ಪಿರಿಯಡ್ಸ್ ಟೈಂನಲ್ಲಿ ನೋವು ಅಂತ Painkillers ತಗೊಳ್ಬೋದಾ?

By Suvarna NewsFirst Published Aug 23, 2022, 9:31 AM IST
Highlights

ಮುಟ್ಟಿನ ಅವಧಿಗಳು ಸಾಕಷ್ಟು ಅಹಿತಕರವಾಗಿದೆ. ಅನೇಕ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ವಿಪರೀತ ನೋವನ್ನು ಅನುಭವಿಸುತ್ತಾರೆ. ಈ ನೋವು ನಿವಾರಣೆಗೆ ಪೈನ್ ಕಿಲ್ಲರ್ಸ್‌ ತೆಗೆದುಕೊಳ್ಳಬಹುದಾ ?

ಮುಟ್ಟಿನ ಹೆಸರು ಕೇಳ್ತಿದ್ದಂತೆ ಅನೇಕ ಮಹಿಳೆಯರು ಬೆಚ್ಚಿ ಬೀಳ್ತಾರೆ. ಪ್ರತಿ ತಿಂಗಳು ಮೂರು ದಿನ ನರಕಯಾತನೆ ಅನುಭವಿಸುವ ಅನೇಕ ಮಹಿಳೆಯರಿದ್ದಾರೆ. ಮುಟ್ಟಿನ ನೋವು ಹಾಗೂ ಬ್ಲೀಡಿಂಗ್ ಪ್ರತಿ ಮಹಿಳೆಯರಿಗೂ ಭಿನ್ನವಾಗಿರುತ್ತದೆ. ಅದರಲ್ಲೂ ಕೆಲ ಮಹಿಳೆಯರಿಗೆ ಮುಟ್ಟಿನ ಮೂರ್ನಾಲ್ಕು ದಿನ ನೋವಿರುವುದು ಸಾಮಾನ್ಯ. ಆದ್ರೆ ಕೆಲವು ಮಹಿಳೆಯರಲ್ಲಿ, ಋತುಚಕ್ರ ಬರುವ ಒಂದು ವಾರ ಅಥವಾ ಎರಡು ವಾರ ಮೊದಲೇ ವಿಪರೀತ ನೋವು ಕಾಣಿಸಿಕೊಳ್ಳುತ್ತೆ. ಕಾಲೇಜು, ಕಚೇರಿಗೆ ರಜೆ ಹಾಕಬೇಕಾಗುತ್ತದೆ. ಏನೇ ಮಾಡಿದರೂ ನೋವು ಸಹಿಸಿಕೊಳ್ಳಲಾಗದೆ ಒದ್ದಾಡುವಂತಾಗುತ್ತದೆ. ಇಂಥಾ ಸಮಯದಲ್ಲಿ ನೋವಿನಿಂದ ರಿಲೀಫ್‌ ಪಡೆಯಲು ಕೆಲವೊಬ್ಬರು ಪೈನ್ ಕಿಲ್ಲಸ್ ತೆಗೆದುಕೊಳ್ತಾರೆ. ಆದ್ರೆ ಈ ರೀತಿ ಮಾಡ್ಬೋದಾ ?

ನೋವು ನಿವಾರಕಗಳನ್ನು ತೆಗೆದುಕೊಳ್ಳುವುದು ಸುರಕ್ಷಿತವೇ ? 
ಅನೇಕ ಮಹಿಳೆಯರಿಗೆ ಮುಟ್ಟಿನ ದಿನಗಳು ಕಷ್ಟಕರವಾಗಿರುತ್ತದೆ. ಇದು ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು (Woman) ನೋವು ಕಡಿಮೆ ಮಾಡಲು ನೋವು ನಿವಾರಕಗಳನ್ನು ಸೇವಿಸುವುದು ಸಹಜ. ಆದರೆ ನೋವು ನಿವಾರಕಗಳನ್ನು (Pain killers) ತೆಗೆದುಕೊಳ್ಳುವುದು ಸುರಕ್ಷಿತವೇ ? ಮುಟ್ಟಿನ ಸಮಯದಲ್ಲಿ ನೋವು ನಿವಾರಕಗಳನ್ನು ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ. ಈ ನೋವು ನಿವಾರಕಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಾಶಯಕ್ಕೆ ಹಾನಿಯಾಗುವುದಿಲ್ಲ. ಪಿರಿಯಡ್ಸ್ ತುಂಬಾ ಕಷ್ಟದ ಸಮಯ. ಹೀಗಾಗಿ ಈ ಸಂದರ್ಭದಲ್ಲಿ ಆರಾಮವಾಗಿರುವುದು ಮುಖ್ಯ ಎಂದು ಡಾ.ತನಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Pre menstrual syndrome: ಮುಟ್ಟಿನ ಸಮಯದಲ್ಲಿ ಕೋಪ, ಖಿನ್ನತೆ: ಹೀಗೇಕೆ, ಪರಿಹಾರ?

ದೇಹವು 'ಪ್ರೊಸ್ಟಗ್ಲಾಂಡಿನ್ಸ್' ಎಂಬ ಪದಾರ್ಥಗಳನ್ನು ಸ್ರವಿಸುವ ಕಾರಣ ಮುಟ್ಟಿನ ನೋವು ಸಂಭವಿಸುತ್ತದೆ. ಇದು ನಿಮ್ಮ ಗರ್ಭಾಶಯವನ್ನು ಹಿಂಡುತ್ತದೆ ಮತ್ತು ಮುಟ್ಟಿನ ರಕ್ತವನ್ನು ಹೊರಹಾಕಲು ಸಹಾಯ ಮಾಡುತ್ತದೆ ಎಂದು ಡಾ.ತನಯಾ ಹೇಳಿದ್ದಾರೆ. ಮಾಕ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಸಹ ನಿರ್ದೇಶಕ ಡಾ.ಸುಮನ್ ಲಾಲ್ ಮಾತನಾಡಿ, ಮುಟ್ಟಿನ ಸಮಯದಲ್ಲಿ 12 ಗಂಟೆಗಳ ಅಂತರದಲ್ಲಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸಬಹುದು ಎಂದಿದ್ದಾರೆ.

ಅತಿಯಾಗಿ ಮಾತ್ರೆ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ
ಹೆಚ್ಚಿನ ಮುಟ್ಟಿನ ನೋವು ನಿವಾರಕಗಳು ಗರ್ಭಾಶಯವನ್ನು ವಿಶ್ರಾಂತಿ ಮಾಡುವ ಮೂಲಕ ಕೆಲಸ ಮಾಡುತ್ತವೆ. ಆದರೂ, ಸಾಮಾನ್ಯ ನೋವು ನಿವಾರಕಗಳು (ಉದಾಹರಣೆಗೆ ಆಸ್ಪಿರಿನ್, ಡಿಕ್ಲೋಫೆನಾಕ್ ಮತ್ತು ಐಬುಪ್ರೊಫೇನ್) ಪ್ರೊಸ್ಟಗ್ಲಾಂಡಿನ್ ಚಟುವಟಿಕೆಯನ್ನು ಪರೋಕ್ಷವಾಗಿ ಕಡಿಮೆ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಸೆಳೆತದ ಕ್ರಿಯೆಯು ಕಡಿಮೆಯಾಗುತ್ತದೆ ಮತ್ತು ಪೀರಿಯಡ್ಸ್ ನೋವು ಅನುಭವಕ್ಕೆ ಬರುವುದಿಲ್ಲ ಎಂದು ಡಾ.ಸುಮನ್ ಹೇಳಿದರು.

Health tips for Women: ಮುಟ್ಟಿನ ದಿನದಲ್ಲಿ ತಿನ್ನಬೇಕಾದ್ದೇನು?

ಆದರೂ ಪೀರಿಯೆಡ್ಸ್ ಸಮಯದಲ್ಲಿ ಮಾತ್ರೆಗಳನ್ನು (Tablets) ಅತಿಯಾಗಿ ಸೇವಿಸದಂತೆ ವೈದ್ಯರು ಎಚ್ಚರಿಕೆ ನೀಡಿದರು. ನೋವು ನಿವಾರಕಗಳ ಅತಿಯಾದ ಸೇವನೆಯು ನಿಮ್ಮ ಮೂತ್ರಪಿಂಡ (Kidney) ಮತ್ತು ಹೊಟ್ಟೆಗೆ ಹಾನಿ ಮಾಡುತ್ತದೆ. ಆದರೆ ಪ್ರತಿ ತಿಂಗಳು ಒಂದು ಅಥವಾ ಎರಡು ನೋವು ನಿವಾರಕ ಮಾತ್ರೆ ತೆಗೆದುಕೊಂಡರೆ ಯಾವುದೇ ಸಮಸ್ಯೆಯಿಲ್ಲ ಅವರು ವಿವರಿಸಿದರು. ನೋವು ನಿವಾರಕಗಳನ್ನು ತೆಗೆದುಕೊಂಡ ನಂತರವೂ ನಿಮ್ಮ ನೋವು ಕಡಿಮೆಯಾಗದಿದ್ದರೆ ಅಥವಾ ನಿಮಗೆ ತೀವ್ರವಾದ ನೋವು ಇದ್ದರೆ, ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ ಎಂದು ಡಾ.ಸುಮನ್ ಹೇಳಿದರು.

ಪೀರಿಯೆಡ್ಸ್ ನೋವು ನಿವಾರಿಸಲು ಏನು ಮಾಡ್ಬೋದು ?
ಋತುಚಕ್ರದ ಸಮಯದಲ್ಲಿ ಕೆಲವೊಬ್ಬರು ಆಲಸ್ಯವನ್ನು ಅನುಭವಿಸಬಹುದು. ಡಾ.ಸುಮನ್ ಅವರು ನೋವು ನಿವಾರಿಸಲು ಕೆಲವು ಮಾರ್ಗಗಳನ್ನು ಸೂಚಿಸಿದರು. ಶಾಖವನ್ನು ಬಳಸುವುದು ಮತ್ತು ಪುದೀನಾ ಚಹಾವನ್ನು ಕುಡಿಯುವುದರ ಜೊತೆಗೆ, ಕರಿದ ಆಹಾರಗಳು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಕೊಬ್ಬಿನ ಆಹಾರಗಳು ಮತ್ತು ಕೆಫೀನ್‌ಗಳಂತಹ ನಿರ್ದಿಷ್ಟ ಆಹಾರ (Food)ಗಳನ್ನು ತಪ್ಪಿಸುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು. ಬೆನ್ನು ಅಥವಾ ಹೊಟ್ಟೆಗೆ ಶಾಖವನ್ನು ಅನ್ವಯಿಸುವುದು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಟಿಂಗ್ ಪ್ಯಾಡ್ ಬಳಸುವುದರಿಂದ ಮುಟ್ಟಿನ ಅಸ್ವಸ್ಥತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಡಾ.ಸುಮನ್ ಹೇಳಿದ್ದಾರೆ.

click me!