ಆಲೂಗಡ್ಡೆ ಚಿಪ್ಸ್ ಹೆಸರು ಕೇಳಿದ್ರೆ ಅನೇಕರ ಬಾಯಲ್ಲಿ ನೀರು ಬರುತ್ತದೆ. ಆಲೂಗಡ್ಡೆ ಎಲ್ಲರ ಅಚ್ಚುಮೆಚ್ಚಿನ ತರಕಾರಿ. ಸಾಕಷ್ಟು ಪೌಷ್ಟಿಕಾಂಶ ಹೊಂದಿರುವ ಈ ಆಲೂಗಡ್ಡೆ ಸಿಹಿಯಾಗಿದ್ರೆ ರುಚಿ ಕೆಡುತ್ತೆ. ಇದಕ್ಕೆ ಚಿಂತಿಸ್ಬೇಕಾಗಿಲ್ಲ. ಮೊದಲೇ ಸಿಹಿ ತೆಗೆದುಕೊಂಡು ನಂತ್ರ ಅಡುಗೆ ಮಾಡ್ಬೇಕು.
ಆಲೂ ಇಲ್ಲದ ಮನೆಯಿಲ್ಲ ಅಂದ್ರೆ ಅತಿಶಯೋಕ್ತಿ ಎನ್ನಿಸುವುದಿಲ್ಲ. ಭಾರತದ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಆಲೂಗಡ್ಡೆ ಇದ್ದೇ ಇರುತ್ತದೆ. ಆಲೂಗಡ್ಡೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಫೆವರೆಟ್. ರೊಟ್ಟಿ ಮಾಡಿದ್ರೆ ಆಲೂಗಡ್ಡೆ ಪಲ್ಯ ಬೇಕೇಬೇಕು ಎನ್ನುವವರಿದ್ದಾರೆ. ಬರೀ ಪಲ್ಯ ಮಾತ್ರವಲ್ಲ ಆಲೂಗಡ್ಡೆಯಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಬಹುದು. ಫಾಸ್ಟ್ ಫುಡ್ ಗಳಲ್ಲಿ ಕೂಡ ಆಲೂಗಡ್ಡೆ ಮೊದಲ ಸ್ಥಾನದಲ್ಲಿರುತ್ತದೆ. ಹೆಚ್ಚಿನ ಭಾರತೀಯ ಭಕ್ಷ್ಯಗಳಲ್ಲಿ ಆಲೂಗಡ್ಡೆ ಬಳಸಲಾಗುತ್ತದೆ. ಆಲೂಗಡ್ಡೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟ ಕಂಡುಬರುತ್ತದೆ. ಆಲೂಗಡ್ಡೆ ಕ್ಷಾರೀಯ ಸ್ವಭಾವವನ್ನು ಹೊಂದಿದೆ. ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಮತ್ತು ವಿಟಮಿನ್ ಡಿ ಕಂಡುಬರುತ್ತದೆ. ಆಲೂಗಡ್ಡೆ ಎಲ್ಲ ತರಕಾರಿ ಜೊತೆ ಹೊಂದಿಕೊಳ್ಳುತ್ತದೆ. ಇದೇ ಕಾರಣಕ್ಕೆ ಅದರ ಬಳಕೆ ಹೆಚ್ಚು ಅಂದ್ರೆ ತಪ್ಪಾಗಲಾರದು.
ಒಮ್ಮೊಮ್ಮೆ ಆಲೂಗಡ್ಡೆ (Potato) ಸಿಹಿ (Sweet) ಬರುತ್ತದೆ. ಸಿಹಿಯಾದ ಆಲೂಗಡ್ಡೆಯಿಂದ ಸಬ್ಜಿ ತಯಾರಿಸಿದ್ರೆ ಅದ್ರ ರುಚಿ ಹಾಳಾಗುತ್ತದೆ. ಸಿಹಿ ಆಲೂಗಡ್ಡೆಯಿಂದ ಸಬ್ಜಿ ರುಚಿ ಹಾಳಾಯ್ತು ಎಂದು ಅನೇಕರು ಗೊಣಕ್ತಾರೆ. ಆದ್ರೆ ಆಲೂಗಡ್ಡೆಯ ಸಿಹಿಯನ್ನು ತೆಗೆಯಬಹುದು ಎಂಬ ಸಂಗತಿ ಅನೇಕರಿಗೆ ತಿಳಿದಿಲ್ಲ. ಕೆಲವು ಟಿಪ್ಸ್ (Tips) ಮೂಲಕ ನೀವು ಆಲೂಗಡ್ಡೆ ಸಿಹಿಯನ್ನು ಸುಲಭವಾಗಿ ತೆಗೆಯಬಹುದು. ಆಲೂಗೆಡ್ಡೆಯ ಸಿಹಿಯನ್ನು ಯಾವ ರೀತಿಯಲ್ಲಿ ತೆಗೆದುಹಾಕಬಹುದು ಎಂಬುದನ್ನು ನಾವಿಂದು ಹೇಳ್ತೇವೆ.
ಆಲೂಗಡ್ಡೆಯ ಸಿಹಿಯನ್ನು ಹೋಗಲಾಡಿಸಲು ಈ ಸಲಹೆ (Advice) ಗಳನ್ನು ಅನುಸರಿಸಿ :
ಹುಳಿ ಆಹಾರ (Sour Food) : ಆಲೂಗಡ್ಡೆಯ ಸಿಹಿಯನ್ನು ಕಡಿಮೆ ಮಾಡಲು ಹುಳಿ ಪದಾರ್ಥಗಳು ತುಂಬಾ ಉಪಯುಕ್ತವಾಗಿವೆ. ನೀವು ಸಿಹಿ ಗೆಣಸು ಕರಿ ಮಾಡುವಾಗ ಅದಕ್ಕೆ ಮೊಸರು, ನಿಂಬೆ ರಸ ಅಥವಾ ಕಿತ್ತಳೆ ತಿರುಳು ಇತ್ಯಾದಿಗಳನ್ನು ಸೇರಿಸಬಹುದು. ಇದು ಆಲೂಗಡ್ಡೆಯ ಮಾಧುರ್ಯವನ್ನು ಸಮತೋಲನಗೊಳಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ನೆರವಾಗುತ್ತದೆ. ಆಗ ನಿಮಗೆ ಆಲೂಗಡ್ಡೆ ಸಿಹಿ ಎನ್ನಿಸುವುದಿಲ್ಲ.
Kitchen Tips: ಕಪ್ಪಗಾಗಿರೋ ಎಣ್ಣೆ ಜಾಲರಿಗೆ ಹೊಳಿಬೇಕಾ?
ಬಿಳಿ ಉಪ್ಪು (White Salt) : ಆಲೂಗಡ್ಡೆ ಸಿಹಿ ಆಗಿದ್ದು, ಅವೇ ಮನೆಯಲ್ಲಿವೆ ಎಂದಾಗ ಅವುಗಳನ್ನು ಬಳಸದೆ ಬೇರೆ ಆಯ್ಕೆಗಳಿಲ್ಲ. ನೀವು ಆಲೂಗಡ್ಡೆಯನ್ನು ಕುದಿಸುವ ಮೊದಲು ಅದಕ್ಕೆ 1 ಟೀಸ್ಪೂನ್ ಉಪ್ಪನ್ನು ಹಾಕಿ, ನಂತರ ಆಲೂಗಡ್ಡೆಯನ್ನು ಕುದಿಸಿ. ಆಲೂಗಡ್ಡೆಯ ಸಿಹಿಯನ್ನು ಕಡಿಮೆ ಮಾಡಲು ಬಿಳಿ ಉಪ್ಪು ಕೂಡ ಸಹಕಾರಿಯಾಗಿದೆ.
ಕಲ್ಲು ಉಪ್ಪು (Rock Salt) : ಸರಳ ಬಿಳಿ ಉಪ್ಪಿನ ಜೊತೆಗೆ ಕಲ್ಲು ಉಪ್ಪನ್ನು ಬಹುತೇಕ ಎಲ್ಲರ ಮನೆಯಲ್ಲೂ ಬಳಕೆ ಮಾಡಲಾಗುತ್ತದೆ. ಉಪವಾಸದ ಸಮಯದಲ್ಲಿ ಪದಾರ್ಥದ ಜೊತೆ ಕಲ್ಲು ಉಪ್ಪನ್ನು ಬಳಸಲಾಗುತ್ತದೆ. ಆಲೂಗಡ್ಡೆಯ ಸಿಹಿಯನ್ನು ಹೋಗಲಾಡಿಸಲು ಕಲ್ಲು ಉಪ್ಪು ಸಹ ಸಹಾಯಕವಾಗಿದೆ. ಇದಕ್ಕಾಗಿ ಕಲ್ಲು ಉಪ್ಪನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ ಆಲೂಗಡ್ಡೆಯನ್ನು ಈ ನೀರಿನಲ್ಲಿ ಅರ್ಧ ಗಂಟೆಯವರೆಗೆ ಬಿಡಿ. ಹೀಗೆ ಮಾಡಿದ್ರೆ ಆಲೂಗಡ್ಡೆ ಸಿಹಿ ಹೋಗುತ್ತದೆ.
ಅಡುಗೆ ರುಚಿ ಹೆಚ್ಚಿಸೋ ಕಿಚನ್ ಸೀಕ್ರೆಟ್ಸ್, ರುಚಿ ರುಚಿಯಾಗಿ ಅಡುಗೆ ಮಾಡ್ಕೊಂಡು ತಿನ್ನಿ
ವಿನೆಗರ್ : ಆಲೂಗಡ್ಡೆಯ ಸಿಹಿಯನ್ನು ಕಡಿಮೆ ಮಾಡಲು ವಿನೆಗರ್ ಬಳಕೆ ಮಾಡಬಹುದು. ಬಿಳಿ ಅಥವಾ ಆಪಲ್ ಸೈಡ್ ವಿನೆಗರ್ ಮೂಲಕ ನೀವು ಆಲೂಗಡ್ಡೆ ಸಿಹಿಯನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ಒಂದು ಪಾತ್ರೆಯಲ್ಲಿ 4-5 ಕಪ್ ನೀರನ್ನು ಹಾಕಿ ಮತ್ತು ಅದಕ್ಕೆ 2 ಚಮಚ ವಿನೆಗರ್ ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಸಮಯದ ನಂತರ ಈ ನೀರಿನಲ್ಲಿ ಆಲೂಗಡ್ಡೆ ಹಾಕಿ ಮತ್ತು ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ. ಇದು ಆಲೂಗೆಡ್ಡೆಯ ಸಿಹಿಯನ್ನು ದೊಡ್ಡ ಮಟ್ಟದಲ್ಲಿ ಕಡಿಮೆ ಮಾಡುತ್ತದೆ.