Miss Universe: 2023ರಿಂದ ವಿವಾಹಿತ ಮಹಿಳೆಯರಿಗೂ ಭಾಗವಹಿಸಲು ಅವಕಾಶ

By Suvarna News  |  First Published Aug 23, 2022, 8:42 AM IST

ವಿವಾಹಿತ ಮಹಿಳೆಯರಿಗೊಂದು ಗುಡ್‌ನ್ಯೂಸ್ ಇದೆ. ಇಲ್ಲಿಯವರೆಗೆ ಕೇವಲ ಅವಿವಾಹಿತ ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ಮಿಸ್ ಯೂನಿವರ್ಸ್‌ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಸಹ ಸ್ಪರ್ಧಿಸಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಮುಂಬೈ: ಅವಿವಾಹಿತ ಯುವತಿಯರಿಗೆ ಸೀಮಿತವಾಗಿದ್ದ ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್ ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು. ಅಚ್ಚರಿಯಾದರೂ ಇದು ಸತ್ಯ.. ಅವಿವಾಹಿತ ಯುವತಿಯರಿಗಷ್ಚೇ ಸೀಮಿತವಾಗಿದ್ದ ಮಿಸ್ ಯೂನಿವರ್ಸ್ ಸ್ಪರ್ಧೆಯ ಆಡಳಿತ ಮಂಡಳಿ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದು, ವಿವಾಹಿತ ಮಹಿಳೆಯರು ಮತ್ತು ಯುವ ತಾಯಂದಿರಿಗೂ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಈ ನಿರ್ಧಾರವು 2023ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ವಿವಾಹಿತ ಮಹಿಳೆಯರು, ತಾಯಂದಿರು ಕೂಡಾ ಸ್ಪರ್ಧಿಸಬಹುದು
2023 ರಿಂದ, ವಿವಾಹಿತ ಮಹಿಳೆಯರು (Married woman) ಮತ್ತು ತಾಯಂದಿರು (Mothers) ಈ ಸ್ಪರ್ಧೆಯಲ್ಲಿ (competition) ಭಾಗವಹಿಸಬಹುದು. ಮದುವೆ ಮತ್ತು ಪೋಷಕತ್ವವು ಇನ್ನು ಮುಂದೆ ಸ್ಪರ್ಧಿಗಳ ಅರ್ಹತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಇಲ್ಲಿಯವರೆಗೆ, ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳ ಪ್ರಕಾರ ವಿಶ್ವ ಸುಂದರಿ ವಿಜೇತರು ಅವಿವಾಹಿತರಾಗಿರಬೇಕು ಮತ್ತು ಅವರ ಅಧಿಕಾರಾವಧಿಯಲ್ಲಿ ಶೀರ್ಷಿಕೆಯೊಂದಿಗೆ ಉಳಿಯಬೇಕು.

Tap to resize

Latest Videos

ದೇಹದ ಆಕಾರಕ್ಕಿಂತ ಮನಸ್ಸಿನ ಆಕಾರ ಮುಖ್ಯ; ಟ್ರೋಲಿಗರಿಗೆ ಮಿಸ್ ಯೂನಿವರ್ಸ್ ಹರ್ನಾಜ್ ಖಡಕ್ ಉತ್ತರ

ಅಂತೆಯೇ, ವಿಜೇತರು ಮಿಸ್ ಯೂನಿವರ್ಸ್ ಆಗಿ ಆಳ್ವಿಕೆ ಮಾಡುವಾಗ ಗರ್ಭಿಣಿಯಾಗಿರಬಾರದು ಎಂದು ಹೇಳಲಾಗಿತ್ತು, ಇದರಿಂದಾಗಿ ತಾಯಂದಿರನ್ನು ಹೊರಗಿಡಲಾಗುತ್ತಿತ್ತು. ಆದರೆ ಇದೀಗ ನಿಯಮ (Rules) ಬದಲಾಗಿದ್ದು, ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು.

ಮೆಕ್ಸಿಕೋವನ್ನು ಪ್ರತಿನಿಧಿಸಿ ಮಿಸ್ ಯೂನಿವರ್ಸ್ 2020 ಕಿರೀಟವನ್ನು ಗೆದ್ದ ಆಂಡ್ರಿಯಾ ಮೆಜಾ ಹೊಸ ನಿಯಮ ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಮಿಸ್ ಯೂನಿವರ್ಸ್ ಸ್ಪರ್ಧೆಗೆ ಸಂಬಂಧಿಸಿದಂತೆ ಈ ಹೊಸ ನಿರ್ಧಾರ ಸ್ವಾಗತಾರ್ಹ. ನಾನು ಈ ನಿರ್ಧಾರವನ್ನು ಪ್ರಾಮಾಣಿಕವಾಗಿ ಇಷ್ಟಪಟ್ಟೆ. ಸಮಾಜವು ಬದಲಾಗುತ್ತಿರುವುದರಿಂದ ಮತ್ತು ಹಿಂದೆ ಪುರುಷರು (Men) ಮಾತ್ರ ಮಾಡಬಹುದಾದ ನಾಯಕತ್ವದ ಸ್ಥಾನಗಳನ್ನು ಮಹಿಳೆಯರು ಈಗ ಆಕ್ರಮಿಸಿಕೊಳ್ಳುತ್ತಿದ್ದಾರೆ. ಈಗ ಸ್ಪರ್ಧೆಯ ನಿಯಮಗಳು ಸಹ ಬದಲಾಗಿವೆ ಮತ್ತು ಸ್ಪರ್ಧೆಯು ಕುಟುಂಬದೊಂದಿಗೆ ಮಹಿಳೆಯರಿಗೆ ಮುಕ್ತವಾಗಿದೆ' ಎಂದು ಹೇಳಿದ್ದಾರೆ.

Harnaaz Sandhu Prize: 38 ಕೋಟಿಯ ಕಿರೀಟ ಮಾತ್ರವಲ್ಲ, ನ್ಯೂಯಾರ್ಕ್ ಲಕ್ಷುರಿ ಬಂಗಲೆ ಸೇರಿ ಇನ್ನು ಬಹಳಷ್ಟು

ಮಿಸ್ ಯೂನಿವರ್ಸ್ 2021ರಲ್ಲಿ ಭಾರತದ ಹರ್ನಾಜ್ ಕೌರ್ ಸಂಧುಗೆ ಕಿರೀಟ
ವಿಶ್ವ ಸುಂದರಿ ಸ್ಪರ್ಧೆಯು 160ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಪಂಚದಾದ್ಯಂತ ಬಹುತೇಕ ಎಲ್ಲ ದೇಶಗಳಲ್ಲಿ ಪ್ರಸಾರವಾಗುತ್ತದೆ. ಮಿಸ್ ಯೂನಿವರ್ಸ್ 2021ರ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ಜಯ ಗಳಿಸಿದ್ದರು. ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ 2021ರಲ್ಲಿ ಪಂಜಾಬ್ ಮೂಲದ ಹರ್ನಾಜ್ ಸಂಧು ಭಾರತವನ್ನು ಪ್ರತಿನಿಧಿಸಿದ್ದರು. ಹರ್ನಾಜ್ ಸಿಂಧು ವಿಶ್ವ ಸುಂದರಿ ಪಟ್ಟವನ್ನು ಗೆದ್ದ ಮೂರನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು 1994 ರಲ್ಲಿ ನಟಿ ಸುಶ್ಮಿತಾ ಸೇನ್, 2000 ರಲ್ಲಿ ಲಾರಾ ದತ್ತಾ ಮಿಸ್ ಯೂನಿವರ್ಸ್ ಆಗಿದ್ದರು.

click me!