
ಮಹಿಳೆಯಾದವಳು ಅಮ್ಮನಾಗಲು ಸಿದ್ಧಳಿದ್ದಾಳೆ ಎನ್ನುವುದನ್ನು ತೋರಿಸಲು ಪ್ರಕೃತಿ ನೀಡಿರುವ ಕೊಡುಗೆ ಮುಟ್ಟು. ಆದರೆ ಮುಟ್ಟಿನ ಬಗ್ಗೆ ಓಪನ್ ಆಗಿ ಮಾತನಾಡಲು ಹಿಂಜರಿಕೆ ಇಂದಿಗೂ ಇದ್ದೇ ಇದೆ. ಕೆಲ ವರ್ಷಗಳ ಹಿಂದೆ ಇದನ್ನು ಮಾತನಾಡುವುದೇ ದೊಡ್ಡ ಅಪರಾಧ ಎನ್ನುವ ರೀತಿಯಲ್ಲಿ ಕಾಣಲಾಗುತ್ತಿತ್ತು. ವೈದ್ಯರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕೂಡ ಹಿಂಜರಿಕೆ ಇತ್ತು. ಆದರೆ ಕಾಲ ಬದಲಾದಂತೆ, ಮಾಸಿಕ ಋತುಸ್ರಾವದ ಬಗ್ಗೆ ಓಪನ್ ಆಗಿ ಮಾತನಾಡಲಾಗುತ್ತಿದೆ. ಮುಟ್ಟಿನ ಅವಧಿಯಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳಿಂದಾಗಿ ಸಹಜವಾಗಿ ಸಾಕಷ್ಟು ಪ್ರಶ್ನೆಗಳು ಇದ್ದೇ ಇರುತ್ತದೆ. ಆದರೆ ಮುಕ್ತವಾಗಿ ಮಾತನಾಡುವಷ್ಟು ಸೌಲಭ್ಯ ಇಲ್ಲದ ಕಾರಣದಿಂದ ಎಷ್ಟೋ ಮಂದಿ ಹೇಳಿಕೊಳ್ಳಲಾಗದೇ ಹಿಂಸೆ ಪಡೆವುದು, ಬಳಿಕ ಅನಾರೋಗ್ಯ ಸಮಸ್ಯೆಗಳಿಗೆ ಒಳಗಾಗುವುದು ಇಂದಿಗೂ ಇದೆ.
ಆರೋಗ್ಯವಂತ ಸ್ತ್ರೀಯರಲ್ಲಿ ಮುಟ್ಟು ಸಾಮಾನ್ಯವಾಗಿ 28 ದಿನಗಳಿಗೆ ಆಗುತ್ತದೆ. ಆದರೆ ಎಲ್ಲರಲ್ಲಿಯೂ ಹೀಗೆಯೇ ಆಗಬೇಕೆಂದೇನಿಲ್ಲ. ಒಬ್ಬೊಬ್ಬರ ದೇಹ ಪ್ರಕೃತಿ ಒಂದೊಂದು ರೀತಿ ಇರುವ ಕಾರಣದಿಂದ ಬದಲಾವಣೆ ಇದದ್ದೇ. ಆದರೆ ಕೆಲವು ಸಂದರ್ಭದಲ್ಲಿ ಅರ್ಥಾತ್ ಮದುವೆ, ಸಮಾರಂಭ, ದೇವರ ಪೂಜೆ ಹೀಗೆ ಏನೇನೋ ಕಾರಣಗಳಿಂದ ಮುಟ್ಟಿನ ದಿನವನ್ನು ಮುಂದೂಡುವುದು ಸಾಮಾನ್ಯವಾಗಿದೆ. ಆದರೆ ಇದು ಎಷ್ಟು ಸೇಫ್ ಎನ್ನುವ ಬಗ್ಗೆ ಇದಾಗಲೇ ಹಲವು ವೈದ್ಯರು ಮಾತನಾಡಿದ್ದಾರೆ. ಪದೇ ಪದೇ ಮುಟ್ಟನ್ನು ಮುಂದೂಡುವುದನ್ನು ಮಾಡಿದರೆ ಅದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಗರ್ಭಕೋಶದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ವೈದ್ಯರು.
ಮುಟ್ಟನ್ನು ಮುಂದೂಡುವುದು ಅಂದ್ರೆ Postponement ಮಾಡುವುದು ಗೊತ್ತು, ಆದರೆ ಮುಟ್ಟಿನ ದಿನವನ್ನು ನಿಗದಿತ ಅವಧಿಗಿಂತ ಮುಂಚೆಯೇ ಅಂದ್ರೆ Preponed ಮಾಡಬಹುದಾ ಎನ್ನುವ ಬಗ್ಗೆ ಹಲವರು ಪ್ರಶ್ನೆ ಕೇಳುತ್ತಾರೆ ಎಂದಿರುವ ವೈದ್ಯೆ ಡಾ.ಶಿಲ್ಪಾ ಅವರು, ಇದುವರೆಗೆ ಮುಟ್ಟನ್ನು ಪ್ರೀಪೋನ್ಡ್ ಮಾಡುವ ಮಾತ್ರೆ ಬಂದಿಲ್ಲ ಎಂದು ಹೇಳಿದ್ದಾರೆ. ಇದನ್ನು ವೈದ್ಯರೂ ಮಾಡಲು ಬರುವುದಿಲ್ಲ, ಮೆಡಿಸಿನ್ ಕೂಡ ಎಫೆಕ್ಟಿವ್ ಆಗಿ ಇರುವುದಿಲ್ಲ ಎಂದಿರುವ ವೈದ್ಯೆ, ಮುಟ್ಟನ್ನು ಪ್ರೀಪೋನ್ಡ್ ಅಥವಾ ಪೋಸ್ಟ್ಪೋನ್ ಮಾಡಲೇಬೇಡಿ ಎಂದು ನಾವು ಹೇಳುತ್ತೇವೆ ಎಂದಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿರುವ ಡಾ.ಶಿಲ್ಪಾ, ಇದಕ್ಕೆ ಹಾರ್ಮೋನಲ್ ಮಾತ್ರೆಗಳನ್ನು ಕೊಡಬೇಕಾಗುತ್ತದೆ. ಅದು ಒಳ್ಳೆಯದಲ್ಲ ಎನ್ನುವುದು ಅವರ ಮಾತು.
ಇನ್ನು ಮುಟ್ಟಿನ ಮುಟ್ಟಿನ ಮುಂದೂಡಿಕೆ ಮಾತ್ರೆಗಳು ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ಇದು ಪ್ರೊಜೆಸ್ಟರಾನ್ ಅನ್ನು ಹೊಂದಿರುತ್ತವೆ, ಇದು ದೇಹಕ್ಕೆ ಬಿಡುಗಡೆಯಾದಾಗ, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟವನ್ನು ನಿರ್ವಹಿಸುತ್ತದೆ. ಈ ಎರಡೂ ಒಟ್ಟಿಗೇ ಸೇರಿದಾಗ ಎಂಡೊಮೆಟ್ರಿಯಂನಿಂದಾಗಿ ಮುಟ್ಟಿನ ವಿಳಂಬವಾಗುತ್ತದೆ. ಆದರೆ ಈ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಸ್ತ್ರೀರೋಗತಜ್ಞರನ್ನು ಸಂಪರ್ಕಿಸುವುದು ಅತ್ಯಗತ್ಯ ಎನ್ನುವುದು ವೈದ್ಯರ ಮಾತು. ಈ ಮೊದಲೇ ಹೇಳಿದಂತೆ ಪದೇ ಪದೇ ಈ ಮಾತ್ರೆ ಸೇವಿಸಿದರೆ ಅಪಾಯವಂತೂ ಇದದ್ದೇ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.