಾಸೆ ನೀಡಿದೆ. ಆದ್ದರಿಂದ ಇತ್ತೀಚಿನ ಎಂಟಿಪಿ ಕಾಯ್ದೆಯು ತಾಯಂದಿರನ್ನು ಅನಗತ್ಯ ಗರ್ಭಧಾರಣೆಯ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟಗಳಿಂದ ಮುಕ್ತಗೊಳಿಸುತ್ತದೆ.
50 ವರ್ಷಗಳಿಂದ ಜಾರಿಯಲ್ಲಿದ್ದ ಗರ್ಭಪಾತದ ಹಕ್ಕು ರದ್ದುಗೊಳಿಸಿದ ಅಮೆರಿಕಾ ಸುಪ್ರೀಂಕೋರ್ಟ್
ವಿವಾಹದ ವಯಸ್ಸು ಹೆಚ್ಚಳದ ಪ್ರಸ್ತಾವನೆ
ಗರ್ಭಧಾರಣೆ, ಮಕ್ಕಳನ್ನು ಹೆತ್ತು ಹೊತ್ತು ಸಾಕುವುದು ನಿಸ್ಸಂಶಯವಾಗಿ ವಿವಾಹದೊಂದಿಗೆ ನೇರ ಸಂಬಂಧ ಹೊಂದಿದೆ. ಹೀಗಾಗಿ ಮಹಿಳೆಯರಿಗೆ ಕಾನೂನುಬದ್ಧ ವಿವಾಹದ ವಯಸ್ಸನ್ನು ಹೆಚ್ಚಿಸಲು ಪ್ರಸ್ತಾಪಿಸುವ ಮೂಲಕ, ನೀತಿ ನಿರೂಪಕರು ಗರ್ಭಧಾರಣೆಯನ್ನು ವಿಳಂಬಗೊಳಿಸುವ ನಿಟ್ಟಿನಲ್ಲಿ ಸ್ವಾಗತಾರ್ಹ ಪರಿವರ್ತನೆಗಳನ್ನು ಘೋಷಿಸಿದ್ದಾರೆ.
ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆ-2021, ಮಹಿಳೆಯರ ವಿವಾಹದ ವಯಸ್ಸನ್ನು 18ರಿಂದ 21 ವರ್ಷಗಳಿಗೆ ಹೆಚ್ಚಿಸುತ್ತದೆ. 20ರಿಂದ 24 ವರ್ಷ ವಯಸ್ಸಿನ ಮಹಿಳೆಯರಿಗೆ ಹೋಲಿಸಿದರೆ 10ರಿಂದ 19 ವರ್ಷ ವಯಸ್ಸಿನ ಹದಿಹರೆಯದ ತಾಯಂದಿರು ಹಲವು ಆರೋಗ್ಯ ಸಮಸ್ಯೆ ಮತ್ತು ಇಡೀ ದೇಹದ ಸೋಂಕುಗಳ ಹೆಚ್ಚಿನ ಅಪಾಯಗಳಿಗೆ ಒಳಗಾಗುತ್ತಾರೆ ಎಂದು ಡಬ್ಲ್ಯೂಎಚ್‌ಒ ಉಲ್ಲೇಖಿಸಿದ್ದು, ತಜ್ಞತೆ ಮತ್ತು ಪುರಾವೆಗಳ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ರೂಪಿಸಲಾಗಿದೆ. ಅಂತಹ ತಾಯಂದಿರು ಕಡಿಮೆ ತೂಕದ ಮಗುವಿನ ಜನನ, ಅವಧಿ ಪೂರ್ವ ಹೆರಿಗೆ ಮತ್ತು ನವಜಾತ ಶಿಶುಗಳ ವಿಷಮ ಪರಿಸ್ಥಿತಿಗಳ ಅಪಾಯಗಳನ್ನು ಎದುರಿಸುತ್ತಾರೆ ಎನ್ನುತ್ತದೆ.
ತಾಯ್ತನದ ವ್ಯಾಪಾರೀಕರಣಕ್ಕೆ ಕಡಿವಾಣ
ಸರ್ಕಾರವು ರೂಪಿಸಿದ ಮತ್ತೊಂದು ಅಲ್ಪ ಅಂದಾಜಿನ ನೀತಿಯ ಸಂಶೋಧನೆಯೇನೆಂದರೆ, ಗರ್ಭಕೋಶವನ್ನು ಬಾಡಿಗೆಗೆ ಪಡೆಯಲು ಅವಕಾಶ ನೀಡುವ ಬಾಡಿಗೆ ತಾಯ್ತನದ ಮಾರುಕಟ್ಟೆಗಳನ್ನು ನಾಶಪಡಿಸುವುದು. ಜಾಗತಿಕ ಅಸಮಾನತೆಗಳನ್ನು ಗಮನಿಸಿದರೆ, ಬಾಡಿಗೆ ತಾಯಂದಿರಿಗೆ ಭಾರತವು ಲಾಭದಾಯಕ ಜೈವಿಕ ಮಾರುಕಟ್ಟೆಆಗಿತ್ತು. ಬಡ ಭಾರತೀಯ ಮಹಿಳೆಯರ ದೇಹಗಳು ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳ ನಿವಾಸಿಗಳಿಗೆ ಜೈವಿಕವಾಗಿ ಲಭ್ಯವಾಗಿದ್ದವು.
ತಾಯ್ತನದ ವ್ಯಾಪಾರೀಕರಣವು ಮಹಿಳೆಯರನ್ನು ಒಂದು ಸರಕಿನಂತೆ ಬಳಸುತ್ತಿತ್ತು. ಹೀಗಾಗಿ ಭಾರತವನ್ನು ಶಿಶು ಕಾರ್ಖಾನೆ ಎಂದು ಬಣ್ಣಿಸಲಾಗುತ್ತಿತ್ತು. ಒಮ್ಮೊಮ್ಮೆ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿಗಳು ಮಗುವನ್ನು ತ್ಯಜಿಸುತ್ತಿದ್ದರು. ಬೇರೆ ಬೇರೆ ರೀತಿಯಲ್ಲಿ ಬಾಡಿಗೆ ತಾಯಂದಿರ ಶೋಷಣೆಯಾಗುತ್ತಿತ್ತು ಮತ್ತು ಪರಿಹಾರವೂ ಪಾವತಿಯಾಗುತ್ತಿರಲಿಲ್ಲ. ಪೂಜ್ಯ ತಾಯಂದಿರ ದೀರ್ಘಕಾಲದ ಸಾಂಸ್ಕೃತಿಕ ವಂಶಾವಳಿಯನ್ನು ಹೊಂದಿರುವ ದೇಶದಲ್ಲಿ, ಅಜಾಗರೂಕ ಬಾಡಿಗೆ ತಾಯ್ತನದ ವ್ಯಾಪಾರೀಕರಣವು ಸಾಂಸ್ಕೃತಿಕ ನೀತಿಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ ಎಂಬುದನ್ನು ತೋರಿಸುತ್ತದೆ.
ಈ ಅಸಮಾಧಾನಕ್ಕೆ ಸ್ಪಂದನೆಯಾಗಿ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021, ಬಾಡಿಗೆ ತಾಯ್ತನದ ವ್ಯಾಪಾರೀಕರಣವನ್ನು ನೈತಿಕ, ಪರೋಪಕಾರಿ ಬಾಡಿಗೆ ತಾಯ್ತನದೊಂದಿಗೆ ಬದಲಾಯಿಸಿತು. ಈ ಕಾಯ್ದೆಯು ಭಾರತೀಯ ಮೂಲದವರಲ್ಲದ ದಂಪತಿಗಳು ಭಾರತ ದೇಶದಲ್ಲಿ ಬಾಡಿಗೆ ತಾಯ್ತನವನ್ನು ಪಡೆಯುವುದನ್ನು ನಿಷೇಧಿಸುತ್ತದೆ ಮತ್ತು ಗರ್ಭಧಾರಣೆಗೆ ಸಮಸ್ಯೆಯಿರುವ, ಬಾಡಿಗೆ ತಾಯ್ತನದ ಅಗತ್ಯವಿರುವ ಪ್ರಮಾಣೀಕೃತ, ವೈದ್ಯಕೀಯ ಕಾರಣಗಳನ್ನು ಹೊಂದಿರುವ ಸ್ಥಳೀಯರಿಗೆ ಮಾತ್ರ ಇದನ್ನು ಪಡೆಯಲು ಅನುಮತಿಸುತ್ತದೆ. ಎಂಟಿಪಿ ಕಾಯ್ದೆ, ಬಾಡಿಗೆ ತಾಯ್ತನ ಕಾಯ್ದೆ ಮತ್ತು ಪಿಸಿಎಂ (ತಿದ್ದುಪಡಿ) ಮಸೂದೆ-2021 ಒಟ್ಟಾಗಿ ನಾರಿ ಶಕ್ತಿಗೆ ಹೊಸ ಅರ್ಥವನ್ನು ನೀಡುತ್ತವೆ.
ತೂಕ ಇಳಿಸಿಕೊಂಡ Smriti Irani ಈಕೆಯ ಬಹುಮುಖ ಪ್ರತಿಭೆ ಇಲ್ಲಿದೆ ನೋಡಿ!
ಪ್ರತಿ ಕುಟುಂಬದ ಆರೋಗ್ಯ ರಕ್ಷಣೆ
ಈ ಸಶಕ್ತ ರಾಜಕೀಯ-ಕಾನೂನು ವ್ಯವಸ್ಥೆಯೊಳಗೆ, ಸರ್ಕಾರವು ಮಹಿಳೆಯರ ಆಯ್ಕೆಗಳು ಮತ್ತು ನಿರ್ಧಾರಗಳನ್ನು ಗೌರವಿಸಲು ಸುಲಭವಾಗಿ ಒಗ್ಗೂಡುವ ನೀತಿಗಳನ್ನು ರೂಪಿಸಿದೆ. ಆಯುಷ್ಮಾನ್ ಭಾರತ್, ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ಅಡಿಯಲ್ಲಿ, ಪ್ರತಿ ಕುಟುಂಬಕ್ಕೆ ವಾರ್ಷಿಕ .5 ಲಕ್ಷಗಳ ಆರೋಗ್ಯ ರಕ್ಷಣೆಯನ್ನು ಒದಗಿಸಲಾಗುತ್ತದೆ.
ಪ್ರಸೂತಿ ಮತ್ತು ಸ್ತ್ರೀರೋಗಕ್ಕೆ ಸಂಬಂಧಿಸಿದ ವ್ಯಾಪಕ ಶ್ರೇಣಿಯ ಪ್ಯಾಕೇಜ್‌ಗಳನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆ (ಪಿಎಂಎಂವಿವೈ) ಗರ್ಭಧಾರಣೆಯ ಮೊದಲು ಮತ್ತು ನಂತರದ ವೇತನ ನಷ್ಟವನ್ನು ಭಾಗಶಃ ಸರಿದೂಗಿಸಿದರೆ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿಎಂಎಸ್‌ಎಂಎ) ಪ್ರತಿ ತಿಂಗಳ 9ನೇ ದಿನದಂದು ಗರ್ಭಿಣಿಯರಿಗೆ ಪ್ರಸವಪೂರ್ವ ಆರೈಕೆಯನ್ನು ಉಚಿತವಾಗಿ ಒದಗಿಸುತ್ತದೆ. ಇದು ಗರ್ಭಿಣಿಯರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.
ತಾಯಂದಿರ ಮರಣ ಪ್ರಮಾಣ ಇಳಿಕೆ
ಸಂತಾನೋತ್ಪತ್ತಿ ಆಯ್ಕೆಗಳು ಮಹಿಳೆಯರ ವೆಚ್ಚಕ್ಕೆ ಹೊರೆಯಾಗದಂತಿರಲು ಸರ್ಕಾರವು ಸಂಘಟಿತ ಪ್ರಯತ್ನ ಮಾಡಿರುವುದು ಮಾತ್ರವಲ್ಲದೆ, ಜನನಿ ಸುರಕ್ಷಾ ಯೋಜನೆಯಡಿ ಸಾಂಸ್ಥಿಕ ಹೆರಿಗೆಗಳ ಮೂಲಕ ಸುರಕ್ಷಿತ ತಾಯ್ತನವನ್ನು ಉತ್ತೇಜಿಸುತ್ತಿದೆ. ಲಕ್ಷ್ಯದಂತಹ ಯೋಜನೆಗಳ ಅಡಿಯಲ್ಲಿ ಹೆರಿಗೆ ಸಮಯದಲ್ಲಿ ಹೆರಿಗೆ ಕೊಠಡಿ (ಲೇಬರ್ ವಾರ್ಡ್)ಗಳಲ್ಲಿ ಗುಣಮಟ್ಟ, ಗೌರವಯುತ ಆರೈಕೆಯನ್ನು ಸಹ ಉತ್ತೇಜಿಸುತ್ತಿದೆ. 2011-13ರಲ್ಲಿ ಪ್ರತಿ ಲಕ್ಷ ಜೀವಂತ ಜನನಗಳಿಗೆ 167ರಷ್ಟಿದ್ದ ತಾಯಂದಿರ ಮರಣ ಅನುಪಾತವು (ಎಂಎಂಆರ್) 2019ರ ವೇಳೆಗೆ 103ಕ್ಕೆ ಕುಸಿಯುವ ಮೂಲಕ ತಾಯಂದಿರ ಆಯುಷ್ಯ ಹೆಚ್ಚಾಗುವಂತೆ ಮಾಡಿದೆ.
ಸುಧಾರಿಸಿದ ಲಿಂಗಾನುಪಾತ
ಪ್ರಸ್ತುತ ಸರ್ಕಾರವು ಹೆಣ್ಣುಮಕ್ಕಳ ಬಗ್ಗೆ ಅತ್ಯುನ್ನತ ಗೌರವವನ್ನು ತೋರುತ್ತದೆ. ಅವರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಪ್ರೀತಿಯ ತಾಯಂದಿರಾಗಿ ಮಾತ್ರವಲ್ಲದೆ, ಪ್ರಾಮಾಣಿಕ ವಿದ್ಯಾರ್ಥಿಗಳಾಗಿ, ಮೌಲ್ಯಯುತ ಉದ್ಯೋಗಿಗಳಾಗಿ ಮತ್ತು ಶೌರ್ಯಶಾಲಿ ಉದ್ಯಮಿಗಳಾಗಿ ಪಾತ್ರ ನಿರ್ವಹಿಸುತ್ತಾರೆ. ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ಕರೆ, ಹೆಣ್ಣು ಮಕ್ಕಳ ಜನನ ಮತ್ತು ಪೋಷಣೆಯನ್ನು ಖಚಿತಪಡಿಸಿಕೊಂಡಿರುವುದು, ಪ್ರತಿ 1000 ಗಂಡು ಮಕ್ಕಳಿಗೆ ಪ್ರತಿಯಾಗಿ 1020 ಮಹಿಳೆಯರ ಸುಧಾರಿತ ಲಿಂಗಾನುಪಾತದ ರೂಪದಲ್ಲಿ ಫಲ ನೀಡಿದೆ.
ಉಜ್ವಲಾ ಮತ್ತು ಜಲ ಜೀವನ್ ಅಭಿಯಾನದಂತಹ ಯೋಜನೆಗಳು ಕುಟುಂಬದಲ್ಲಿ ಮಹಿಳೆಯರ ಸಮಯದ ಅಭಾವವನ್ನು ತಗ್ಗಿಸಿವೆ. ಅಡುಗೆ ಅನಿಲ ಸಂಪರ್ಕ ಅವರಿಗೆ ಉರುವಲು, ಕಟ್ಟಿಗೆ ಮತ್ತು ನೀರು ತರಲು ವ್ಯಯಿಸುತ್ತಿದ್ದ ಸಮಯ ಉಳಿಸಿ, ಇತರ ಲಾಭದಾಯಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಮುದ್ರಾ ಯೋಜನೆಯು ಮಹತ್ವಾಕಾಂಕ್ಷೆಯ ಮಹಿಳಾ ಉದ್ಯಮಿಗಳಿಗೆ ಮೇಲಾಧಾರವಿಲ್ಲದೆ ಸಾಲವನ್ನು ಒದಗಿಸಿದೆ ಮತ್ತು ಮತ್ತೊಂದು ಯೋಜನೆಯಾದ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮವು ಮಹಿಳೆಯರಿಗೆ ಹೆಚ್ಚಿನ ಸಬ್ಸಿಡಿಗಳನ್ನು ನೀಡುತ್ತಿದೆ.
ಪ್ರಗತಿಪರ ಸಮಾಜಕ್ಕೆ ದಾರಿ
ಪಾಶ್ಚಿಮಾತ್ಯ ದೇಶಗಳು ಗರ್ಭಪಾತದ ಹಕ್ಕುಗಳನ್ನು ಮೊಟಕುಗೊಳಿಸುತ್ತಿದ್ದರೆ, ಭಾರತವು ಅನುಮತಿಸಬಹುದಾದ ಗರ್ಭಪಾತದ ಮಿತಿಯನ್ನು ವಿಸ್ತರಿಸುತ್ತಿದೆ. ಋುತುಸ್ರಾವ ನೈರ್ಮಲ್ಯವು ವಿಶ್ವದ ಇತರ ಭಾಗಗಳಲ್ಲಿ ಪಿಸುಮಾತಿನ ಧ್ವನಿಗಳಲ್ಲಿ ಅಡಗಿರುವಾಗ, ಪ್ರಧಾನಮಂತ್ರಿ ಮೋದಿ ಅವರು ಕೆಂಪುಕೋಟೆಯ ಮೇಲಿನಿಂದ 1.3 ಶತಕೋಟಿ ಭಾರತೀಯರು ಗಮನವಿಟ್ಟು ಆಲಿಸುವಂತೆ ಮಾಡಿ, ಈ ಸಮಸ್ಯೆಗೆ ಪರಿಹಾರ ಸೂಚಿಸಿದರು. ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ, ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ನಿರಂತರ ಅಭದ್ರತೆಯ ಸ್ಥಿತಿಯನ್ನು ಸರ್ಕಾರ ನಿವಾರಿಸಿದೆ.
ಮದುವೆಯ ಅರ್ಹ ವಯಸ್ಸನ್ನು ಪರಿಷ್ಕರಿಸಲು ಪ್ರಸ್ತಾಪಿಸುವ ಮೂಲಕ, ಸರ್ಕಾರವು ಪುರುಷರು ಮತ್ತು ಮಹಿಳೆಯರು ಸಮಾನರು ಎಂದು ನಿಷ್ಪಕ್ಷಪಾತವಾದ ಮಾನದಂಡಗಳಿಗೆ ಒಳಪಡಿಸಿದೆ. ಈಗಿನ ಸರ್ಕಾರವು ನೀತಿ ನಿರೂಪಣೆಯ ಲೆಕ್ಕಾಚಾರದಲ್ಲಿ, ಮುಂದಿನ ತಲೆಮಾರುಗಳವರೆಗೆ ಭಾರತದ ತಾಯಂದಿರು ಮತ್ತು ಹೆಣ್ಣುಮಕ್ಕಳ ಜೀವನವನ್ನು ಉತ್ತಮಗೊಳಿಸುತ್ತದೆ ಎಂಬ ಉತ್ಕಟ ಭರವಸೆಯೊಂದಿಗೆ ಆತ್ಮಸಾಕ್ಷಿಯನ್ನು ಜಾಗರೂಕತೆಯಿಂದ ಅಳವಡಿಸಿದೆ. ಪಾಶ್ಚಿಮಾತ್ಯ ದೇಶಗಳು ಹಿಂದಡಿ ಇಡುತ್ತಿದ್ದರು, ಭಾರತವು ಪ್ರಗತಿ ಹೊಂದುತ್ತಿದ್ದು, ಪ್ರಗತಿಪರ ಸಮಾಜಕ್ಕೆ ದಾರಿ ತೋರುತ್ತಿದೆ.
- ಸ್ಮೃತಿ ಇರಾನಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.